ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಮಹಾನುಭಾವ ಮೋಕ್ಷಗುಂಡಂ ಸರ್ ಎಂ ವಿಶ್ವೇಶ್ವರಯ್ಯ – ಎಂಜಿನಿಯರ್ಸ್ ಡೇ

ಮಹಾನುಭಾವ ಮೋಕ್ಷಗುಂಡಂ ಸರ್ ಎಂ ವಿಶ್ವೇಶ್ವರಯ್ಯ – ಎಂಜಿನಿಯರ್ಸ್ ಡೇ

  ಆಧುನಿಕ ಭಾರತದ ನಿರ್ಮಾಪಕರಲ್ಲಿ  ಸರ್. ಎಂ. ವಿಶ್ವೇಶ್ವರಯ್ಯನವರ ಹೆಸರು ಅಜರಾಮರ. ಒಬ್ಬರು ಯಂತ್ರರ್ಷಿ. ವಿಶ್ವೇಶ್ವರಯ್ಯನವರು ಅನ್ನದಾತರು. ಇವರಿಬ್ಬರ ಜೀವನ ಪಥ ರೋಮಾಂಚನಕಾರಿಯು, ಪ್ರೇರಕಕಾರಿಯೂ ಆಗಿರುವುದರಿಂದ ಅವರುಗಳು ಇಂದಿಗೂ, ಎಂದೆಂದಿಗೂ ಪ್ರಸ್ತುತರು. ಕರ್ನಾಟಕದ ಒಂದು ಸಣ್ಣ ಗ್ರಾಮದಲ್ಲಿ ಜನಿಸಿ, ಕಡು ಕಷ್ಟದ ಜೀವನ ನಡೆಸಿ ಲೋಕೋಪಕಾರಿಯಾಗಿ ಬದುಕಿ ಬಾಳಿದ ಸರ್ ಎಂವಿ ರವರ ಜೀವನ ಕಥೆ ಎಂಥವರನ್ನು ಸ್ಪೂರ್ತಿಗೊಳಿಸುವಂತಿದೆ.ಕುವೆಂಪು ರವರು ಹೇಳಿದಂತೆ "ಸತ್ತಂತಿರುವವರನ್ನು ಬಡಿದೆಬ್ಬಿಸಿದವರು" ವಿಶ್ವೇಶ್ವರಯ್ಯ. ಪ್ರಾಮಾಣಿಕತೆ, ನಿಷ್ಠೆ, ಸತ್ಯ, ಸಂತತನಕ್ಕೆ ಹೆಸರಾದ ಸರ್ ಎಂ. ವಿಶ್ವೇಶ್ವರಯ್ಯನವರು ನಿಜಕ್ಕೂ "ಕರ್ನಾಟಕ ರತ್ನ" ಮತ್ತು "ಭಾರತ ರತ್ನ" ನಿಸ್ಸಂಶಯವಾಗಿಯೂ "ವಿಶ್ವ ರತ್ನ". 

ಪರೋಪಕಾರಾಯ ಪಲಂತಿ ವೃಕ್ಷಾ / ಪರೋಪಕಾರಾಯ ವಹಂತಿ ನಧ್ಯಃ / ಪರೋಪಕಾರಾಯ ದುಹಂತಿ ಗಾವ / ಪರೋಪಕಾರಾರ್ಥ ಮಿದಂ ಶರೀರಂ / ಅಂದರೆ

“ಪರೋಪಕಾರಕ್ಕಾಗಿ ವೃಕ್ಷಗಳು ಹಣ್ಣು ನೀಡುತ್ತವೆ. ನದಿಗಳು ಹರಿಯುತ್ತವೆ. ಹಸುಗಳು ಹಾಲು ನೀಡುತ್ತವೆ. ಅದೇ ರೀತಿ ಈ ದೇಹವಿರುವುದು ಪರೋಪಕಾರಕ್ಕಾಗಿ” ಎಂಬ ಸೂಕ್ತಿಯಂತೆ ತಮ್ಮ ಇಡೀ ಜೀವನವನ್ನು ಪರೋಪಕಾರಕ್ಕಾಗಿ ಮುಡುಪಾಗಿಟ್ಟು, ಋಷಿ ಸದೃಶ ಬದುಕನ್ನು ಬಾಳಿದವರು ವಿಶ್ವೇಶ್ವರಯ್ಯನವರು. ದಿನಾಂಕ 27/ 8/1860 ರಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿ ಎಂಬಲ್ಲಿ ಜನಿಸಿದರು. ವಿಶ್ವೇಶ್ವರಯ್ಯನವರ ಜನ್ಮ ದಿನಾಂಕ ಶಾಲೆ ದಾಖಲಾತಿಯಲ್ಲಿ 15/ 9/ 1860 ಎಂಬುದಾಗಿ ನಮೂದಾಗಿರುವ ಕಾರಣ, ಅದನ್ನೇ ಅಧಿಕೃತ ಜನ್ಮ ದಿನಾಂಕ ಎಂದು ಪರಿಗಣಿಸಲಾಗಿದೆ. ಇವರ ತಂದೆ ಶ್ರೀನಿವಾಸ ಶಾಸ್ತ್ರಿಗಳು. ತಾಯಿ ವೆಂಕಟ ಲಕ್ಷ್ಮಮ್ಮ. ಕಡು ಬಡತನದ ಜೀವನ ಸಾಗಿಸಿದ ಈ ಕುಟುಂಬದಲ್ಲಿ ಛಲ ಬಿಡದ ತ್ರಿವಿಕ್ರಮನಂತೆ ವಿದ್ಯಾಭ್ಯಾಸ ನಡೆಸಿದ ವಿಶ್ವೇಶ್ವರಯ್ಯನವರ ಜೀವನ ಗಾಥೆ ನಂಬಲಸಾಧ್ಯವಾಗಿದೆ. ವಾಹನಕ್ಕೆ ಕೊಡಲು ಹಣವಿಲ್ಲದೆ, ಚಿಕ್ಕಬಳ್ಳಾಪುರದಿಂದ 55 k m ದೂರವಿರುವ ಬೆಂಗಳೂರಿಗೆ ಕಾಲ್ನಡಿಗೆಯಲ್ಲಿ ಸಂಚರಿಸಿ, ಮೆಟ್ರಿಕ್ ಪರೀಕ್ಷೆಗೆ 12 ರೂಪಾಯಿ ಫೀಸ್ ಕಟ್ಟಲು ಮನೆಯ ಪಾತ್ರೆಗಳನ್ನು ಅಡವಿಟ್ಟು ಫೀಸ್ ತುಂಬಿದ, ಮನೆ ಮನೆ ಪಾಠ ಹೇಳಿ ಉದರಂಬರಣ ಮಾಡುತ್ತಾ, ಬೀದಿ ದೀಪದ ಕೆಳಗೆ ಕೂತು ಓದಿ ವಿದ್ಯಾವಂತನಾದ ಬಾಲಕ ವಿಶ್ವೇಶ್ವರಯ್ಯನವರ ಬಾಲ್ಯ ಜೀವನ ಎಂತವರೂ ಮರುಗುವಂತಿದೆ. ಮುಂದೆ ಮೈಸೂರು ಮಹಾರಾಜರ ಮತ್ತು ದಿವಾನರ ನೆರವು ಪಡೆದು ಉನ್ನತ ವಿದ್ಯಾಭ್ಯಾಸ ಪಡೆದು, ದೇಶದ ಪ್ರತಿಭಾನ್ವಿತ ಇಂಜಿನಿಯರ್ ಆಗಿ ಬೆಳೆದ ಕಥೆ ಅಸಾಮಾನ್ಯವಾದದು. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡು ಇಡೀ ಸಂಸಾರದ ಹೊಣೆ ವಹಿಸಿಕೊಂಡು, ತಮ್ಮ ವೃತ್ತಿಜೀವನವನ್ನು ಮುಂಬೈ ಸರ್ಕಾರದಲ್ಲಿ ಪ್ರಾರಂಭಿಸಿದರು. ಆಗ ಅವರ ವಯಸ್ಸು ಕೇವಲ 23. ಪ್ರಾಮಾಣಿಕರು, ದಕ್ಷರು, ಮೇಧಾವಿಗಳು, ಅಸಾಧಾರಣ ತಂತ್ರಜ್ಞರು ಆದಂತ ವಿಶ್ವೇಶ್ವರಯ್ಯನವರ ಕಾರ್ಯ ಶೈಲಿ, ಶೋಧನೆಗಳು, ಖ್ಯಾತಿ, ಕ್ಷಿಪ್ರವಾಗಿ ದೇಶದಲ್ಲೆಡೆ ಹರಡಿದ್ದು ಆಶ್ಚರ್ಯವೇನಲ್ಲ. ಮುಂಬೈ ಸರ್ಕಾರದ ಸೇವೆಯ ನಂತರ, ಮೈಸೂರು ರಾಜ್ಯಕ್ಕೆ ಬಂದು 1909ರಲ್ಲಿ ಮುಖ್ಯ ಇಂಜಿನಿಯರಾದರು. ಅವರ ಅಸಾಮಾನ್ಯ ಕಾರ್ಯ ಶೈಲಿಯನ್ನು ಗುರುತಿಸಿದ ಮೈಸೂರು ಮಹಾರಾಜರು 