ಶಿವ ಮತ್ತು ಅವನ ಭಕ್ತ ನಂದಿ
ಶಿವನ ಪರಮ ಭಕ್ತ ನಂದಿ ಎಂದು ಎಲ್ಲರಿಗೂ ತಿಳಿದಿದೆ.
ನಂದಿಯು ಶಿವ ಭಕ್ತನಾಗುವುದರ ಹಿಂದೆ ಒಂದು ಕಥೆಯಿದೆ.
ಶಿಲಾಧರ
ಎಂಬ ಋಷಿ ಇದ್ದನು.
ಈತನು ಶಿವನ ಪರಮ ಭಕ್ತನಾಗಿದ್ದನು.
ಶೀಲಾಧರನಿಗೆ ಮಕ್ಕಳಿರಲಿಲ್ಲ.
ಹೀಗಾಗಿ ಅವನು ಪುತ್ರ ಸಂತಾನಕ್ಕಾಗಿ ಶಿವನನ್ನು ಕುರಿತು ಬಹಳ ವರ್ಷಗಳ ಕಾಲ ಕಠಿಣ ತಪಸ್ಸನ್ನು ಮಾಡಿದನು.
ಅವನ ತಪಸ್ಸಿಗೆ ಪ್ರಸನ್ನಗೊಂಡ ಶಿವನು ದರ್ಶನ ಕೊಟ್ಟು,
ನಿನ್ನ ತಪಸ್ಸಿನಿಂದ ನಾನು ಪ್ರಸನ್ನಗೊಂಡಿದ್ದೇನೆ.
ನಿನಗೆ ಏನು ವರ ಬೇಕು ಕೇಳಿಕೋ?
ಎಂದನು.
ಶಿಲಾಧರನು
ತನಗೆ ಪುತ್ರನು ಬೇಕೆಂದು ಕೇಳಿದನು.
ಆಯಿತು ನಿನಗೆ ಪುತ್ರಪ್ರಾಪ್ತಿಯಾಗುವುದು ಎಂದು ವರ ನೀಡಿ ಶಿವ ಅದೃಶನಾದನು.
ಶೀಲಾಧರನು ಸಂತೋಷದಿಂದ ಮನೆಗೆ ಬಂದನು.
ಕೆಲವು ದಿನಗಳ ನಂತರ ನಿತ್ಯ ಕ್ರಮದಂತೆ,
ಹೊಲದ ಬದಿ ನಡೆದು ಹೋಗುತ್ತಿರುವಾಗ,
ಬೇಲಿ ಬದಿಯಲ್ಲಿ ಅವನಿಗೆ ನವಜಾತ ಶಿಶುವೂಂದು ಕಂಡಿತು.
ಆ ಮಗುವಿನ ಸುತ್ತಲೂ ಸೂರ್ಯನಂತೆ ತೇಜಸ್ಸನ್ನು ಹರಡಿತ್ತು.
ಋಷಿಯು ಆ ಮಗುವನ್ನು ಮನೆಗೆ ತೆಗೆದುಕೊಂಡು ಬಂದನು.
ಮಗುವಿಗೆ
ನಂದಿ
ಎಂದು ನಾಮಕರಣ ಮಾಡಿದನು.
ಅವನು ಆ ಮಗುವನ್ನು ಬಹಳ ಪ್ರೀತಿಯಿಂದ ಆರೈಕೆ ಮಾಡಿ ಬೆಳೆಸುತ್ತಿದ್ದನು.
ನಂದಿಯು ನೋಡಲು ಬಹಳ ಮುದ್ದಾಗಿದ್ದು,
ತುಂಬಾ ಬುದ್ಧಿವಂತ ನಾಗಿದ್ದನು.
ಋಷಿಯು ತನ್ನ ಮಗ ನಂದಿಯ ಕುರಿತು ಒಂದು ಥರ ಗರ್ವಪಡುತ್ತಿದ್ದನು.
ನಂದಿಯು ಸ್ವಲ್ಪ ದೊಡ್ಡವನಾಗುತ್ತಿದ್ದಂತೆ ಅವರ ಮನೆಗೆ
ಮಿತ್ರ ಮತ್ತು ವರುಣ
ಎಂಬ ಇಬ್ಬರು ಮಹಾನ್ ತಪಸ್ವಿಗಳು ಬಂದರು.
ಆ ಋಷಿಗಳು ಅವರ ಮನೆಯಲ್ಲಿ ಸ್ವಲ್ಪ ಕಾಲ ತಂಗುವುದಾಗಿ ತಿಳಿಸಿದರು.
