ಡಾ| ಕೋಟಾ ಶಿವರಾಮ ಕಾರಂತ ನುಡಿ – Shivarama Karanth Quotes

"ಕಾರಂತ ನುಡಿ – ೧"

“ನಮ್ಮ ನಿತ್ಯದ ಹೊಟ್ಟೆ ಪಾಡು ಸಾಂಸಾರಿಕ ಜಂಜಾಟದಲ್ಲಿ ಇನ್ನೊಬ್ಬರಿಗೆ ಉಪಕರಿಸಲು ನಮಗೆ ಆಗದೆ ಹೋಗಬಹುದು ಆದರೆ ಇಷ್ಟನ್ನಾದರೂ ಮಾಡಬಹುದು ಅಪಕಾರ ಮಾಡದಿದ್ದರೆ ಆಯಿತು.”

"ಕಾರಂತ ನುಡಿ – ೨"

“ನೆರಳಿರುವಲ್ಲಿ ತಲೆಯೊಡ್ಡಿ ಉಸಿರಾಡಿಕೊಂಡಿರಬೇಕೆಂಬ ಬಾಳ್ವೆಯ ನಿರೀಕ್ಷೆ ಎಂತಹ ಹತಾಶ ಸ್ಥಿತಿಯಲ್ಲಿಯೂ ಮನುಷ್ಯನನ್ನು ಕಾಡುತ್ತದೆ.”

"ಕಾರಂತ ನುಡಿ – ೩"

“ಯಾರು ಪ್ರಪಂಚದ ಸುಖವನ್ನು ಹೆಚ್ಚಿಸಲು ಯತ್ನಿಸುತ್ತಾರೋ ಅವರು ತಮ್ಮ ಸುಖವನ್ನೂ ಹೆಚ್ಚಿಸಿಕೊಳ್ಳುತ್ತಾರೆ.”

"ಕಾರಂತ ನುಡಿ – ೪"

“ಜೀವನದಿಂದಲೇ ದೇವರು ಉದ್ಭವಿಸಬೇಕು ಬೆಳೆಯಬೇಕು. ಎಷ್ಟು ಎಷ್ಟು ನಮ್ಮ ಜೀವನ ಹಿರಿದೋ ಅಷ್ಟು ಅಷ್ಟು ದೇವರೂ ಹಿರಿದು.”

"ಕಾರಂತ ನುಡಿ – ೫"

“ರಾಜಕೀಯದಲ್ಲಿ ಪ್ರಾಮಾಣಿಕತೆಯನ್ನು ಬಯಸಿದರೆ ಸಹರಾ ಮರುಭೂಮಿಯಲ್ಲಿ ಓಯಸಿಸ್ ಹುಡುಕುವಷ್ಟು ಕಷ್ಟವಾದೀತು. ಮನುಷ್ಯ ಬಾಳಬೇಕಾದರೆ ಆ ಓಯಸಿಸ್ಸನ್ನು ಹುಡಕಲೇ ಬೇಕಲ್ಲ!!”

"ಕಾರಂತ ನುಡಿ – ೬"

“ಸಂಸಾರದಲ್ಲಿ ಮೋಹವಿರಕೂಡದು ಎನ್ನುತ್ತೇವೆ. ಅದೇ ನಿಜವಾದರೆ ಪ್ರೀತಿ ವಾತ್ಸಲ್ಯಗಳೆಂಬುವುದಕ್ಕೆ ಏನು ಬೆಲೆ?…..”

ಡಾ ಕೋಟಾ ಶಿವರಾಮ ಕಾರಂತರ ಸಂಪೂರ್ಣ ನುಡಿಗಳ ಮೊಬೈಲ್ ಆಪ್ ಕೂಡ ಲಭ್ಯವಿದ್ದು ಅದನ್ನು ಈ ಕೆಳಗಿನ ಲಿಂಕ್ ಬಳಸಿ ಡೌನ್ಲೋಡ್ ಮಾಡಬಹುದು.

https://play.google.com/store/apps/details?id=kannada.shivarama.karanth

android app playstore shivarama karanth nudi
"ಕಾರಂತ ನುಡಿ – ೭"

“ಮುಖ್ಯವಾಗಿ ಹೆಣಗಳಲ್ಲಿರುವ ಭೇದವು ಎರಡೇ. ಜೀವ ಇರುವುದು ಜೀವ ಇಲ್ಲದಿರುವುದು. ಪ್ರಾಣ ಹೋದರೆ ಮೊದಲನೆಯ ವರ್ಗಕ್ಕೆ ಸೇರಿಸಿ ಬಿಡುತ್ತಾರೆ. ಹಣ ಹೋದರೆ ಎರಡನೆಯ ವರ್ಗಕ್ಕೆ ದಾಖಲು ಮಾಡುತ್ತಾರೆ.”

"ಕಾರಂತ ನುಡಿ – ೮"

“ಬಾಳು ಇರುವುದು ಬದುಕುವುದಕ್ಕಾಗಿ; ಬದುಕಿ ಬೆಳೆಯುವುದಕ್ಕಾಗಿ.. “

"ಕಾರಂತ ನುಡಿ – ೯"

“ಈ ಗಳಿಗೆಯವರೆಗೂ ನಾವು ಇದ್ದೇವೆ. ಇನ್ನೊಂದು ಗಳಿಗೆಗೆ ಇರುತ್ತೇವೆ ಎನ್ನುವ ಖಾತ್ರಿ ಯಾರಿಗಾದರೂ ಇದೆಯೇ? ಇದ್ದಾಗ ಇದ್ದರೆ ಇದೆಲ್ಲವೂ ನಮ್ಮದು; ಯಾವುದನ್ನು ವಿಪರೀತ ನೆಚ್ಚಿಕೊಂಡಿದ್ದರೆ ಸುಖವಿಲ್ಲ”

"ಕಾರಂತ ನುಡಿ – ೧೦"

“ದೇಶ ದೊಡ್ಡದಾಗಬೇಕಾದರೆ ಊರಿನ ಜನ ದೊಡ್ಡವರಾಗಬೇಕು. ನಮ್ಮಲ್ಲಿ ಅದೇ ಕಾಣಿಸದಾಗಿದೆ. ನಾವೆಷ್ಟು ಹೆಮ್ಮೆ ತಾಳಿದರೇನು? ನಮ್ಮ ಶೀಲವೇ ನಷ್ಟವಾಗಿರುವಲ್ಲಿ…”

"ಕಾರಂತ ನುಡಿ – ೧೧"

“ಮನುಷ್ಯ ಬದುಕುವ ಮಿತಿ ನೂರು ವರ್ಷ ಎಂದು ತಿಳಿಯುವ. ಆದರೆ ಅವನು ಸಂಪತ್ತು ಕೂಡಿಹಾಕುವ ಬಗೆಯನ್ನು ಕಂಡುದಾದರೆ ತನ್ನ ಗಳಿಮೆಯು ಮುಂದಿನ ಮೂರು ಶತಮಾನದ ಜನರಿಗೂ ಸಿಗಬೇಕೆಂದು ಬಯಸುವಂತೆ ಕಾಣುತ್ತದೆ. ಇದರಿಂದ ಅವನ ಸಂತಾನ ನ್ಯಾಯವಾಗಿ ದುಡಿಯಬೇಕಾದಷ್ಟು ಶ್ರಮಿಸುವುದಿಲ್ಲ. “

"ಕಾರಂತ ನುಡಿ – ೧೨"

“ನಾನು ನದಿಯ ಪಯಣದಲ್ಲಿ ಅದರ ಲಲಿತ ರೂಪವನ್ನು ಕಂಡು ಎಷ್ಟೋ ಬಾರಿ ಹಿಗ್ಗಿ ನಲಿದಿದ್ದೇನೆ. ಆದರೆ ಅದರ ಉಗ್ರ ರೂಪವನ್ನು ಕಂಡಾಗ ಅದರ ಮುಂದೆ ಮಾನವನಾದ ನನ್ನ ನಿಜ ತೂಕ ಬಲು ಕಡಿಮೆ ಎನಿಸಿದ್ದುಂಟು. ನನ್ನ ಬಾಳೂ ಕ್ಷಣಿಕ ಎನ್ನಿಸದೆ ಇಲ್ಲ. “

"ಕಾರಂತ ನುಡಿ – ೧೩"

“ಬದುಕಿನಲ್ಲಿ ಪರಮಾವಧಿಯಿಯ ತೃಪ್ತಿಯನ್ನು ಕೊಡಬಲ್ಲುದು ಒಂದೇ ಒಂದು ತಾನು ಸರಿಯಾಗಿ ನಡೆದಿದ್ದೇನೆ ಎಂಬ ಆತ್ಮವಿಶ್ವಾಸ”

"ಕಾರಂತ ನುಡಿ – ೧೪"

“ಕರೆದರೆ ಸಾವು ಬರುತ್ತದೆಯೇ? ಅದು ಬರುವುದು ಅದರ ಇಷ್ಟವಿದ್ದಾಗ. ನಮ್ಮ ತಯಾರಿ ಅದು ನೋಡುತ್ತದೆಯೇ? ಅದು ಬರುವಾಗ ನಾವು ತಯಾರಿರಬೇಕು”

