ಮೂಷಕ ವಾಹನ ಗಜಾನನ..!
ಸಾಮಾನ್ಯವಾಗಿ ಎಲ್ಲಾ ದೇವರುಗಳಿಗೂ ಒಂದೊಂದು ವಾಹನವಿರುತ್ತದೆ.
ವಿಷ್ಣುವಿಗೆ ಗರುಡ, ಲಕ್ಷ್ಮಿಗೆ ಗೂಬೆ, ಶಿವನಿಗೆ ನಂದಿ, ಪಾರ್ವತಿಗೆ ಸಿಂಹ, ಬ್ರಹ್ಮನಿಗೆ ಹಂಸ, ಸರಸ್ವತಿಗೆ ಬಿಳಿ ಹಂಸ, ಲಕ್ಷ್ಮಿಗೆ ಗೂಬೆ, ಸುಬ್ರಮಣ್ಯನಿಗೆ ನವಿಲು, ಇಂದ್ರನಿಗೆ ಐರಾವತ, ಸೂರ್ಯನಿಗೆ ಸಪ್ತಾಶ್ವಗಳ ರಥ, ಕುಬೇರನಿಗೆ ಪುಷ್ಪಕ ವಿಮಾನ, ಶನಿಗೆ ಕಾಗೆ, ಯಮನಿಗೆ ಎಮ್ಮೆ, ಹೀಗೆ ಇನ್ನು ಹಲವಾರು
ದೇವಾನು ದೇವತೆಗಳು ಪ್ರಾಣಿ-ಪಕ್ಷಿಗಳನ್ನು ವಾಹನ ಮಾಡಿಕೊಂಡಿದ್ದಾರೆ. ದೇವರುಗಳು ಪಶು ಪಕ್ಷಿಗಳನ್ನೇ ಅವರ ವಾಹನ ಮಾಡಿಕೊಳ್ಳಲು ಕಾರಣ ಗಳು ಇದೆ. ಪ್ರಥಮ ಪೂಜಕ ಡೊಳ್ಳು ಹೊಟ್ಟೆಯ ಗಣೇಶನ ವಾಹನ ಸಣ್ಣ ಪ್ರಾಣಿ ‘ಮೂಷಿಕ’ ವಾಹನವಾದ ಕಥೆ.
ಒಮ್ಮೆ ದೇವಲೋಕದಲ್ಲಿ ಇಂದ್ರನ ಸಭೆ ನಡೆಯುತ್ತಿತ್ತು. ಸಭೆಯಲ್ಲಿ ದೇವತೆಗಳು, ಋಷಿಮುನಿಗಳು ಸೇರಿದ್ದರು. ಅಲ್ಲಿ ವಾಮದೇವ ಎಂಬ ಮಹರ್ಷಿಗಳು ಉಪಸ್ಥಿತರಿದ್ದರು. ಇಂದ್ರನ ಸಭೆ ಅಂದಮೇಲೆ ನೃತ್ಯ -ಗಾನ ಎಲ್ಲವೂ ಮೇಳೈಸಿರುತ್ತದೆ. ಅರ್ಧ ರಾಕ್ಷಸ ಗುಣ ಅರ್ಧ ದೇವಗುಣ ಇರುವ ‘ಕ್ರೌಂಚ ‘ಎಂಬ ಗಂಧರ್ವನು ಆ ಸಭೆಗೆ ಆಗಮಿಸುತ್ತಾನೆ. ಇವನು ಶಿವಭಕ್ತನಾಗಿದ್ದು ಶಿವನನ್ನು ಕುರಿತು ತಪಸ್ಸು ಮಾಡಿ ವರವನ್ನು ಪಡೆದಿದ್ದನು ಆ ವರದಂತೆ ಅವನಿಗೆ ದೇವತೆಗಳಿಂದ, ರಾಕ್ಷಸರಿಂದ, ಮನುಷ್ಯರಿಂದ ಯಾವುದೇ ರೀತಿ ಯಲ್ಲಿ ಸೋಲಾಗಬಾರದು ಎಂಬುದು. ಶಿವನು ‘ವರ’ ಕೊಟ್ಟು , ಒಂದು ವೇಳೆ ನೀನು ಅಹಂಕಾರಪಟ್ಟರೆ ಅದರಿಂದ ನೀನು ತೊಂದರೆ ಪಡುವೆ ಎಂದು ಎಚ್ಚರಿಕೆ ಕೊಟ್ಟಿದ್ದನು. ಒಳ್ಳೆಯ ಸಂಗೀತಗಾರ ಮತ್ತು ಸ್ಫುರದ್ರೂಪಿಯೂ ಆಗಿದ್ದು ಅವನಿಗೆ ಶಿವನು ಕೊಟ್ಟ ವರ ಸೇರಿ ಸಹಜವಾಗಿಯೇ ಅಹಂಕಾರ ಬಂದಿತು.
