ಹೂವು ಮುಡಿದ ಹೆಣ್ಣು, ಸಂತೋಷ ಸಮೃದ್ಧಿಯ ಸಂಕೇತ..!
ಭಾರತೀಯ ನಾರಿಯ ಚಿತ್ರಣವನ್ನುಕಣ್ಣ ಮುಂದೆ ತಂದರೆ ಆಗ ನಿಮಗೆ ಸೀರೆಯುಟ್ಟು, ತಲೆಗೆ ಹೂ ಮುಡಿದುಕೊಂಡು ಕೈಗೆ ಬಳೆ ಧರಿಸಿ, ಕುತ್ತಿಗೆಗೆ ಬಂಗಾರದ ಆಭರಣ ಮತ್ತು ಹಣೆಗೆ ಕುಂಕುಮವನ್ನಿಟ್ಟಿರುವುದು ಕಾಣಿಸುತ್ತದೆ. ಆದರೆ ಆಧುನಿಕತೆ ಹೆಚ್ಚಾದಂತೆ ಸಂಪ್ರದಾಯವು ಮೂಲೆಗುಂಪಾಗುತ್ತಾ ಹೋಗಿ ಇಂತಹ ನಾರಿಯ ಚಿತ್ರಣವನ್ನು ನಾವು ಚಿತ್ರಗಳಲ್ಲಿ ನೋಡಲು ಮಾತ್ರ ಸಾಧ್ಯವೆನ್ನುವಂತಾಗಿದೆ. ಆದರೆ ದಕ್ಷಿಣ ಭಾರತದ ಕೆಲವೊಂದು ಭಾಗಗಳಲ್ಲಿ ಈ ರೀತಿಯ ದೃಶ್ಯವನ್ನು ಕಾಣಬಹುದು. ಅದರಲ್ಲೂ ಕೆಲವೊಂದು ಪ್ರದೇಶಗಳಲ್ಲಿ ಪ್ರತೀ ದಿನ ಬೆಳಿಗ್ಗೆ ಸ್ನಾನ ಮಾಡಿದ ಬಳಿಕ ತಲೆಗೆ ಹೂ ಹಾಗೂ ಹಣೆಗೆ ಕುಂಕುಮವನ್ನಿಟ್ಟು ಅಂಗಳಕ್ಕೆ ರಂಗೋಲಿನ್ನಿಡುವ ಕ್ರಮವಿದೆ. ಇದನ್ನು ಇಂದಿಗೂ ಕೆಲವರು ಪಾಲಿಸಿಕೊಂಡು ಬರುತ್ತಿದ್ದಾರೆ. ಆದರೆ ನಾವು ಇಲ್ಲಿ ಹೇಳಲು ಹೊರಟಿರುವುದು ತಲೆಗೆ ಹೂ ಇಡುವುದರ ಮಹತ್ವ. ಯಾವ ಹೂವು ಯಾವ ದೇವರ ಪೂಜೆಗೆ ಶ್ರೇಷ್ಠ? ತಲೆಗೆ ಹೂವನ್ನು ಇಡುವುದು ಕೇವಲ ಸೌಂದರ್ಯಕ್ಕೆ ಮಾತ್ರವಲ್ಲ. ಮಹಿಳೆ ತಲೆಗೆ ಹೂವನ್ನು ಇಟ್ಟರೆ ಅದರಿಂದ ಸಂತೋಷ, ಸಮೃದ್ಧಿ ಮತ್ತು ಮನೆಯಲ್ಲಿ ಸಂಭ್ರಮ ಉಂಟು ಮಾಡುತ್ತದೆ ಎಂದು ಹೇಳಲಾಗುತ್ತದೆ. ಹೆಚ್ಚಿನವರು ಮಲ್ಲಿಗೆಯನ್ನು ತಲೆಗೆ ಮುಡಿಯುತ್ತಾರೆ. ಜಾಜಿ, ಸೇವಂತಿ, ಗುಲಾಬಿ ಹೂಗಳನ್ನು ತಲೆಗಿಡುತ್ತಾರೆ. ಒಂದೊಂದು ಹೂವಿಗೆ ಒಂದೊಂದು ರೀತಿಯ ಅರ್ಥವಿದೆ.