"ಕಾರಂತ ನುಡಿ – ೧೫"

“ಜನ ಆದರ್ಶವಾದಿಗಳನ್ನು ಪೂಜಿಸುವುದರಲ್ಲಿ ತೃಪ್ತರು ಅನುಸರಿಸುವುದರಲ್ಲಿ ಯಾವಾಗಲೂ ಹಿಂದೆಯೇ”

"ಕಾರಂತ ನುಡಿ – ೧೬"

“ಕೆಲವರು ಹುಟ್ಟುವಾಗಲೇ ಸರ್ವಜ್ಞರಾಗಿ ಹುಟ್ಟಿ ಜಗತ್ತಿನ ಜ್ಞಾನಕ್ಕೆ ಕಣ್ಣನ್ನೂ ಕಿವಿಯನ್ನೂ ತೆರೆಯದೆ ದೊಡ್ಡ ದೊಡ್ಡ ಮಾತುಗಳನ್ನು ಬರೆಯತೊಡಗುತ್ತಾರೆ. ನಾಲ್ಕು ಜನರನ್ನು ಬೈದು ಪತ್ರಿಕೆಯ ಪ್ರಸಾರ ಬೆಳೆಯಿಸುವ ಚರಂಡಿ ಪತ್ರಿಕೋದ್ಯಮವೂ ತಲೆದೋರಿದೆ. “

"ಕಾರಂತ ನುಡಿ – ೧೭"

“ಮನುಷ್ಯ ಬಲಿಯಲು ಅರಳಲು ಅವನ ಶಕ್ತಿಗಳು ಇನ್ನೆಷ್ಟೋ ಹೆಚ್ಚಿಗೆ ಬೆಳೆಯಬೇಕು. ಅವು ಎಷ್ಟೂ ಬೆಳೆಯಬಹುದು. “

"ಕಾರಂತ ನುಡಿ – ೧೮"

“ಬಾಳಿನಲ್ಲಿ ಮನುಷ್ಯ ಪಡೆಯಬಹುದಾದ ಎಲ್ಲ ಸಂಪತ್ತಿಗಿಂತ ಮಿಕ್ಕಿದ ಸಂಪತ್ತು ತಾಯ್ತನವಲ್ಲವೇ? ಶಿಶುವಿಗೆ ಮೊಲೆಯುಡಿಸುವ ಗಳಿಗೆಯಿಂದ ಅದನ್ನು ಬೆಳೆಸಿ ಪ್ರಬುದ್ಧನನ್ನಾಗಿ ಮಾಡಿ ಪ್ರಪಂಚಕ್ಕೆ ಒಪ್ಪಿಸುವ ಹೊಣೆ ಎಷ್ಟು ಹೆಚ್ಚಿನದೋ ಆ ಹೊಣೆಯ ನಿರ್ವಹಣೆಯ ಭಾಗ್ಯವೂ ಹೆಚ್ಚಿನದಲ್ಲವೆ?”

"ಕಾರಂತ ನುಡಿ – ೧೯"

“ಯಾವ ನಾಡೂ ಒಬ್ಬ ಹುಟ್ಟಿದ ಊರಿನ ಸೊಗಸಿಗೆ ಸಾಟಿಯಾಗದು..”

"ಕಾರಂತ ನುಡಿ – ೨೦"

“ಇವತ್ತು ಎಲ್ಲವೂ ಹೊಟ್ಟೆಗಾಗಿಯೇ ಇದೆ. ಹೊಟ್ಟೆಗಲ್ಲವಾದರೆ ಅಧಿಕಾರಕ್ಕೆ: ಇಲ್ಲವೇ ಬರಿಯ ಮೆರವಣಿಗೆಗೆ. ಜ್ಞಾನ ಸೌಂದರ್ಯ ಸತ್ಯ– ಇವು ಎಲ್ಲವೂ ನಮ್ಮ ಬದಕು ಬೆಳೆಯುವುದಕ್ಕೆ ಬೇಕು. ಬದುಕು ಬೆಳೆಯಬೇಕಾದರೆ ಜೀವನದ ದೃಷ್ಟಿ ಹೇಗಿರಬೇಕು– ಎಂಬುದನ್ನು ನಾವು ಮರೆತುಬಿಟ್ಟಿದ್ದೇವೆ.”

"ಕಾರಂತ ನುಡಿ – ೨೧"

“ಮನುಷ್ಯ ವಿನಾಶದ ಅಂಚಿನಲ್ಲಿದ್ದಾಗಲೂ ಬದುಕಿನ ತಂತು ಎಟುಕೀತೆ ಎಂದು ಅರಸಬೇಕು.”

"ಕಾರಂತ ನುಡಿ – ೨೨"

“ಹುಟ್ಟಿ ಬಂದಿದ್ದೇವೆ ಕೈ ಮೂಗು ಬಾಯಿ ಪಡೆದು. ಅವೆಲ್ಲ ಇರುವುದು ಯಾತಕ್ಕೆ? ಕಚ್ಚಲಿಕ್ಕೆ ಹುಲಿಯ ಬಾಯಿ ಕೊಡು ಹೊರಲಿಕ್ಕೆ ಆನೆಯ ಮೈ ಕೊಡು ನುಸುಳಲಿಕ್ಕೆ ನುಸಿಯ ಶರೀರ ಕೊಡು ಅಂದರೆ ಹೇಗಾದೀತು? “

"ಕಾರಂತ ನುಡಿ – ೨೩"

“ವ್ಯಕ್ತಿ ಚಿಹ್ನೆ ಉಳಿಯುವುದೂ ಅಳಿಯುವುದೂ ಅವನ ಚರಿತ್ರೆಯಿಂದ. ಆ ಚರಿತ್ರೆ ನಮ್ಮ ನಮ್ಮ ಸ್ಮರಣೆಗಳನ್ನು ಚೇತನಗೊಳಿಸಿ ನಮ್ಮ ಬದುಕಿನ ಮೂಲಕ ಜೀವಂತವಾಗಿ ಉಳಿದರೆ ಬೆಳೆದರೆ ಮುಂದೆ ಸಾಗಿದರೆ ಅದೇ ಪುನರ್ಜನ್ಮ.”

"ಕಾರಂತ ನುಡಿ – ೨೪"

“ನಾವು ಅನ್ನುವ ಉಪದೇಶಕ್ಕೂ ನಮ್ಮದೇ ಜೀವನಕ್ಕೂ ಯಾವ ಸಂಬಂಧವೂ ಇಲ್ಲದೆ ಹೋದರೆ ಆಗ ನಮ್ಮ ಮಾತಿಗೆ ಬೆಲೆ ಬಾರದು. ಹೃದಯದಿಂದ ಹೊರಡುವ ಮಾತು ಮಾತ್ರವೇ ಹೃದಯವನ್ನು ಹೊಗ್ಗಬಹುದಂತೆ.”

"ಕಾರಂತ ನುಡಿ – ೨೫"

“ತಾನು ಇಲ್ಲಿ ಇದ್ದು ಮಾಡಬೇಕಾದುದೇನು? ಸುತ್ತಲಿಂದ ಕೊಳ್ಳಬೇಕಾದುದೇನು? ಸುತ್ತಲಿಗೆ ಕೊಡಬೇಕಾದುದೇನು? ಅದನ್ನು ತಿಳಿಯಲು ಯತ್ನಿಸದಾತ ಸಂತೆ ಮುಗಿಯಲು ಸಂತೆ ನಡೆದ ತಾವನ್ನು ಬಿಡಲು ಅಂಜಿದ ಗಿರಾಕಿಯಂತಾಗುತ್ತಾನೆ. “

"ಕಾರಂತ ನುಡಿ – ೨೬"

“ನಮಗೆ ಅದು ಬೇಕು; ಇದು ಬೇಕು ಎಂದು ಅನ್ಯರನ್ನು ನಿರೀಕ್ಷಿಸಿದರೆ ಫಲವಿಲ್ಲ. ಬೇಕೆಂದು ತೋರಿದರೆ ನಿನಗೆ ತಿಳಿದದ್ದನ್ನು ನೀನು ಮಾಡು.”

"ಕಾರಂತ ನುಡಿ – ೨೭"

“ಬದುಕು ಸಹನೆಯಿಂದ ಮುಂದುವರಿದಾಗ ದೇವರು ಅನುಗ್ರಹಿಸಿದ ಅನ್ನುತ್ತೇವೆ. ನಮಗೆ ತಿಳಿಯದ ಅನೇಕ ಕ್ಷಣಗಳು ಬದುಕಿನ ಸುಖಕ್ಕೆ ಒದಗಿದ್ದರಿಂದ ಅದೃಷ್ಟಶಾಲಿ ಜೀವನ ಅನ್ನುತ್ತೇವೆ. “

"ಕಾರಂತ ನುಡಿ – ೨೮"

“ಮಕ್ಕಳ ಶಕ್ತಿಯನ್ನು ತಿಳಿದುಕೊಂಡರೆ ಮಾತ್ರ ಅವನ್ನು ಬೆಳೆಯಿಸಬಲ್ಲ ದಾರಿಗಳು ನಮಗೆ ಗೊತ್ತಾಗುತ್ತವೆ. ಅವನ್ನು ತಿಳಿಯದೆ ಮಾಡುವ ಉಪಚಾರಗಳೋ ಹಬ್ಬಗಳೋ ದೊಡ್ಡವರ ಹೆಮ್ಮೆಯನ್ನು ತಣಿಸುವುದಕ್ಕೆ ಸಾಕಾಗುತ್ತವೆ.”