1912ರಲ್ಲಿ ಅವರನ್ನು ಮೈಸೂರಿನ ದಿವಾನರಾಗಿ ನೇಮಿಸಿದರು. ಆಗ ಅವರು ರಾಜ್ಯಕ್ಕೆ ಸಲ್ಲಿಸಿದ ಸೇವೆ ಅನುಪಮವಾದದ್ದು. ಒಬ್ಬ ಮನುಷ್ಯ ತನ್ನ ಜೀವನದಲ್ಲಿ ಇಷ್ಟು ಕಾರ್ಯ ಮಾಡಲು ಸಾಧ್ಯವೇ? ಎಂದು ಬೆರಗು ಪಡುವಷ್ಟು ಸಾಧನೆಗಳನ್ನು ಮಾಡಿದ ಕೀರ್ತಿ ವಿಶ್ವೇಶ್ವರಯ್ಯನವರದು. ಸಿಂಧೂ ನದಿಯಿಂದ ಸಕ್ಕೂರಿಗೆ, ತಪತೀ ನದಿಯಿಂದ ಸೂರತ್ ನಗರಕ್ಕೆ ಮೂಸ ನದಿಯಿಂದ ಪುಣೆ ನಗರಗಳಿಗೆ ಅವರು ನೀರು ಸರಬರಾಜು ವ್ಯವಸ್ಥೆ ಮಾಡಿದರು. ನೀರು ಸಂಗ್ರಹಣೆಗೆ ಅಣೆಕಟ್ಟುಗಳನ್ನು ಕಟ್ಟಿ, ಹೆಚ್ಚಾದ ನೀರು, ತನ್ನಿಂದ ತಾನೇ ಹೊರಹೋಗಲು ಇವರು ಕಂಡುಹಿಡಿದ ಸ್ವಯಂ ಚಾಲಿತ ಉಕ್ಕಿನ ಬಾಗಿಲುಗಳು ಆ ಕಾಲದಲ್ಲಿ ಬಹಳ ಪ್ರಸಿದ್ಧಿಯನ್ನು ಪಡೆದವು. ಅಂದು ಸ್ಥಾಪಿಸಿದ ಆ ಉಕ್ಕಿನ ಬಾಗಿಲುಗಳು ಇಂದಿಗೂ ಸಹಿತ ಸುಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಕೃಷ್ಣರಾಜಸಾಗರ ಮತ್ತು ಬೃಂದಾವನಗಳ ನಿರ್ಮಾಣದ ಮುಖ್ಯ ವಾಸ್ತುಶಿಲ್ಪಿ ವಿಶ್ವೇಶ್ವರಯ್ಯನವರು. ಭದ್ರಾವತಿಯಲ್ಲಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಳ ಸ್ಥಾಪನೆ, ಮೈಸೂರು ವಿಶ್ವವಿದ್ಯಾನಿಲಯ ಸ್ಥಾಪನೆ, ಸೆಂಟ್ರಲ್ ಲೈಬ್ರರಿ, ಮೈಸೂರು ಬ್ಯಾಂಕ್, ಚೇಂಬರ್ ಆಫ್ ಕಾಮರ್ಸ್, ಸರ್ಕಾರಿ ಸಾಬೂನು ಕಾರ್ಖಾನೆ, ಮೈಸೂರು ಪೇಪರ್ ಮಿಲ್, ಶ್ರೀಗಂಧದ ಎಣ್ಣೆ ಕಾರ್ಖಾನೆಗಳ ಪ್ರಾರಂಭ, ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆ, ಬೆಂಗಳೂರು ಇಂಜಿನಿಯರಿಂಗ್ ಕಾಲೇಜ್ ಸ್ಥಾಪನೆ, ರೇಷ್ಮೆ ಇಲಾಖೆ ಮುಂತಾದವುಗಳು ಇವರ ಪರಿಶ್ರಮ ಮತ್ತು ಮಾರ್ಗದರ್ಶನಗಳಿಂದ ಸಾಧ್ಯವಾದ ಮಹಾನ್ ಕಾರ್ಯಗಳು. ನವ ಭಾರತದ ನಿರ್ಮಾಪಕರಾದ ಸರ್. ಎಂ. ವಿಶ್ವೇಶ್ವರಯ್ಯನವರು ಕರ್ನಾಟಕದ ಕೀರ್ತಿಯನ್ನು ಜಗತ್ತಿಗೆ ಸಾರಿದ ಲೋಕಪ್ರಿಯರು.