ಮಲ್ಲಿಗೆ ಮಲ್ಲಿಗೆ ತನ್ನ ಸುಗಂಧದಿಂದಾಗಿ ಹೂಗಳ ರಾಣಿಯೆಂದು ಕರೆಯಲಾಗುತ್ತದೆ. ಹೆಚ್ಚಾಗಿ ಮಲ್ಲಿಗೆಯನ್ನು ಪ್ರತಿಯೊಂದು ಹಬ್ಬ ಹಾಗೂ ದೇವರಿಗೆ ಸಮರ್ಪಿಸುವ ಕಾರಣದಿಂದ ಇದು ದೇವರಿಗೆ ಪ್ರಿಯವಾದ ಹೂವೆಂದು ಹೇಳಲಾಗುತ್ತದೆ. ಮಲ್ಲಿಗೆ ಇದು ಸಮೃದ್ಧಿ ಮತ್ತು ಅದೃಷ್ಟದ ಸಂಕೇತವಾಗಿದೆ. ಇದರಿಂದ ಮಹಿಳೆಯರು ಹೆಚ್ಚಾಗಿ ಮಲ್ಲಿಗೆಯನ್ನು ತಲೆಗೆ ಇಟ್ಟುಕೊಳ್ಳುತ್ತಾರೆ.
ಗುಲಾಬಿ ಗುಲಾಬಿಯನ್ನು ನಾವು ಪ್ರೀತಿಸುವವರಿಗೆ ನೀಡುತ್ತೇವೆ. ಇದು ಯಾಕೆ ಗೊತ್ತಾ? ಗುಲಾಬಿಯು ಪ್ರೀತಿ ಹಾಗೂ ಅನುರಾಗದ ಸಂಕೇತವಾಗಿದೆ. ಗುಲಾಬಿಯನ್ನು ತಲೆಗಿಟ್ಟುಕೊಳ್ಳುವ ಹುಡುಗಿಯು ಜೀವನದ ಕಡೆ ತನ್ನ ಅನುರಾಗ ಅಥವಾ ಕಳೆದುಹೋದ ಪ್ರೀತಿಯನ್ನು ವ್ಯಕ್ತಪಡಿಸುತ್ತಾಳೆ.
ದಾಸವಾಳ ದಾಸವಾಳವನ್ನು ಹೆಚ್ಚಾಗಿ ತಲೆಗೆ ಇಟ್ಟುಕೊಳ್ಳುವ ಮಹಿಳೆಯರು ಶಕ್ತಿಯ ಸಂಕೇತವನ್ನು ಪ್ರದರ್ಶಿಸುತ್ತಾರೆ. ದಾಸವಾಳವನ್ನು ಕಾಳಿಮಾತೆ ಮತ್ತು ಇತರ ಶಕ್ತಿಯನ್ನು ಪೂಜಿಸಲು ಬಳಸಲಾಗುತ್ತದೆ.
ಹೂಗಳ ಮಹತ್ವ ಅನಾದಿ ಕಾಲದಿಂದಲೂ ಹೂಗಳಿಗೆ ತಮ್ಮದೇ ಆದಂತಹ ಮಹತ್ವವಿದೆ. ಅದರಲ್ಲೂ ಭಾರತದ ವಿವಿಧ ಭಾಗದಲ್ಲಿ ಹೂಗಳಿಗೆ ವಿಶೇಷ ಸ್ಥಾನಮಾನವಿದೆ. ಮಹಿಳೆಯರು ಕೂಡ ಇದಕ್ಕೆ ಅನುಗುಣವಾಗಿ ತಲೆಗೆ ಹೂವನ್ನು ಇಟ್ಟುಕೊಳ್ಳುತ್ತಾರೆ. ತಲೆಗೆ ಹೂವನ್ನು ಇಡುವುದರಿಂದ ಮನೆಯಲ್ಲಿ ಸುಖ ಹಾಗೂ ಮನೆಯ ಸದಸ್ಯರಲ್ಲಿ ಸಮೃದ್ಧಿಯನ್ನು ಕಾಣಬಹುದು. ಹೂಗಳ ಮಹತ್ವ ತಲೆಗೆ ಹೂವನ್ನು ಇಡುವುದರಿಂದ ಮನೆಯಲ್ಲಿ ಇರುವಂತಹ ಲಕ್ಷ್ಮೀಯು ಹೊರಗಡೆ ಹೋಗುವುದಿಲ್ಲವೆನ್ನುವ ನಂಬಿಕೆಯಿದೆ. ತಲೆಗೆ ಹೂವನ್ನು ಇಟ್ಟುಕೊಳ್ಳುವುದು ಕೇವಲ ಸೌಂದರ್ಯಕ್ಕೆ ಮಾತ್ರವಲ್ಲ. ಇದರಿಂದ ಮನೆಯಲ್ಲಿ ಸುಖ, ಶಾಂತಿ ಹಾಗೂ ಸಮೃದ್ಧಿ ನೆಲೆಸುತ್ತದೆ.