ಇಂದ್ರನ ಸಭೆಗೆ ಬಂದಾಗ ಜಂಭದ ಅಮಲಿನಲ್ಲಿ ತಿಳಿಯದೆ ವಾಮನ ಮಹರ್ಷಿ ಕಾಲನ್ನು ತುಳಿದನು. ವಾಮ ಮಹರ್ಷಿಗೆ ಕೋಪ ಬಂದು, ಎಲ್ಲೋ ನೋಡುತ್ತಾ ನನ್ನ ಕಾಲು ತುಳಿದೆಯಾ? ನೆಲ ನೋಡಿ ನಡೆಯದೆ ಅಹಂಕಾರ ದಿಂದ ನಡೆದು ಬಂದು ನನ್ನ ಕಾಲು ತುಳಿದಿರುವ ಕಾರಣ ನೀನು ಶಿಲಾಭೇದಿಸಿ ಹುಡುಕುವ ಇಲಿಯ ಹಾಗೆ ಒಂದು ಇಲಿಯಾಗು ಎಂದು ಕ್ರೌಂಚನಿಗೆ ಶಾಪ ಕೊಟ್ಟರು. ಸ್ವಲ್ಪ ಹೊತ್ತಿಗೆ ವಾಮ ಮಹರ್ಷಿಗಳ ಸಿಟ್ಟು ಕಡಿಮೆಯಾಯಿತು. ಮುನಿಗ ಳ ಶಾಪಕ್ಕೆ ಹೆದರಿದ ಕ್ರೌಂಚ ವಿನಯದಿಂದ, ಸ್ವಾಮಿ ಇದರಲ್ಲಿ ನನ್ನ ತಪ್ಪೇನು ಇಲ್ಲ ನಾನು ನೋಡದೇ ಬರುತ್ತಿದ್ದೆ ಆಕಸ್ಮಿಕವಾಗಿ ಆಗಿದ್ದು ಎಂದನು. ಸಮಾಧಾನವಾಗಿದ್ದ ವಾಮ ಋಷಿ ನೀನು ಚಿಂತೆ ಮಾಡಬೇಡ, ಹೀಗೆಲ್ಲಾ ಆಗಿದ್ದು ಭಗವಂತನ ಇಚ್ಛೆ. ಇಲಿಯ ರೂಪದಲ್ಲಿದ್ದರೂ ನಿನ್ನನ್ನು ಮುಂದೆ ದೇವತೆಗಳು, ಮಾನವರು, ದಾನವರು, ಎಲ್ಲರೂ ಪೂಜಿಸಿ ನಿನಗೆ ತಲೆಬಾಗುತ್ತಾರೆ ಎಂದು ಹರಸಿದರು.
ಇಲಿಯಾದ ಕ್ರೌಂಚನು ತನ್ನ ಸ್ವಭಾವದಂತೆ ಅಹಂಕಾರದಿಂದ ತನ್ನ ದೇಹವನ್ನು ಹಿಗ್ಗಿಸಿಕೊಂಡು ಪರ್ವತದಂತೆ ಬೆಳೆದು ಇಲಿಗಳು ಮಾಡುವ ಚೇಷ್ಟೆಯಂತೆ. ಸಿಕ್ಕಸಿಕ್ಕ ಕಡೆಗೆಲ್ಲ ನುಗ್ಗಿ ಹಾಳು ಮಾಡಿ ಅರಿಗು ತೊಂದರೆ ಕೊಡ ಹತ್ತಿದನು ಪರ್ವತಗಳನ್ನೇ ಕಡಿದು ಕಡಿದು ಪುಡಿ ಮಾಡಿದ ಹೀಗೆ ಪರ್ವತ ಗಿರಿ ಶಿಖರ ಗಳನ್ನು ಧ್ವಂಸಮಾಡುತ್ತಾ ಋಷಿಮುನಿಗಳು ನೆಲೆಸಿದ್ದ ಕಾಡಿನ ಹಲವು ಆಶ್ರಮಗಳನ್ನು ಹಾಳುಮಾಡಿದ. ಹಾಗೆ ಪರಾಶರ ಮಹರ್ಷಿಗಳ ಕುಟೀರಕ್ಕೂ ನುಗ್ಗಿ ಹಾಳು ಮಾಡಿದ. ಇದನ್ನು ನೋಡಿದ ಪರಾಶರ ಮಹರ್ಷಿಗಳು ದುಷ್ಟ ಮೂಷಿಕಗೆ ಬುದ್ಧಿ ಕಲಿಸ ಬೇಕೆಂದು ಪರಮೇಶ್ವರನ ಬಳಿ ಬಂದು ಹೇಳಿದರು.
