ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಮಂಕೀ ಟ್ರಾಪ್ – ಎಲ್ಲರ ಕಥೆ

ಮಂಕೀ ಟ್ರಾಪ್.

ಕೆಲವು ದಿನಗಳ ಹಿಂದೆ ಹೈದರಾಬಾದ್ ನ ಪೇಪರ್ ಒಂದರ ಒಂದು ಮೂಲೆಯಲ್ಲಿ ಒಂದು ಸಣ್ಣ ಸುದ್ದಿ ಪ್ರಕಟವಾಗಿತ್ತು.

“ಭಾಗ್ಯನಗರ (ಹೈದರಾಬಾದ್) ನಲ್ಲಿ ಒಬ್ಬ ಭಿಕ್ಷುಕ ಮೃತನಾಗಿದ್ದ. ಪೋಸ್ಟ್ ಮಾರ್ಟಮ್ ನಲ್ಲಿ ಅವನು ಹೊಟ್ಟೆಗಿಲ್ಲದೆ ಸತ್ತಿದ್ದ ಎಂದು ರಿಪೋರ್ಟ್ ಬಂತು.”

ಏನೀಗ? ಭಿಕ್ಷುಕ ಭಿಕ್ಷೆ ಸಿಗದೆಯೋ, ಬೇಡಲಿಕ್ಕಾಗದೆಯೋ ಉಪವಾಸ ಬಿದ್ದು ಸತ್ತಿರಬಹುದು. ಅದೇನು ಅಂಥಾ ರೋಚಕ ಸುದ್ದಿಯೇ ಪೇಪರ್ ನಲ್ಲಿ ಬರುವಷ್ಟು!! ಅವನ ಸಾವು ರೋಚಕ ಸುದ್ದಿಯೇ ಅಲ್ಲ. ಮತ್ತಿನ್ನು ಯಾವುದು?
ಯಾವುದು ಅಂದರೆ ಅವನ ಭಿಕ್ಷೆಯ ಜೋಳಿಗೆಯ ಪದರುಗಳಲ್ಲಿ ಒಂದು ಲಕ್ಷ ಮೂವತ್ತನಾಲ್ಕು ಸಾವಿರ ರೂಪಾಯಿಗಳ ನೋಟುಗಳಿದ್ದವು. ಅಂದರೆ ಅವನ‌ ಬಳಿ ಲಕ್ಷಕ್ಕೂ ಹೆಚ್ಚು ಹಣವಿದ್ದರೂ ಒಂದು ಹೊತ್ತಿನ ಊಟ ಕೊಳ್ಳಲಾರದೇ ಉಪವಾಸದಿಂದ ಪ್ರಾಣ ಬಿಟ್ಟನೇಕೆ? ಯಾಕೆ ಅಂತಹ ಮನೋದೌರ್ಬಲ್ಯ ಅವನಿಗೆ ಬಂತು? ಈ ಪ್ರಶ್ನೆಗಳು ಎಲ್ಲರ ಮನಸ್ಸಿನಲ್ಲೂ ಬಂದೇ ತೀರುತ್ತದೆ.
ಆದರೆ ಮನಶ್ಶಾಸ್ತ್ರಜ್ಞರು ಹೇಳುವ ಪ್ರಕಾರ ಅಂತಹ ಮನೋದೌರ್ಬಲ್ಯ ನಮ್ಮೆಲ್ಲರಲ್ಲೂ ಇರುತ್ತದಂತೆ. ಹೇಗೆ ಆನ್ನುತ್ತೀರಾ? ಹೇಳುತ್ತೇನೆ.
ಇನ್ನೊಂದು ಸಂಗತಿ ನೋಡೋಣ. ಆಫ್ರಿಕಾದೇಶಗಳಲ್ಲಿ ಕೋತಿಗಳನ್ನು ಹಿಡಿಯುತ್ತಾರೆ. ಬಹುಶಃ ತಿನ್ನಲಿಕ್ಕೆ ಇರಬಹುದು. ಕೋತಿಗಳು ಬಹಳ ಬುದ್ಧಿವಂತ ಪ್ರಾಣಿಗಳು. ಅಷ್ಟುಸುಲಭವಾಗಿ ಸಿಕ್ಕಿಹಾಕಿಕೊಳ್ಳುವುದಿಲ್ಲ. ಎತ್ತರದ ಕೊಂಬೆಗಳಲ್ಲಿ ಹಾರುತ್ತಿದ್ದರೆ ಕಾಣುವುದೂ ಇಲ್ಲ. ಅದಕ್ಕೇ ಕೋತಿಹಿಡಿಯುವವರು ಏನು ಮಾಡುತ್ತಾರೆ ಅಂದರೆ ಎಲ್ಲಾ ಕಡೆಯೂ ಮುಚ್ಚಿದ ಒಂದು ಮರದ ಪೆಟ್ಟಿಗೆಗೆ ಒಂದು ಕಡೆ ಮಾತ್ರ ಒಂದು ರಂಧ್ರ ಕೊರೆದಿರುತ್ತಾರೆ. ಆ ರಂಧ್ರ ಎಷ್ಟಿರುತ್ತದೆ ಅಂದರೆ ಕೋತಿಯ ಕೈ ಸುಮ್ಮನೆ ತೂರಿಸಿದರೆ ತೂರುತ್ತದೆ, ಆದರೆ ಮುಷ್ಟಿ ಕಟ್ಟಿದಾಗ ಹೋಗುವುದಿಲ್ಲ. ಇಂತಹ ಪೆಟ್ಟಿಗೆಯಲ್ಲಿ ಕೋತಿಗೆ ಇಷ್ಟವಾಗುವ ಬಾಳೆಹಣ್ಣು ಇತ್ಯಾದಿ ಹಾಕುತ್ತಾರೆ. ಕೋತಿ ಆಕರ್ಷಿತವಾಗಿ ತಾನಾಗಿಯೇ ಬಂದು ಆ ಪೆಟ್ಟಿಗೆಯಲ್ಲಿ ಕೈ ತೂರಿಸುತ್ತದೆ. ಒಳಗಿನ ಹಣ್ಣನ್ನು ಮುಷ್ಟಿಯಲ್ಲಿ ಹಿಡಿದು ಹೊರಗೆಳೆದುಕೊಳ್ಳುವ ಪ್ರಯತ್ನ ಮಾಡುತ್ತದೆ. ಆದರೆ ಈಗ ಕೈ ಹೊರಗೆ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಹಣ್ಣನ್ನು ಕೈಯಿಂದ ಬಿಟ್ಟರೆ ಸುಲಭವಾಗಿ ಕೈ ಹೊರತೆಗೆದು ತಪ್ಪಿಸಿಕೊಂಡು ಹೋಗಬಹುದಲ್ಲ? ಊಹೂಂ, ಮೃತ್ಯುವಿನ ಮುಖದಲ್ಲೂ ಅದು ತಾನು ಆಸೆಪಟ್ಟು ಹಿಡಿದ ಹಣ್ಣನ್ನು ಬಿಡದು. ಬೇಟೆಗಾರ ಹತ್ತಿರ ಬಂದಾಗ ಕೂಡಾ ಅದು ಹಣ್ಣನ್ನು ಬಿಡುವ ಪ್ರಯತ್ನ ಮಾಡುವುದಿಲ್ಲ. ಇದನ್ನೇ ‘ಮಂಕೀ ಟ್ರಾಪ್ ‘ ಎನ್ನುವುದು.
ಇದೇ ಆ ಭಿಕ್ಷುಕನ ಮನೋಧರ್ಮವೂ ಆಗಿತ್ತು. ಈ ಮನೋಧರ್ಮಕ್ಕೆ ಮಾನವನೂ ಹೊರತಲ್ಲ. ಆ ಮಂಕೀಟ್ರಾಪ್ ನಮ್ಮ ಪ್ರತಿಯೊಬ್ಬರಲ್ಲೂ ಇದೆ. ಬ್ಯಾಂಕ್ ನಲ್ಲಿ ಕೂಡಿಸಿ ಕೂಡಿಸಿ ಇಟ್ಟು, ತಮಗೆ ಬಂದ ಕಷ್ಟಕಾಲದಲ್ಲಿ ಕೂಡಾ ತೆಗೆಯದವರು ಬಹಳ ಮಂದಿ ಇದ್ದಾರೆ. ತಮ್ಮ ಹಾಗೂ ತಮ್ಮ ಕುಟುಂಬದ ಸದಸ್ಯರು ಯಾರಾದರೂ ಖಾಯಿಲೆ ಬಿದ್ದರೂ ಆಸ್ಪತ್ರೆಗೆ ಹೋಗದೆ ತಾವೇ ಏನಾದರೂ ಔಷಧಿ ಮಾಡಿಕೊಂಡು ಕಾಲ ಹಾಕುವವರೂ ಇರುತ್ತಾರೆ. ಅವರನ್ನು ಜಿಪುಣರು ಅನ್ನಲಾರೆವು. ಮಂಕೀಟ್ರಾಪ್ ಮನೋಧರ್ಮ ಅಷ್ಟೇ.