"ಕಾರಂತ ನುಡಿ – ೨೯"

“ಯಾವ ಉದ್ದೇಶಕ್ಕಾಗಿ ಬ್ರಿಟಿಷರನ್ನು ದೇಶ ಬಿಟ್ಟು ಓಡಿಸಿದೆವೋ ಅವೆಲ್ಲ ಮಣ್ಣುಪಾಲಾಗಿದೆ. ಎಲ್ಲರಿಗೂ ಅನ್ನ ಕೊಡ್ತೀವಿ ಅಂತ ಹೇಳಿ ಅನ್ನ ಕಿತ್ತುಕೊಳ್ಳುತ್ತಿದ್ದೇವೆ. ಅದರಲ್ಲೂ ವಿದ್ಯಾವಂತರೇ ಈ ಕೆಲಸದಲ್ಲಿ ತೊಡಗಿರುವಿದು ನೋಡಿದರೆ ಅತೀವ ದುಃಖವಾಗುತ್ತದೆ.”

"ಕಾರಂತ ನುಡಿ – ೩೦"

“ಯಾರು ಸಾವಿಗೆ ಅಂಜುವುದಿಲ್ಲವೋ ಅಂಥವ ಬದುಕಿಗೆ ಹೆದರಬೇಕಿಲ್ಲ ಅಂಥವನು ಬದುಕ ಬಲ್ಲ”

"ಕಾರಂತ ನುಡಿ – ೩೧"

“ನಮ್ಮ ಹಾಗೆಯೇ ಸಾವಿರ ಸಾವಿರ ಅಲ್ಲ ಕೋಟಿ ಕೋಟಿ ಪ್ರಾಣಿಗಳಿವೆ. ಅವು ಯಾವುದಾದರೂ ಯಾರನ್ನಾದರೂ ಬೇಡುವುದನ್ನು ಕಂಡಿದ್ದೀಯಾ? ಮತ್ತೆಲ್ಲ ಬಿಡು.”

"ಕಾರಂತ ನುಡಿ – ೩೨"

“ಅಧಿಕಾರದ ಅಮಲೆಂಬುದೇ ಹಾಗೆ. ಪ್ರಜಾಪ್ರಭುತ್ವ ಬಂದಿರುವಾಗಲೂ ಪ್ರಜೆಯ ಅಧಿಕಾರವನ್ನು ಪಡೆದು ಮೆರೆಯುವ ಜನರಿಗೆ ಅವನ ಅಭಿಪ್ರಾಯ ಮಾತ್ರ ಎಂದೂ ಬೇಕಾಗುವುದಿಲ್ಲ; ಬೇಕಾದುದು ಅವನ ಮತ ಮಾತ್ರ.”

"ಕಾರಂತ ನುಡಿ – ೩೩"

“ಬಯಕೆಯ ಕುಡಿ ಎಷ್ಟೆಷ್ಟು ನಿರಾಸೆಯಲ್ಲಿ ಬೆಳಯುತ್ತದೋ ಅದರ ಬೇರು ಅಷ್ಟಷ್ಟು ಬಲವಾಗಿ ಮನದಲ್ಲಿ ಊರಿಕೊಳ್ಳುತ್ತದೆ. ಅದೇ ಚಿಂತನೆಯನ್ನು ಮಾಡುತ್ತ ತನಗೆ ಇಲ್ಲದ ವಸ್ತುವಿಗಾಗಿ ಅಸೂಯೆಗೊಳ್ಳುತ್ತದೆ. “

"ಕಾರಂತ ನುಡಿ – ೩೪"

“ನಮ್ಮ ಅಲ್ಪತನ ನಮಗೇ ಕಾಣಿಸುವುದಿಲ್ಲ. ನಮ್ಮಲ್ಲಿ ಇರುವ ಅಥವಾ ಇಲ್ಲದ ಸ್ವಲ್ಪ ಗುಣಗಳು ಬಹಳ ದೊಡ್ಡದಾಗಿಯೇ ಕಾಣಿಸುತ್ತವೆ.”

"ಕಾರಂತ ನುಡಿ – ೩೫"

“ನಾನು ದೇವರನ್ನು ನಂಬುವುದಿಲ್ಲ. ಏಕೆಂದರೆ ನಾನು ನೋಡಿಲ್ಲ. ನನಗೆ ಯಾವುದು ಗೊತ್ತಿಲ್ಲವೋ ಅದನ್ನು ನಂಬುವುದಿಲ್ಲ. ರಾಮಕೃಷ್ಣ ಪರಮಹಂಸರು ನಂಬಿದ್ದರು. ಅದನ್ನು ತಪಸ್ಸಿನಿಂದ ಕಂಡುಕೊಂಡರು.”

"ಕಾರಂತ ನುಡಿ – ೩೬"

“ಅಳತೆ ಮೀರಿದ ಪ್ರಶಂಸೆಯಿಂದ ಅನೇಕ ಕಲಾವಿದರು ತನ್ನ ನೆಲೆಯನ್ನು ಮರೆತು ಹೆಮ್ಮೆಗೆ ಬಲಿಯಾಗುವುದರ ಜತೆಗೆ ತಮ್ಮ ದೋಷಗಳ ಕಡೆಗೆ ತೀರಾ ಕುರುಡರಾಗಿ ಬಿಡುತ್ತಾರೆ. “

"ಕಾರಂತ ನುಡಿ – ೩೭"

“ಕನ್ನಡದ ಮಕ್ಕಳಿಗೆ ಹಿಂದಿ ಸಂಸ್ಕೃತಗಳ ರೂಢಿಯಿಲ್ಲ ಹಾಗಾಗಿ ಅವರಿಗೆ ಭಾರತ ಮಾತೆ ಎಟುಕದ ವ್ಯಕ್ತಿ. ಅವಳ ಸಲುವಾಗಿ ಮಕ್ಕಳ ಬಾಯಿಯಿಂದ ಭಾರತ್ ಮತಾ ಕೀ ಜೈ ಅನ್ನಿಸುವಾಗ ನಗು ಬರುತ್ತದೆ. ತಾಯಿಯೇ ನಿನಗೆ ನಮಸ್ಕಾರ ಎಂಬ ಅರ್ಥದ ಮಾತುಗಳನ್ನು ವಂದೇ ಮಾತರಮ್ ಎಂದು ವಿನಯ ರಹಿತವಾಗಿ ಜೋ ಹುಷಾರ್ ಎಂಬಂತೆ ಸಾಮೂಹಿಕವಾಗಿ ಒದರಿಸುವುದನ್ನು ಕೇಳಿದಾಗ ದುಃಖವಾಗುತ್ತದೆ.”

"ಕಾರಂತ ನುಡಿ – ೩೮"

“ಹಣದ ಶಕ್ತಿಯು ವಿಮರ್ಶೆಯ ಬಾಯಿಯನ್ನು ಅದುಮಿ ಹಿಡಿದಿದೆ. ಜಾಹಿರಾತಿಗಾಗಿ ಬಾಯಿ ಬಿಡುವ ಪತ್ರಕರ್ತರು ನಿರ್ಬೀತ ವಿಮರ್ಶೆಯನ್ನೇನು ಮಾಡಬಲ್ಲರು???”

"ಕಾರಂತ ನುಡಿ – ೩೯"

“ತನ್ನಲ್ಲೇ ಪ್ರಾಮಾಣಿಕತೆ ಇಲ್ಲದಿದ್ದರೆ ಲೋಕದ ಉದ್ಧಾರಕ್ಕೆ ಪ್ರಯತ್ನಿಸುವುದು ಬೇಡ.”

"ಕಾರಂತ ನುಡಿ – ೪೦"

“ತನ್ನ ಮನೆಯಲ್ಲೇ ಚೆಲುವನ್ನು ಗುರುತಿಸಲಾರದವ ಲೋಕದ ಸೌಂದರ್ಯವನ್ನು ಮೆಚ್ಚಲು ಸಮರ್ಥನಾಗುವುದು ಕಷ್ಟವೇ ಸರಿ.”

"ಕಾರಂತ ನುಡಿ – ೪೧"

“ನಮ್ಮ ಸ್ವಾರ್ಥವೇ ನಮ್ಮ ಅಳತೆಯ ಕೋಲು; ನಮ್ಮ ಸುಖ–ದು:ಖ ಲಾಭ–ನಷ್ಟಗಳ ದೃಷ್ಟಿಯೇ ಬಳಸುವ ತೂಕದ ಕಲ್ಲುಗಳು. ಇತರರು ನಮಗೆ ಒಳ್ಳೆಯವರಾಗಿ ಕಾಣಿಸುವುದು ಬಿಡುವುದು ಇವುಗಳಿ೦ದಲ್ಲವೇ?”

