ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಲಿಂಗ ಪೂಜೆಯು ಮತ್ತು ಪಾರ್ವತಿಯು ಬಾಣ ರೂಪಳೆಂದು ಪ್ರಸಿದ್ಧಿಯಾಗಲು ಕಾರಣವೇನು ?

ಲಿಂಗದ ಒಳ ಮರ್ಮ…

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಭಾರತದಾದ್ಯಂತ ಸನಾತನಿಗಳು ಅನೇಕ ಲಿಂಗಗಳನ್ನು ಸ್ಥಾಪಿಸಿದ್ದಾರೆ. ಶಿವಲಿಂಗವನ್ನು ಪೂಜಿಸಿದರೆ ಶಿವನನ್ನು ಪೂಜಿಸಿದಂತೆ ಎಂದೇ ಸಾಮಾನ್ಯರ ನಂಬಿಕೆ. ಆದರೆ ಶಿವ ಪುರಾಣ ಕೋಟಿರುದ್ರ ಸಂಹಿತೆ ಅಧ್ಯಾಯ 12 ರಲ್ಲಿ
ಲಿಂಗದ ಒಳ ಮರ್ಮ ಬೇರೆಯೆ ಇದೆ. ಅದೇನೆಂಬುದನ್ನು ನೋಡೋಣ.

ಲಿಂಗ ಪೂಜೆಯು ಪ್ರಸಿದ್ಧವಾಗಲಿಕ್ಕೆ ಕಾರಣವೇನು? ಶಿವನ ಪ್ರೀತಿಗೆ ಪಾತ್ರಳಾದ ಪಾರ್ವತಿಯು ಬಾಣ ರೂಪಳೆಂದು ಪ್ರಸಿದ್ಧಿಯಾಗಲು ಕಾರಣವೇನು ?

ಸೂತನ ಉತ್ತರ : ದಾರುಕವೆಂಬ ವನವು ಅತ್ಯಂತ ಶ್ರೇಷ್ಠವಾದುದು. ಅಲ್ಲಿದ್ದ ಋಷಿ ಶ್ರೇಷ್ಠರು ಸದಾ ಶಿವಭಕ್ತರಾಗಿ ಪ್ರತಿನಿತ್ಯವೂ ಶಿವನ ಧ್ಯಾನವನ್ನು ಮಾಡುತ್ತಾ ತ್ರಿಕಾಲ ಶಿವಪೂಜೆ ಮಾಡುತ್ತಿದ್ದರು. ಬಗೆ ಬಗೆಯ ಸ್ತೋತ್ರಗಳಿಂದ ಶಿವನನ್ನು ಸ್ತುತಿಸುತ್ತಿದ್ದರು.

ಅವರೊಮ್ಮೆ ಸಮಿತ್ತುಗಳನ್ನು ತರುವುದಕ್ಕಾಗಿ ಕಾಡಿಗೆ ಹೋದರು. ಆಗ ಶಿವನು ಆ ಮುನಿಗಳ ಪರೀಕ್ಷಾರ್ಥವಾಗಿ ವಿಕಾರರೂಪ ಧರಿಸಿ ಬಂದನು.

ಆ ಶಿವನು ಮಹಾ ತೇಜಸ್ಸಿನಿಂದ ಕೂಡಿದ ಶರೀರವುಳ್ಳವನಾಗಿ, ವಸ್ತ್ರವನ್ನು ಧರಿಸದೆ ದಿಗಂಬರನಾಗಿ, ಮೈಗೆಲ್ಲಾ ಬೂದಿಯನ್ನು ಬಳಿದುಕೊಂಡು, ದುಷ್ಟಚೇಷ್ಟೆ ಮಾಡುತ್ತ ತನ್ನ ಲಿಂಗವನ್ನು ಹಿಡಿದುಕೊಂಡು ಆ ವನಕ್ಕೆ ಬಂದನು.

ಅವನನ್ನು ನೋಡಿ ಋಷಿಪತ್ನಿಯರು ಕೆಲವರು ಭಯಭೀತರಾದರು, ಕೆಲವರು ಭ್ರಾಂತರಾದರು, ಕೆಲವರು ಆಶ್ಚರ್ಯಪಡುತ್ತಿದ್ದರು. ಸ್ತ್ರೀಯರೆಲ್ಲ ಗುಂಪು ಸೇರಿದರು. ಕೆಲವರು ಶಿವನ ತೇಜಸ್ಸನ್ನು ಕಂಡು ಆಲಂಗಿಸಿಕೊಂಡರು. ಸ್ತ್ರೀಯರೆಲ್ಲರೂ ಒಬ್ಬರಮೇಲೊಬ್ಬರು ಬಂದು ಶಿವನನ್ನು ನೋಡುವುದರಲ್ಲಿಯೇ ಮಗ್ನರಾದರು.

