ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಶಿರಸಿ ಶ್ರೀ ಮಾರಿಕಾಂಬೆ ಕ್ಷೇತ್ರ ಮಹಾತ್ಮೆ ಹಾಗೂ ಸ್ಥಳ ಪುರಾಣ

ಸಿರಸಿಯ ಸಿರಿ ಮಾರಿಕಾಂಬೆ

ಕರ್ನಾಟಕದ ಉತ್ತರಕನ್ನಡ ಜಿಲ್ಲೆಯ ಸುಂದರ ಮಲೆನಾಡಿನ ಶ್ರೀಮಂತ ಸಂಸ್ಕೃತಿಯ ಪುಟ್ಟ ನಗರ ಸಿರಸಿ. ಘಟ್ಟ ಪ್ರದೇಶದ ಶಿರೋಭಾಗದಲ್ಲಿರುವುದರಿಂದ “ಸಿರಸಿ” ಎಂದು ಹೆಸರುವಾಸಿ. ಅರಣ್ಯ, ನದಿ, ಜಲಪಾತಗಳು, ತೋಟ,
ಹಸಿರುಸಿರಿಗಳ ಮಧ್ಯೆ ಇರುವ ಸಿರಸಿ ಎಂದರೆ ತಕ್ಷಣ ನೆನಪಾಗುವುದು “ಸಿರಸಿ ಮಾರಿಯಮ್ಮ” ಎಂದು ಖ್ಯಾತಿಯಾದ ಜಗನ್ಮಾತೆ “ಶ್ರೀ ಮಾರಿಕಾಂಬೆ”.
ಸುಂದರ ಕುಸುರಿಗಳಿರುವ ಬೆಳ್ಳಿಯ ದ್ವಾರಗಳಿಗೆ ನಮಿಸಿ, ಗುಡಿಯೊಳಗೆ ಅಡಿಯಿಟ್ಟರೆ ಮೈ ಮರೆಯುವ ರೋಮಾಂಚನ. ಸರ್ವಾಲಂಕೃತ ದೇವೀ ವಿಗ್ರಹ, ಗರ್ಭಗುಡಿಯ ಸೌಂದರ್ಯ, ಘಂಟೆ-ಜಾಗಟೆಗಳ ಸದ್ದಿಗೆ ಭಕ್ತನ ಮೈ-ಮನಸ್ಸು ಪುಳಕಗೊಳ್ಳುತ್ತದೆ.

ಭರತಖಂಡದ ಪ್ರಮುಖ ಶಕ್ತಿಪೀಠಗಳಲ್ಲಿ ಒಂದಾದ ಮಾರಿಕಾಂಬೆಯ ಪೀಠವನ್ನು, ಧಾರವಾಡದ ಹಾನಗಲ್, ಅಂದರೆ ಅಂದಿನ ವಿರಾಟನಗರದಿಂದ ತಂದಿರುವ ಬಗ್ಗೆ ಮಹಾಭಾರತದಲ್ಲಿ ಉಲ್ಲೇಖವಿದೆ. ಅಜ್ಞಾತವಾಸದಲ್ಲಿದ್ದ ಧರ್ಮರಾಜನು ವಿರಾಟನಗರಕ್ಕೆ ಬಂದು,
ಲೋಕಕಲ್ಯಾಣಾರ್ಥವಾಗಿ ದುರ್ಗೆಯನ್ನು ಪ್ರಾರ್ಥಿಸುತ್ತಾನೆ.
ವಿರಾಟ ನಗರಂ ರಮ್ಯಂ
ಗಚ್ಛಮಾನೋ ಯುಧಿಷ್ಠಿರಃ |
ಅಸ್ತುವನ್ ಮನಸಾ ದೇವೀಂ
ದುರ್ಗೀಂ ತ್ರಿಭುವನೇಶ್ವರೀಂ ||
ಚಾಲುಕ್ಯನ ಶಾಸನಗಳಲ್ಲಿ “ವಿರಾಟನ ಕೋಟೆ” ಎಂದಿದ್ದು, “ಕುಂತಿ ದಿಬ್ಬ” ಎಂದು ಹೇಳಲಾಗುವ ಸ್ಥಳವೇ “ಶ್ರೀದೇವಿ” ಕುಳಿತುಕೊಂಡ ಭುವನೇಶ್ವರೀ ಪೀಠ ಆಗಿತ್ತೆಂದು ಹೇಳಲಾಗಿದೆ.