"ಕಾರಂತ ನುಡಿ – ೪೨ "

“ಆ ಬಸರೀಕಟ್ಟೆಯಲ್ಲಿ ಹುಟ್ಟಿ ಬೂದಿಕಟ್ಟೆಯಲ್ಲಿ ಮುಗಿಯುವ ಮೊದಲು ನಾವು ಓಡಾಡಿಕೊಂಡಿರುವ ಕಟ್ಟೆ ಬಾಳಿನ ಕಟ್ಟೆಯಲ್ಲವೇ? “

"ಕಾರಂತ ನುಡಿ – ೪೩"

“ನಮ್ಮಲ್ಲೆಲ್ಲ ಹೆಣ್ಣು ತರುವುದೇ ಪದ್ಧತಿ. ಎಮ್ಮೆ ದನ ನಾಯಿ ಕರುಗಳನ್ನು ತರುವ ಹಾಗೆ. ಅದೊಂದು ಸಂಪ್ರದಾಯ. ನನಗೆ ಸಂಪ್ರದಾಯದ ಮದುವೆ ಬೇಕಿರಲಿಲ್ಲ. ತಿಳಿದು ಮದುವೆಯಾಗಬೇಕು. ಗಂಡಿಗೆ ಹೆಣ್ಣಿನ ಪರಿಚಯವಾಗಬೇಕು. ಮೊದಲಿಗೆ ಇಬ್ಬರೂ ಸ್ನೇಹಕ್ಕೆ ಒಲಿಯಬೇಕು. ಇದು ಕಷ್ಟದ ದಾರಿ. ಜನರು ತಿಳಿದಷ್ಟು ಸುಲಭವಲ್ಲ.”

"ಕಾರಂತ ನುಡಿ – ೪೪"

“ಮಕ್ಕಳಿಗಾಗಿ ಆಸ್ತಿ ಮಾಡಿಡ ಬೇಡಿ! ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ..”

"ಕಾರಂತ ನುಡಿ – ೪೫"

“ಸಾಹಿತಿಗಳಿಗೆ ಸಮಾಜದಲ್ಲಿ ಬೇರೇ ಪಾತ್ರವೇನೂ ಇಲ್ಲ. ಸಾಹಿತಿ ಲೋಕೋದ್ಧಾರಕ ಎಂಬ ಭಾವನೆ ಏನೂ ಬೇಡ. ಆತನೂ ನಿಮ್ಮ ಹಾಗೆ ಮನುಷ್ಯ. ಬದುಕಿನ ಬಗ್ಗೆ ತನ್ನ ಅನುಭವವನ್ನು ಮಾತ್ರ ಹೇಳುತ್ತಾನೆ. ಪರಿಹಾರ ಸೂಚಿಸುವುದಲ್ಲ. ಆತ ಬರೆದ ಮಾತ್ರಕ್ಕೆ ಮಹಾನುಭಾವ ಆಗೋಲ್ಲ. ಬರೆಯದವರೂ ದೊಡ್ಡ ಕೆಲಸಗಳನ್ನು ಮಾಡಿದ್ದಾರೆ.”

"ಕಾರಂತ ನುಡಿ – ೪೬"

“ಯಾವೊಬ್ಬನ ಜೀವನದ ತೀರ್ಮಾನವೂ ಇನ್ನೊಬ್ಬನ ಬದುಕಿನ ತೀರ್ಮಾನವಾಗಲಾರದು.”

"ಕಾರಂತ ನುಡಿ – ೪೭"

“ಕಾಲ ಹಿಂದಕ್ಕೆ ಚಲಿಸುವುದಿಲ್ಲ. ಅದರ ಜೊತೆಗೇ ಹೆಜ್ಜೆ ಹಾಕದಿದ್ದರೆ ನಾವು ನಿಂತಲ್ಲೇ ನಿಂತಿರಬೇಕಾಗುತ್ತದೆ.”

"ಕಾರಂತ ನುಡಿ – ೪೮"

“ನನಗೆ ರಾಮ ಎಂದರೆ ರಾಜಾ ರವಿವರ್ಮ ಅವರ ಚಿತ್ರ. ಕೃಷ್ಣ ಎಂದರೆ ಗುಬ್ಬಿ ವೀರಣ್ಣನವರ ಕೃಷ್ಣಲೀಲಾ ನೆನಪಿಗೆ ಬರುತ್ತದೆ. ಒಳ್ಳೆಯ ಕೆಲಸ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ನಾವು ನಂಬಿ ಬಂದಿದ್ದೇವೆ. ಆದರೆ ಆ ರೀತಿ ಆಗಿಲ್ಲ. ನನಗೆ ಅನುಕೂಲವಾದಾಗ ಮಾತ್ರ ದೇವರನ್ನು ನಂಬುತ್ತೇನೆ ಎಂಬುದು ಸರಿಯಲ್ಲ.”

"ಕಾರಂತ ನುಡಿ – ೪೯"

“ಕೊಳೆಯೇ ಕಾಣದ ಲೋಕವಿಲ್ಲ. ಕೊಳೆಯಿಲ್ಲದ ದೇಹವಿಲ್ಲ. ಬಂದ ಕೊಳೆಯನ್ನು ಆಗಾಗ ತೆಗೆದುಕೊಳ್ಳುವುದೇ ಚೊಕ್ಕತನದ ಲಕ್ಷಣ.”

"ಕಾರಂತ ನುಡಿ – ೫೦"

“ನಾಳೆ ಏನೆಂಬ ಪ್ರಶ್ನೆಗಿಂತಲೂ ಇಂದು ಹೇಗೆ? ಎನ್ನುವ ಪ್ರಶ್ನೆ ನಮಗೆ ಮಹತ್ತರವಾಗಿ ಕಾಣಬೇಕು.”

"ಕಾರಂತ ನುಡಿ – ೫೧"

“ನಮ್ಮ ಮನೋವೃತ್ತಿಯನ್ನು ಬರಿಯ ಭಾವಾವೇಶದಿಂದ ನಾವು ಎಷ್ಟೆಷ್ಟು ಅದುಮಲು ಪ್ರಯತ್ನಿಸುತ್ತೇವೋ ಅದು ಅಷ್ಟಷ್ಟು ಪ್ರತಿರೋಧವನ್ನುಂಟು ಮಾಡುತ್ತದೆ. ಹಗಲು ಕಾಣದ್ದನ್ನು ರಾತ್ರಿ ಕಾಣುತ್ತೇವೆ. ನನಸಿನಲ್ಲಿ ಬಾಳದ್ದನ್ನು ಕನಸಿನಲ್ಲಿ ಬಾಳುತ್ತೇವೆ.”

"ಕಾರಂತ ನುಡಿ – ೫೨"

“ಜಾತ್ರೆಗೆ ಬಂದವರು ಜಾತ್ರೆ ಮುಗಿಸಿ ಹೊರಡುವಾಗ ತಾವು ನಲಿದು ಉಂಡು ಹೋದ ನೆಲದ ಮೇಲೆ ಎಲ್ಲೆಲ್ಲೂ ತಮ್ಮ ಉಚ್ಚಿಷ್ಟವನ್ನು ಚೆಲ್ಲಿ ಹೋದರೆ ಹೇಗಾದೀತು? ನಾವೇ ಅಲ್ಲಿಗೆ ತಿರುಗಿ ಬಾರದಿದ್ದರೇನಾಯಿತು? ಅಲ್ಲಿಗೆ ಬರುವ ನಮ್ಮ ಮಕ್ಕಳು ಏನಂದುಕೊಂಡಾರು? ಅಷ್ಟನ್ನಾದರೂ ಯೋಚಿಸುವ ಬುದ್ಧಿ ಈ ದೇಶವನ್ನು ನಡೆಸುವ ಹಿರಿಯರಿಗೆ ಇಲ್ಲದೆ ಹೋದರೆ ಹೇಗೆ? “

"ಕಾರಂತ ನುಡಿ – ೫೩"

“ಸ್ವರ್ಗ ನರಕ ಆರಿಸಿ ಹೋಗುವ ಜನ್ಮ ಬೇಕಿಲ್ಲ. ಇಲ್ಲಿ ಬದುಕಿನಲ್ಲಿ ನಗು ನೋವು ಸಂಕಟಗಳು ಸಾಕಷ್ಟು ಇರುವಾಗ ಸ್ವರ್ಗದಲ್ಲಿ ನರಕದಲ್ಲಿ ಅಂತಹ ವ್ಯವಸ್ಥೆ ಇರಬೇಕಾದದ್ದು ಯಾರ ಸಲುವಾಗಿ?”