ಎಲ್ಲವನ್ನು ಅರಿತ ಪರಮೇಶ್ವರನು ಮೂಷಿಕನ ಅಹಂಕಾರ ಮುರಿಯುವಂತೆ ಗಣೇಶನಿಗೆ ಹೇಳಿದನು. ಕೈಯಲ್ಲಿ ಒಂದು ಹಗ್ಗ ಹಿಡಿದು ಬಂದ ಗಣೇಶ
ಇಲಿಯ ಮೇಲೆ ಬೀಸಿದನು. ಆ ಹಗ್ಗ ಬಹಳ ಉದ್ದವಿದ್ದುದರಿಂದ ಇಲಿ
ಪಾತಾಳಕ್ಕೆ ನೆಗೆಯಿತು. ಆದರೆ ಗಣೇಶ ಹಗ್ಗವನ್ನು ರಭಸದಿಂದ ಒಂದೇ ಸಲಕ್ಕೆ
ಎಳೆದಾಗ ‘ಇಲಿ’ ಜೊತೆಯಲ್ಲೇ ಬಂದು ಗಣೇಶನ ಪಾದ ಬುಡದಲ್ಲಿ ಬಿದ್ದಿತು.
ಗಣೇಶ ಕೇಳಿದ, ಮೂಷಕ ನೀನೇಕೆ ಜನಗಳಿಗೆ, ಋಷಿಮುನಿಗಳಿಗೆ ಕಾಟ ಕೊಡುತ್ತಿರುವೆ ಎಂದು ಕೇಳಿದಾಗ, ಮೂಷಿಕ ಅದಕ್ಕೆ ಉತ್ತರ ಕೊಡದೆ ಗಣೇಶನ ಪಾದಕ್ಕೆ ತಲೆಬಾಗಿತು. ಶರಣು ಬಂದ ನಿನಗೆ ನಾನು ರಕ್ಷಣೆ ಕೊಡುವೆ ಎಂದ ಗಣೇಶ ಇಲಿಯ ಮೇಲೆ ಹತ್ತಿ ಕುಳಿತ. ಗಣೇಶ ಕುಳಿತ ಭಾರಕ್ಕೆ ಕ್ರೌಂಚ ನಿಗೆ ಉಸಿರು ಕಟ್ಟಿದಂತಾಗಿ ಇನ್ನೇನು ಸತ್ತೇ ಹೋಗುವೆ ಎಂಬಂತೆ ಒದ್ದಾಡಿತು. ಹಿಂಸೆ ತಾಳಲಾರದೆ ಗಣೇಶ ನಿನ್ನ ಭಾರ ಹೆಚ್ಚಾಗಿದೆ ನನಗೆ ಆಗುವುದಿಲ್ಲ ಎಂದಿತು. ಈಗ ಅದರ ಅಹಂಕಾರ ಅಳಿದುವುದನ್ನು ತಿಳಿದ ಗಣೇಶ ತನ್ನ ದೇಹವನ್ನು ಹಗುರ ಮಾಡಿಕೊಂಡನು. ಮೂಷಕ ಸದ್ಯ ಗಣೇಶನಿಂದ ಬದುಕಿದೆನಲ್ಲ ಎಂದು ಗಣೇಶನಿಗೆ ತಲೆಬಾಗಿತು ಅಂದಿನಿಂದ ‘ಮೂಷಕ’ ಗಣೇಶನ ವಾಹನವಾಯಿತು.