ಶಿಲಾಧರನು ಸಂತೋಷದಿಂದ ಒಪ್ಪಿದನು. ಋಷಿಗಳಿಗೆ ಬೇಕಾದುದನೆಲ್ಲವ ಒದಗಿಸಿ,
ಅವರ ಅನುಷ್ಠಾನಗಳಿಗೆ ತೊಂದರೆಯಾಗದಂತೆ ಅವುಗಳನ್ನು ಒದಗಿಸಿ,
ಅತಿಥಿ ಸತ್ಕಾರಮಾಡಿ ನೋಡಿಕೊಳ್ಳುವಂತೆ ನಂದಿಗೆ ಹೇಳಿದನು.
ನಂದಿಯು ತಂದೆಯ ಮಾತಿನಂತೆ ಋಷಿಗಳ ಸೇವೆಯನ್ನು ತುಂಬಾ ಶ್ರದ್ಧಾಭಕ್ತಿಯಿಂದ ಮಾಡಿದನು.
ನಂತರ ಋಷಿಗಳು ಹೊರಟರು.
ಹೊರಡುವ ಮುನ್ನ,
ಶಿಲಾಧರನು ತನಗೂ ತನ್ನ ಮಗನಿಗೂ ಆಶೀರ್ವಾದ ಮಾಡುವಂತೆ ಬೇಡಿದನು.
ಆಗ ಇಬ್ಬರು ಋಷಿಗಳು.
ಶೀಲಾಧರನಿಗೆ,
ನೀನು ಸುಖ,
ಸಂತೋಷವಾಗಿ ದೀರ್ಘಾಯುಷ್ಯವಂತನಾಗಿ ಬಾಳು ಎಂದು ಹರಸಿದರು.
ನಂದಿಯು ತಪಸ್ವಿಗಳ ಆಶೀರ್ವಾದ ಪಡೆಯಲು ಅವರಿಗೆ ನಮಸ್ಕಾರ ಮಾಡಿಲು ಬಗ್ಗಿದಾಗ,
ಋಷಿಗಳು ಸ್ವಲ್ಪಕಾಲ ಮೌನವಾಗಿದ್ದು ನಂತರ,
ಗಂಭೀರವದನರಾಗಿ,
ನಂದಿ
ನೀನು ನಿನ್ನ ತಂದೆಯನ್ನು ಹಾಗೂ ಗುರುವನ್ನು,
ಚೆನ್ನಾಗಿ ಪ್ರೀತಿಯಿಂದ ನೋಡಿಕೋ ಮತ್ತು ಅವರ ಬಗ್ಗೆ ಹೆಚ್ಚಿನ ಶ್ರದ್ಧೆವಹಿಸು” ತನ್ನ ಮಗನಿಗೆ ಈ ತರಹ ಆಶೀರ್ವದಿಸಿದಾಗ ಶೀಲಾಧರನು ವ್ಯಾಕುಲಗೊಂಡು,
ಮಗನಿಗೆ ಗೊತ್ತಾಗದಂತೆ ಋಷಿಗಳ ಜೊತೆ ಮನೆಯಿಂದ ಸ್ವಲ್ಪ ಹೊರಗೆ ಬಂದು,
“ಮಹರ್ಷಿಗಳೇ ಏನಾಯಿತು? ನನ್ನ ಮಗ ನಂದಿಗೆ ಆಶೀರ್ವಾದ ಮಾಡುವಾಗ ನೀವು ಬಹಳ ಗಂಭೀರವಾಗಿ,
ಉತ್ಸಾಹ ಕಳೆದುಕೊಂಡವರಂತೆ ಇದ್ದೀರಿ,
ನನ್ನ ಮಗನು ನಿಮ್ಮ ಸೇವೆ ಮಾಡುವಲ್ಲಿ,
ಅಚಾತುರ್ಯದಿಂದ ನಿಮಗೇನಾದರೂ ಲೋಪ ಮಾಡಿದನೇ?
ಹೇಳಿ ಎಂದು ಹೆದರಿ ಕೇಳಿದನು.
ಆಗ ಋಷಿಗಳು,
ಹಾಗೆಲ್ಲ ನಂದಿ ತಪ್ಪು ಮಾಡುವನಲ್ಲ.
ಅವನು ಶಿವನ ವರಪ್ರಸಾದದಿಂದ ದೊರೆತವನು.