ಆ ಸಮಯದಲ್ಲಿ ಋಷಿಶ್ರೇಷ್ಠರೂ ಬಂದರು. ವೇದಸಮ್ಮತವಲ್ಲದ ಈ ನಡತೆಯನ್ನು ನೋಡಿ ಮಾಯೆಗೊಳಗಾದ ಆ ಋಷಿಗಳೆಲ್ಲರೂ ಇವನಾರು? ಇವನೇಕೆ ಇಲ್ಲಿಗೆ ಬಂದನು? ಎಂದು ಕೋಪಗೊಂಡರು. ಆ ದಿಗಂಬರನಾದ ಅವಧೂತರೂಪಿ ಶಿವನು ಯಾವ ಮಾತನ್ನೂ ಆಡಲಿಲ್ಲ. ಆಗ ಋಷಿಶ್ರೇಷ್ಠರು ಅವನನ್ನು ಕುರಿತು
“ನೀನು ವೇದಗಳ ಮೌಲ್ಯವನ್ನು ನಾಶಮಾಡತಕ್ಕ ವಿರುದ್ಧ ಕಾರ್ಯವನ್ನು ಮಾಡುತ್ತಿರುವೆ. ಆದ್ದರಿಂದ ನಿನ್ನ ಲಿಂಗವು ನೆಲಕ್ಕೆ ಬಿದ್ದುಹೋಗಲಿ” ಎಂದರು.

  ಪವಿತ್ರವಾದ ಜಲ ಮೂಲಗಳು

ಆ ಕೂಡಲೇ ಅವಧೂತರೂಪಿ ಶಿವನ ಲಿಂಗವು ಕಳಚಿ ನೆಲಕ್ಕೆ ಬಿತ್ತು. ಆ ಲಿಂಗವು ಬೆಂಕಿಯಂತೆ ತನ್ನ ಸಮೀಪದಲ್ಲಿ ಇದ್ದುದನ್ನೆಲ್ಲಾ ಸುಡಲಾರಂಭಿಸಿತು. ಅದು ಸ್ಥಿರವಾಗಿ ಒಂದೆಡೆ ನಿಲ್ಲದೆ ಚಲಿಸುತ್ತಾ ಹೋದೆಡೆಯಲ್ಲೆಲ್ಲ ಇದ್ದುದನ್ನು ಸುಡುತ್ತಿತ್ತು. ಪಾತಾಳಕ್ಕೆ ಹೋದರೂ, ಸ್ವರ್ಗಕ್ಕೆ ಹೋದರೂ, ಭೂಮಿಯಲ್ಲಿದ್ದರೂ ಎಲ್ಲಿಯೂ ಸ್ಥಿರವಾಗಿ ನಿಲ್ಲಲಿಲ್ಲ.

ಇದನ್ನು ನೋಡಿ ಸಮಸ್ತ ಋಷಿಗಳೂ ವ್ಯಾಕುಲಪಡುತ್ತಿದ್ದರು. ದೇವತೆಗಳಿಗೆ ಸಿಗುವ ಸುಖ ಸಿಗಲಿಲ್ಲ. ಶಿವನನ್ನು ನೋಡಿದ್ದ ದೇವರ್ಷಿಗಳೆಲ್ಲಾ ಗುಂಪುಗೂಡಿ ಬ್ರಹ್ಮನಿಗೆ ಶರಣು ಹೋದರು.

ನಮಸ್ಕರಿಸಿ ನಡೆದ ವೃತ್ತಾಂತವನ್ನು ಹೇಳಿದರು. ಬ್ರಹ್ಮನು ಮಾಯೆಯಿಂದ ಮೋಹಿತರಾದ ರುಷಿಗಳ ಮಾತನ್ನು ಕೇಳಿ, ಅವರ ಅಜ್ಞಾನಕ್ಕೆ ನಕ್ಕು ಶಿವನಿಗೆ ನಮಸ್ಕಾರಮಾಡಿ ಆ ರುಷಿಗಳನ್ನು ಕುರಿತು ಹೇಳಿದನು.