ಸ್ವಾತಂತ್ರ್ಯ ಸಂಗ್ರಾಮದ ದಿನಗಳಲ್ಲಿ ದೇಶಾದ್ಯಂತ  ಸಂಚರಿಸಿ, ಜನಜಾಗೃತಿ ಉಂಟು ಮಾಡಿದ ಮಹಾತ್ಮ ಗಾಂಧಿಯವರು ಒಮ್ಮೆ ಸಾಗರಕ್ಕೆ ಬಂದಿದ್ದರು. ಆಗ ಕೆಲವರು ಹತ್ತಿರದಲ್ಲಿರುವ ಜೋಗ ಜಲಪಾತವನ್ನು ನೋಡುವಂತೆ ಗಾಂಧೀಜಿಯವರಿಗೆ ಆಹ್ವಾನಿಸಿದರಂತೆ. ಅದನ್ನು ನೋಡಲು ಗಾಂಧೀಜಿಯವರು ನಿರಾಕರಿಸಿದರಂತೆ. ಅದಕ್ಕೆ ಅವರು ನೀಡಿದ ಕಾರಣ, ದೇವರು ಆಕಾಶದಿಂದ ಮಳೆಯನ್ನು ಸುರಿಸುತ್ತಾನೆ ! ಆ ಜಲಪಾತಕಿಂತ ನಿಮ್ಮ ಜೋಗ ಜಲಪಾತ ದೊಡ್ಡದಲ್ಲ! ಜೊತೆಗೆ ನಿಮ್ಮ ಜಲಪಾತ ವೀಕ್ಷಣೆಗಿಂತ ಸ್ವಾತಂತ್ರ ಚಳುವಳಿಯ ಕಾರ್ಯ ನನಗೆ ಮುಖ್ಯ ಎಂದು ಮುಂದಿನ ಊರಿಗೆ ಹೋದರಂತೆ ! ಆದರೆ ವಿಶ್ವೇಶ್ವರಯ್ಯನವರು ಆ ಜಲಪಾತವನ್ನು ನೋಡಿ "ವಾಟ್ ಎ ವೇಸ್ಟ್" "ಎಷ್ಟೊಂದು ಶಕ್ತಿ ನಷ್ಟವಾಗುತ್ತಿದೆ" ಎಂದು ಉದ್ಗರಿಸಿದರಂತೆ ! ಮುಂದೆ ಶರಾವತಿ ನದಿಗೆ ಲಿಂಗನಮಕ್ಕಿ ಎಂಬಲ್ಲಿ ಅಣೆಕಟ್ಟು ಕಟ್ಟಿ, ಆ ಶಕ್ತಿಯನ್ನು ವಿದ್ಯುತ್ ಉತ್ಪಾದನೆಗೆ ಬಳಸಿ ನಾಡಿಗೆಲ್ಲ ಬೆಳಕು ನೀಡಿದ ಕಥೆ ಚಾರಿತ್ರಿಕವಾದದ್ದು.

ಕೈಗಾರಿಕೆಯಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದು ನಂಬಿದ್ದ ಸರ್ ಎಂ.ವಿ.ರವರು "ಕೈಗಾರಿಕೀಕರಣ ಇಲ್ಲವೇ ವಿನಾಶ" ಎಂದು ಘೋಷಣೆ ಮಾಡಿದರು. ಕೈಗಾರಿಕೆಗಳಿಂದ ದೇಶದ ಪ್ರಗತಿ ಸಾಧ್ಯ ಎಂದು ಪ್ರತಿಪಾದಿಸಿದರು. "ಕೆಲಸ, ಕೆಲಸ ಮತ್ತು ಕೆಲಸ" ಇದು ಅವರ ದಿವ್ಯ ಮಂತ್ರ. ಆಲಸ್ಯ ಎಂಬುದು ಅವರ ಹತ್ತಿರ ಸುಳಿಯುತ್ತಿರಲಿಲ್ಲ. ಸದಾ ಕ್ರಿಯಾಶೀಲರಾಗಿದ್ದ ಸರ್ ಎಂ. ವಿ.  " ಕೂತೂ, ಕೂತೂ ತುಕ್ಕು ಹಿಡಿದು ಸಾಯುವುದಕ್ಕಿಂತ, ಕೆಲಸ ಮಾಡಿ, ಮಾಡಿ ಸವೆದು ಸಾಯುವುದು ಮೇಲು" ಎಂದು ಸೋಮಾರಿಗಳಿಗೆ ತಿಳಿಹೇಳಿದರು. ಸೌಜನ್ಯವಂತರು, ಸರಳರು, ಸತ್ಯವಂತರು, ವಿನಯವಂತರು ಆದ ವಿಶ್ವೇಶ್ವರಯ್ಯನವರಿಗೆ ಸಂದ ಪ್ರಶಸ್ತಿಗಳು ಅಸಂಖ್ಯ. ಅವುಗಳಲ್ಲಿ ಬ್ರಿಟಿಷ್ ಸರ್ಕಾರ ನೀಡಿದ ಸಿಪಿಐ ಬಿರುದು ಮುಖ್ಯವಾದದ್ದು. ಅಂದಿನಿಂದ ಅವರ ಹೆಸರಿಗೆ "ಸರ್" ಎಂಬ ಗೌರವ ಪದ ಪ್ರಾಪ್ತವಾಯಿತು. ಬಾಂಬೆ, ಆಂಧ್ರ, ಬಂಗಾಳ, ಕಲ್ಕತ್ತಾ, ಪಾಟ್ನಾ ಮತ್ತು ಮೈಸೂರು ವಿಶ್ವವಿದ್ಯಾನಿಲಯಗಳು ಅವರಿಗೆ  ಗೌರವ ಡಾಕ್ಟರೇಟ್ ಪದವಿಯನ್ನು ಪ್ರಧಾನ ಮಾಡಿವೆ. ಏಡನ್ ನಗರದ ನೀರು ಸರಬರಾಜು ವ್ಯವಸ್ಥೆಯನ್ನು ಅತ್ಯುತ್ತಮವಾಗಿ ಮಾಡಿದ ಕಾರಣಕ್ಕೆ ಬ್ರಿಟಿಷ್ ಸರ್ಕಾರ ಅವರಿಗೆ " ಕೈಸರ್ ಎ ಹಿಂದ್" ಪ್ರಶಸ್ತಿಯನ್ನು ನೀಡಿತು. 1955ನೇ ಸೆಪ್ಟೆಂಬರ್ 7ರಂದು  ಭಾರತದ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ರವರು ಪ್ರಧಾನ ಮಾಡಿದ "ಭಾರತ ರತ್ನ" ಪ್ರಶಸ್ತಿ ವಿಶ್ವೇಶ್ವರಯ್ಯನವರಿಗೆ ಸಂದ ಮಹಾನ್ ಗೌರವ.

ವಿಶ್ವೇಶ್ವರಯ್ಯನವರು ಬದುಕಿದ್ದಾಗಲೇ ದಂತಕತೆಯಾಗಿದ್ದರು. ಅವರು ವಿದ್ಯಾರ್ಥಿಯಾಗಿದ್ದಾಗ ಅವರನ್ನು ಮೆಚ್ಚಿದ ಗಣಿತದ ಅಧ್ಯಾಪಕರಾದ ಚಾರ್ಲ್ಸ್ ವಾಟರ್ಸ್ ರವರು ಕಾಣಿಕೆಯಾಗಿ ನೀಡಿದ "ವೆಬ್ ಸ್ಟರ್" ನಿಘಂಟನ್ನು ತಮ್ಮ ಜೀವನದ ಕೊನೆಯವರೆಗೂ ಉಪಯೋಗಿಸುತ್ತಿದ್ದರು. ಮೈಸೂರು ಸರ್ಕಾರದಲ್ಲಿ ಮುಖ್ಯ ಇಂಜಿನಿಯರ್ ಆಗಿದ್ದ ಸಮಯ. ಒಂದು ದಿನ ಸಾರೋಟಿನಲ್ಲಿ ಹೋಗುತ್ತಿರುವಾಗ ದಾರಿಯಲ್ಲಿ ನಡೆದು ಹೋಗುತ್ತಿದ್ದ ತಮ್ಮ ಗುರುಗಳನ್ನು ಕಂಡು ಗಾಡಿ ನಿಲ್ಲಿಸಿ ಹೋಗಿ ಅವರ ಕಾಲಿಗೆ ಎರಗಿದರಂತೆ, ಗುರುಗಳು "ನೀನು ಯಾರಪ್ಪ?" ಎಂದು ಪ್ರಶ್ನಿಸಿದಾಗ ಸ್ವಾಮಿ, ನೀವು ಚಿಕ್ಕಬಳ್ಳಾಪುರದಲ್ಲಿ ನನಗೆ ಪಾಠ ಹೇಳಿದ ಗುರುಗಳು, ನಾನು ನಿಮ್ಮ ಶಿಷ್ಯ ಎಂದು ನೆನಪು ಮಾಡಿದರಂತೆ. ಹೆಮ್ಮೆ ಪಟ್ಟ ಗುರುಗಳು "ಚಿರಂಜೀವಿಯಾಗು" ಎಂದು