ಹಾನಗಲ್ ನ ಬಂಕಾಪುರ ಜಿಲ್ಲೆಗೆ ಮೊಗಲರ ದಂಡು ದಾಳಿಯಿಟ್ಟು ಸ್ಥಳೀಯರಿಗೆ ಊರು
ಬಿಟ್ಟು ಹೋಗುವಂತೆ ಆಜ್ಞೆ ಮಾಡಿತು. ಆ ಸಮಯದಲ್ಲಿ, ದೇವಿಯನ್ನಿರಿಸಿ ಅರಗಿನ ಮುದ್ರೆ ಹಾಕಿದ ಧನ-ಕನಕಗಳ ಪೆಟ್ಟಿಗೆಯನ್ನು ಕಳ್ಳರು ಅಪಹರಿಸಿ, ದೇವಿಯ ಮೂರ್ತಿಯನ್ನು ಸಿರಸಿಯ ಕೋಟೆಕೆರೆಯಲ್ಲಿ ಮುಳುಗಿಸಿ ಹೋಗಿದ್ದರು. ತಾವು ದೇವರ ಸಂತತಿಯವರು ಎಂದು ಹೇಳಿಕೊಳ್ಳುವ ಅಸಾದಿ ಧರ್ಮದ “ಬಸವ” ಎಂಬ ದೇವೀ ಭಕ್ತ ಪ್ರತಿವರ್ಷ ಚಂದ್ರಗುತ್ತಿ ದ್ಯಾಮವ್ವನ ಜಾತ್ರೆಗೆ ಹೋಗಿ, ದೇವಿಯ ಸೇವೆ ಮಾಡುತ್ತಿರುವಾಗ, ಗುತ್ತಿಯ ಜನ ಆತನನ್ನು ಸೀಮೆಗೆ ಬರದಂತೆ ತಡೆದು ಅವಮಾನ ಮಾಡುತ್ತಾರೆ. ನಂತರದಲ್ಲಿ ಆತ ಸಿರಸಿಯಲ್ಲಿಯೇ ದೇವಿಯ ಆರಾಧನೆ ಮಾಡಿಕೊಂಡಿದ್ದ. ಒಂದು ದಿನ ಆತನ ಕನಸಿನಲ್ಲಿ “ನಾನು ದ್ಯಾಮವ್ವ , ನಿಮ್ಮೂರ ಕೆರೆಯಲ್ಲಿ ಇದ್ದೇನೆ, ತೆಗೆಯಿರಿ” ಎಂದು ಹೆಣ್ಣು ಧ್ವನಿಯೊಂದು ಕೇಳಿಸಿದಂತಾಗಿ, ಊರ ಪ್ರಮುಖರಲ್ಲಿ ಹೇಳಿಕೊಂಡ. ಅಸಾದಿ ಬಸವನ ಕನಸು ನಿಜವಾಗಿತ್ತು. ಹಾಗೆ ಸಿಕ್ಕಿದ ದೇವಿಯ ವಿಗ್ರಹವು 1689 ರ ಶುಕ್ಲ ಸಂವತ್ಸರದ ವೈಶಾಖ ಶುದ್ಧ ಅಷ್ಟಮಿ, ಮಂಗಳವಾರದಂದು “ಸಿರ್ಸಿ ಮಾರಿಕಾಂಬಾ ದೇವಿ” ಯಾಗಿ ಪ್ರತಿಷ್ಠಿತವಾಯಿತು.