ಆದರೆ ನಾವು ನಿನ್ನ ಮಗನಿಗೆ ಧೀರ್ಘಾಯುಷ್ಯವಂತನಾಗು ಎಂದು ಆಶೀರ್ವಾದ ಮಾಡಲಾಗುವುದಿಲ್ಲ.
ಏನು ಮಾಡುವುದು.
ನಮಗೆ ಈ ವಿಷಯವನ್ನು ಹೇಳಲು ಮನಸ್ಸಿಗೆ ನೋವಾಗುತ್ತಿದೆ.
ಬಾಲಕನ ಆಯಸ್ಸು ತುಂಬಾ ಕಡಿಮೆ ಇದೆ ಎಂದು ಹೇಳಿ ಅವರು ಹೊರಟೇಬಿಟ್ಟರು.
ಶಿಲಾಧರನು ಆತಂಕ ಹಾಗೂ ನಿರುತ್ಸಾಹಗೊಂಡವನಾಗಿ ಮನೆಯೊಳಗೆ ಬಂದನು.
ತಂದೆಯ ಮ್ಲಾನ ಮುಖವನ್ನು ನೋಡಿ ನಂದಿಯು ಏನಾಯಿತು?
ಎಂದು ಕೇಳಿದನು.
ಇದಕ್ಕೆ ಉತ್ತರವನ್ನು ಕೊಡಲು ತಂದೆಗೆ ಏನೂ ಇಷ್ಟವಿರಲಿಲ್ಲ.
ಆದರೆ ನಂದಿಯು ಹಟಮಾಡಿ ಕೇಳಿದಾಗ ಹೇಳದೆ ವಿಧಿ ಇರಲಿಲ್ಲ ಹೀಗಾಗಿ ಶಿಲಾಧರನು ಋಷಿಗಳು ಹೇಳಿದ ವಿಷಯವನ್ನು ಹೇಳಿದನು.
ಇದನ್ನು ಕೇಳಿದ ಬಾಲಕ ನಂದಿಯು ಜೋರಾಗಿ ನಗುತ್ತಾ ಹೀಗೆ ಹೇಳಿದನು.
“ಅಯ್ಯೋ ಅಪ್ಪ ಆ ಪರಮೇಶ್ವರನೇ ನಿನಗೆ ಪ್ರತ್ಯಕ್ಷವಾಗಿ ದರ್ಶನ ಕೊಟ್ಟಿದ್ದಾನೆ ಎಂದು ಹೇಳುವುದನ್ನು ಕೇಳಿದ್ದೇನೆ.
ನಮ್ಮ ಜೊತೆ ಶಂಕರನೇ ಇರುವಾಗ ನೀನೇಕೆ ಹೆದರುತ್ತಿಯಾ?
ನಾನು ಭಕ್ತಿಯಿಂದ ಶಿವನನ್ನು ಆರಾಧಿಸುತ್ತೇನೆ.
ನನ್ನ ಪ್ರಾರ್ಥನೆಗೆ ಅವನು ಒಲಿಯುತ್ತಾನೆ.
ಶಿವನು ಬಹಳ ಶಕ್ತಿಶಾಲಿ.
ಅವನಿಗೆ ಅಸಾಧ್ಯವಾದುದು ಯಾವುದು ಇಲ್ಲ.
ಶಿವನು ನನ್ನ ವಿಧಿಯನ್ನು ಖಂಡಿತ ಬದಲಾಯಿಸುತ್ತಾನೆ. ನಾನು ಶಂಕರನನ್ನು ಪ್ರಾರ್ತಿಸುತ್ತೇನೆ.
ನೀವು ನನ್ನ ಸಂಕಲ್ಪ ಸಫಲವಾಗಲಿ ಎಂದು ನನಗೆ ಆಶೀರ್ವಾದವನ್ನು ಮಾಡಿರಿ” ಎಂದನು.
ಶೀಲಾಧರನು ಸಮಾಧಾನಗೊಂಡು ಮಗನಿಗೆ ಆಶೀರ್ವಾದ ಮಾಡಿದನು.
ನಂದಿಯು ಪರ್ವತಕ್ಕೆ ಹೋಗಿ ಸ್ವಲಕಾಲ ನೀರಿನೊಳಗೆ ಇದ್ದು,
ನಂತರ ನದಿಯ ದಡದಲ್ಲಿ ಕುಳಿತು ಶಿವನಾಮ ಜಪಿಸುತ್ತಾ ಘೋರ ತಪಸ್ಸು ಮಾಡಿದನು.