ಈ ಕುರಿತು ಇನ್ನು ಒಂದು ಕಥೆ ಇದೆ. ಹಿಂದೆ ಗಜಮುಖಾಸುರ ಎಂಬ ರಾಕ್ಷಸನಿದ್ದ. ಬಲಶಾಲಿಯಾಗಿದ್ದ ಅವನು ಮೂರು ಲೋಕಗಳಿಗೂ ತಾನೇ ಒಡೆಯನಾಗಬೇಕೆಂದು, ಎಲ್ಲರೂ ತನ್ನನ್ನೇ ಪೂಜಿಸ ಬೇಕು ಎಂದು ಅಂದುಕೊಂಡು ಕಾಡಿಗೆ ಹೋಗಿ ಶಿವನನ್ನು ಕುರಿತು ಕಠಿಣ ತಪಸ್ಸು ಮಾಡಿದ. ಶಿವನು ಪ್ರತ್ಯಕ್ಷನಾಗಿ ಯಾವ ವರ ಬೇಕು ಎಂದು ಕೇಳಿದ. ಗಜಮುಖ ತಾನು ಬಹಳ ಬಹಳಶಾಲಿಯಾಗಬೇಕು, ಯಾರಿಂದಲೂ ಯಾವುದೇ ಅಸ್ತ್ರಶಸ್ತ್ರ ಗಳಿಂದಲೂ ನನಗೆ ಸಾವು ಬರಬಾರದು ಎಂದು ಶಿವನನ್ನು ಕೇಳಿದ. ಶಿವನು ತಥಾಸ್ತು ಎಂದು ವರ ಕೊಟ್ಟ. ವರ ಕೊಡುವಾಗ ನೋಡು ನೀನು ಅಹಂಕಾರ ದಿಂದ ಮೆರೆದಾಗ ನಿನಗೆ ತೊಂದರೆ ಆಗುತ್ತದೆ ಎಂದು ಎಚ್ಚರಿಕೆ ಕೊಟ್ಟು ಅದೃಶ್ಯನಾದನು. ಮೊದಲೇ ರಾಕ್ಷಸನಾಗಿದ್ದ ಗಜಾಸುರ ಶಿವನ ವರ ದ ಬಲದಿಂದ ಹೆಚ್ಚು ಅಹಂಕಾರ ಪಡತೊಡಗಿದ ಮತ್ತು ಎಲ್ಲರಿಗೂ ತೊಂದರೆ ಕೊಡುತ್ತಾನೆ. ದೇವತೆಗಳೆಲ್ಲ ಶಿವನ ಮೊರೆ ಹೋದಾಗ, ಶಿವನು ಗಜಮುಖ ನನ್ನು ಸೋಲಿಸಲು ಹೊರಟನು. ಆಗ ಗಣೇಶ ಮುಂದೆ ಬಂದು ತಂದೆಗೆ ತಾನೇ ಹೋಗುವುದಾಗಿ ಹೇಳಿ ಶಿವನ ಆಶೀರ್ವಾದ ತೆಗೆದುಕೊಂಡು ಹೊರಟನು. ಗಣೇಶ ಬಂದು ಗಜಾಸುರನಿಗೆ ಸಾಕಷ್ಟು ಬುದ್ಧಿ ಹೇಳಿದ ಆದರೆ ಕೇಳಲಿಲ್ಲ. ಆಗ ಗಣೇಶನು ಅಸುರನ ಮೇಲೆ ಯುದ್ಧ ಮಾಡುತ್ತಾನೆ ಅಸುರ ಸೋಲುತ್ತಾನೆ. ದೇಹದ ತುಂಬಾ ಗಾಯಗಳಾಗಿ ಕೆಳಗೆ ಬೀಳುತ್ತಾನೆ. ಆದರೂ ತಲೆಬಾಗುವುದಿಲ್ಲ ತನ್ನ ಮಾಯಾಶಕ್ತಿಯಿಂದ ಇಲಿಯಾಗಿ ಗಣೇಶನಿಗೆ ತಿಳಿಯದಂತೆ ಕಾಲಿನ ಕೆಳಗೆ ಬಂದು ಕಚ್ಚಲು ಶುರು ಮಾಡಿದ. ಗಣೇಶ ಆ ಮೂಷಿಕನ ಮೇಲೆ ಭಾರವಾಗಿ ಕುಳಿತುಕೊಳ್ಳುತ್ತಾನೆ ಆ ಭಾರಕ್ಕೆ ಮೂಷಿಕ ತತ್ತರಿಸುತ್ತದೆ. ಗಣೇಶ ನಲ್ಲಿ ಪ್ರಾರ್ಥಿಸಿ ನನ್ನ ಮೇಲಿರುವ ಭಾರವನ್ನು ಕಡಿಮೆ ಮಾಡಿ ನನ್ನನ್ನು ನಿನ್ನ ವಾಹನವನ್ನಾಗಿ ಮಾಡಿಕೋ ಎಂದು ಬೇಡಿತು. ಶರಣಾಗತನಾಗಿ ಬಂದ ಮೂಷಿಕನ ಹಾಕಿದ ಭಾರ ತಗ್ಗಿಸಿ ಹಗುರ ಮಾಡಿ ಅದಕ್ಕೆ ತೊಂದರೆ ತಪ್ಪಿಸಿದನು. ಅಂದಿನಿಂದ ಅದನ್ನೇ ತನ್ನ ವಾಹನವನ್ನಾಗಿ ಮಾಡಿಕೊಂಡನು. ಕ್ರಮೇಣ ಗಣೇಶ ಮತ್ತು ಮೂಷಕ ಗೆಳೆಯರಾದರು.
ಗಣೇಶ ಗಾಯತ್ರಿ ಮಂತ್ರ:-
ಓಂ ತತ್ಪುರುಷಾಯ ವಿದ್ಮಹೇ
ವಕ್ರತುಂಡಾಯ ದೀಮಹಿ !
ತನ್ನೋ ದಂತಿ: ಪ್ರಚೋದಯಾತ್ !!
ವಂದನೆಗಳೊಂದಿಗೆ,
ಬರಹ :- ಆಶಾ ನಾಗಭೂಷಣ.