"ಕಾರಂತ ನುಡಿ – ೫೪"

“ಮನುಷ್ಯ ತನ್ನಿಂದಲೇ ಲೋಕ ಬೆಳಗುತ್ತದೆ – ಎಂದು ತಿಳಿದ ಹಾಗೆಯೇ ಹೊನ್ನಿ ಹುಳುಗಳು ತಮ್ಮಿಂದಲೇ ಲೋಕ ಬೆಳಗುತ್ತದೆ – ಎಂದು ತಿಳಿದ್ದಿದ್ದಾವೆ. ಮನುಷ್ಯನ ತಲೆ ಎಷ್ಟೇ ಬಾತುಕೊಂಡಿದ್ದರೂ ಅವನ ಲೋಕ ಈ ಮಿಣುಕು ಹುಳುಗಳಷ್ಟೇ ದೊಡ್ಡ ಪ್ರಪಂಚ. ಮಿಣುಕು ಹುಳುಗಳು ಕೊಡುವ ಪ್ರಕಾಶ ಅವಕ್ಕೆ ಸಾಕು; ನಾವು ಮನುಷ್ಯರು ಕೊಡುವ ಪ್ರಕಾಶ ಮಾತ್ರ ನಮಗೆ ಸಾಲದು. ಆದರೂ ನಮ್ಮಿಂದ ಲೋಕ ಬೆಳಗುತ್ತದೆ ಎಂದು ತಿಳಿಯುತ್ತಾರೆ.”

"ಕಾರಂತ ನುಡಿ – ೫೫"

“ಮನುಷ್ಯನಿಗೆ ತಾನು ಬದುಕಿದ ಮೇಲಲ್ಲವೇ ವೇದಾಂತದ ಪಾಠ ಬದುಕುವುದಕ್ಕೇನೆ ಮೊದಲು ವೇದಾಂತವನ್ನು ಹೇಳಿ ಫಲವಿಲ್ಲ…”

"ಕಾರಂತ ನುಡಿ – ೫೬"

“ಬಾಳ್ವೆ ಇರುವುದು ಕಲಿಯುವುದಕ್ಕೆ ಕಲಿತು ತಿದ್ದಿಕೊಳ್ಳುವುದಕ್ಕೆ ತಿದ್ದಿ ತೃಪ್ತಿ ಪಡುವುದಕ್ಕೆ. ಬಾಳ್ವೆ ಇರುವುದು ಬದುಕುವುದಕ್ಕಾಗಿ ಬದುಕಿನಿಂದ ಬೆಳೆಯುವುದಕ್ಕಾಗಿ.”

"ಕಾರಂತ ನುಡಿ – ೫೭"

“ಮನುಷ್ಯ ಸಮಾಜದ ಋಣವನ್ನು ಹೊತ್ತುಕೊಂಡು ಬಂದಿದ್ದಾನೆ. ಅದರ ಋಣದಿಂದಲೇ ಬೆಳೆಯುತ್ತಾನೆ. ನಾಳೆ ದಿನ ಸಾಯುವಾಗ ತಾನು ಪಡೆದುದಕ್ಕಿಂತಲೂ ಹೆಚ್ಚಿನ ಋಣವನ್ನು ಸಲ್ಲಿಸಿ ಹೋದರೆ ಆತ ಹುಟ್ಟಿದ್ದಕ್ಕೊಂದು ಸಾರ್ಥಕ. ಇಲ್ಲವಾದರೆ ಅವನ ಜನ್ಮದಿಂದ ಸಮಾಜಕ್ಕೆ ನಷ್ಟ.”

"ಕಾರಂತ ನುಡಿ – ೫೮"

“ಯಾರಿಗೂ ಉಪದೇಶ ಮಾಡಬೇಡಿ. ನೀವೇನು ಹೇಳಬೇಕಂತಿದ್ದೀರೋ ಹಾಗೆ ಬದುಕಿ ತೋರಿಸಿ.”

"ಕಾರಂತ ನುಡಿ – ೫೯"

“ನಮಗಿಂತ ಒಳ್ಳೆಯ ಸ್ಥಿತಿಯಲ್ಲಿರುವವರನ್ನು ಕಂಡು ಅವರನ್ನ ದ್ವೇಷಿಸಿ ಅಸೂಯೆ ಪಡುವುದೇ ಇಂದಿನ ಯುಗಧರ್ಮವಾಗಿದೆ”

"ಕಾರಂತ ನುಡಿ – ೬೦"

“ಗಾಂಧೀಜಿಯವರು ದೇಶದಲ್ಲಿ ರಾಮರಾಜ್ಯವನ್ನು ಕಟ್ಟಬೇಕೆಂದು ಹಂಬಲ ತೊಟ್ಟರು. ಅವರ ಜೊತೆಗೆ ನಾಲ್ಕು ದಿನ ಕುಣಿದ ನಾನೂ ಅಂತ ಹಂಬಲವನ್ನು ತೊಟ್ಟದ್ದುಂಟು. “

"ಕಾರಂತ ನುಡಿ – ೬೧"

“ನಂಬುವುದರಿಂದ ನಾವೇನನ್ನೂ ಕಳೆದುಕೊಳ್ಳುವುದಿಲ್ಲ. ಅಪನಂಬಿಕೆಯಂಥ ಅಪಾಯಕಾರಿ ಜೊತೆಗಾರನಿಲ್ಲ.”

"ಕಾರಂತ ನುಡಿ – ೬೨"

“ನೀವು ಪಾಲಿಸದ ಉಪದೇಶ ಖಂಡಿತ ಮಾಡಬೇಡಿ. ಅದು ಒಂದು ಪೈಸಕ್ಕೂ ಬೆಲೆ ಇಲ್ಲದ್ದು. ಉಪದೇಶ ಮಾಡೋ ಪುಸ್ತಕ ಕೊಡಿ ಓದಿಕೊಳ್ತಾರೆ. ಅದಕ್ಕೆ ನೀವೇ ಬೇಕಿಲ್ಲ. ನೀವು ನಡೆದು ತೋರಿಸಿ ಅದು ಮಾಡೋ ಪರಿಣಾಮ ಬೇರೆ ಯಾವುದೂ ಮಾಡಲ್ಲ.”

"ಕಾರಂತ ನುಡಿ – ೬೩"

“ನನಗೆ ಜಡ ಜೀವನ ನಡೆಸುವುದು ಅಸಾಧ್ಯದ ಮಾತು. ಅಲೆದಾಡಿ ನೋಡುತ್ತಿರಬೇಕು; ವಿವಿಧ ಜ್ಞಾನಗಳನ್ನು ಓದಿನಿಂದ ಪಡೆಯಬೇಕು; ನಾನು ಇನ್ನೂ ಬದುಕಿರುವುದಕ್ಕೆ ಏನಾದರೂ ಸಾರ್ಥಕ ಕೆಲಸ ಮಾಡುತ್ತಿರಲೇಬೇಕು ಎನಿಸುತ್ತದೆ ನನಗೆ. ಬದುಕು ಬದುಕಿದಂತೆ ಕಾಣಿಸುವುದು ಅದರಿಂದ ಎಂಬ ಭಾವನೆ ನನ್ನದು.”

"ಕಾರಂತ ನುಡಿ – ೬೪"

“ಮನುಷ್ಯನ ಉದ್ಯೋಗಕ್ಕೂ ಆದರ್ಶಕ್ಕೂ ಪರಸ್ಪರ ಹೊಂದಿಕೆ ಬಾರದೆ ಹೋದಲ್ಲಿ ಜೀವನದಲ್ಲಿ ಸುಖ ಸಿಗಲಾರದು.”

"ಕಾರಂತ ನುಡಿ – ೬೫"

“ಹತ್ತು ಜನಗಳ ಮನಸ್ಸಿಗೆ ಒಳ್ಳೆಯದನ್ನು ಮಾಡಬೇಕು ಎಂದೆನಿಸಿದಾಗಲ್ಲೆಲ್ಲಾ ಆ ಒಳ್ಳೆಯತನ ಸಾಂಕ್ರಾಮಿಕ ರೋಗದಂತೆ ಹಬ್ಬಬಲ್ಲುದು. ಅದೇ ರೀತಿ ಯಾರೋ ನಾಲ್ವರು ಫಟಿಂಗರು ಸೇರಿ ‘ಇದನ್ಯಾರು ನೋಡುತ್ತಾರೆ’ ಎಂದು ಒಂದೊಂದೇ ಸಾಮಗ್ರಿಯನ್ನು ಕದ್ದು ಸಾಗಿಸಿದರೆ ಹುಲಿಗಣ್ಣಿನಿಂದ ಕಾವಲಿಟ್ಟರೂ ಅಲ್ಲಿ ಏನೇನೂ ಉಳಿಯಲಾರದು.”