  ಹೋಳಿ ಹುಣ್ಣಿಮೆ - ಪುರಾಣ ಕಥೆ

ದೇವಿಯ ಮಹಿಮೆ ಸುತ್ತಲ ಸೀಮೆಗಳಲ್ಲಿ ಖ್ಯಾತಿಯಾಗಿ, ದೇವಿಯ ಭಂಡಾರಕ್ಕೆ ಭಕ್ತರಿಂದ ದಿನನಿತ್ಯ ಕಾಣಿಕೆ, ಧನಕನಕಗಳ ಪ್ರವಾಹವೇ ಹರಿದು ಬಂತು. ಆಗ ಪುಟ್ಟದಾದ ಬಿಡಾರವಾಗಿದ್ದು, 1760 ರ ಸುಮಾರಿಗೆ ಗರ್ಭಗುಡಿ- ಶಿಖರ, ರಂಗಮಂಟಪ ಮತ್ತು ಚಂದ್ರಶಾಲೆಯನ್ನು ದೇವಿಯ ನಿಧಿಯಿಂದಲೇ ಕಟ್ಟಲಾಯಿತೆಂದು ಐತಿಹ್ಯಗಳಿವೆ. ಇತ್ತೀಚೆಗೆ ದೇವಾಲಯವನ್ನು ಸಕಲ ಸೌಕರ್ಯಗಳಿಂದ ನವೀಕರಿಸಲಾಗಿದ್ದು ಸುತ್ತಗೋಡೆಗಳ ಮೇಲೆ, ದೇವಿಯ ಚರಿತ್ರೆಯನ್ನು ಹೇಳುವ ಜಾನಪದ ಸೊಗಡಿನ ಕಾವಿಕಲೆಗಳು, ಗುಡಿಯ ಶಿಖರದ ಮೇಲಿರುವ ಸಿಂಹಗಳು, ಮಹಾದ್ವಾರದಲ್ಲಿ ಬೃಹದಾಕಾರದ ಎರಡು ಆನೆಗಳು, ಭೂತರಾಜನ ಗುಡಿ ಹಾಗೂ ಎದುರಲ್ಲಿ ಮಹಾಗಣಪತಿ, ಹನೂಮಾನ ಗುಡಿಗಳು ದೇವಾಲಯದ ಶೋಭೆಯನ್ನು ಹೆಚ್ಚಿಸಿವೆ. ಸನಿಹದಲ್ಲಿಯೇ ಸುಂದರವಾದ ಕೋಟೆಕೆರೆಯಿದೆ. ದೇವಾಲಯದ ಭವ್ಯತೆ, ಶುಚಿತ್ವ , ಸೌಂದರ್ಯದಿಂದಾಗಿ ಪ್ರಸಿದ್ಧ ಧಾರ್ಮಿಕ ಸ್ಥಳವಾಗಿ ಹೆಸರು ಗಳಿಸಿದೆ.