ಇದು ಬರೀ ಹಣದ ವಿಷಯಕ್ಕೆ ಮಾತ್ರವಲ್ಲ. ಸಂಬಂಧಗಳು, ಕೀರ್ತಿ, ಹೆಸರು, ಇಂತಹ ವಿಷಯಗಳಲ್ಲೂ ‘ಮಂಕೀಟ್ರಾಪ್’ ಮನೋಧರ್ಮ ಕಂಡುಬರುತ್ತದೆ. ಯಾವುದೋ ಒಂದರ ಆಸೆಗೆ ಬಿದ್ದು ಉಳಿದೆಲ್ಲವನ್ನೂ ನಿರ್ಲಕ್ಷಿಸುತ್ತಾರೆ ಅವರು. ಕಿರಿಯ ಮಗನ ಮೇಲಿನ ವ್ಯಾಮೋಹದಲ್ಲಿ ಇಡೀ ಕುಟುಂಬವನ್ನೇ ನಿಕೃಷ್ಟ ಮಾಡುವವರಿದ್ದಾರೆ, ಹೆಂಡತಿಯ ಮೇಲಿನ ವ್ಯಾಮೋಹದಲ್ಲಿ ಹೆತ್ತ ತಂದೆ ತಾಯಿ ಅಕ್ಕ ತಂಗಿ ಯರನ್ನು ದೂರ ಮಾಡಿಕೊಳ್ಳುವವರಿದ್ದಾರೆ, ಹಣವಂತ ಸ್ನೇಹಿತನ ಬಲೆಗೆ ಬಿದ್ದು ಆತ್ಮೀಯ ಗೆಳೆಯರನ್ನು ದೂರ ಮಾಡುವ ವ್ಯಕ್ತಿಗಳಿದ್ದಾರೆ, ಇವರದೆಲ್ಲಾ ಅದೇ ‘ಮಂಕೀಟ್ರಾಪ್’ ಮನೋಧರ್ಮವೇ. ತಮಗೆ ಕೆಡುಕಾಗುವುದನ್ನು ಸಹ ಅರಿಯದೆ ಯಾವುದೋ ಆಕರ್ಷಣೆಯ ಬಲೆಯಲ್ಲಿ ಸಿಕ್ಕಿಕೊಂಡು ನರಳುವುದು ಈ ಮನೋಧರ್ಮದ ಲಕ್ಷಣ.
ಕೈಕೇಯಿ ಮೇಲಿನ ಪ್ರೀತಿಯಿಂದ ಹಾಗೂ ವಚನ ಭ್ರಷ್ಟ ನಾಗಬಾರದೆಂಬ ನಿಯಮದ ಸೆಳೆತಕ್ಕೆ ಕಟ್ಟುಬಿದ್ದು ದಶರಥ ತನ್ನ ಅತ್ಯಂತ ಪ್ರೀತಿಯ ಮಗನನ್ನು ದೀರ್ಘಕಾಲ ಕಾಡಿಗೆ ಕಳಿಸಿ ತಾನೂ ಆ ಚಿಂತೆಯಲ್ಲೇ ಪ್ರಾಣಬಿಟ್ಟನಲ್ಲವೇ. ಹಾಗೆಯೇ ರಾವಣ ಸೀತೆಯನ್ನು ಬಿಟ್ಟುಕೊಟ್ಟಿದ್ದರೆ ಪ್ರಾಣ ತೆರಬೇಕಾಗುತ್ತಿರಲಿಲ್ಲ. ದುರ್ಯೋಧನ ಎಷ್ಟೇ ಕೆಟ್ಟವನಿದ್ದರೂ ಆ ಮಿತ್ರನಿಗಾಗಿ ಕರ್ಣ ಯಾರ ಹಿತವಚನಗಳನ್ನೂ ಕೇಳದೆ ಕಾದಾಡಿ ಕೊನೆಗೆ ಪ್ರಾಣ ತೆತ್ತ. ಅದು ಸ್ವತಃ ಕರ್ಣನಿಗೂ ಗೊತ್ತೇ ಇತ್ತು. ಆದರೂ ಮಿತ್ರಭಕ್ತಿಗಾಗಿ ಏನೆಲ್ಲ ಕಳೆದುಕೊಂಡ ಕರ್ಣ.
ನಮಗೆ ದುಃಖ ಸಂಕಟಗಳನ್ನು ತರುವ ಹಳೆಯ ನೋವಿನ ನೆನಪುಗಳು, ಬೇರೆಯವರು ಏನು ತಿಳಿದುಕೊಳ್ಳುತ್ತಾರೋ ಎನ್ನುವ ಅತಿ ಭಾವುಕತೆ, ಹೇಗೆ ಗೆಳೆಯನನ್ನು ಕೊಟ್ಟ ಸಾಲವನ್ನು ಹಿಂತಿರುಗಿಸಲು ಕೇಳುವುದು ಎನ್ನುವ ಇಬ್ಬಂದಿ, ತಪ್ಪು ಮಾಡಿದ್ದರೂ ಶಿಕ್ಷೆ ಕೊಡಲು ಮನಸ್ಸಾಗದ ವ್ಯಾಮೋಹ, ಊಟ ತಿಂಡಿ ನಿದ್ರೆಗಳನ್ನು