ಮೇಲ್ಮನೆ ( ವಿಧಾನ ಪರಿಷತ್ ) ಚುನಾವಣೆ….
ಬೇವು ಬಿತ್ತಿ ಮಾವಿನ ನಿರೀಕ್ಷೆಯಲ್ಲಿ…..
ಸ್ಥಳೀಯ ಜನ ಪ್ರತಿನಿಧಿಗಳ ಕ್ಷೇತ್ರದಿಂದ ಒಂದಷ್ಟು ಸ್ಥಾನಗಳಿಗೆ ಈಗ ಚುನಾವಣೆ ನಡೆಯುತ್ತಿದೆ. ಈ ಆಯ್ಕೆಯಾದ ಅಭ್ಯರ್ಥಿಗಳೇ ಕರ್ನಾಟಕದ ಕೆಳ ಮನೆ ( ವಿಧಾನಸಭೆ ) ನೀತಿ ನಿರೂಪಣೆಗಳ ಮೌಲ್ಯ ಮಾಪನ ಮಾಡಿ ಅದಕ್ಕೆ ಮತ್ತಷ್ಟು ಹೊಳಪು ನೀಡುತ್ತವೆ. ಅತ್ಯಂತ ಜವಾಬ್ದಾರಿಯ ಹಿರಿಯ ಮನೆ. ಪ್ರಜ್ಞಾವಂತ ವ್ಯಕ್ತಿಗಳು ಅತ್ಯವಶ್ಯಕವಾಗಿ ಕಾರ್ಯನಿರ್ವಹಿಸಬೇಕಾದ ಸಭೆ.
ಮೊದಲಿಗೆ ಈಗ ನಡೆಯುತ್ತಿರುವ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಎಲ್ಲಾ ಪಕ್ಷಗಳ ಅಭ್ಯರ್ಥಿಗಳ ಪಟ್ಟಿ ನೋಡೋಣ. ಬಹುತೇಕ ಪಕ್ಷಗಳ ಅಧೀಕೃತ ಅಭ್ಯರ್ಥಿಗಳು ಕೋಟ್ಯಾಧಿಪತಿಗಳು ಮತ್ತು ಮುಖ್ಯವಾಗಿ ರಿಯಲ್ ಎಸ್ಟೇಟ್, ಶಿಕ್ಷಣ ಆರೋಗ್ಯ ಉದ್ದಿಮೆಗಳಲ್ಲಿ ಹಣ ಗಳಿಸಿರುವವರು. ಕೆಲವರು ಕಂಟ್ರಾಕ್ಟರ್ ಮತ್ತು ಸರ್ಕಾರಿ ಉದ್ಯೋಗದಲ್ಲಿದ್ದವರು. ಹಣ ಜಾತಿ ಮತ್ತು ರಾಜಕೀಯ ಸಂಬಂಧಗಳ ಆಧಾರದ ಮೇಲೆ ಅಭ್ಯರ್ಥಿಗಳಾಗಿ ಘೋಷಿಸಲ್ಪಟ್ಟವರು.
ಇನ್ನು ಈ ಚುನಾವಣೆಯಲ್ಲಿ ಮತದಾರರು ಇದೇ ವ್ಯವಸ್ಥೆಯ ಶಿಶುಗಳು ತೀರಾ ಅಲ್ಪ ಪ್ರಮಾಣದ ಪ್ರಾಮಾಣಿಕ ಸದಸ್ಯರುಗಳನ್ನು ಹೊರತುಪಡಿಸಿ.