  ಹಸಿವು ಮತ್ತು ಶ್ರೀಮಂತರ ಕತೆ

ಭಾರತದ ಎಲ್ಲೆಡೆಯಿಂದ ಭಕ್ತರು ಜಾತಿ-ಮತ-ಧರ್ಮ ಭೇದವಿಲ್ಲದೇ
ಶ್ರೀ ಮಾರಿಕಾಂಬೆಯ ದರ್ಶನ ಪಡೆದು ಧನ್ಯರಾಗುತ್ತಾರೆ. ಸಿರಸಿ ಮಾರಿಯಮ್ಮ, ದುರ್ಗಾದೇವಿ, ಭುವನೇಶ್ವರಿ, ಮಹಿಷಾಸುರ ಮರ್ದಿನಿ, ಸಿಂಹವಾಹಿನಿ ಎಂದು ಹಲವು ಹೆಸರುಗಳಿಂದ ಕರೆಯಲ್ಪಡುವ ಮಾರಿಕಾಂಬಾ ದೇವಿ
ರಕ್ತಚಂದನದ ಕಟ್ಟಿಗೆಯಿಂದ ಕಡೆದ ಅಷ್ಟ ಭುಜಗಳುಳ್ಳ ಏಳಡಿ ಎತ್ತರದ ಕಲಾತ್ಮಕ ಕಾಷ್ಠವಿಗ್ರಹ. ಕೆಂಪು ಮೈ ಬಣ್ಣದ ವಿಗ್ರಹ ಇಡೀ ಗರ್ಭಗುಡಿಯನ್ನು ತುಂಬಿ ಕಣ್ಮನ ಸೆಳೆದು, ಭಕ್ತರನ್ನು ಭಾವಪರವಶರನ್ನಾಗಿ ಮಾಡುತ್ತದೆ. ತೇಜೋಪುಂಜವಾಗಿ ಮುಖಾರವಿಂದದಲ್ಲಿ ಮೂಡಿದ ವಿಶಿಷ್ಟ ಮಂದಹಾಸ, ಪ್ರಭಾವೀ ಕಣ್ಣುಗಳು ದರ್ಶನ ಮಾಡಿದವರಲ್ಲಿ ಧನ್ಯತೆಯನ್ನುಂಟುಮಾಡುತ್ತವೆ.
ಶಕ್ತಿವಿಗ್ರಹಗಳಲ್ಲಿ ಇರಬೇಕಾದ ಸಕಲ ಗುಣಗಳು ಶ್ರೀದೇವಿಯಲ್ಲಿ ಸಂಪೂರ್ಣ ಸಮ್ಮಿಳಿತವಾಗಿದೆ. ಅಷ್ಟಭುಜಗಳುಳ್ಳ ದೇವಿ, ವಿವಿಧ ಶಕ್ತಿಗಳನ್ನು ಸಂಕೇತಿಸುವ ಆಯುಧಗಳ‌ನ್ನು ಧರಿಸಿ ಸಿಂಹವಾಹನೆಯಾಗಿರುವಳು. ದೇವಿಯ ವಿಗ್ರಹದಲ್ಲಿ ಕಾಣುವ ಬಲಮುರಿ ಶಂಖವೇ ಶಿರಸಿಯ ವೈಭವ ಹಾಗೂ ಸಂಪನ್ಮೂಲಕ್ಕೆ ಕಾರಣವೆಂದು ಭಾವುಕ ಭಕ್ತರ ನಂಬಿಕೆ. ದೇವಿಯ ರತ್ನಖಚಿತ ಕಿರೀಟ ಹಾಗೂ ಬೆಳ್ಳಿಯ ಪಲ್ಲಕ್ಕಿಯ ಕುಸುರಿ ಕೆಲಸ ಕೂಡ ಬೆರಗುಗೊಳಿಸುತ್ತವೆ. ಎರಡು ವರ್ಷಕ್ಕೊಮ್ಮೆ ದೇವಿಯ ಜಾತ್ರೆ , ಪ್ರತಿವರ್ಷ ನವರಾತ್ರಿ ವೈಭವ, ಧಾರ್ಮಿಕ ಹಬ್ಬಗಳು ನಿಯಮದಂತೆ ನಡೆಯುತ್ತವೆ. ಕೆಂಪು ಹಳದಿ ಬಣ್ಣಗಳು ಶ್ರೀದೇವಿಗೆ ಶ್ರೇಷ್ಠ‌. ಮಾರಿಕಾಂಬೆಗೆ ದಿನವೂ ಮೂರು ಹೊತ್ತು ಅರ್ಚನೆ, ಪೂಜೆ, ಆರತಿ, ನಿತ್ಯಸೇವೆ, ನಿತ್ಯ ಅನ್ನದಾನ ಸೇವೆ ನಿಯಮದಂತೆ ನಡೆಯುತ್ತವೆ. ಇಷ್ಟಾರ್ಥ ಸಿದ್ಧಿಗಾಗಿ ಹಲವು ಹರಕೆಗಳ ಜೊತೆಯಲ್ಲಿ ಹೂವಿನ ಸರ್ವಾಲಂಕಾರ ಸೇವೆ ಹಾಗೂ ಮುತ್ತೈದೆ ಭಾಗ್ಯಕ್ಕಾಗಿ ಉಡಿ ಸೇವೆಗಳು ಇಲ್ಲಿ ವಿಶೇಷ. ದುಷ್ಟ ಶಿಕ್ಷಕಳಾಗಿ, ಶಿಷ್ಟ ರಕ್ಷಕಳಾದ
ಮಾರಿಕಾಂಬೆಯ ಕೃಪಾಕಟಾಕ್ಷದಿಂದ ಈ ನಾಡು, ನೆಲ ಧನ್ಯ.
ರಕ್ತದಂತಳೆ ರಕ್ತ ವರ್ಣಳೆ
ರಕ್ತ ವ‌ಸ್ತ್ರ ಸುಶೋಭಿತೇ l
ರಕ್ತಬೀಜಾಸುರ ನಿವಾರಿಣಿ
ರಕ್ತ ಚಂದನ ಲೇಪಿತೇ ll

ಕರುಣಿಸು ಜಗದಂಬೆ, ಶ್ರೀ ಮಾರಿಕಾಂಬೆ

              

Leave a Reply

Your email address will not be published. Required fields are marked *

Translate »