ಹಿರಿಯ ಮತ್ತು ಕಿರಿಯ ಝೆನ್ ಸನ್ಯಾಸಿಗಳು ಒಂದು ಮಾರ್ಗವನ್ನು ಒಟ್ಟಿಗೆ ಹಾದು ಹೋಗುತ್ತಿರುವಾಗ ಅವರು ಬಲವಾದ ಪ್ರವಾಹದಿಂದ ತುಂಬಿ ಹರಿಯುತ್ತಿರುವ ನದಿಯನ್ನು ದಾಟುವಂತ ಸಂದರ್ಭ ಬರುತ್ತದೆ. ಅವರು ದಾಟಲು ಸಿದ್ಧತೆ ಮಾಡುವಾಗ ಆ ಪ್ರವಾಹದ ನದಿ ನೀರನ್ನು ದಾಟಿಸುವಂತೆ ಸಹಾಯದ ಅಗತ್ಯ ಕೇಳುತ್ತಿರುವ ಯುವ, ಸುಂದರ ಅಸಹಾಯಕ ಮಹಿಳೆಯನ್ನು ನೋಡುತ್ತಾರೆ. ಆಕೆ ಸನ್ಯಾಸಿಗಳನ್ನು ಗಮನಿಸಿ ಸಹಾಯಕ್ಕಾಗಿ ಕೇಳುತ್ತಾಳೆ. ಹಿರಿಯ ಸನ್ಯಾಸಿ ಮಹಿಳೆಯನ್ನು ತನ್ನ ಭುಜದ ಮೇಲೆ ಹೊತ್ತುಕೊಂಡು ನದಿಯನ್ನು ದಾಟುತ್ತಾರೆ ಮತ್ತು ಅವಳನ್ನು ನದಿಯ ಆಚೆ ದಡದಲ್ಲಿ ನಿಧಾನವಾಗಿ ಕೆಳಗೆ ಬಿಡುತ್ತಾರೆ. ಇದನ್ನು ಗಮನಿಸಿದ ಕಿರಿಯ ಸನ್ಯಾಸಿ ಸಂಪೂರ್ಣವಾಗಿ ಅಸಮಾಧಾನಗೊಂಡರು ಕೂಡಲೇ ಏನು ಮಾತನಾಡುವುದಿಲ್ಲ.
ಕೆಲವು ಗಂಟೆಗಳ ನಂತರ ಹಿರಿಯ ಸನ್ಯಾಸಿ ಕಿರಿಯ ಸನ್ಯಾಸಿಯ ಚಡಪಡಿಕೆಯನು ಗಮನಿಸಿ ಕೇಳುತ್ತಾರೆ “ನಿಮ್ಮ ಮನಸ್ಸಿನಲ್ಲಿ ಏನೋ ಹೇಳಬೇಕಂದುಕೊಂಡಿದ್ದು , ಹೇಳಲಾಗದೆ ಒದ್ದಾಡುತಿರುವಂತಿದೆ, ಅದು ಏನೆಂದು ವಿಚಾರಿಸಬಹುದೇ ? “. ಜೂನಿಯರ್ ಸನ್ಯಾಸಿ ಆ ಪ್ರಶ್ನೆಗೆ ನೇರವಾಗಿ ತಮ್ಮ ಮನಸಿನಲಿದ್ದ ಸಂಶಯವನ್ನು ಹೇಳುತ್ತಾರೆ: “ನಾವು ಅಪ್ಪಟ ಸನ್ಯಾಸಿಗಳು , ನಮಗೆ ಮಹಿಳೆ ಸ್ಪರ್ಶಿಸಲು ಅನುಮತಿ ಇಲ್ಲ, ಆದರೂ ನೀವು ಆ ಸುಂದರ ಮಹಿಳೆಯನ್ನು ಮುಟ್ಟಿದ್ದಲ್ಲದೆ , ಅವಳನ್ನು ಹೆಗಲ ಮೇಲೆ ಹೊತ್ತು ನದಿ ದಾಟಿಸಿಬಿಟ್ಟಿರಿ ಹೇಗೆ?” – ಹಿರಿಯ ಸನ್ಯಾಸಿ ಅದಕ್ಕೆ ನಗುನಗುತ್ತಾ ಉತ್ತರಿಸುತ್ತಾರೆ: “ನಾನು ಮಹಿಳೆಯನ್ನು ಗಂಟೆಗಳ ಹಿಂದೆ ನದಿ ದಂಡೆಯ ಮೇಲೆ ಬಿಟ್ಟು ಬಂದೆ, ಆದರೆ, ನೀವು ಇನ್ನೂ ಅವಳನ್ನು ತಮ್ಮ ತಲೆಯಲ್ಲಿ ಹೊತ್ತು ಒಯ್ಯುತ್ತಿದ್ದೀರಿ “.
ಈ ಝೆನ್ ಕಥೆಯ ನೀತಿ, ನಾವು ಕೇವಲ ನಮ್ಮ ಕರ್ತವ್ಯವನ್ನು ಮಾಡಬೇಕಷ್ಟೆ, ಹಣ, ಹೊನ್ನು, ಮಣ್ಣು, ಹೆಣ್ಣಿನ ಮೇಲೆ ಮೋಹವನ್ನು ಹೊಂದಬಾರದು.