ಆಶೀರ್ವದಿಸಿದರಂತೆ ! ಎಂತಹ ಗುರುಭಕ್ತಿ. ಸಮಯಪ್ರಜ್ಞೆ ವಿಶ್ವೇಶ್ವರಯ್ಯನವರ ಮತ್ತೊಂದು ಗುಣ. ಸಮಯ ಪ್ರಜ್ಞೆ ಇಲ್ಲದ ಯಾರನ್ನು, ಯಾವುದನ್ನು ಅವರು ಸಹಿಸುತ್ತಿರಲಿಲ್ಲ. ಸಮಯ ಪರಿಪಾಲನೆ ಮಾಡದ ಯಾರಿಗೂ ಸಂದರ್ಶನವೂ ಇಲ್ಲ, ಕ್ಷಮೆಯೂ ಇಲ್ಲ. ವೇಳೆ ಬಗ್ಗೆ ಅಷ್ಟೊಂದು ನಿಷ್ಟೂರವಾದಿ. ಅವರ ಪ್ರಾಮಾಣಿಕತೆಯ ಬಗ್ಗೆ ಲೆಕ್ಕವಿಲ್ಲದಷ್ಟು ದೃಷ್ಟಾಂತಗಳಿವೆ. ವಿದ್ಯುತ್ ದೀಪಗಳಿಲ್ಲದ ಕಾಲದಲ್ಲಿ ಅವರು ಬಳಸುತ್ತಿದ್ದ ಮೇಣದಬತ್ತಿಗಳು ಎರಡು. ಸರ್ಕಾರಿ ಕೆಲಸಕ್ಕೆ ಸರ್ಕಾರದ್ದು. ಸ್ವಂತ ಕೆಲಸಕ್ಕೆ ಸ್ವಂತದ ಮೇಣದಬತ್ತಿ. ಬಳಸುವ ವಾಹನಗಳು ಅಷ್ಟೇ ! ಎಂದು ಉಚಿತ ಸೇವೆಗಳನ್ನು ಪಡೆಯುತ್ತಿರಲಿಲ್ಲ. ನ್ಯಾಯವಾಗಿ ಬರಬೇಕಾದದ್ದನ್ನು ಬಿಡುತ್ತಲೂ ಇರಲಿಲ್ಲ !  ಭಿನ್ನಮತದ ಕಾರಣ ಮಹಾರಾಜರ ದಿವಾನಗಿರಿಗೆ ರಾಜೀನಾಮೆ ಕೊಟ್ಟವರು ಅವರು ! ಅಂಥವರನ್ನು ಮಣಿಸಲು ಯಾರಿಂದ ಸಾಧ್ಯ?

 ಯಾರು, ಯಾವ ಸೇವೆ ಮಾಡಿದರೂ ಅವರಿಗೆ ಸಲ್ಲಬೇಕಾದ ಗೌರವ, ವೇತನ ಮತ್ತು ಸಂಭಾವನೆಗಳನ್ನು ಸರಿಯಾಗಿ ಆಗಲೇ ನೀಡಬೇಕು ಎಂಬುದು ಅವರ ಅಭಿಮತ. "ದುಡಿದು ಕೆಟ್ಟವರಿಲ್ಲ, ದುಡಿದು ಸತ್ತವರೂ ಇಲ್ಲ. ದುಡಿಯದೆ ನಾಶವಾಗಿ ಹೋದವರು ಉಂಟು" ಎಂದು ಹೇಳುತ್ತಿದ್ದ ಸರ್ ಎಂ ವಿ ರವರು, ಯಾರೋ ಒಬ್ಬರು "ನಿಮ್ಮ ಅಂತಿಮ ಆಸೆ ಏನು?" ಎಂದು ಪ್ರಶ್ನಿಸಿದಾಗ "ನನ್ನ ಉಸಿರು ನಿಲ್ಲುವ ಕ್ಷಣದವರೆಗೂ ದುಡಿಯುತ್ತಲೇ ಇರಬೇಕು! ದುಡಿಯುತ್ತಲೇ ಸಾಯಬೇಕು" ಎಂದರಂತೆ ! ಯಾರೋ ಒಬ್ಬ ಹಿರಿಯ ಅಧಿಕಾರಿ ಇನ್ನೊಬ್ಬರಿಗೆ ವಿಶ್ವೇಶ್ವರಯ್ಯನವರನ್ನು ತೋರಿಸಿ "ನಾನು ಇವರ ಸೇವಕನಾಗಿದ್ದೆ " ಎಂದು ಹೇಳುತ್ತಿದ್ದಾಗ, ಕೂಡಲೇ ಅವರನ್ನು ತಡೆದ ವಿಶ್ವೇಶ್ವರಯ್ಯನವರು "ಅವರು ನನ್ನ ಸೇವಕನಾಗಿರಲಿಲ್ಲ, ಸಹಾಯಕನಾಗಿದ್ದರು! ಸ್ನೇಹಿತನಾಗಿದ್ದರು!" ಎಂದು ಹೇಳಿದರಂತೆ. ಎಂತಹ ಉದಾತ್ತ,ಉದಾರ ಹೃದಯಿ ! ಮಾಡುವ ಕೆಲಸವಾಗಲಿ, ಉಡುವ ವಸ್ತ್ರವಾಗಲಿ, ತಿನ್ನುವ ಆಹಾರವಾಗಲಿ ಎಲ್ಲದರಲ್ಲೂ ಶಿಸ್ತು, ಸಂಯಮ. ಸೂಟು ಬೂಟು, ಟೈ ಮತ್ತು ಮೈಸೂರು ಪೇಟಗಳಿಲ್ಲದ ವಿಶ್ವೇಶ್ವರಯ್ಯನವರನ್ನು ನಾವು ಕಾಣಲಾರೆವು. ಎಲ್ಲಾ ವಿಚಾರಗಳಲ್ಲೂ ಸಂಯಮ ಮತ್ತು ಸಭ್ಯತೆ. ಔತಣಕೂಟಗಳಲ್ಲಿ ಪಂಕ್ತಿ ಭೇದವನ್ನು ಅವರು ಸಹಿಸಲಾರರು. ಪ್ರಯಾಣದ ಸಂದರ್ಭದಲ್ಲಿ ತಮ್ಮ ಲಗೇಜ್ ಅನ್ನು ಇತರರಿಗೆ ನೀಡಲಾರರು! ತಾವೇ ಹೊತ್ತುಕೊಂಡು ಪ್ರಯಾಣಿಸುತ್ತಾರೆ! ಅವರಿಗಾಗಿ ಯಾವ ವಿಶೇಷವಾದ ರಿಯಾಯಿತಿಯನ್ನು ಕೇಳಲಾರರು. ಯಾರೋ ಒಬ್ಬ ಮಂತ್ರಿ ವಿಶ್ವೇಶ್ವರಯ್ಯನವರನ್ನು ಭೇಟಿಯಾಗಲು ಮನೆಗೆ ಬರುವೆ ಎಂದಾಗ "ಇಲ್ಲ ಈಗ ನೀವು ನಮ್ಮ ರಾಜ್ಯದ ಮಂತ್ರಿಗಳು. ನೀವು ನನ್ನ ಮನೆಗೆ ಬರಬಾರದು. ನಾನೇ ನಿಮ್ಮಲ್ಲಿಗೆ ಬರುವೆ" ಎಂದು ಹೇಳಿ ಅವರ ಮನೆಗೆ ಭೇಟಿ ನೀಡಿ ಬಂದರಂತೆ. ಎಂತಹ ಸೌಜನ್ಯ!

ಸಾವಿರಾರು ಕೈಗಾರಿಕೆಗಳನ್ನು, ಸಂಘ ಸಂಸ್ಥೆಗಳನ್ನು, ವಿದ್ಯಾ ಕೇಂದ್ರಗಳನ್ನು, ಸೇತುವೆ ಅಣೆಕಟ್ಟುಗಳನ್ನು ನಿರ್ಮಿಸಿ, ಲಕ್ಷಾಂತರ ಜನರಿಗೆ ಅನ್ನದಾತರಾದ ವಿಶ್ವೇಶ್ವರಯ್ಯನವರನ್ನು ಇಂದೂ ಕೂಡ ಜನರು ದೇವರೆಂದು ಪೂಜಿಸುತ್ತಾರೆ! ಅವರು ಈ ನೆಲದಲ್ಲಿ ಜನಿಸಿದ ಶಕಪುರುಷರು. ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿರುವ ವಿಶ್ವೇಶ್ವರಯ್ಯನವರು ಶತಾಯುಷಿಗಳು. ನಾಡಿನ ಪುಣ್ಯ ವಿಶೇಷದಿಂದ ಇಂತಹ ಮಹಾತ್ಮರು ಶತಮಾನಕೊಮ್ಮೆ ಜನಿಸುತ್ತಾರೆ. ಯಾರೋ ಒಬ್ಬರು ಅವರನ್ನು ನಿಮ್ಮ ದೀರ್ಘಾಯುಷ್ಯದ ಗುಟ್ಟೇನು ? ಎಂದು ಪ್ರಶ್ನಿಸಿದಾಗ ಸರ್ ಎಂ ವಿ ನಗುತ್ತಾ "ಯಮ ಬಂದಾಗಲೆಲ್ಲ ನಾನು