ಋಷಿಗಳೇ ! ಜ್ಞಾನಿಗಳಾದ ನೀವೇ ಇಂಥ ಕೆಲಸವನ್ನು ಮಾಡುತ್ತಿರುವಲ್ಲಿ ಇನ್ನು ಅಜ್ಞಾನಿಗಳು ಮಾಡಿದರೆ ಆಶ್ಚರ್ಯವೇನಿದೆ? ಮಹಾದೇವನಾದ ಶಿವನನ್ನು ದ್ವೇಷಿಸಿದರೆ ಯಾವನಿಗೆ ತಾನೇ ಕುಶಲವಾಗುವುದು? ಮದ್ಯಾಹ್ನ ಊಟದ ಕಾಲದಲ್ಲಿ ಯಾವನು ಅತಿಥಿಗೆ ಸತ್ಕಾರವನ್ನು ಮಾಡುವುದಿಲ್ಲವೋ, ಅವನ ಪುಣ್ಯವನ್ನು ಅತಿಥಿಯು ತೆಗೆದುಕೊಂಡು ತನ್ನ ಪಾಪವನ್ನು ಅವನಿಗೆ ಕೊಟ್ಟು ಹೋಗುವನು. ಅತಿಥಿಯಾದ ಶಿವನಿಗೇ ಹೀಗೆ ಮಾಡಿದರೆ ಹೇಳಬೇಕಾದುದೇನಿರುವುದು ?

  ಹುಲಿಗಿ ಕ್ಷೇತ್ರದ ಮಾಹಿತಿ - ಶ್ರೀ ಹುಲಿಗೆಮ್ಮ ದೇವಿ

ಆ ಲಿಂಗವು ಸ್ಥಿರವಾಗಿ ನಿಲ್ಲುವವರೆಗೂ ಮೂರು ಲೋಕದಲ್ಲಿಯೂ ಶುಭವಾಗುವುದಿಲ್ಲ. ಇದು ಸತ್ಯ ಋಷಿಗಳೇ ! ನೀವು ಶಿವಲಿಂಗವು ಸ್ಥಿರವಾಗಿ ನಿಲ್ಲುವ ಪ್ರಯತ್ನ ಮಾಡಿರಿ ಎಂದರು.

ಆಗ ಋಷಿಗಳು ನಾವು ಏನು ಮಾಡಬೇಕೆಂಬುದನ್ನು ನೀನೇ ಅಪ್ಪಣೆ ಮಾಡು ಎನ್ನಲು, ಬ್ರಹ್ಮನು –
“ಋಷಿಗಳೇ ! ಪಾರ್ವತೀದೇವಿಯನ್ನು ಪೂಜಿಸಿ ಪ್ರಾರ್ಥನೆಮಾಡಿರಿ. ಆ ದೇವಿಯು ಯೋನಿರೂಪ ತಳೆದರೆ ಆ ಲಿಂಗವು ಸ್ಥಿರತೆಯನ್ನು ಪಡೆಯುವುದು. ಈ ಪ್ರಯತ್ನವನ್ನು ನೀವು ಪ್ರೀತಿಯಿಂದ ಮಾಡಿದರೆ ಮಾತ್ರ ದೇವಿಯು ಪ್ರಸನ್ನಳಾಗುವಳು. ಅದಕ್ಕೆ ಶುದ್ಧವಾದ ಸ್ಥಳದಲ್ಲಿ ಅಷ್ಟದಳಪದ್ಮವನ್ನು ಬರೆದು ಅಲ್ಲಿ ಒಂದು ಕಲಶವನ್ನು ಸ್ಥಾಪಿಸಬೇಕು. ದೂರ್ವೆಯನ್ನೂ, ಯವಾಂಕುರಗಳನ್ನೂ ತೀರ್ಥೋದಕಗಳನ್ನೂ ಕಲಶದಲ್ಲಿ ಹಾಕಿ ವೇದಮಂತ್ರಗಳಿಂದ ಆ ಕಲಶವನ್ನು ಅಭಿಮಂತ್ರಿಸಿ ಶಿವನನ್ನು ಧ್ಯಾನಿಸುತ್ತ ಪೂಜಿಸಿ, ಆ ಲಿಂಗಕ್ಕೆ ಆ ಕಲಶೋದಕದಿಂದ ಅಭಿಷೇಕವನ್ನು ಮಾಡಬೇಕು. ಶತರುದ್ರೀಯ ಮಂತ್ರದಿಂದ ಅಭಿಷೇಕ ಮಾಡಿದರೆ ಶಾಂತವಾಗುವುದು.

ಪಾರ್ವತೀ ದೇವಿಯು ಯೋನಿರೂಪ ತಳೆದುದಕ್ಕೆ ಸಂಕೇತವಾಗಿ ಬಾಣದಂತಿರುವ ಮಂಗಳಕರವಾದ ಪೀಠವನ್ನು ಸ್ಥಾಪಿಸಿ ಅದರಲ್ಲಿ ಲಿಂಗವನ್ನು ಸ್ಥಾಪಿಸಿ ಮತ್ತೆ ಅಭಿಮಂತ್ರಿಸಿ ಅಭಿಷೇಕಾದಿಗಳನ್ನು ಮಾಡಿ, ಶಿವನನ್ನು ಸಂತೋಷ ಪಡಿಸಬೇಕು.

