ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಪ್ರಜಾಪ್ರಭುತ್ವ ವ್ಯವಸ್ಥೆ

ಜನರಲ್ಲಿ, ಸಮಾಜದಲ್ಲಿ ಮಾನ, ಮರ್ಯಾದೆ, ನೈತಿಕತೆ ಎನ್ನುವುದು ಯಾವಾಗ ಅರ್ಥ ಕಳೆದುಕೊಳ್ಳುವುದೋ ಆಗ ಯಾವ ಆಡಳಿತ ವ್ಯವಸ್ಥೆ ಇದ್ದರೂ ಅದು ಜನರಿಗೆ ಉಪಯೋಗಕ್ಕಿಂತ ಬಹಳ ಜಾಸ್ತಿ ಅಪಾಯವನ್ನೇ ತಂದು ಒಡ್ಡುವುದು. ಆ ಸಮಾಜದಲ್ಲಿ ಯಾವುದೇ ವ್ಯವಸ್ಥೆ ಸಂಪೂರ್ಣ ಪರಿಣಾಮಕಾರಿ ಆಗಲು ಸಾಧ್ಯವಿಲ್ಲ.
ಪ್ರಸ್ತುತ ಭಾರತದಲ್ಲಿ ಇರುವ ಪ್ರಜಾಪ್ರಭುತ್ವ ವ್ಯವಸ್ಥೆಯು ಪ್ರಜಾತಂತ್ರ ವ್ಯವಸ್ಥೆಯ ಅತ್ಯಂತ ನೀಚಮಟ್ಟವನ್ನು ತಲುಪಿದೆ. ನಾಳೆಯ ದಿನ ಇನ್ನೂ ಅಧಃಪತನ ಕಾಣುವ ಸಂಭವ ಇದೆ.
ಇದಕ್ಕೆ ರಾಜಕೀಯದವರ ಅವಗುಣಗಳು ಕಾರಣ ಅಂತ ಉಳಿದ ಜನ ಸಾಮಾನ್ಯರು ಸುಲಭವಾಗಿ ಇನ್ನೊಬ್ಬರ ಕಡೆ ಬೆರಳು ತೋರಿಸಿ ಜಾರಿಕೊಳ್ಳುತ್ತಾರೆ.
ಆದರೆ ವಾಸ್ತವದಲ್ಲಿ ಇದಕ್ಕೆ ಜನರಾದ ನಾವೇ ಕಾರಣ ಅಂತ ಗೊತ್ತಿದ್ದರೂ ನಮ್ಮ ಮನಸ್ಸು ಒಪ್ಪುವುದಿಲ್ಲ.
ನಾವೇ ಜನರನ್ನು ಆಳಲು ಪ್ರತಿನಿಧಿಗಳನ್ನು ಆರಿಸಿ ಕಳುಹಿಸುತ್ತೇವೆ. ನಮ್ಮದೇ ತೆರಿಗೆ ಹಣದಲ್ಲಿ ನಾವು ಅವರಿಗೆ ತಿಂಗಳಿಗೆ 5 ಅಂಕಿ ಸಂಬಳ ಕೊಡುತ್ತೇವೆ. ಅದರ ಮೇಲೆ ಅವರು ಕೆಲಸ ಮಾಡಲು ಸುಲಭವಾಗಲಿ ಅಂತ ಇನ್ನಷ್ಟು ಬಿಟ್ಟಿ ಸೌಲಭ್ಯಗಳು ಬೇರೆ. ಆದರೂ ಅವರು ತಮ್ಮ ಕೆಲಸ ಮಾಡುವುದಿಲ್ಲ. ಪುನಃ 5 ವರ್ಷಕ್ಕೆ ಅವರು ತಮ್ಮನ್ನು ಆಯ್ಕೆ ಮಾಡಿ ಅಂತ ನಮ್ಮ ಮುಂದೆ ಬರುತ್ತಾರೆ. ನಾವು ಪುನಃ ಆಯ್ಕೆ ಮಾಡುತ್ತೇವೆ. ಯಾವ ಮಾನದಂಡದ ಮೇಲೆ ಅವರನ್ನು ಆರಿಸುತ್ತೇವೆ. ನೂರು ಜನ ನೂರು ಉತ್ತರ ಹೇಳಬಹುದು. ಆದರೆ ವಾಸ್ತವದಲ್ಲಿ ಅದರಲ್ಲಿ ಬಹುತೇಕ ಯಾವ ಮಾನದಂಡವನ್ನೂ ಆಯ್ಕೆ ಮಾಡುವಾಗ ಪರಿಗಣಿಸುವುದೇ ಇಲ್ಲಾ ನಾವು. ಇನ್ನು ಕೆಲವು ಒಂದೇ ಒಂದು ಅವಶ್ಯಕ ಉಪಯೋಗ ಇಲ್ಲದ ವಿಷಯಗಳು.
ಹೋಗಲಿ ಆಯ್ಕೆ ಮಾಡಿ ಕಳುಹಿಸಿದ ಮೇಲೆ ನಮ್ಮ ಕೆಲಸ ಆಗಲಿ ಅಂತ ಯಾವುದಕ್ಕೆ ಬೇಡಿಕೆ ಇಡುತ್ತೇವೆ. ಊರ ರಸ್ತೆಗೆ, ಊರಿನಲ್ಲಿ ಒಂದು ಸಮುದಾಯ ಭವನಕ್ಕೆ, ಶಾಲೆಗೆ, ಆಸ್ಪತ್ರೆಗೆ… ಊಹ್ಮೂ….
ನಾವು ಬೇಡಿಕೆ ಇಡುವುದು ನಮ್ಮ ಜಾತಿಗೆ ಮೀಸಲಾತಿ ಕೊಡಿ, ನಮ್ಮ ಜಾತಿಯ ವ್ಯಕ್ತಿಯ ಮೇಲೆ ಹಲ್ಲೆ ಆಗಿದೆ, ನಮ್ಮ ಧರ್ಮದ ಮಂದಿರಕ್ಕೆ ಕಲ್ಲು ಎಸೆದರು, ಯಾರೋ ವ್ಯಕ್ತಿಯ ಮೂರ್ತಿಗೆ ಚಪ್ಪಲಿ ಹಾಕಿದರು. ಇದೇ ತಾನೇ….
ಇವು ಯಾವುದಕ್ಕೂ ಬೇಡಿಕೆ ಇಡಬೇಡಿ, ಹೋರಾಟ ಮಾಡಬೇಡಿ ಅಂತ ನಾನು ಹೇಳುತ್ತಾ ಇಲ್ಲಾ. ಆದರೆ ಅದಕ್ಕಿಂತ ಮುಖ್ಯವಾದ ಬಹಳ ವಿಷಯ ಇದ್ದಾವೆ. ಆದರೆ ಅವುಗಳ ಬಗ್ಗೆ ಯಾಕೆ ನಾವು ಬೇಡಿಕೆ ಇಡುವುದಿಲ್ಲ. ಅವುಗಳ ಬಗ್ಗೆ ಯಾಕೆ ನಾವು ಆರಿಸಿ ಕಳುಹಿಸಿ, ನಾವೇ ಸಂಬಳ ಕೊಟ್ಟು ಸಾಕುತ್ತಾ ಇರುವ ಜನಪ್ರತಿನಿಧಿಗಳಿಗೆ ಪ್ರಶ್ನಿಸುವುದಿಲ್ಲ…..
ಉತ್ತರ ಬಹಳ ಸರಳ, ಸತ್ಯ. ಆದರೆ ಬಹಳ ಕಹಿ.
ನಮಗೆ ಎಲ್ಲರಿಗೂ ಉಪಯೋಗ ಆಗುವ ವ್ಯವಸ್ಥೆ ಬೇಡ. ಯಾಕೆಂದರೆ ನಾವು ಪರಮ ಸ್ವಾರ್ಥಿಗಳು. ಎಲ್ಲರ ಹಣದಲ್ಲಿ ನಮಗೆ ಒಂದಿಷ್ಟು ಜನರಿಗೆ ಮಾತ್ರ ಉಪಯೋಗ ಆಗುವ ವ್ಯವಸ್ಥೆ ಬೇಕು ಎನ್ನುವ ನೀಚತನ ನಮ್ಮದು. ಹಾಗೆ ಮಾಡಿಕೊಳ್ಳಲು ನಮಗೆ ಬಹಳ ಆಸಕ್ತಿ, ಉತ್ಸಾಹ, ಖುಷಿ ಎಲ್ಲವೂ ಇರುತ್ತೆ. ಜೊತೆಗೆ ಹಾಗೆ ವಿಶೇಷ ಅನುಕೂಲ ಪಡೆಯುವ ನಮಗೆ ಯಾವ ಮಾನದಂಡದ ಮೇಲೆ ಅದನ್ನು ಕೊಡಬೇಕು ಅಂತ ಬಯಸುತ್ತೇವೆ ಅಂದರೆ ಅದು ಇನ್ನೂ ಅಸಹ್ಯ ಹುಟ್ಟಿಸುವ ವಿಚಾರ. ಯಾಕೆಂದರೆ ನಮಗೆ ಆ ವ್ಯವಸ್ಥೆಗೆ ಅಗತ್ಯ ಇರುವ ಅರ್ಹತೆ ಮೇಲೆ ಅನುಕೂಲ ಬೇಡ. ಬೇರೆ ಅಕ್ರಮ, ಅನ್ಯಾಯದಿಂದ ಕೂಡಿದ, ನಾವು ಯಾವುದೇ ಶ್ರಮ ಪಡದೇ ನಮ್ಮ ಜೊತೆ ಥಳಕು ಹಾಕಿಕೊಂಡ ವಿಷಯಗಳು ನಮಗೆ ಸಿಗುವ ವ್ಯವಸ್ಥೆಗೆ ಮಾನದಂಡ ಆಗಿರಬೇಕು ಅಂತ ನಮ್ಮ ಮನಸ್ಸು ಬಯಸುತ್ತದೆ.
ಇದರಲ್ಲಿ ನಮ್ಮ ಪರಿಚಯದ, ಸಂಬಂಧಿ ಆದ ಅಧಿಕಾರಿಗಳು, ಜನ ಪ್ರತಿನಿಧಿಗಳ ಬಳಿ ನಮ್ಮ ಕೆಲಸ, ಉದ್ಯೋಗ, ಅನುದಾನ ಮೊದಲಾದ ಅನುಕೂಲ ಪಡೆಯುವುದರಿಂದ ಹಿಡಿದು ಜಾತಿ, ಧರ್ಮ, ಪ್ರದೇಶ, ಭಾಷೆ ಮೊದಲಾದ ವಿಷಯಗಳು ಸೇರುತ್ತವೆ.
ಹೀಗೆ ಎಲ್ಲರಿಗೂ ಸೇರಿದ್ದನ್ನು ಅನ್ಯಾಯವಾಗಿ ಸೇರಿದ್ದನ್ನು ಕಿತ್ತು ತಿನ್ನುವುದರಲ್ಲಿ ನಮಗೆ ವಿಪರೀತ ಆಸಕ್ತಿ, ತೃಪ್ತಿ. ಇದನ್ನೆಲ್ಲಾ ಗಮನಿಸಿದಾಗ ಮನುಷ್ಯ ಜೀವಿ ಉಳಿದೆಲ್ಲಾ ಪ್ರಾಣಿಗಳಿಗಿಂತ ತಾನು ಭಿನ್ನ ಮತ್ತು ಶ್ರೇಷ್ಠ ಅಂತ ತನ್ನ ಅಹಂ ತೃಪ್ತಿ ಪಡಿಸಿಕೊಳ್ಳಲು ಹೇಳಿಕೊಳ್ಳುವ ಮನುಷ್ಯತ್ವ, ಮಾನವೀಯತೆ, ನ್ಯಾಯ ಮೊದಲಾದ ಗುಣಗಳು ಬೇರೆಯದೇ ಅರ್ಥ ಧ್ವನಿಸುತ್ತವೆ ಎನ್ನುವ ಅನುಮಾನ ಅವಾಗವಾಗ ನನಗೆ ಕಾಡುತ್ತದೆ.

  ಪ್ರಜಾಕೀಯಾ ಸಿದ್ಧಾಂತ - ಉತ್ತಮ ಪ್ರಜಾಕೀಯಾ ಪಕ್ಷ

Moola: Suresh Kunder

Leave a Reply

Your email address will not be published. Required fields are marked *

Translate »