ನೇಪಾಳದ ಪಶುಪತಿನಾಥನ ಸ್ಥಳ ಪುರಾಣ…!
ಮಹಾಭಾರತದ ಕಥಾಪ್ರಸಂಗವೊಂದು ಪಶುಪತಿನಾಥನ ಇತಿಹಾಸದಲ್ಲಿ ಸೇರಿದೆ.
ಕುರುಕ್ಷೇತ್ರ ಯುದ್ಧದಲ್ಲಿ ಶಿವನ ಭಕ್ತರನ್ನು ಸಂಹರಿಸಿದ್ದರಿಂದ ಶಿವನು ಪಾಂಡವರ ಮೇಲೆ ಕೋಪಗೊಂಡಿದ್ದನು.
ಯುಧಿಷ್ಠಿರನಿಗೆ ದಾಯಾದಿಗಳನ್ನು ಕೊಂದ ವ್ಯಥೆ ಕಾಡುತ್ತಿತ್ತು.ಇವುಗಳ ಪರಿಹಾರಕ್ಕಾಗಿ ಶಿವನ ದರ್ಶನ,ಅನುಗ್ರಹ ಪಡೆಯಲು ಪಾಂಡವರು,
ಶಿವನ ಆವಾಸಸ್ಥಾನವಾಗಿದ್ದ,
ಇಂದಿನ ಗುಪ್ತಕಾಶಿಗೆ ಹೋದರು.
ಇವರು ಬರುತ್ತಿರುವುದನ್ನು ತಿಳಿದ ಈಶ್ವರನು ವೃಷಭರೂಪದಲ್ಲಿ, ಬಯಲಿನಲ್ಲಿ ಮೇಯುತ್ತಿದ್ದ ಎತ್ತುಗಳ ಗುಂಪಿನಲ್ಲಿ ಸೇರಿಕೊಂಡನು.ಅದನ್ನು ಗುರುತಿಸಿದ ಭೀಮ ಎತ್ತನ್ನು ಹಿಡಿದು ಎಳೆಯಲೆತ್ನಿಸಿದಾಗ ತಪ್ಪಿಸಿಕೊಂಡು,ಓಡಿ ಹೋಗಿ ಕೊಂಬಿನಿಂದ ಭೂಮಿಯನ್ನು ಸೀಳಿ ಒಳನುಗ್ಗಿತು.
ಮುಂದೆ ಹೋಗದಂತೆ ಬಾಲವನ್ನು ಎಳೆದು ಹಿಡಿದು ಕೊಂಡಾಗ,ಎತ್ತಿನ ಕೊಂಬು, ಮುಖದ ಭಾಗ ಬಿಟ್ಟು ಉಳಿದ ದೇಹವೆಲ್ಲ ಅಲ್ಲಿಯೇ ಉಳಿದು, ಶಿಲೆಯಾಗಿ ಮಾರ್ಪಟ್ಟಿತು.
ತಲೆಯನ್ನು ಹುಡುಕಲು ಭೂಮಿಯನ್ನೆ ಬಗೆದು ಭೀಮಾದಿಗಳು ಒಳನುಗ್ಗಿ ಮುಂದುವರೆದಾಗ ಅವರು ಮೇಲೆ ಎದ್ದಿದ್ದು ಶಿವಲಿಂಗವಿದ್ದ ಇಂದಿನ ಪಶುಪತಿನಾಥನ ಸನಿಧಿಯಲ್ಲಿ.
ಶಿವನು ಕಾಣಿಸದೆ,ಬದಲಿಗೆ ಲಿಂಗ ಕಾಣಿಸಿದ್ದರಿಂದ ಶಿವನು ಲಿಂಗರೂಪದಲ್ಲಿದ್ದಾನೆಂದು ಭಾವಿಸಿ,ಪಾಂಡವರು ಆ ಲಿಂಗವನ್ನು ಆರಾಧಿಸಿ ಪ್ರಾರ್ಥನೆ ಮಾಡಿದಾಗ ಶಿವನು ಪ್ರತ್ಯಕ್ಷನಾಗಿ,
ಪ್ರಸನ್ನನಾದನು.
ಎತ್ತಿನ ಹಿಂಭಾಗ ಶಿಲೆಯಾದುದೇ ಇಂದಿನ ಕೇದಾರನಾಥ.
ಇದಕ್ಕೆ ಸಾಕ್ಷಿ ಎಂಬಂತೆ ಅಲ್ಲಿ ಶಿವನ ಲಿಂಗರೂಪವಿಲ್ಲ.
ಬಸವನ ಹಿಂಭಾಗದ ಆಕೃತಿಯ ಬಂಡೆಯಂತಹ ರಚನೆಯೇ ಇರುವುದು.
ಅದನ್ನೇ ನಾವು ಕೇದಾರನಾಥನೆಂದು ಕರೆಯುತ್ತಿರುವುದು.
ಭೀಮ ಭೂಮಿಯಲ್ಲಿ ತೋಡಿದ ಸುರಂಗವು ಕೇದಾರದ ಸಮೀಪದ ಪರ್ವತಪ್ರದೇಶದಲ್ಲಿದೆ.
ತನ್ಮೂಲಕ ಹೋದರೆ ನೇಪಾಳದ ಕಟ್ಮಂಡುವಿನ ಪಶುಪತಿನಾಥನ ಸನ್ನಿಧಿಗೆ ಹೋಗಬಹುದೆಂದು ಕೇದಾರದಲ್ಲಿ ಪಂಡರು,ಮತ್ತು ಗೈಡ್ ಹೇಳುತ್ತಾರೆ.
ಇನ್ನೊಂದು ಕತೆ ವಿಭಿನ್ನವಾಗಿದೆ.
ಹಿಂದೆ ಭಾಗಮತಿ ತೀರದಲ್ಲಿ ಶಿವನ ಒಡ್ಡೋಲಗವಿದ್ದು ದೇವತೆಗಳು,
ಶಿವಗಣಗಳು ಅಲ್ಲಿ ಭಕ್ತಿಯಿಂದ ಶಿವನನ್ನು ಆರಾಧಿಸುತ್ತಿದ್ದರು.
ಕ್ರಮೇಣ ಅವರ ಉಗ್ರಭಕ್ತಿಯು ಅತಿಯಾಗಿ ನರ್ತಿಸುತ್ತಿದ್ದರು.ಇದು ಶಿವನಿಗೆ ಪೈಶಾಚಿಕವರ್ತನೆ ಎನಿಸಿ ಸಹಿಸಲಾಗದೆ ಜಿಂಕೆಯ ರೂಪ ಧರಿಸಿ ಬಾಗ್ಮತಿ ದಡದ ಹುಲ್ಲುಗಾವಲಿಗೆ ಹೋದನು.
ಶಿವನ ಸಾನ್ನಿಧ್ಯವಿಲ್ಲದೆ ದುಃಖಗೊಂಡ ದೇವತೆಗಳು,ಮತ್ತು ಶಿವಗಣಗಳು ಜಿಂಕೆಯನ್ನು ಶಿವನೆಂದು ಗುರುತಿಸಿ, ಶಿವನನ್ನು ಪುನಃ ಮೊದಲಿದ್ದ ಸ್ಥಳಕ್ಕೆ, ಸ್ವರೂಪದಲ್ಲಿ ಬಂದು ನಮ್ಮೊಂದಿಗೆ ಇರಬೇಕೆಂದು ಪರಿ ಪರಿಯಾಗಿ ಪ್ರಾರ್ಥಿಸಿದರೂ ಶಿವನು ಒಪ್ಪಲಿಲ್ಲ.
ಬೇರದಾರಿ ಕಾಣದೆ ಎಲ್ಲರೂ ಸೇರಿ ಜಿಂಕೆಯ ಕೊಂಬನ್ನು ಹಿಡಿದು ಎಳೆದಾಗ,
ಜಿಂಕೆಯ ಕೊಂಬು ಮುರಿದು ಬಿದ್ದು ಭೂಮಿಯೊಳಗೆ ಹೂತು ಹೋಯಿತು.