ಜ್ಞಾನ ಭಿಕ್ಷಾ ಪಾದಯಾತ್ರೆಯ ಸಂದರ್ಭದಲ್ಲಿ ಇಡೀ ರಾಜ್ಯದ ಅನೇಕ ಸ್ಥಳಗಳಲ್ಲಿ ಗ್ರಾಮ ತಾಲ್ಲೂಕು ಜಿಲ್ಲಾ ಪಂಚಾಯತಿ ಸದಸ್ಯರು ಸೇರಿ ರಾಜಕಾರಣಿಗಳೊಂದಿಗೆ ಪರಿಚಯ ಗೆಳೆತನ ಆತ್ಮೀಯತೆ ಹೋರಾಟಗಳ ಬಗ್ಗೆ ಆತ್ಮಾವಲೋಕನದ ಚರ್ಚೆಗಳನ್ನು ಈಗಲೂ ನಿರಂತರವಾಗಿ ಮಾಡುತ್ತಿದ್ದೇನೆ. ಅದರ ಆಧಾರದ ಮೇಲೆ……
ಈ ಚುನಾವಣೆಯಲ್ಲಿ ಕೆಲವು ಕಡೆ ಒಂದು ಓಟಿಗೆ 50000 ದಿಂದ ಮತ್ತೆ ಕೆಲವು ಕಡೆ 3 ಲಕ್ಷದವರೆಗೆ ಕೊಡಲಾಗುತ್ತಿದೆ ಎಂಬ ಮಾಹಿತಿ ದೊರೆತಿದೆ.
ಸರಾಸರಿ ಒಂದು ಪರಿಷತ್ತಿನ ಚುನಾವಣೆಯ ಮತದಾರರ ಸಂಖ್ಯೆ ಸುಮಾರು 4000. ( ಒಟ್ಟಾರೆ 2500 ರಿಂದ 6000 ದವರೆಗೆ ಇದೆ )
ಇದು ಒಂದು ಅಂದಾಜು. ಮೂರು ಪಕ್ಷಗಳು ಸೇರಿ ಒಂದು ಕ್ಷೇತ್ರಕ್ಕೆ ಸುಮಾರು 100 ಕೋಟಿ ಹಣ ಖರ್ಚು ಆಗಬಹುದು. ಇದು ಖಂಡಿತ ಅಧೀಕೃತ ಅಲ್ಲ. ಜನರ ಗುಸುಗುಸು ಮಾತಿನ ಸಾರಾಂಶ ಮಾತ್ರ. ಆದರೆ ಬಹುತೇಕ ವಾಸ್ತವಕ್ಕೆ ಹತ್ತಿರ ಎನಿಸುತ್ತದೆ.
ಸಾಮಾನ್ಯ ಜನ ಆಸ್ಪತ್ರೆಗೆ ಶಾಲೆಗೆ ಮನೆ ಬಾಡಿಗೆಗೆ ಎಷ್ಟೋ ದಿನನಿತ್ಯದ ಅವಶ್ಯಕತೆಗಳಿಗೆ ಹಣವಿಲ್ಲದೆ ಒದ್ದಾಡುತ್ತಿರುವಾಗ ಇಲ್ಲಿ ಮಾತ್ರ ಭ್ರಷ್ಟ ಹಣದ ಹೊಳೆ…..
ಹಾಗಾದರೆ ಕರ್ನಾಟಕ ಸರ್ಕಾರದ ಮೇಲ್ಮನೆ ಇಂತಹವರಿಂದ ಹೇಗೆ ಕಾರ್ಯನಿರ್ವಹಿಸಬಹುದು !!????
ಬೇವು ಬಿತ್ತಿ ಮಾವಿನ ಫಸಲಿನ ನಿರೀಕ್ಷೆ …..
ಹಾಗೆಯೇ ಇತ್ತೀಚೆಗೆ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ಬಹುಶಃ ತನ್ನೆಲ್ಲಾ ನೈತಿಕ ಮೌಲ್ಯಗಳನ್ನು ಸಂಪೂರ್ಣ ಕೆಳಹಂತಕ್ಕೆ ಇಳಿಸಿದಂತೆ ಭಾಸವಾದ ಸುದ್ದಿಗಳು ಮತ್ತು ಮಾಹಿತಿಗಳು ದೊರೆತವು……….. ( ಕೆಲವು ಪ್ರದೇಶಗಳಲ್ಲಿ ಮಾತ್ರ ಉತ್ತಮ ಗುಣಮಟ್ಟದ ಸ್ಪರ್ಧೆ ಮತ್ತು ಮತದಾನವಾಗಿದೆ )
ಸಾಮಾನ್ಯವಾಗಿ ನಾವು ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರರು ಮುಖ್ಯವಾಗಿ ಬಡ ಮತದಾರರು ಸೀರೆ ಪಂಚೆ ಹೆಂಡ ಸಾರಾಯಿ ಮತ ಧರ್ಮ ಜಾತಿ ಹಣಕ್ಕಾಗಿ ತಮ್ಮ ಮತವನ್ನು ಮಾರಿಕೊಳ್ಳುವುದನ್ನು ಬಹಳ ಕೆಟ್ಟದ್ದಾಗಿ ಕೆಲವೊಮ್ಮೆ ನೋವಿನಿಂದ ಮಾತನಾಡಿಕೊಳ್ಳುತ್ತೇವೆ. ಅವರು ಬಡವರು, ಅಸಹಾಯಕರು ಮತ್ತು ಒಂದಷ್ಟು ಅವಿದ್ಯಾವಂತರು. ಅವರಿಗೆ ಒಟ್ಟು ವ್ಯವಸ್ಥೆಯ ಬಗ್ಗೆ ತಿಳಿವಳಿಕೆ ಅಥವಾ ಮಾಹಿತಿ ಇರುವುದಿಲ್ಲ. ವೈಯಕ್ತಿಕ ಹಿತಾಸಕ್ತಿ ಮತ್ತು ದಿನನಿತ್ಯದ ಬದುಕಿನ ಜಂಜಾಟಗಳೇ ಮುಖ್ಯವಾಗಿರುತ್ತದೆ. ಆ ಕಾರಣದಿಂದಾಗಿ ನನ್ನ ದೃಷ್ಟಿಯಲ್ಲಿ ಅವರು ಒಂದು ಸಣ್ಣ ಪ್ರಮಾಣದ ಕ್ಷಮೆಗೆ ಅರ್ಹರು.
ಆದರೆ ವಿದ್ಯಾವಂತರು, ಸೂಕ್ಷ್ಮ ಮನಸ್ಸಿನವರು, ಅಕ್ಷರಗಳಲ್ಲಿ ಭಾವನೆಗಳನ್ನು ವ್ಯಕ್ತಪಡಿಸುವವರು ಮತ್ತು ಸಮಕಾಲೀನ ಸಮಸ್ಯೆಗಳ ಬಗ್ಗೆ ಅರಿವಿರುವವರು ಆದ ಸಾಹಿತಿಗಳು ಮತ ಚಲಾಯಿಸುವ ಜವಾಬ್ದಾರಿಯನ್ನು ನಿಭಾಯಿಸಿದ ರೀತಿ, ಕೆಲವು ಅಭ್ಯರ್ಥಿಗಳು ಮಾಡಿದ ಪ್ರಚಾರ ವೈಖರಿ, ತಂತ್ರ ಕುತಂತ್ರಗಳು, ಹಣದ ಹರಿವು ಎಲ್ಲವೂ ಸಹ ಇಡೀ ವ್ಯವಸ್ಥೆಯ ಬುದ್ದಿವಂತರ ಮುಖವಾಡವನ್ನು ಕಳಚಿ ಬೀಳುವಂತೆ ಇತ್ತು.
ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ. ಕನ್ನಡ ಭಾಷೆಯ ಹಿತರಕ್ಷಣೆ ಮಾಡುವ ಒಂದು ಸೇವಾ ಸಂಸ್ಥೆ. ಯಾವುದೇ ಜಾತಿ ಪಕ್ಷ ಧರ್ಮ ಸಿದ್ದಾಂತಗಳ ವ್ಯಾಪ್ತಿಗೆ ಸೀಮಿತವಾಗಿದೆ ದೊಡ್ಡ ಆರ್ಥಿಕ ವಹಿವಾಟನ್ನು ಹೊಂದದೆ ಒಂದು ಮಿತಿಯಲ್ಲಿ ಕನ್ನಡದ ತೇರನ್ನು ಎಳೆಯುವ ಪರಿಷತ್ತು.
