ಗಣೇಶನಿಗೆ ವಿಶೇಷವಾಗಿ ಗರಿಕೆಯನ್ನು ಏಕೆ ಅರ್ಪಿಸಲಾಗುತ್ತದೆ…?
ಗರಿಕೆಯನ್ನು ದೂರ್ವೆ ಎಂದೂ ಕರೆಯಲಾಗುತ್ತದೆ. ಗರಿಕೆ ಬೆಳೆಯಲು ನಿರ್ದಿಷ್ಟ ಪ್ರದೇಶ ಎಂಬುದು ಇಲ್ಲ. ಇದು ಎಲ್ಲೆಂದರಲ್ಲಿ ಬೆಳೆಯುತ್ತದೆ. ಆದರೂ ಇದು ಗಣೇಶನ ಪೂಜೆಗೆ ಶ್ರೇಷ್ಠವಾಗಿದೆ. ಆಯುರ್ವೇದದ ಪ್ರಕಾರ ದೂರ್ವೆ ಅಥವಾ ಗರಿಕೆ ಹುಲ್ಲಿನ ರಸವು ಶರೀರದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಗಣಪತಿ ಪೂಜೆಗೆ ಗರಿಕೆ ಬಳಸುವುದರ ಹಿಂದೆ ಒಂದು ಪೌರಾಣಿಕ ಕಥೆ ಕೂಡಾ ಇದೆ.
ಅನಲಾಸುರ ಎಂಬ ರಾಕ್ಷಸ ಹಾಗೂ ಗಣಪತಿ ನಡುವಿನ ಯುದ್ಧ
ಅನಲಾಸುರ ಎಂಬ ರಾಕ್ಷಸ ಒಮ್ಮೆ ಸ್ವರ್ಗದಲ್ಲಿ ದೇವಾನುದೇವತೆಗಳಿಗೆ ತೊಂದರೆ ನೀಡಲು ಆರಂಭಿಸುತ್ತಾನೆ. ಇದನ್ನು ತಡೆಯಲು ಬಂದ ಎಲ್ಲರನ್ನೂ ತನ್ನ ಕಣ್ಣಿನಿಂದ ಬರುವ ಬೆಂಕಿಯಿಂದ ಸುಡುತ್ತಿದ್ದನು. ಇದರಿಂದ ಭಯಭೀತರಾದ ದೇವತೆಗಳು ಗಣೇಶನ ಮೊರೆ ಹೋಗುತ್ತಾರೆ. ಗಣೇಶ ಹಾಗೂ ಅನಲಾಸುರನ ನಡುವೆ ಯುದ್ಧ ನಡೆಯುತ್ತದೆ. ಈ ಸಮರದಲ್ಲಿ ಗಣಪತಿಯು ವಿರಾಟ ರೂಪ ತಾಳಿ ರಾಕ್ಷಸನನ್ನು ನುಂಗುತ್ತಾನೆ, ಇದರಿಂದ ಗಣೇಶನ ದೇಹದಲ್ಲಿ ಉಷ್ಣಾಂಶ ಹೆಚ್ಚಾಗಿ ಗಣೇಶ ಬಹಳ ಸಮಸ್ಯೆ ಅನುಭವಿಸುತ್ತಾನೆ. ದೇವಾನುದೇವತೆಗಳು ಏನೆಲ್ಲಾ ಪರಿಹಾರ ಹುಡುಕಿದರೂ ಗಣೇಶನಿಗೆ ಹೊಟ್ಟೆನೋವು ಕಡಿಮೆಯಾಗುವುದಿಲ್ಲ. ಗಣೇಶನ ಕಷ್ಟವನ್ನು ತಿಳಿದ ಋಷಿಗಳು ಗರಿಕೆಯನ್ನು ಗಣೇಶನ ಮೇಲಿಡುತ್ತಾರೆ. ಆಗ ಗಣೇಶನ ದೇಹದ ಉಷ್ಣಾಂಶ ಕಡಿಮೆ ಆಗಿ, ಹೊಟ್ಟೆ ನೋವು ಸುಧಾರಿಸುತ್ತದೆ. ಅಂದಿನಿಂದ ಗಣೇಶನಿಗೆ ತನ್ನ ಸಮಸ್ಯೆ ನಿವಾರಿಸಿದ ಗರಿಕೆ ಎಂದರೆ ಬಹಳ ಇಷ್ಟ. ಭಕ್ತರು ನನಗೆ ದೂರ್ವೆ ಅರ್ಪಿಸಿದರೆ ಅವರಿಗೆ ನನ್ನ ಆಶಿರ್ವಾದ ದೊರೆಯುತ್ತದೆ ಎಂದು ಗಣೇಶ ಹೇಳುತ್ತಾನೆ. ಈ ಕಾರಣದಿಂದಲೇ ಅಂದಿನಿಂದ ಗಣಪತಿ ಪೂಜೆಯಲ್ಲಿ ಗರಿಕೆ ಬಳಸಲಾಗುತ್ತದೆ ಎಂಬ ನಂಬಿಕೆ ಇದೆ.
