ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಆಗ್ನೇಯ ಮಹಾ ಪುರಾಣ ಏನು ಹೇಳುತ್ತದೆ?

🔯 ಆಧ್ಯಾತ್ಮಿಕ ವಿಚಾರ.🔯

18 ಪುರಾಣಗಳು : ಆಗ್ನೇಯ ಮಹಾ ಪುರಾಣ ಏನು ಹೇಳುತ್ತದೆ?

ಆಗ್ನೇಯ ಮಹಾಪುರಾಣ*
ಪ್ರ.ಶ. 7ನೆಯ ಶತಮಾನಕ್ಕಿಂತ ಈಚಿನದು. ಇದರ ಅಲಂಕಾರಶಾಸ್ತ್ರ ವಿಭಾಗ ಪ್ರ.ಶ. 900ರ ಬಳಿಕ ಇದರಲ್ಲಿ ಕ್ರಮಶಃ ಪ್ರಕ್ಷಿಪ್ತವಾದುದು ವಸಿಷ್ಮನಿಗೆ ಅಗ್ನಿ ಹೇಳಿದ್ದರಿಂದ ಪುರಾಣಕ್ಕೆ ಈ ಹೆಸರು. ಪುರಾಣಗಳ ವಿಶ್ವಕೋಶ ಸ್ವರೂಪಕ್ಕಿದು ಪರಮಾದರ್ಶ. ಇದರಲ್ಲಿ ವಿಷ್ಣುವಿನ ಅವತಾರಗಳು ಉಕ್ತವಾಗಿವೆ. ರಾಮಕೃಷ್ಣರ ಕತೆಗಳನ್ನು ರಾಮಾಯಣ, ಮಹಾಭಾರತ, ಹರಿವಂಶಗಳಲ್ಲಿರುವಂತೆಯೇ ಹೇಳಲಾಗಿದೆ. ದ್ವಾದಶಸಹಸೀ ಸ್ತೋತ್ರವಿಲ್ಲಿದೆ. ಹೀಗಿದ್ದರೂ ಅಗ್ನಿಪುರಾಣ ಒಟ್ಟಿನಲ್ಲಿ ಶಿವನಿಗೇ ಹೆಚ್ಚಿನ ಗುರುತ್ವವನ್ನು ಕೊಟ್ಟಿದೆ.
ಲಿಂಗ, ದುರ್ಗಾರಾಧನೆಗಳ ಯೋಗಮಾರ್ಗಬೋಧನವಲ್ಲದೆ, ತಾಂತ್ರಿಕಕೃತ್ಯ, ಮೂರ್ತಿಶಿಲ್ಪ, ವಿಗ್ರಹಪ್ರತಿಷ್ಠೆ, ಗಣೇಶಪೂಜೆ, ಸೂರ್ಯೋಪಾಸನೆ, ಮರಣ, ಪುನರ್ಜನ್ಮ, ಯೋಗ, ಗೀತಾತತ್ತ್ವ, ಯಮಗೀತೆ ಮುಂತಾದ ವಿಷಯಗಳ ಜೊತೆಗೇ ಪೌರಾಣಿಕ ವಿಷಯಗಳಾದ ಸೃಷ್ಟಿವಿಚಾರ, ವಂಶಾನುಚರಿತ, ಭೂವಿವರಣೆಗಳೂ ಅಗ್ನಿಪುರಾಣಾಂತರ್ಗತ. ಭೂಗೋಲಶಾಸ್ತ್ರ, ಖಗೋಳಶಾಸ್ತ್ರ, ಜ್ಯೋತಿಶಶಾಸ್ತ್ರ, ವಿವಾಹಧರ್ಮ, ಉತ್ತರಕ್ರಿಯೆ, ಶಕುನಶಾಸ್ತ್ರ, ವಾಸ್ತುಶಿಲ್ಪ, ಜೀವನಾಚಾರ, ರಾಜನೀತಿ, ಯುದ್ಧಕಲೆ, ಯಾಜ್ಞವಲ್ಕಸ್ಮೃತಿಗನು ಗುಣವಾದ ಧರ್ಮ ವಿವರಣೆ, ವೈದ್ಯಶಾಸ್ತ್ರ, ಛಂದಶಾಶಸ್ತ್ರ, ಅಲಂಕಾರಶಾಸ್ತ್ರ, ವ್ಯಾಕರಣಶಾಸ್ತ್ರ ಮತ್ತು ಶಬ್ದಕೋಶಗಳ ವಿಷಯಗಳಿಗೆ ಬೇರೆ ಬೇರೆ ವಿಭಾಗಗಳು ಮೀಸಲಾಗಿವೆ.
