ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಜಗದ್ಗುರು ಹಾಗೂ ಇಬ್ಬರು ವಿದ್ಯಾರ್ಥಿಗಳ ಕಥೆ

ವಿದ್ಯಾರಣ್ಯಪುರ ಎಂಬ ಊರಲ್ಲಿದ್ದ ಜಗದ್ಗುರುವೊಬ್ಬರು ಏನು ಹೇಳಿದರೂ ಅದು ನಿಜವಾಗುತ್ತದೆ ಎಂಬ ನಂಬಿಕೆ ಆ ಊರಿನ ಜನರಲ್ಲಿತ್ತು. ಹಾಗಾಗಿ ಆ ಊರು ಮಾತ್ರವಲ್ಲದೆ ಸುತ್ತಮುತ್ತಲಿನ ಹಾಗೂ ದೂರದ ಊರುಗಳಿಂದಲೂ ಜನರು ಅವರಲ್ಲಿಗೆ ಬಂದು ತಮ್ಮ ಭವಿಷ್ಯ ಕೇಳುತ್ತಿದ್ದರು. ಆ ಜಗದ್ಗುರು ಕೂಡ ಯಾರು ಬಂದರೂ ಸ್ವಲ್ಪವೂ ಬೇಸರ ಪಡದೆ ಹಸನ್ಮುಖಿಯಾಗಿ ಅವರ ಕಷ್ಟಗಳಿಗೆ ಸ್ಪಂದಿಸುತ್ತಿದ್ದರು.
ಒಮ್ಮೆ ಮಹೇಶ ಮತ್ತು ಸುರೇಶ ಎಂಬ ಇಬ್ಬರು ವಿದ್ಯಾರ್ಥಿಗಳು ಜಗದ್ಗುರುವಿನ ಬಳಿಗೆ ಬಂದು ‘ಗುರುಗಳೇ, ನಾವಿಬ್ಬರು ಗೆಳೆಯರು. ಒಂದೇ ಶಾಲೆಯಲ್ಲಿಓದುತ್ತಿದ್ದೇವೆ. ನಮಗೆ ನಿಮ್ಮ ಆಶೀರ್ವಾದ ಬೇಕು’ ಎಂದು ಹೇಳಿ ತಲೆ ಬಾಗಿದರು. ಜಗದ್ಗುರು ಅವರಿಬ್ಬರನ್ನೂ ಒಂದು ಕ್ಷಣ ತದೇಕ ಚಿತ್ತದಿಂದ ನೋಡಿ ಮಹೇಶನಿಗೆ ‘ನೀನು ಒಳ್ಳೆಯ ಅಂಕ ಗಳಿಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗುವೆ’ ಎಂದು ಹಾಗೂ ಸುರೇಶನಿಗೆ ‘ನೀನು ಪರೀಕ್ಷೆಯಲ್ಲಿ ಫೇಲಾಗುವೆ’ ಎಂದರು.
ಇದರಿಂದ ಖುಷಿಗೊಂಡ ಮಹೇಶ ಓದುವುದನ್ನು ಬಿಟ್ಟ. ಜಗದ್ಗುರುಗಳ ಮಾತನ್ನೇ ನಂಬಿ ಸಿನಿಮಾ, ಟೀವಿ, ಜಾತ್ರೆ, ಹಬ್ಬ ಅಂತ ಊರೂರು ಅಲೆದ. ಆರಾಮವಾಗಿ ಆಟವಾಡಿಕೊಂಡು ಪಾಠ ಮರೆತ. ಪುಸ್ತಕ ತೆರೆಯುವ ಗೋಜಿಗೇ ಹೋಗದೆ ಓದುವ ವಿಷಯದಲ್ಲಿ ಮಹಾ ಸೋಮಾರಿಯಾದ. ಆದರೆ ಸುರೇಶ ತಾನು ಫೇಲಾಗುತ್ತೇನೆ ಎಂದು ಹೇಳಿದ ಜಗದ್ಗುರುವಿನ ಮಾತನ್ನು ನಂಬದೆ ಅವರ ಮಾತನ್ನು ಸುಳ್ಳು ಮಾಡಲು ನಿರ್ಧರಿಸಿದ. ತನ್ನ ಓದಿನ ಮೇಲೆ ನಂಬಿಕೆಯಿಟ್ಟು ಒಂದು ದಿನವೂ ಯಾವ ಊರಿಗೂ ಹೋಗದೆ, ಅಲ್ಲಿ ಇಲ್ಲಿ, ಹಬ್ಬ, ಜಾತ್ರೆ ಅಂತ ಎಲ್ಲೂ ಅಲೆಯಲಿಲ್ಲ. ಸತತವಾಗಿ ಹಗಲು ರಾತ್ರಿಯೆನ್ನದೆ ಏಕಾಗ್ರತೆಯಿಂದ ಚೆನ್ನಾಗಿ ಓದಿದ. ಓದಿದ್ದನ್ನು ಅಷ್ಟೇ ಆಸಕ್ತಿಯಿಂದ ಮನವರಿಕೆ ಮಾಡಿಕೊಂಡ.