ಪುಣ್ಯಕರವಾದ ಸ್ತೋತ್ರಗಳಿಂದ ‘ಸ್ವಾಮಿಯೇ ! ನೀನೇ ಸಮಸ್ತ ಲೋಕಗಳನ್ನೂ ಸೃಷ್ಟಿಸಿ, ರಕ್ಷಿಸಿ, ನಾಶಮಾಡ ತಕ್ಕವನು. ನೀನು ನಾಶರಹಿತನು. ಲೋಕಕ್ಕೆಲ್ಲಾ ಆದಿಕಾರಣನು. ಈ ಪ್ರಪಂಚದಲ್ಲಿ ಅಂತರ್ಗತನಾಗಿರುವೆ, ಮಹಾಸ್ವಾಮಿಯೇ! ನೀನು ಶಾಂತನಾಗಿ ಸಮಸ್ತ ಲೋಕಗಳನ್ನೂ ರಕ್ಷಿಸು, ಎಂದು ಸ್ತೋತ್ರ ಮಾಡಿದರೆ ಮೂರು ಲೋಕಕ್ಕೂ ಸುಖ ಉಂಟಾಗುವುದು. ಸಮಸ್ತ ವಿಕಾರಗಳೂ ನಾಶವಾಗುವುವು.

  ದೇವಸ್ಥಾನದಲ್ಲಿ ತೀರ್ಥ ಸೇವನೆ ಮಾಡುವ ಕ್ರಮ

ಆಗ ದೇವತೆಗಳು ಶಿವನನ್ನು ಮೊರೆಹೊಕ್ಕರು. ಅತ್ಯಂತ ಭಕ್ತಿಯಿಂದ ಮಾಡಿದ ಅವರ ಉಪಾಸನೆಯನ್ನು ಸ್ವೀಕರಿಸಿದ ಶಿವನು ಪ್ರಸನ್ನನಾಗಿ ಹೇಳಿದನು.

“ದೇವತೆಗಳೇ, ಋಷಿಗಳೇ ! ಆದರದಿಂದ ನನ್ನ ಮಾತನ್ನು ಕೇಳಿರಿ. ಯೋನಿರೂಪದಿಂದ ನನ್ನ ಲಿಂಗವನ್ನು ಧರಿಸಿದರೆ ಲೋಕಕ್ಕೆ ಸುಖವಾಗುವುದು. ಪಾರ್ವತಿಯು ಧರಿಸಿದ ನನ್ನ ಲಿಂಗವು ಬೇಗನೆ ಶಾಂತಿಯನ್ನು ಹೊಂದುವುದು” ಎಂದನು.

ಮುನಿಗಳೂ, ದೇವತೆಗಳೂ ಸೇರಿ ಲಿಂಗಪ್ರತಿಷ್ಠೆ ಮಾಡಿದರು.

ಶಿವ-ಪಾರ್ವತಿಯರು ಪ್ರಸನ್ನರಾದರು. ಪಾರ್ವತಿಯು ಯೋನಿರೂಪದಿಂದ ಆ ಲಿಂಗವನ್ನು ಧರಿಸಿದಳು. ಲಿಂಗ ಸ್ಥಾಪನೆಯಾದಾಗ ತ್ರಿಲೋಕಗಳಿಗೆ ಮಂಗಳವುಂಟಾಯಿತು. ಹೀಗೆ
ಲಿಂಗವು ಮೂರು ಲೋಕದಲ್ಲಿಯೂ ಪ್ರಸಿದ್ಧಿಯನ್ನು ಪಡೆಯಿತು.

ಪಾರ್ವತೀ-ಪರಮೇಶ್ವರ ಸ್ವರೂಪವಾದ ಲಿಂಗವು ಹಾಟಕೇಶ್ವರನೆಂದು ಪ್ರಸಿದ್ಧಿ ಹೊಂದಿತು. ಇಹಲೋಕದಲ್ಲಿ ಸಕಲ ಸಂಪತ್ತು ಪ್ರಾಪ್ತವಾಗಿ, ಪರಲೋಕದಲ್ಲಿ ಮುಕ್ತಿ ಪ್ರಾಪ್ತಿಯಾಗುವುದು.

ಆಧಾರ: ಶಿವ ಪುರಾಣ ಕೋಟಿರುದ್ರ ಸಂಹಿತೆ ಅಧ್ಯಾಯ 12.

Leave a Reply

Your email address will not be published. Required fields are marked *

Translate »