ಈ ಪುರಾಣದ ಹೊರಗಿರುವ ಎಷ್ಟೋ ಮಾಹಾತ್ಮ್ಯಗಳನ್ನೂ ಅಗ್ನಿಪುರಾಣೋಕ್ತವೆನ್ನುವ ರೂಢಿಯಿದೆ. ಶ್ಲೋಕಸಂಖ್ಯೆ ಸುಮಾರು 15400 ಎಂಬುದು ರೂಢಿ. 11500ಕ್ಕಂತೂ ಕಡಿಮೆ ಇಲ್ಲ. ಪ್ರಸ್ತುತ ಮಹಾಪುರಾಣಾಂತರ್ಗತವಾದ ಅಲಂಕಾರ ಶಾಸ್ತ್ರಾಂಶಗಳು ಹೀಗಿವೆ : ಶಾಸ್ತ್ರ-ಕಾವ್ಯಗಳೆಂದು ವಾಙ್ಮಯವೆರಡು ವಿಧ. ಶಾಸ್ತ್ರ ಶಬ್ದಪ್ರಧಾನ ಮತ್ತು ಇತಿಹಾಸನಿಷ್ಠ. ವೇದ ಅಥವಾ ಲೋಕಮೂಲವಾದುದು ಕಾವ್ಯ. ಅದು ಅಭಿಧಾಪ್ರಧಾನ, ಸ್ಫುಟಾಲಂಕಾರಯುಕ್ತ, ಸಗುಣ ಮತ್ತು ನಿರ್ದುಷ್ಟ. ರಸಸಿದ್ಧಿಯುಳ್ಳ ನಾದದಲ್ಲಿ ಅದರ ಹುಟ್ಟು.
ಗದ್ಯ, ಪದ್ಯ ಮಿಶ್ರ ಎಂದು ತ್ರಿವಿಧ. ಪಾದವಿಲ್ಲದ ಪದಸಂತತಿ ಗದ್ಯ. ಚತುಷ್ಪಾದವುಳ್ಳದ್ದು ಪದ್ಯ. ಅದರ ಛಂದಸ್ಸು ವೃತ್ತ, ಜಾತಿ ಎಂದು ದ್ವಿವಿಧ. ಧ್ವನಿ, ವರ್ಣ, ಪದ, ವಾಕ್ಯಗಳು ವಾಙ್ಮಯದ ಚತುರಂಗಗಳು. ಇಷ್ಟವಾದ ಅರ್ಥವನ್ನು ವ್ಯವಚ್ಛೇದಿಸಿ ಹೇಳುವ ಪದಾವಳಿಯೇ ವಾಕ್ಯ. ಮಿಶ್ರಕಾವ್ಯಗಳಲ್ಲಿ ಚಂಪುಕಾವ್ಯ ಶ್ರವ್ಯ, ನಾಟಕ (ರೂಪಕ) ಕಾವ್ಯದೃಶ್ಯ. ಚೂರ್ಣಕ, ಉತ್ಕಲಿಕೆ ಮತ್ತು ವೃತ್ತಗಂಧಿ ಎಂಬ ಹೆಸರಿನವು ಗದ್ಯಪ್ರಕಾರಗಳು.