ನಂದಿಯ ಕಠೋರ ತಪಸ್ಸಿಗೆ ಭಗವಂತನು ಮೆಚ್ಚಿದನು.
ಮತ್ತು ಅವನ ಮುಂದೆ ಪ್ರತ್ಯಕ್ಷನಾದನು.
ನಂದಿಯು ತನ್ನ ಮುಂದೆ ನಿಂತ ಶಿವನನ್ನು ಮತ್ತು ಶಿವನ ಸೌಂದರ್ಯವನ್ನು ನೋಡಿ ಮೈಮರೆತನು.
ಶಿವನನ್ನು ನೋಡುತ್ತಾ ಮೈಮರೆತ ನಂದಿಗೆ ಅವನ ಬಾಯಿಂದ ‘ವರ ‘
ಕೇಳುವುದು ಮರೆತುಹೋಗಿ ಬಾಯಿಂದ ಯಾವ ಶಬ್ದವು ಹೊರಡಲಿಲ್ಲ.
ನಂದಿಯು ಮನಸ್ಸಿನಲ್ಲಿ,” ಆಹಾ ನಾನು ಶಿವನ ವಾಹನವಾಗುವುದಾದರೆ ಎಷ್ಟು ಚೆನ್ನಾಗಿರುತ್ತದೆ.
ಶಿವನ ವಾಹನವಾದರೆ ಯಾವಾಗಲೂ ಅವನ ಜೊತೆಯಲ್ಲೇ ಇರಬಹುದು,
ಮತ್ತು ಶಿವನನ್ನು ಸದಾಕಾಲವೂ ನೋಡುತ್ತಿರಬಹುದು ಅಲ್ಲವೇ?
ಎಂದು ಮನಸ್ಸಿನಲ್ಲಿ ಅಂದುಕೊಂಡನು.
ಹಾಗೂ ಇದನ್ನೇ ಕುರಿತು ಚಿಂತಿಸಿದನು.
ಶಿವನಿಗೆ ನಂದಿಯ ಮನಸ್ಸಿನಲ್ಲಿ ಅಂದುಕೊಂಡ ಮಾತುಗಳು ಕೇಳಿದವು.ಶಿವನು ನಗುತ್ತಾ,
ಆಯ್ತು ನಂದಿ ನಿನ್ನ ಮನದಿಚ್ಛೆಯಂತೆ ಆಗಲಿ.
ಎಂದು ವರ ನೀಡಿದನು.
ಮತ್ತು ಇಂದಿನಿಂದ ನಿನ್ನ ಮುಖ ವೃಷಭನಂತೆ ಆಗಲಿ ಎಂದು ನಂದಿಗೆ ಹರಸಿ,
ನೀನು ಎಂದಿಗೂ ನನಗೆ ಪ್ರೀತಿಯ ವಾಹನವಾಗಿ ಇರುವೆ ಎಂದು ಹೇಳಿದನು. ಅಂದಿನಿಂದ ನಂದಿಯು ಶಿವನ ಪ್ರಮುಖ ವಾಹನವಾದನು ಹಾಗೂ ಶಿವನ ಎಲ್ಲಾ ಗಣಗಳಿಗೂ ನಾಯಕನಾದನು.
ಈಶ್ವರನ ದೇವಸ್ಥಾನಕ್ಕೆ ಹೋದಾಗ ಶಿವನ ದರ್ಶನದೊಂದಿಗೆ,
ನಂದಿಯ ಬಲಕಿವಿಯಲ್ಲಿ ಯಾರಿಗೆ ಕೇಳದಂತೆ ಪಿಸುಮಾತಿನಲ್ಲಿ ಮನದ ಇಷ್ಟಾರ್ಥವನ್ನು ಬೇಡಿಕೊಂಡರೆ,
ನಂದಿಯ ಮೂಲಕ ಶಿವನಿಗೆ ತಲುಪಿ ಅದು ನೆರವೇರುತ್ತದೆ ಎನ್ನುವ ಎ ನಂಬಿಕೆ ಇದೆ.
ಮೃತ್ಯುಂಜಯಾಯ ರುದ್ರಾಯ ನೀಲಕಂಠಾಯ ಶಂಭುವೇ
ಅಮೃತೇಶಾಯ ಶರ್ವಾಯ ಮಹಾದೇವಾಯ ತೇ ನಮಃ.🙏