"ಕಾರಂತ ನುಡಿ – ೬೬"

“ಭೂಮಿಯಲ್ಲಿ ಹುಟ್ಟಿದ ಎಲ್ಲರೂ ಒಟ್ಟುಗೂಡಿ ಒಂದು ದೇವರನ್ನು ಮಾಡಿಕೊಂಡಿದ್ದಾರೆ. ಅವನೇನು ಮಾಡುತ್ತಿದ್ದಾನೋ? ಯಾರ್ಯಾರು ನನ್ನನ್ನು ನಂಬುತ್ತಿದ್ದಾರೆ ಯಾರ್ಯಾರು ನಂಬುವುದಿಲ್ಲ ಎಂದು ಹುಡುಕಿ ಹೋಗಲಾರ . “

"ಕಾರಂತ ನುಡಿ – ೬೭"

“ಜೀವನದ ಸ್ಮೃತಿಪಥದಲ್ಲಿ ಎಲ್ಲದಕ್ಕಿಂತಲೂ ಮನಸ್ಸಿನ ಮೇಲೆ ಅಚ್ಚೊತ್ತಿ ನಿಲ್ಲುವ ಒಂದು ಶಕ್ತಿಯಿದ್ದರೆ ಅದು ಮನುಷ್ಯನ ಒಳ್ಳೆಯತನ. ಒಳ್ಳೆಯತನ ಎಂಬುದನ್ನು ಮನುಷ್ಯ ಗುರುತಿಸಿ ಕಲಿತು ಸಾಧಿಸಬೇಕಾದ್ದೊಂದು ಅಂಶವೇ ಹೊರತು ತನ್ನಂತೆಯೇ ಜೀವನದಲ್ಲಿ ತುಂಬಿಕೊಳ್ಳುವ ವಸ್ತುವಲ್ಲ.”

"ಕಾರಂತ ನುಡಿ – ೬೮"

“ಮನೋದೌರ್ಬಲ್ಯಕ್ಕೂ ಒಂದು ಮಿತಿ ಇರಬೇಕು. ಒಂದು ಗಳಿಗೆಯ ಉನ್ಮತ್ತತೆಯಿಂದ ಯಾವಜ್ಜೀವನದ ಭವಿಷ್ಯ ನಿರ್ಧರಿಸುವುದು ತಪ್ಪು. ಆದರ್ಶಕ್ಕಾಗಿ ತನ್ನವರಿಗಾಗಿ ಜನಕ್ಕಾಗಿ ವ್ಯಕ್ತಿ ಸುಖವನ್ನು ಮರೆಯಲಾರದೆ ಹೋದರೆ ಬಾಳ್ವೆಗೆ ಚೆಲುವು ಬರಲಾರದು. “

"ಕಾರಂತ ನುಡಿ – ೬೯"

“ಎಷ್ಟೋ ಬಾರಿ ಅಳುವೆಂಬುದು ನಗುವಿಗಿಂತಲೂ ಸುಖದ ವಸ್ತು. ಎದೆಯ ಭಾರವನ್ನು ಅದು ಇಳಿಸಿದಷ್ಟು ಮನಸ್ಸಿನ ಕಲ್ಮಶವನ್ನು ಅದು ತೊಳೆದಷ್ಟು ಪಾಪವನ್ನು ಕಿತ್ತು ಅದು ಶುಚಿ ಮಾಡಿದಷ್ಟು ತೀರ್ಥ ಪ್ರಸಾದಗಳು ಮಾಡಲಾರವು.”

"ಕಾರಂತ ನುಡಿ – ೭೦"

“ನಮ್ಮ ಜನರು ಸುಳ್ಳನ್ನು ನಂಬುವಷ್ಟು ಸತ್ಯವನ್ನು ನಂಬುವುದಿಲ್ಲ. ತಾವು ನಂಬಿರುವುದೇ ಸತ್ಯ ಎಂದು ತಿಳಿದುಕೊಳ್ಳುವ ಜಗತ್ತಿನಲ್ಲಿ ಅದಕ್ಕೆ ವಿರುದ್ಧವಾಗಿ ಕಾಣಿಸುವುದೆಲ್ಲವೂ ಅಪಥ್ಯವಾಗುತ್ತದೆ.”

"ಕಾರಂತ ನುಡಿ – ೭೧"

“ಭಾರತ ಜಗತ್ತು ಲೋಕ ಎಂಬ ನಮ್ಮ ಎಟುಕಿಗೆ ಮೀರಿದ ಚಿಂತೆಯಲ್ಲಿ ಕಾಲ ಕಳೆವ ಬದಲು ನಾವು ಇರುವ ಪರಿಸರದಲ್ಲಿ ಚೆನ್ನಾಗಿ ಬಾಳುವ ಬಗೆ ಕಲಿಯಬೇಕು. ಸತ್ಯ ನೀತಿಯಿಂದ ನಾವು ಮೊದಲು ವರ್ತಿಸಬೇಕು. ಜಗತ್ತು ಏನು ಮಾಡುತ್ತದೆ ಬಿಡುತ್ತದೆ ಎಂಬ ಚಿಂತೆ ಬೇಡ.”

"ಕಾರಂತ ನುಡಿ – ೭೨"

“ಹರಿಯುತ್ತಿರುವ ನದಿಯ ಮುಂದು ಹಿಂದಿಗಿಂತ ದೊಡ್ಡದು. ಜೀವನ ಪ್ರವಾಹವೂ ಹಾಗೇನೇ ಅಲ್ಲಿ ನಾಳಿನ ಬದುಕು ನಿನ್ನೆಗಿಂತ ದೊಡ್ಡದೆಂಬುದೇ ಸತ್ಯ. ನಾಡಿದ್ದಿನ ಪಾಲಿಗೆ ನಾಳೆಯೂ ಸಣ್ಣದಾಗಬಹುದು. ಹೀಗಿರುವಲ್ಲಿ ವ್ಯಕ್ತಿ ತಾನೇ ಬಲು ದೊಡ್ಡವನೆಂದು ತಿಳಿಯಬೇಕಾಗಿಲ್ಲ.”

"ಕಾರಂತ ನುಡಿ – ೭೩"

“ಈ ದೇಶ ಎತ್ತ ಹೋಗುತ್ತಿದೆಯೋ ಗೊತ್ತಿಲ್ಲ. ಏನು ಮಾಡಿದರೂ ನಾನು ಪತ್ರಿಕೆಗಳಲ್ಲಿ ಬರಬೇಕು ನಾನು ಇಂಥವನು ಎಂದು ಹೇಳಿಕೊಳ್ಳುವ ಆತ್ಮರತಿಯಲ್ಲಿ ಮುಳುಗಿದ್ದೇವೆ. ನಮ್ಮನ್ನು ನಾವೇ ದೊಡ್ಡವರು ಎಂದು ಕರೆದುಕೊಳ್ಳುತ್ತಿರುವ ಆಸ್ಪತ್ರೆ ಆಗುತ್ತಿದೆ ಈ ದೇಶ.”

"ಕಾರಂತ ನುಡಿ – ೭೪"

“ಯಾವ ರೀತಿಯಿಂದಲೇ ಆಗಲಿ ಯಾರನ್ನು ಮುಳುಗಿಸಿಯೇ ಆಗಲಿ– ಇನ್ನೊಬ್ಬರನ್ನು ವಂಚಿಸಿ ಗಂಟು ಮುಳುಗಿಸಿ ದುಡ್ಡು ಒಟ್ಟು ಹಾಕುವರು. ಕೈಯಲ್ಲಿ ದುಡ್ಡು ಸಾಕಷ್ಟು ಕೂಡಿತು ಎಂದರೆ ನಮ್ಮ ಜನ ನಾಯಿಗೂ ಪಲ್ಲಕಿ ಕೊಡುತ್ತಾರೆ.”

"ಕಾರಂತ ನುಡಿ – ೭೫"

“ನಾವು ಎಷ್ಟೇ ಬುದ್ಧಿವಂತರಾಗಿದ್ದರೂ ನಾವು ಎಷ್ಟೇ ಸರಿಯಿದ್ದರೂ ಒಂದೊಂದು ಜೀವವು ತಾನು ಕಂಡುಕೊಂಡ ಬೆಳಕಿನಲ್ಲಿ ನಡೆಯುವುದೇ ನ್ಯಾಯ. ನಮ್ಮೆಲ್ಲರ ಸಮಷ್ಟಿ ಬಾಳ್ವೆಗೆ ನಾವು ಸಲ್ಲಿಸಬೇಕಾದ ಋಣವೆಂದರೆ ಅದು. ಇದೇ ಖಂಡಿತ ಅದೇ ಖಂಡಿತ ಎಂದು ಇನ್ನೊಬ್ಬರ ಗಂಟಲನ್ನು ಹಿಸುಕಿ ಅವರ ವಾಣಿಯನ್ನು ನಿರ್ಬಂಧಿಸುವುದು ಸಮಾಜಘಾತುಕತನ.”

"ಕಾರಂತ ನುಡಿ – ೭೬"

“ಗೆದ್ದವನ ಪಾಲಿಗೆ ಆ ಕೆಲಸ ಅಲ್ಲಿಗೆ ಮುಗಿದಂತೆ. ಸೋತವನ ಪಾಲಿಗೆ ಆ ಕೆಲಸವನ್ನು ಮತ್ತೆ ಮತ್ತೆ ಮಾಡುವ ಅವಕಾಶವಿದೆ.”