ಆಖ್ಯಾಯಿಕೆ, ಕಥೆ, ಖಂಡಕಥೆ, ಪರಿಕಥೆ ಮತ್ತು ಕಥಾನಿಕೆ ಎಂಬೀ ಐದು ಗದ್ಯಕಾವ್ಯದ ಮಾದರಿಗಳು. ಮಹಾಕಾವ್ಯ, ಕಲಾಪ, ಪರ್ಯಾಬಂಧ, ವಿಶೇಷಕ, ಕುಲಕ, ಮುಕ್ತಕ, ಕೋಷ ಎಂಬೀ ಏಳು ಪದಕಾವ್ಯದ ಮಾದರಿಗಳು. ಪ್ರಕರಣ, ಡಿಮ, ಈಹಾಮೃಗ, ಸಮವಕಾರ, ಪ್ರಹಸನ, ವ್ಯಾಯೋಗ, ಭಾಣ, ವೀಥಿ, ಅಂಕ, ಕ್ರೋಟಕ, ನಾಟಕ, ಸಟ್ಟಕ, ಶಿಲ್ಪಕ, ಕರ್ಣೆ, ಏಕ, ದುರ್ಮಲ್ಲಿಕೆ, ಪ್ರಸ್ಥಾನ, ಭಾಣಿಕೆ, ಆಭಾಣಿ, ಗೋಷ್ಠಿ, ಹಲ್ಲೀಶಕ, ಕಾವ್ಯ, ಶ್ರೀಗದಿತ, ನಾಟ್ಯರಾಸಕ, ರಾಸಕ, ಉಲ್ಲಾಪ್ಯಕ, ಪ್ರೇಕ್ಷಣ-ಎಂದು ನಾಟಕ 27 ವಿಧ. ನಾಟಕದ ಪೂರ್ವಭಾಗ ಪೂರ್ವರಂಗ. ಅದರ ಅಂಗಗಳು 32. ಉತ್ತರ ಭಾಗದ ಅಂಗಗಳಾದ ನಾಂದಿ, ಸೂತ್ರಧಾರ, ನಟಿ, ಆಮುಖ, ವಸ್ತು, ಅರ್ಥಪ್ರಕೃತಿ, ಕಾರ್ಯಾವಸ್ಥೆ, ಸಂಧಿಗಳು-ಇವು ಅನಂತರ ಬರುತ್ತವೆ.
ಆಮೇಲೆ ರಸನಿಷ್ಪತ್ತಿ ವಿಚಾರ : ಪರಬ್ರಹ್ಮನಿಗಿರುವ ಪ್ರಕೃತಿಸಹಜವಾದ ಆನಂದ ಆಗೀಗ ಆವಿರ್ಭವಿಸುತ್ತದೆ. ಅಂಥ ಆನಂದಾಭಿವ್ಯಕ್ತಿಯೊಂದು ಚೈತನ್ಯಚಮತ್ಕಾರ. ಅದೇ ರಸ. ಅಹಂಕಾರ ರಸದ ಪ್ರಥಮ ಪರಿಣಾಮ. ಅದರಿಂದ ಅಭಿಮಾನದ ವಿಕಾಸ. ಮೂರು ಲೋಕಗಳೂ ಅಭಿಮಾನದಲ್ಲಿ ಸಮಾಪ್ತ. ಅಭಿಮಾನದಿಂದ ರತಿ ಅಥವಾ ರಾಗ ಹುಟ್ಟುತ್ತದೆ. ಅದು ಪರಿಪುಷ್ಪವಾದಾಗ ಶೃಂಗಾರವೆನ್ನಿಸುತ್ತದೆ. ಶೃಂಗಾರಾದಿ ನವರಸಗಳು ಈ ಆದಿಶೃಂಗಾರದ ಪ್ರಭೇದಗಳು. ಅವು ತಮ್ಮ ತಮ್ಮ ಸ್ಥಾಯಿಗಳಿಂದ ವ್ಯಕ್ತವಾಗುತ್ತವೆ.