ಗಣಪತಿಗೆ ಅಪ್ಸರೆಯ ಶಾಪ
ಪೂಜೆಯಲ್ಲಿ ಗರಿಕೆ ಬಳಸುವುದರ ಹಿಂದೆ ಮತ್ತೊಂದು ಕಥೆ ಇದೆ. ಗಣಪತಿ ಒಮ್ಮೆ ಧ್ಯಾನಮಗ್ನನಾಗಿರುತ್ತಾನೆ. ಗಣೇಶನನ್ನು ಮದುವೆಯಾಗುವ ಆಸೆಯಿಂದ ಅಪ್ಸರೆಯು ಧ್ಯಾನಭಂಗ ಮಾಡಿ ಗಣಪತಿಗೆ ಪ್ರೇಮ ನಿವೇದನೆ ಮಾಡುತ್ತಾಳೆ. ಆದರೆ ಗಣೇಶ, ಅಪ್ಸರೆಯ ಬೇಡಿಕೆ ಒಪ್ಪುವುದಿಲ್ಲ. ಇದರಿಂದ ಕೋಪಗೊಂಡ ಅಪ್ಸರೆ, ಗಣೇಶನಿಗೆ ಶಾಪ ನೀಡುತ್ತಾಳೆ. ಇದರಿಂದ ಗಣೇಶನಿಗೆ ತಡೆಯಲಾರದಷ್ಟು ದಾಹವಾಗುತ್ತದೆ. ಅದನ್ನು ತಡೆಯಲು ಗಣೇಶ, ಅಲ್ಲೇ ಇದ್ದ ಗರಿಕೆಯನ್ನು ತಲೆ ಮೇಲೆ ಧರಿಸುತ್ತಾನೆ. ನಂತರ ದಾಹ ಕಡಿಮೆಯಾಗುತ್ತದೆ. ಆದ್ದರಿಂದ ಗಣೇಶನ ಪೂಜೆಗ ದೂರ್ವೆ ಬಳಸಲಾಗುತ್ತದೆ ಎಂದು ನಂಬಲಾಗಿದೆ. ಸಾಮಾನ್ಯವಾಗಿ ಗಣೇಶನಿಗೆ 5, 7, 21 ರಂತೆ ಬೆಸ ಸಂಖ್ಯೆಯಲ್ಲಿ ಗರಿಕೆಯನ್ನು ಸಮರ್ಪಿಸಲಾಗುತ್ತದೆ. ಕೆಲವರು ಹಾರ ಮಾಡಿ ಕೂಡಾ ಹಾಕುತ್ತಾರೆ. ರಾವಣ ಕೂಡಾ ಗಣೇಶನಿಗೆ ಪ್ರತಿದಿನ ತಪ್ಪದೆ ಗರಿಕೆ ಅರ್ಪಿಸುತ್ತಿದ್ದ ಎಂದು ಪುರಾಣದಲ್ಲಿ ಉಲ್ಲೇಖವಾಗಿದೆ.
ಬಿಳಿ ಎಕ್ಕದ ಹೂವು
ಗರಿಕೆ ಜೊತೆಗೆ ಗಣೇಶನಿಗೆ ಬಿಳಿ ಎಕ್ಕದ ಹೂವನ್ನು ಕೂಡಾ ಸಮರ್ಪಿಲಾಗುತ್ತದೆ. ಪಾರ್ವತಿ ದೇವಿಯು ಶಿವನಿಗೆ ಪ್ರಿಯವಾದ ಎಕ್ಕದ ಹೂಗಳನ್ನು ಅರ್ಪಿಸಿ ಆತನನ್ನು ಒಲಿಸಿಕೊಂಡಳು ಎಂಬ ಕಥೆ ಇದೆ. ಆದ್ದರಿಂದ ಈ ಹೂವು ಗಣೇಶನಿಗೆ ಕೂಡಾ ಇಷ್ಟ. ಬಿಳಿ ಎಕ್ಕದ ಗಿಡದಲ್ಲಿ ಸಾಕ್ಷಾತ್ ಗಣೇಶ ನೆಲೆಸಿದ್ದು, ಪೂಜೆಗೆ ಇದು ಕೂಡಾ ಬಹಳ ಶ್ರೇಷ್ಠವಾದುದು. ಬಿಳಿ ಎಕ್ಕದ ಗಿಡದ ಹೂವನ್ನು ಹಾರವಾಗಿ ಗಣೇಶನಿಗೆ ಅರ್ಪಿಸಲಾಗುತ್ತದೆ. ಎಕ್ಕದ ಗಿಡವನ್ನು ಪೂಜಿಸುವುದರಿಂದ ಮನೆಯಲ್ಲಿ ಸಕಲ ತೊಂದರೆಗಳು ನಿವಾರಣೆಯಾಗಲಿದೆ. ಮಾಟ, ಮಂತ್ರ, ದುಷ್ಟಶಕ್ತಿಗಳ ತೊಂದರೆ ಕೂಡಾ ಇರುವುದಿಲ್ಲ.
ಸಂಗ್ರಹ