"ಕಾರಂತ ನುಡಿ – ೭೭"

“ಹಣ ಎಂದರೆ ಉಪ್ಪು ಇದ್ದಂತೆ ಅದನ್ನು ತುಸುವೇ ನಾಲಿಗೆಯ ಮೇಲಿರಿಸಿಕೊಂಡರೆ ರುಚಿ ಹೆಚ್ಚಾಗಿ ತಿಂದರೆ ದಾಹ “

"ಕಾರಂತ ನುಡಿ – ೭೮"

“ಉಪದೇಶ ಮಾಡುವ ಬದಲು ತಾವೇ ಅನುಸರಿಸಿದರೆ ಪ್ರಯೋಜನವಾದೀತು.”

"ಕಾರಂತ ನುಡಿ – ೭೯"

” ಈ ಪ್ರಪಂಚ ಉಳಿದಿರುವುದು ಮಾನವನ ಬದುಕನ್ನು ಸಹನೀಯವಾಗಿ ಮಾಡಿರುವುದು ಪ್ರೇಮ ಒಂದೇ ಅಲ್ಲವೇ?”

"ಕಾರಂತ ನುಡಿ – ೮೦"

“ನಮ್ಮ ಅತಿ ಗಳಿಕೆಯಿಂದ ನಮ್ಮ ಆಚೀಚಿನ ಅನೇಕರ ಸುಖಗಳು ಇಲ್ಲದಾಗುತ್ತದೆ. ಅಲ್ಲದೆ ಬಾಳ್ವೆಗೆ ಬಲವಾಗಿ ಅಂಟಿದಾತನೂ ಅದರ ಮಿತಿಯನ್ನು ಮನಗಾಣದಾತನೂ ಸಾವಿನ ಭೀತಿಗೆ ಗುರಿಯಾಗಬೇಕಾಗುತ್ತದೆ.”

"ಕಾರಂತ ನುಡಿ – ೮೧"

“ಕ್ಷಣಿಕತೆಯಲ್ಲೇ ಅದರ ಸೊಗಸಿದೆ; ಕಾರ್ಯ ಪ್ರವೃತ್ತಿಯಿದೆ; ಸಾರ್ಥಕತೆಯೂ ಇದೆ ಎಂದೆನಿಸುತ್ತದೆ. ಜೀವಕ್ಕೆ ಅಮರತ್ವವೂ ಇಲ್ಲ; ಮೋಕ್ಷವೂ ಇಲ್ಲ. ನಮಗರಿಯದ ಕಾಲದ ಪ್ರವಾಹದಲ್ಲಿ ವ್ಯಕ್ತತೆ ಅವ್ಯಕ್ತತೆ ಎಂಬ ವಿಭಿನ್ನ ಸ್ವರೂಪಗಳೇನೋ ಇವೆ.”

"ಕಾರಂತ ನುಡಿ – ೮೨"

“ಒಳ್ಳೆಯ ಪತ್ರಿಕೆಗಳಿಂದ ಒಳ್ಳೆಯ ಅಭಿರುಚಿಗಳನ್ನು ಬೆಳೆಸುವ ಆಸೆ ಎಷ್ಟುಮಂದಿಗಿದೆ?. ಆ ಆಸೆಗೆ ತಕ್ಕಂತೆ ಶ್ರಮಿಸುವ ಮನಸ್ಸು ಎಷ್ಟು ಜನರಿಗಿದೆ? ಆದರೂ ನಮ್ಮ ನಾಡು ದೊಡ್ಡದು ನಮ್ಮ ಪತ್ರಿಕೆಗಳೂ ದೊಡ್ಡವೇ! ಆತ್ಮವಿಮರ್ಶೆ ಬೇಡವಾದಾಗ ಇಂಥ ದೊಡ್ಡಸ್ತಿಕೆಗೆ ಎಂದೂ ಬರಗಾಲವಿಲ್ಲ.”

"ಕಾರಂತ ನುಡಿ – ೮೩"

“ಅನುದಿನ ಆಫೀಸು ಕುರ್ಚಿಯಲ್ಲಿ ಸ್ವರ್ಗವನ್ನು ಕಾಣ ಬಯಸುವವನು ಬಯಲಲ್ಲಿ ಓಡಾಡಲು ಹಳ್ಳಗುಡ್ಡಗಳಲ್ಲಿ ತಿರುಗಾಡಲು ಸಂಜೆ ಮುಂಜಾನೆಗಳಲ್ಲಿ ದಿಗಂತವನ್ನು ನೋಡಲು ಕಲಿಯಬೇಕು. “

"ಕಾರಂತ ನುಡಿ – ೮೪"

“ವಿರಾಮ ದೊರೆತಾಗಲೆಲ್ಲ ಅನುಕೂಲತೆ ಒದಗಿದಾಗಲೆಲ್ಲ ಕಡಲ ತೀರದ ಮೇಲೆ ಹಾಯಾಗಿ ಮಲಗುವುದಕ್ಕೋ ಬೆಟ್ಟದ ತುದಿಯ ಮೇಲೆ ಮೌನವಾಗಿ ಕುಳಿತಿರುವುದಕ್ಕೋ ಗಿಡಮರಗಳ ಎಡೆಯಲ್ಲಿ ಕಣ್ಣನ್ನು ಹಕ್ಕಿಯಿಂದ ಹೂವಿಗೂ ಹೂವಿಂದ ಹಕ್ಕಿಗೂ ಹೊರಳಿಸುವುದಕ್ಕೋ ಕಲಿಯಬೇಕು. “

"ಕಾರಂತ ನುಡಿ – ೮೫"

“ಪ್ರತಿಯೊಮ್ಮೆಯೂ ನಮ್ಮ ಜೀವನ ವಿಸ್ತರಿಸೀತು. ತಾಳ್ಮೆ ಔದಾರ್ಯಗಳು ಬೆಳೆದಾವು. ನಿಸರ್ಗದ ರಾಗಾಲಾಪದಲ್ಲೋ ರೂಪರೇಖೆಯಲ್ಲೊ ಮೇಳವಿಸದ ಸ್ವರ ನಡೆಗಳು ಇಂಥವೇ ಎಂದು ತಿಳಿಯಲು ಅವನು ಶಕ್ತನಾದಾನು. “

"ಕಾರಂತ ನುಡಿ – ೮೬"

“ನಿಸರ್ಗದಲ್ಲಿಯ ಜೀವನವನ್ನು ಕಂಡು ಮನುಷ್ಯನು ಮನುಷ್ಯ–ಸಮಾಜದ ಕೃತಕ ನೀತಿಯ ನೆಲೆ ಎಷ್ಟು ಭದ್ರವಾಗಿದೆ ಎಂದು ಅಳೆಯುವುದಕ್ಕೂ ಕಲಿತಾನು.”

"ಕಾರಂತ ನುಡಿ – ೮೭"

“ಎಲ್ಲರಿಗೆ ಎಲ್ಲವೂ ಬೇಕಾದರೆ ಅವನು ಕೊಡುವುದಾವುದು ಎಲ್ಲಿಂದ? ಅವನೇ ನಮ್ಮನ್ನು ಹುಟ್ಟಿಸಿದ್ದಾನೆ ಎಂತ ತಿಳಿಯುವುದಾದರೆ ಕೊಡುವಷ್ಟನ್ನು ಕೊಟ್ಟೆ ಹುಟ್ಟಿಸಿದ್ದಾನೆ ಎಂತ ತಿಳಿಯಬೇಕು.”

"ಕಾರಂತ ನುಡಿ – ೮೮"

“ಕಳಿತ ಮೇಲೆಯೂ ಒಂದು ಹಣ್ಣು ತೊಟ್ಟಿಗೆ ತಗಲಿಕೊಂಡಿರಲು ಬಯಸಿದರೆ ನ್ಯಾಯವಾದೀತೆ? ಗಿಡದೊಡನೆ ಇದ್ದು ಲಾಭ ಪಡೆಯುವಷ್ಟು ಕಾಲ ಅದು ಅಂಟಿರುತ್ತದೆ. ಅನಂತರ ಕಳಚುತ್ತದೆ. ಮನುಷ್ಯ ತನ್ನ ಸಾವನ್ನು ಹೀಗೆ ಏಕೆ ತಿಳಿಯಬಾರದು?”