ಅವುಗಳಲ್ಲಿ ಶೃಂಗಾರ, ವೀರ, ರೌದ್ರ, ಬೀಭತ್ಸಗಳು ಮೂಲಭೂತವಾದಂಥವು. ಅವುಗಳಿಂದ ಅನುಕ್ರಮವಾಗಿ ಹಾಸ್ಯ, ಅದ್ಭುತ, ಕರುಣ, ಭಯಾನಕ, ಈ ರಸಗಳು ನಿಷ್ಪನ್ನವಾಗುತ್ತವೆ. ರಸವಿಲ್ಲದ ಮಾತು ತ್ಯಾಗವಿಲ್ಲದ ಐಶ್ವರ್ಯದಂತೆ ವ್ಯರ್ಥ. ಕವಿ ಶೃಂಗಾರಿಯಾದರೆ ಜಗತ್ತೆಲ್ಲ ರಸಮಯ; ಆತ ರಾಗರಹಿತನಾದರೆ ಪ್ರಪಂಚವೆಲ್ಲ ನೀರಸವಾದೀತು. ಭಾವವಿಲ್ಲದ ರಸವಿಲ್ಲ, ರಸವಿಲ್ಲದ ಭಾವವಿಲ್ಲ. ಸ್ಥಾಯಿಗಳ ಮೂಲಕ ಭಾವಗಳು ರಸಿಕ ರಸಗಳನ್ನು ಭಾವಿಸುವಂತೆ ಮಾಡುತ್ತವೆ.
ರಸಗಳು ರಸಿಕನಿಂದ ಭಾವ್ಯ. ಸ್ಥಾಯಿಗಳು ಒಂಬತ್ತು. ಅನುಭಾವಗಳು ಎಂಟು. ಅನುಭಾವಗಳು ವ್ಯಭಿಚಾರಶೀಲ, ನಿರ್ವೇದಾದಿ, ಉನ್ಮಾದಾಂತವಾದ ಸಂಚಾರೀಭಾವಗಳು ಕೂಡ ವ್ಯಭಿಚಾರಿಗಳೇ. ಪ್ರಿಯರಲ್ಲಿ ಉಂಟಾಗುವ ಸುಖಾನುಭವ ರತಿ. ಹರ್ಷಾದಿಗಳಿಂದ ಮನಸ್ಸು ಅರಳುವುದು ಹಾಸ. ಯಮಾದಿಗಳನ್ನು ನೋಡುವುದರಿಂದ ಉಂಟಾಗುವ ಚಿತ್ತವೈಕ್ಲವ್ಯ ಭಯ. ನಿಂದ್ಯ, ದುರ್ಭಗಪದಾರ್ಥಗಳಲ್ಲಿ ನಮಗುಂಟಾಗುವುದು ಜುಗುಪ್ಸಾಭಾವ. ಪದಾರ್ಥಗಳ ಅತಿಶಯವನ್ನು ಕಂಡು ಚಿತ್ತವಿಸ್ಮೃತಿಯುಂಟಾಗುವುದು ವಿಸ್ಮಯ.
ಇಷ್ಟವಾದ ವ್ಯಕ್ತಿ, ವಸ್ತುಗಳು ನಾಶದಿಂದ ಮನೋವೈಕ್ಲವ್ಯವುಂಟಾದರದು ಶೋಕ. ಪ್ರತಿಕೂಲಕಾರಿಗಳ ಬಗ್ಗೆ ತೀಕ್ಷ್ಣಭಾವ ವೇಳುವುದು ಕ್ರೋಧ ಪುರುಷಾರ್ಥ ಸಮಾಪ್ತಿಗಾಗಿ ಹೊರಟವರಲ್ಲಿ ಉದಯವಾಗುವುದು ಉತ್ಸಾಹಭಾವ. ವಿಭಾವಗಳೆರಡು. ನಾಯಕರ ಮಾದರಿಗಳು ನಾಲ್ಕು. ಅವರಲ್ಲಿಯ ಒಂದೊಂದು ಮಾದರಿಯಲ್ಲಿ ಅನುಕೂಲಾದಿ ಒಳಭೇದಗಳು ನಾಲ್ಕು. ನಾಯಕನ ಅನುಯಾಯಿಗಳದ್ದು ಮೂರು ಮಾದರಿ. ನಾಯಿಕೆಯರದು 3-4 ನಮೂನೆ.