ಅದರ ರಾಜ್ಯ ಮತ್ತು ಜಿಲ್ಲಾ ಮಟ್ಟದ ಅಧ್ಯಕ್ಷ ಸ್ಥಾನಕ್ಕೆ ಅನೇಕ ಅಡ್ಡಿ ಆತಂಕಗಳ ನಡುವೆ ಬಹುಶಃ 5 ವರ್ಷಗಳ ನಂತರ ನಡೆದ ಚುನಾವಣೆ.
ಯಾವುದೇ ಮುಚ್ಚುಮರೆಯಿಲ್ಲದೆ ಬಹಿರಂಗವಾಗಿ ಕಾಣಿಸಿದ್ದು ಯಾವುದೇ ರಾಜಕೀಯ ಕ್ಷೇತ್ರದ ಚುನಾವಣೆಗಿಂತ ಕೆಟ್ಟದ್ದಾಗಿಯೇ ಎಲ್ಲಾ ಸಂಪನ್ಮೂಲಗಳ ದುರುಪಯೋಗ.
ಒಂದು ಕಡೆ ಧಾರ್ಮಿಕ ಸಂಸ್ಥೆಗಳ ಹಾದಿ ಬೀದಿಯ ರಾಜಕೀಯ, ಇನ್ನೊಂದು ಕಡೆ ಶಿಕ್ಷಕರ ಕ್ಷೇತ್ರದ ಪ್ರತಿನಿಧಿಗಳ ಚುನಾವಣಾ ಅಕ್ರಮಗಳು, ಮತ್ತೊಂದು ಕಡೆ ಸ್ಥಳೀಯ ಸಂಸ್ಥೆಗಳ ಜನ ಪ್ರತಿನಿಧಿಗಳ ಕಪ್ಪು ಹಣದ ಹರಿವು……..
ಸುಧಾರಣೆ ಅಥವಾ ಬದಲಾವಣೆ ಎಲ್ಲಿಂದ ಪ್ರಾರಂಭವಾಗಬೇಕು, ಯಾರಿಂದ ಆರಂಭವಾಗಬೇಕು, ಹೇಗೆ ಶುರುವಾಗಬೇಕು !!!!!!!
ನೈತಿಕ ಮೌಲ್ಯಗಳು ಕೇವಲ ಆಡುಮಾತಿನ ಅಥವಾ ಬರಹಗಳ ಸೀಮಿತ ಅರ್ಥವನ್ನು ಮಾತ್ರ ಹೊಂದಿವೆಯೇ………..
ಇಲ್ಲ ಅದು ನಮ್ಮ ನಡವಳಿಕೆಯಾಗಬೇಕು. ಕನಿಷ್ಠ ಪ್ರಜ್ಞಾವಂತ ಜನರಾದರು ಒಂದಷ್ಟು ಜವಾಬ್ದಾರಿಯಿಂದ ವ್ಯವಸ್ಥೆಯ ಸುಧಾರಣೆಗಾಗಿ ಪ್ರಯತ್ನಿಸಬೇಕು. ಆ ನಿಟ್ಟಿನಲ್ಲಿ ನಾವೆಲ್ಲರೂ ಈಗಿನಿಂದಲೇ ನಮ್ಮ ನಮ್ಮ ನೆಲೆಯಲ್ಲಿ….
ಮನಗಳಲ್ಲಿ,
ಮನೆಗಳಲ್ಲಿ,
ಮತಗಳಲ್ಲಿ….
ಬದಲಾವಣೆಗಾಗಿ ಶ್ರಮಿಸೋಣ ಎಂದು ಮನವಿ ಮಾಡಿಕೊಳ್ಳುತ್ತಾ……..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ.
ವಿವೇಕಾನಂದ. ಹೆಚ್.ಕೆ.
9844013068.