ಲಕ್ಷಿಸದೇ ಕೆಲಸ, ಕೆಲಸ ಎಂದು ಅನಗತ್ಯ ನಿಷ್ಠೆ ತೋರಿಸಿಕೊಳ್ಳುವುದು, ಸಣ್ಣ ಪುಟ್ಟ ಬಯಕೆ ಆಸೆಗಳನ್ನು ಹತ್ತಿಕ್ಕಿಕೊಂಡೇ ಬದುಕು ಸಾಗಿಸುವುದು, ವೃತ್ತಿಯಲ್ಲಿ ಆದಷ್ಟು ಬೇಗ ಮೇಲೇರಲೇ ಬೇಕು ಎಂಬ ಸ್ಪರ್ಧಾ ಮನೋಭಾವಕ್ಕೆ ಬಿದ್ದು ಆರೋಗ್ಯವನ್ನೂ ಕೌಟುಂಬಿಕ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುವುದು, ಸಮಾಜದಲ್ಲಿ ಗಣ್ಯನೆನಿಸಿಕೊಳ್ಳಲು ಅಗತ್ಯವಾದ ಮಾರ್ಗಗಳ ಹಿಂದೆ ಓಡುತ್ತಿರುವುದು,
ಇವೆಲ್ಲಾ ಒಂದಲ್ಲ ಒಂದು ರೀತಿಯಲ್ಲಿ ‘ಮಂಕೀಟ್ರಾಪ್’ ಗಳೇ.
ನಿಮಗೆ ಗೊತ್ತಲ್ಲ, ಯಕ್ಷನ ಬಂಗಾರದ ಕೊಡದ ಕಥೆ. ಅದೂ ‘ಮಂಕೀ ಟ್ರಾಪ್’ ಗೆ ಉತ್ತಮ ಉದಾಹರಣೆ. ನಾವು ಯಕ್ಷನ ಆಮಿಷದಂತೆ ಮುಕ್ಕಾಲು ಬಂಗಾರ ತುಂಬಿದ ಕೊಡವನ್ನು ಭರ್ತಿ ಮಾಡಿ ಅಷ್ಟೂ ಬಂಗಾರವನ್ನು ತೆಗೆದುಕೊಂಡು ಹೋಗುವ ದುರಾಸೆ ಪಡುವುದು ಬೇಡ. ಬದಲು ಯಕ್ಷನ ಮಾತಿಗೆ ನಕ್ಕು ಎಷ್ಟಿದೆಯೋ ಅಷ್ಟನ್ನೇ ಕೊಡುವ ಹಾಗಿದ್ದರೆ ಕೊಡು, ಇಲ್ಲದಿದ್ದರೆ ನನಗೆ ಬೇಡ ಎಂದ ರಾಜನ ಮನೋಧರ್ಮ ವನ್ನು ಹೊಂದುವ ದಿಶೆಯಲ್ಲಿ ಸಾಗೋಣ.
ಈಗಂತೂ ಹಣ ಎರಡರಷ್ಟು ಮಾಡಿಕೊಡುವ, ಒಳ್ಳೆಯ ಕೆಲಸ ಕೊಡಿಸುವ, ಫಾರಿನ್ ವರನನ್ನು ಹೊಂದಿಸುವ, ಇಂತಹ ‘ಕೋತಿ ಹಿಡಿಯುವವರು’ ಬಹಳವಾಗಿದ್ದಾರೆ. ಎಲ್ಲಿ ‘ಕೋತಿಯ ಮನೋಧರ್ಮ’ ವಿರುತ್ತದೋ ಅಲ್ಲೆಲ್ಲಾ ‘ಕೋತಿ ಹಿಡಿಯುವವರು’ ‘ಮಂಕೀಟ್ರಾಪ್’ ಇಟ್ಟೇ ಇರುತ್ತಾರೆ. ನಾವು ‘ಕೋತಿ’ಗಳಾಗುವುದು ಬೇಡ.
ಬೇಡ ನಮ್ಮ ಬದುಕಿನಲ್ಲಿ ಈ ‘ಮಂಕೀಟ್ರಾಪ್’. ನಾವು ಅದರಿಂದ ದೂರವಿರೋಣ.
👆👆
ವಾಟ್ಸಪ್ ಆಧಾರಿತ.

Leave a Reply

Your email address will not be published. Required fields are marked *

Translate »