ವ್ಯಭಿಚಾರಶೀಲವುಳ್ಳ ವಿಶಿಷ್ಟ ಅನುಭಾವಗಳೆನ್ನಿಸುವ ಆರಂಭ ಅಥವಾ ವ್ಯಾಪಾರಗಳು ಮಾನಸ, ವಾಚಿಕ, ಬೌದ್ಧಿಕ ಮತ್ತು ಶಾರೀರಿಕ ಎಂಬುದಾಗಿ ನಾಲ್ಕು ವಿಧ. ಪುರುಷನ ಮಾನಸಾರಂಭಗಳು ಎಂಟು. ಸ್ತ್ರೀಯವು ಹನ್ನೆರಡು. ಸ್ತ್ರೀಪುರುಷರ ವಾಗಾರಂಭಗಳು 12. ರೀತಿ, ವೃತ್ತಿ, ಪ್ರವೃತ್ತಿಗಳು ಬೌದ್ಧಿಕ ಆರಂಭಗಳು. ವೈದಭಾರ್್ಯದಿ ರೀತಿಗಳು ನಾಲ್ಕು. ಭಾರತ್ಯಾದಿ ವೃತ್ತಿಗಳು ನಾಲ್ಕು. ಪ್ರವೃತ್ತಿಗಳು ಹಲವು. ಅಂಗ, ಪ್ರತ್ಯಂಗಗಳ ಕರ್ಮಗಳೂ ಚೇಷ್ಟಾವಿಶೇಷಗಳೂ ಶರೀರಾರಂಭಗಳು.
ಅಂಗಗಳು 6, ಪ್ರತ್ಯಂಗಗಳು 8, ಅಂಗ, ಪ್ರತ್ಯಂಗ ಚೇಷ್ಟೆಗಳು 12. ಚೇಷ್ಟಾವಿಶೇಷಗಳು ಸ್ತ್ರೀಗೆ ಮಾತ್ರ. ಅಂಗಪ್ರತ್ಯಂಗಕರ್ಮಗಳು ಸ್ತ್ರೀಪುರುಷರಿಗೆ ಸಾಧಾರಣ. ಅಭಿನಯಗಳು ನಾಲ್ಕು : ಸ್ತಂಭಾದಿ ಸಾತ್ತಿವಕ, ವಾಗಾರಂಭರೂಪದ ವಾಚಿಕ, ಶರೀರಾರಂಭರೂಪದ ಆಂಗಿಕ, ಬುದ್ಧ್ಯಾರಂಭ ರೂಪದ ಆಹಾರ್ಯ.
ಶಬ್ದಾಲಂಕಾರವರ್ಗಗಳು 9 : ಛಾಯೆ, ಮುದ್ರೆ, ಉಕ್ತಿ, ಯುಕ್ತಿ, ಗುಂಫನೆ, ವಾಕೋವಾಕ್ಯ, ಅನುಪ್ರಾಸ ಯಮಕಗಳು, ಚಿತ್ರ, ಸಮಸ್ಯೆ ಎಂದು ಅರ್ಥಾಲಂಕಾರವರ್ಗಗಳು 8 : ಸ್ವರೂಪ, ಸಾದೃಶ್ಯ, ಉತ್ಪ್ರೇಕ್ಷೆ, ಅತಿಶಯ, ವಿಭಾವನೆ, ವಿರೋಧ, ಹೇತು, ಸಮ-ಎಂಬ ತತ್ತ್ವಗಳನ್ನವು ಆಧರಿಸಿವೆ. ಸಮವೆಂಬ ತತ್ತ್ವದ 6 ಉಪವಿಭಾಗಗಳು ಉಭಯಾಲಂಕಾರವರ್ಗಗಳೆನ್ನಿಸುತ್ತವೆ : ಪ್ರಶಸ್ತಿ, ಕಾಂತಿ, ಔಚಿತ್ಯ, ಸಂಕ್ಷೇಪ, ಯಾವದರ್ಥತೆ, ಅಭಿವ್ಯಕ್ತಿ-ಎಂದು.