"ಕಾರಂತ ನುಡಿ – ೮೯"

“ನಾವು ನಿರೀಕ್ಷಿಸಿದ ಫಲವು ನಮಗೆ ಸಿಗದೆ ಹೋದರೆ ಅದಕ್ಕೆ ಕಾರಣಗಳನ್ನು ಹುಡುಕುತ್ತೇವೆ; ಅದೃಷ್ಟವನ್ನು ಹಳಿಯುತ್ತೇವೆ. “

"ಕಾರಂತ ನುಡಿ – ೯೦"

“ನಮಗೆ ನಮ್ಮ ಬದುಕು ತಿಳಿದಷ್ಟು ಚೆನ್ನಾಗಿ ಅನ್ಯರ ಬದುಕು ತಿಳಿದಿರುವುದಿಲ್ಲ. “

"ಕಾರಂತ ನುಡಿ – ೯೧"

” ನಮ್ಮ ನೆರೆಕೆರೆಯವರ ವಿಚಾರದಲ್ಲಿ ಯಾವುದಾದರೊಂದು ಮನೆಯವರ ಸುಖಸಂಪತ್ತನ್ನು ಕಂಡೆವಾದರೆ ಅವರ ಅದೃಷ್ಟ ಒಳ್ಳೆಯದು ಅನ್ನುತ್ತೇವೆ. ತಮ್ಮ ಕಷ್ಟಕಾರ್ಪಣ್ಯಗಳನ್ನು ನೀಗಿಸುವುದಕ್ಕಾಗಿ ಅವರು ಎಷ್ಟೆಲ್ಲಾ ಶ್ರಮಿಸಿದ್ದಾರೆ ಎಂಬ ಅರಿವು ನಮಗೆ ಬರುವುದಿಲ್ಲ. “

"ಕಾರಂತ ನುಡಿ – ೯೨"

“ನೆರೆಕೆರೆಯವರು ವಿಶೇಷವಾಗಿ ಶ್ರಮಿಸಿ ತಮ್ಮ ಬದುಕನ್ನು ಒಳ್ಳೆಯದಾಗಿ ಮಾಡಿಕೊಂಡಿರಬಹುದು. ಅವರ ಸೋಲು ಗೆಲುವುಗಳ ಸಾಲ ಮೂಲಗಳ ಅರಿವು ನಮಗಿರಲಾರದು. “

"ಕಾರಂತ ನುಡಿ – ೯೩"

“ನೆರೆಕೆರೆಯವರ ಶ್ರಮಗಳನ್ನು ತಿಳಿಯದ ನಾವು ಅದರ ಫಲವನ್ನು ಕಂಡ ಮೇಲೆ ಅದು ಒಳ್ಳೆಯದೆನಿಸಿದರೆ ಅದೃಷ್ಟ ಅನ್ನುತ್ತೇವೆ. ಇಲ್ಲವೆ ಹೋದರೆ ಪಾಪ; ದುರಾದೃಷ್ಟ ಅನ್ನುತ್ತೇವೆ.”

"ಕಾರಂತ ನುಡಿ – ೯೪"

“ತನಗೆ ದೊರೆಯದ ಸುಖ ಅನ್ಯರಿಗೆ ದೊರಕುವುದನ್ನು ಕಂಡು ಸುಪ್ತ ಮನಸ್ಸು ಊಹೆಗೆ ಶರಣಾಗುತ್ತದೆ. ಜೊತೆಗೆ ಅನ್ಯಾಯಗಾರರಾರೆಂಬುವವರನ್ನು ದಂಡಿಸಲು ಧೈರ್ಯ ಕೊಡುತ್ತದೆ.”

"ಕಾರಂತ ನುಡಿ – ೯೫"

“ಪ್ರಾಣಿಗಳಿವೆ ಅವು ತಮ್ಮ ಅನ್ನವನ್ನು ಬೇಡುವುದಿಲ್ಲ; ಮಲಗಲು ತಾವನ್ನೂ ಬೇಡುವುದಿಲ್ಲ; ಹುಲ್ಲೆಯೆದುರಿಗೆ ಹುಲಿ ಬಂದರೆ ಸಹಾಯ ಮಾಡು ಎಂತಲೂ ಬೇಡುವುದಿಲ್ಲ. ಬುದ್ಧಿ ಬಂದ ಮನುಷ್ಯ ಅದಕ್ಕಿಂತಲೂ ಕಳಪೆಯಾದರೆ ಹೇಗೆ?”

"ಕಾರಂತ ನುಡಿ – ೯೬"

” ಅವರವರ ಕರ್ಮ ಅವರವರಿಗೆ ಎಂದರೆ ಸಾಕೇನು? ಜೀವನ ಪ್ರವಾಹದ ಕರ್ಮಕಾಂಡ ವ್ಯಕ್ತಿಗೆ ಬದ್ಧವಾದ ವ್ಯಕ್ತಿಯಿಂದ ವ್ಯಕ್ತಿಗೆ ಪ್ರಭಾವಿತವಾಗುವ ಸಾಮೂಹಿಕ ಕರ್ಮಕಾಂಡ. ಆ ಸಮೂಹದ ಒಳಿತು ಕೆಡುಕುಗಳ ಪಾಲು ಮತ್ತು ಹೊಣೆ ಪ್ರತಿ ವ್ಯಕ್ತಿಯ ಪಾಲಿಗೆ ಇದ್ದೇ ಇದೆ.”

"ಕಾರಂತ ನುಡಿ – ೯೭"

“ಸಾರ್ವಜನಿಕ ಪ್ರಶಂಸೆಯೆಂಬುದು ಹೆಂಡದಂತಹ ಮಾದಕ ಪದಾರ್ಥಅದೇನೇ ಕಲಾವಿದನ ವ್ಯಕ್ತಿತ್ವವನ್ನು ಹಿಗ್ಗಿಸಿ ತನ್ನ ಕಲೆಗಿಂತ ತಾನು ಹಿರಿಯ ಎಂಬ ಅಡ್ಡದಾರಿಯನ್ನು ಹಿಡಿಸುತ್ತದೆ.”

"ಕಾರಂತ ನುಡಿ – ೯೮"

“ಈಗ ಎಣಿಕೆ ಹಾಕುವಾಗ ನನ್ನ ಕಾಲಕ್ಕೆ ಮಾತ್ರವಲ್ಲ ನನ್ನ ಮೊಮ್ಮಕ್ಕಳ ಕಾಲಕ್ಕೂ ಆ ರಾಮರಾಜ್ಯವೆಂಬುದು ಬರಲಾರದು ಅನಿಸುತ್ತದೆ – ನಾವು ತಂದ ಹರಾಮರಾಜ್ಯವನ್ನು ಕಾಣುವಾಗ”

"ಕಾರಂತ ನುಡಿ – ೯೯"

“ದೇವರ ಚಿಂತೆಯೇ ಇಲ್ಲದ ಪ್ರಾಣಿಗಳಿಲ್ಲವೋ? ಅವುಗಳನ್ನೂ ಬದುಕಿಸಿ ಇರಿಸಿದ್ದಾನಲ್ಲ . ದೇವರನ್ನು ತಿಳಿಯಬೇಕಾದರೆ ನಾವು ಅವನನ್ನು ಹುಡುಕಿದ ಹಾಗೆ ಅವನೂ ನಮ್ಮನ್ನು ಹುಡುಕಿಕೊಂಡು ಬರಬೇಕಾದುದು ಇಲ್ಲ . ನಾವೇ ಅವನಲ್ಲಿ ಪ್ರಶ್ನೆ ಕೇಳುತ್ತೇವೆ. ನಾವೇ ಅವಕ್ಕೆ ಉತ್ತರವನ್ನು ಹೇಳಿಕೊಳ್ಳುತ್ತೇವೆ. “

"ಕಾರಂತ ನುಡಿ – ೧೦೦"

“ನಮಗೆ ಇಷ್ಟ ಕಂಡಂತೆ ನಡೆದಾಗ ದೇವರ ಇಚ್ಛೆ ಅನ್ನುತ್ತೇವೆ . ಅನಿಷ್ಟ ಪ್ರಾಪ್ತಿಸಿದಾಗ ಅನಿಷ್ಟ ಎನ್ನುತ್ತೇವೆ. ದೇವರು (?) ಕೊಟ್ಟ ಆಯುಷ್ಯವನ್ನು ಇದ್ದಷ್ಟು ಕಾಲ ಎಲ್ಲರ ಜೊತೆ ಒಳ್ಳೆಯ ರೀತಿಯಿಂದ ಬಾಳಿ ಬದುಕುವುದೇ ಪೂಜೆ ಎಂಬ ಬುಧ್ಧಿ ಯಾಕೆ ಬರಬಾರದು ನಮಗೆ?”

"ಕಾರಂತ ನುಡಿ – ೧೦೧"

“ಮನುಷ್ಯನ ಉದ್ಯೋಗಕ್ಕೂಆದರ್ಶಕ್ಕೂ ಪರಸ್ಪರ ಹೊಂದಾಣಿಕೆ ಬಾರದೆ ಹೋದಲ್ಲಿ ಜೀವನದಲ್ಲಿ ಸುಖ ಸಿಗಲಾರದು. ಆರಿಸಿದ ಬಾಳ್ವೆಯನ್ನು ಚೆನ್ನಾಗಿ ಮಾಡಿಕೊ ಬಾಳ್ವೆ ಇರುವುದು ಕಲಿಯುವುದಕ್ಕೆ ಕಲಿತು ತಿದ್ದಿಕೊಳ್ಳುವುದಕ್ಕೆ ತಿದ್ದಿ ತೃಪ್ತಿ ಪಡಿಯುವುದಕ್ಕೆ. ಬಾಳು ಬೆದರುವುದಕ್ಕಾಗಿಯಲ್ಲ. ಬದುಕುವುದಕ್ಕಾಗಿ.”

Leave a Reply

Your email address will not be published.

Translate »

You cannot copy content of this page