ಮನೆಯಲ್ಲಿ ಇರಲಿಲ್ಲ" ಎಂದರಂತೆ ! "ಕಾಯಕವೇ ಕೈಲಾಸ" "ಕರ್ತವ್ಯವೇ ದೇವರು" ಎಂದು ನಂಬಿದ ವಿಶ್ವೇಶ್ವರಯ್ಯನವರು 102 ವರ್ಷಗಳ ತುಂಬು ಜೀವನ ನಡೆಸಿ 14ನೇ ಏಪ್ರಿಲ್ 1962ರಂದು ಇಹಲೋಕ ಯಾತ್ರೆಯನ್ನು ಮುಗಿಸಿದರು. ಬದುಕಿದ್ದಾಗಲೇ ದಂತಕತೆಯಾಗಿದ್ದ ಸರ್ ಎಂವಿ ರವರ ಬಗ್ಗೆ ಇರುವ ಕಥೆಗಳು ಲೆಕ್ಕವಿಲ್ಲ. ಕರ್ನಾಟಕದ ಯಾವುದೇ ಊರಿನಲ್ಲಿ ಸೇತುವೆ ಇರಲಿ, ಅಣೆಕಟ್ಟಿರಲಿ, ಬೃಹತ್ ಕೈಗಾರಿಕೆ ಇರಲಿ ಅದನ್ನು ನಿರ್ಮಿಸಿದ್ದು ಸರ್ ಎಂ ವಿ ಎಂದು ಅಲ್ಲಿನ ಜನ ಹೇಳುವುದನ್ನು ಇಂದಿಗೂ ನಾವು ಕೇಳಬಹುದು. ಅದರಲ್ಲಿ ಹೆಚ್ಚಿನವು ನಿಜವಲ್ಲ. ಆದರೆ ಹಾಗೆ ಹೇಳುವ ಜನರು ಸರ್ ಎಂ ವಿ ಮೇಲೆ ಇಟ್ಟಂತಹ ನಂಬಿಕೆ, ಪ್ರೀತಿ, ಅಭಿಮಾನಗಳನ್ನು ನಾವು ನೋಡಬಹುದು. ವಿಶ್ವೇಶ್ವರಯ್ಯನವರು ಮರಣ ಹೊಂದಿದಾಗ ಅವರ ತಲೆಯನ್ನು ಎಷ್ಟೋ ಲಕ್ಷ ರೂಪಾಯಿಗೆ ವಿದೇಶಿಯರು ಕೇಳಿದರಂತೆ ! ಅವರ ಮೇಧಾವಿತನಕ್ಕೆ ಕಾರಣವಾದ ಯಾವ ಅಂಶ ಅವರ ಮೆದುಳಿನಲ್ಲಿದೆ ? ಎಂದು ಕಂಡುಹಿಡಿಯುವ ಉದ್ದೇಶ ಅವರಿಗಿತ್ತಂತೆ ! ಆದರೆ ಸರ್ಕಾರ ಅವರಿಗೆ ಕೊಡಲಿಲ್ಲವಂತೆ ! ಇದು ನಾನು ಬಾಲ್ಯದಲ್ಲಿ ಸರ್ ಎಂ ವಿ ಬಗ್ಗೆ ಕೇಳಿದ ಕಟ್ಟುಕಥೆ ! ಇಂತಹ ಊಹಾಪೋಹ, ಗಾಳಿ ಸುದ್ದಿಗಳು ನೂರಾರು. ಪ್ರಪಂಚದ ಅಗ್ರಗಣ್ಯ ಇಂಜಿನಿಯರ್ ಆಗಿದ್ದ ಸರ್ ಎಂ ವಿ ನೆನಪಿಗೆ ಅವರು ಹುಟ್ಟಿದ ದಿನವನ್ನು ದೇಶದೆಲ್ಲೆಡೆ "ಇಂಜಿನಿಯರ್ಸ್ ಡೇ" ಎಂದು ಆಚರಿಸಿ ಅವರಿಗೆ ಗೌರವವನ್ನು ಸಲ್ಲಿಸಲಾಗುತ್ತಿದೆ.

                  - ವಾಸುದೇವ. ಬಿ. ಎಸ್
                    ( 9986407256 )

Leave a Reply

Your email address will not be published. Required fields are marked *

Translate »