ಸಾಮಾನ್ಯ ಮತ್ತು ವೈಶೇಷಿಕ ಎಂದು ಕಾವ್ಯಗುಣಗಳ ವರ್ಷಗಳೆರಡು. ಸಾಮಾನ್ಯ ಶಬ್ದಗುಣಗಳು ಆರು. ಸಾಮಾನ್ಯ ಅರ್ಥಗುಣಗಳು ಆರು ಮತ್ತು ಉಭಯಗುಣಗಳು ಆರು. ವೈಶೇಷಿಕ ಗುಣಗಳು ಆಯಾ ಕೃತಿಗೆ ವಿಶಿಷ್ಟ. ದೋಷಗಳು ಮೂರು ಮುಖ್ಯ ಆಶ್ರಯಗಳನ್ನಾಧರಿಸಿವೆ. ವಕ್ತೃ, ವಾಚಕ, ವಾಚ್ಯ-ಎಂದು. ಅಗ್ನಿಪುರಾಣ ತನ್ನ ಅಲಂಕಾರ ವಿಭಾಗದಲ್ಲಿ ಹೆಚ್ಚಾಗಿ ಭರತ, ಭಾಮಹ, ದಂಡಿಗಳ ಗ್ರಂಥಗಳನ್ನಾಧರಿಸಿದೆ. ಇದರ ಪ್ರಕಾರ ಆಕ್ಷೇಪ ವ್ಯಾಪಾರದಲ್ಲಿ ಧ್ವನಿ ಅಡಕವಾಗುತ್ತದೆ.
ಸಮವೆಂಬ ಅರ್ಥಾಲಂಕಾರದ ಕೊನೆಯ ಪ್ರಭೇದವಾದ ಪ್ರಕಟತ್ವವೆಂಬ ಉಭಯಾಲಂಕಾರ ವನ್ನು ಅಭಿವ್ಯಕ್ತಿ ಎಂದು ಕರೆದು ಶ್ರುತಿ, ಆಕ್ಷೇಪಗಳು ಅಭಿವ್ಯಕ್ತಿಯ ಉಪವಿಭಾಗಗಳೆಂದು ಸಾರುತ್ತದೆ. ಇದರ ಪರಿಭಾಷೆಯಂತೆ ಶ್ರುತಿಯಲ್ಲಿ ಅಭಿಧಾ, ಲಕ್ಷಣಾ ವ್ಯಾಪಾರಗಳು ಅಡಕವಾಗುತ್ತವೆ : ಆಕ್ಷೇಪವೆಂದರೆ ಧ್ವನಿ ಅಥವಾ ವ್ಯಂಜನಾವ್ಯಾಪಾರ. ಈ ದೃಷ್ಟಿಯಿಂದ ಅಲಂಕಾರ ವ್ಯಾಪಕವೂ ಧ್ವನಿವ್ಯಾಪ್ಯವೂ ಆಗುತ್ತದೆ. ಧ್ವನಿ ಅಲಂಕಾರದ ಜಾತಿಗೆ ಸೇರಿದ ಒಂದು ಅಂಗ ಎನ್ನಿಸುತ್ತದೆ. ವಿವಿಧ ಅಲಂಕರಣವ್ಯಾಪಾರಗಳಲ್ಲಿ ಧ್ವನನ ವ್ಯಾಪಾರವೂ ಒಂದೆಂದಾಗುತ್ತದೆ.
ಹಿಂದೂ ಸಂಸ್ಕ್ರತಿಯಲ್ಲಿ ಪ್ರತಿಯೊಂದಕ್ಕೂ ಕಾರಣ ಇದೆ ಸ್ನೇಹಿತರೇ….ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ🙏
!! ಶ್ರೀಕೃಷ್ಣಾರ್ಪಣಮಸ್ತು !!

Leave a Reply

Your email address will not be published. Required fields are marked *

Translate »