ಒಂದೆರಡು ತಿಂಗಳಲ್ಲಿ ಪರೀಕ್ಷೆ ಬಂತು. ಮಹೇಶ ಮತ್ತು ಸುರೇಶ ಪರೀಕ್ಷೆ ಬರೆದರು. ಕೆಲವೇ ದಿನಗಳಲ್ಲಿ ಫಲಿತಾಂಶವೂ ಬಂತು. ಆದರೆ ಜಗದ್ಗುರು ಪ್ರಥಮ ದರ್ಜೆಯಲ್ಲಿ ಪಾಸಾಗುವುದಾಗಿ ಹೇಳಿದ್ದ ಮಹೇಶ ಅತ್ಯಂತ ಕಡಿಮೆ ಅಂಕ ಪಡೆದು ಫೇಲಾಗಿದ್ದ. ಹಾಗೆಯೇ ಜಗದ್ಗುರು ಫೇಲಾಗುವುದಾಗಿ ಹೇಳಿದ್ದ ಸುರೇಶ ಅತ್ಯಂತ ಹೆಚ್ಚು ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದ. ಇದರಿಂದ ಕುಪಿತಗೊಂಡ ಮಹೇಶ ಸರಸರನೆ ಆಶ್ರಮಕ್ಕೆ ಹೋಗಿ ಜಗದ್ಗುರುವಿಗೆ ‘ನೀವು ಪಾಸಾಗುವೆ ಎಂದು ಆಶೀರ್ವಾದ ಮಾಡಿದ್ದ ನಾನು ಫೇಲಾಗಿದ್ದೇನೆ. ನೀವು ಫೇಲಾಗುವುದಾಗಿ ಹೇಳಿದ್ದ ಸುರೇಶ ಪಾಸಾಗಿದ್ದಾನೆ. ನಮ್ಮಿಬ್ಬರ ವಿಷಯದಲ್ಲಿ ನೀವು ಹೇಳಿದ ಮಾತು ಸುಳ್ಳಾಯಿತು. ಏಕೆ ಹೀಗಾಯಿತು? ನಿಮ್ಮ ಮಾತನ್ನು ನಂಬಿ ನಾನು ಕೆಟ್ಟೆ’ ಎಂದು ಬೇಸರ ವ್ಯಕ್ತಪಡಿಸಿದ.
ಆಗ ಜಗದ್ಗುರು ಸಾವಧಾನದಿಂದ ‘ನೀನು ನನ್ನ ಮಾತನ್ನು ಮಾತ್ರ ನಂಬಿ ಓದುವುದರತ್ತ ನಿನ್ನ ಪ್ರಯತ್ನ ಮಾಡಲೇ ಇಲ್ಲ. ಶಕ್ತಿಯಿದ್ದೂ ನೀನು ಶಕ್ತಿಹೀನನಾದೆ. ಪ್ರಯತ್ನವಿಲ್ಲದೆ ಎಂದೂ ಫಲ ದೊರೆಯದು. ಸುರೇಶ ನನ್ನ ಮಾತನ್ನು ಲೆಕ್ಕಿಸದೆ ತನ್ನ ಪ್ರಯತ್ನದ ಮೇಲೆ ನಂಬಿಕೆಯಿಟ್ಟು ಸತತವಾಗಿ ಕಷ್ಟಪಟ್ಟು ಓದಿದ. ಹಾಗಾಗಿ ಅವನು ನಿನ್ನಷ್ಟು ಬುದ್ಧಿವಂತನಲ್ಲದಿದ್ದರೂ ಪ್ರಯತ್ನಪಟ್ಟು ಅಧ್ಯಯನ ಮಾಡಿದ್ದರಿಂದ ಅವನಿಗೆ ಉತ್ತಮ ಫಲಿತಾಂಶ ಬಂತು. ಕಷ್ಟಪಟ್ಟರೆ ಫಲ ಸಿಕ್ಕೇ ಸಿಗುತ್ತದೆಂಬ ಮಾತನ್ನು ಆತ ನಿಜ ಮಾಡಿದ್ದಾನೆ’ ಎಂದರು.
ಆಗ ಮಹೇಶನಿಗೆ ತಾನು ಎಡವಿದ್ದೆಲ್ಲಿ ಎಂದು ಅರಿವಾಯಿತು. ಯಾರ ಆಶೀರ್ವಾದ ಎಷ್ಟೇ ದೊಡ್ಡದಿದ್ದರೂ ಕನಿಷ್ಠ ಚಿಕ್ಕದಾಗಿಯಾದರೂ ನಮ್ಮ ಪ್ರಯತ್ನವಿಲ್ಲದಿದ್ದರೆ ಅದರಿಂದ ಏನೂ ಪ್ರಯೋಜನವಾಗದು. ದೇವರೇ ನಮ್ಮ ಪರವಾಗಿದ್ದರೂ ಪ್ರಯತ್ನವಿಲ್ಲದೆ ಫಲ ಸಿಗದು. ನಾನು ಅನ್ಯಾಯವಾಗಿ ಒಂದು ವರ್ಷ ಹಾಳು ಮಾಡಿಕೊಂಡೆ ಎಂದು ಆತ ಪಶ್ಚಾತ್ತಾಪಪಟ್ಟು ಮುಂದೆ ಹೀಗಾಗದಂತೆ ಎಚ್ಚರ ವಹಿಸಿದ.

  ತೆನಾಲಿ ರಾಮನ ನೆಚ್ಚಿನ ಸಿಹಿತಿಂಡಿಗಳ ಕಥೆ

ಪ್ರಯತ್ನಕ್ಕೆ‌ ತಕ್ಕ ಫಲ ಎಂಬ ನೀತಿ ಈ ಕಥೆಯಿಂದ ತಿಳಿಯುತ್ತದೆ.

Leave a Reply

Your email address will not be published. Required fields are marked *

Translate »