ಜಿಂಕೆ ಕಣ್ಮರೆಯಾಯಿತು.
ನಿರಾಶೆಗೊಂಡ ದೇವತೆಗಳು ತಮ್ಮ ಸ್ಥಾನಕ್ಕೆ ಹಿಂದಿರುಗಿದರು.
ಕೆಲವು ಕಾಲಕಳೆಯಿತು.
ಒಂದು ದಿನ ಬಯಲಿನಲ್ಲಿ ಮೇಯುತ್ತಿದ್ದ ಹಸುವೊಂದು,
ಒಂದು ಜಾಗದಲ್ಲಿ ನಿಂತು ನಾಲ್ಕೂ ಮೊಲೆಗಳಿಂದ ಹಾಲು ಸುರಿಸುತ್ತಿದ್ದುದನ್ನು ಗೋಪಾಲಕನು ನೋಡಿ,
ಅಚ್ಚರಿಗೊಂಡನು. (ಅದು ಜಿಂಕೆಯ ಕೊಂಬು ಬಿದ್ದ ಸ್ಥಳ)
ನಂತರ ಪ್ರತಿದಿನವೂ ಆ ಹಸು ಹಾಗೆಯೇ ಮಾಡುತ್ತಿರುವುದನ್ನು ನೋಡಿ,ಊರಿನ ಜನರಿಗೆ ಇದನ್ನು ತಿಳಿಸಿದನು.
ಜನರು ಬಂದು ಹಸು ಹಾಲು ಸುರಿಸುತ್ತಿರುವುದನ್ನು ಕಂಡು,ಆ ಜಾಗವನ್ನು ಅಗೆದಾಗ ದೊಡ್ಡಗಾತ್ರದ ಶಿವಲಿಂಗ ಸಿಕ್ಕಿತು.
ಊರವರೆಲ್ಲ ಸೇರಿ ಮಂದಿರ ನಿರ್ಮಿಸಿ ಲಿಂಗವನ್ನು ಪ್ರತಿಷ್ಠಾಪಿಸಿ,ಭಕ್ತಿಯಿಂದ ಪೂಜಿಸಲಾರಂಭಿಸಿದರು.
ಇಲ್ಲಿ ಸ್ವತಃ ಶಿವನೇ ತನ್ನ ಜಿಂಕೆಯ (ಪಶು) ರೂಪದ ಕೊಂಬನ್ನು ಲಿಂಗವಾಗಿಸಿ ಸಾನ್ನಿಧ್ಯ ತೋರಿಸಿದ್ದಾನೆ.
ಹಸುವು ಕ್ಷೀರಧಾರೆ ಸುರಿಸಿ ಅರ್ಚಿಸಿದೆ,ಎಂದು ಭಾವಿಸಿದ ಜನರು “ಪಶುಪತಿನಾಥ” ಎಂದು ಕರೆದರು.
ಈಗಿನ ಪಶುಪತಿನಾಥಮಂದಿರ ಇರುವುದೂ ಬಾಗ್ಮತಿ ದಂಡೆಯ ಅದೇ ಬಯಲಿನಲ್ಲಿಯೇ.
ಈಶ್ವರನು ತಾನಾಗಿಯೇ ಲಿಂಗರೂಪದಲ್ಲಿ ಜನರಿಗೆ ಕಾಣಿಸಿದ ಸ್ಥಳ.
ಶಿವನು ಅಲ್ಲಿ ನೆಲೆಸಿದ್ದಾನೆ,
ದರ್ಶನ ಮಾಡಿ ಆರಾಧಿಸಿ ಪ್ರಾರ್ಥನೆ ಮಾಡುವ ಭಕ್ತರಿಗೆ ಕೈಲಾಸವಾಸವನ್ನು ಅನುಗ್ರಹಿಸುತ್ತಾನೆ ಎಂದು ನೇಪಾಳಿಗರಿಗೆ ನಂಬಿಕೆ,
ಪಶುಪತಿನಾಥನಲ್ಲಿ ಪರಮಭಕ್ತಿ.