ಈ ಕಥೆಯಲ್ಲಿ ರೈತರು ಸೋಮಾರಿಗಳಾದರೆ ಹಾಗೂ ದೇವರನ್ನ ನಂಬಿ ತಮ್ಮ ಕಾಯಕದ ಮೇಲೆ ಶ್ರಮ ವಹಿಸಿ ದುಡಿದರೆ ಏನಾಗಬಹುದು ಎಂಬ ಕಥೆ ಓದಿ ಆನಂದಿಸಿ.
ಒಮ್ಮೆ ದೇವತೆಗಳ ರಾಜನಾದ ಇಂದ್ರನು ಯಾಕೋ ರೈತರ ಮೇಲೆ ಸಿಟ್ಟು ಮಾಡಿಕೊಂಡು, “ಇನ್ನು 12 ವರ್ಷಗಳು ಮಳೆ ಸುರಿಸುವುದಿಲ್ಲ. ಇಲ್ಲಿ ಬಿತ್ತನೆ ಮಾಡಿದರೂ ಬೆಳೆಯುವುದಿಲ್ಲ”
ಎಂದು ಶಪಿಸಿ ಬಿಟ್ಟನು.
ರೈತರು ಇಂದ್ರ ದೇವನನ್ನು ಪರಿ ಪರಿಯಾಗಿ ಬೇಡಿಕೊಂಡರು. ಆಗ ಇಂದ್ರ, ದೇವ ಶಿವ ನು ತನ್ನ ಡಮರುಗವನ್ನು ಬಾರಿಸಿದರೆ ಮಾತ್ರ ಶಾಪ ವಿಮೋಚನೆ ಆಗುವುದು ಎಂದ. ತಕ್ಷಣ ಶಿವನ ಬಳಿ ತಾನೇ ಹೋಗಿ, ರೈತರ ಬೇಡಿಕೆಗೆ ಮಣಿದು ಡಮರುಗ ಬಾರಿಸಬಾರದೆಂದು ವಿನಂತಿಸಿ, ಒಪ್ಪಿಸಿಯೂ ಬಂದು ಬಿಟ್ಡ.
ಹಾಗಾಗಿ ರೈತರು ಶಿವನ ಬಳಿ ಹೋಗಿ, ಬೇಡಿಕೊಂಡಾಗ, ಶಿವನೂ ತನ್ನ ಅಸಹಾಯಕತೆ ವ್ಯಕ್ತಪಡಿಸಿ, ಇನ್ನು 12 ವರ್ಷಗಳ ನಂತರವೇ ಡಮರುಗ ಬಾರಿಸುವುದಾಗಿ ಹೇಳಿಬಿಟ್ಟ.
ಏನು ಮಾಡಲೂ ತೋಚದ ರೈತರು 12 ವರ್ಷ ಕಾಯುವುದೆಂದು ನಿರ್ಧರಿಸಿಕೊಂಡು, ಸುಮ್ಮನಿದ್ದು ಬಿಟ್ಟರು.
ಆದರೆ ಒಬ್ಬ ರೈತ ಮಾತ್ರ ಪ್ರತಿ ವರ್ಷ ತಪ್ಪದೇ ಭೂಮಿ ಉಳುತ್ತಿದ್ದ, ಬಿತ್ತನೆ ಮಾಡುತ್ತಿದ್ದ, ಗೊಬ್ಬರ ಹಾಕುತ್ತಿದ್ದ. ಬೆಳೆಯೇನೂ ಬರುತ್ತಿರಲಿಲ್ಲ ಬಿಡಿ.
3 ವರ್ಷಗಳು ಸತತವಾಗಿ ಹೀಗೇ ನಡೆದಾಗ ಉಳಿದ ರೈತರು ಇವನನ್ನು ತಮಾಷೆ ಮಾಡತೊಡಗಿದರು…
ಅವನನ್ನೇ ಕೇಳಿಯೂ ಬಿಟ್ಟರು…” 12 ವರ್ಷಗಳು ಮಳೆಯೂ ಬರುವುದಿಲ್ಲ, ಬೆಳೆಯೂ ಬೆಳೆಯುವುದಿಲ್ಲ ಎಂದು ಗೊತ್ತಿದ್ದರೂ ನೀನು ವ್ಯರ್ಥವಾಗಿ ಶ್ರಮವನ್ನೇಕೆ ಹಾಕುತ್ತಿದ್ದೀಯ? ಗೊಬ್ಬರ ಏಕೆ ಹಾಳು ಮಾಡುತ್ತಿದ್ದೀಯ?” ಎಂದು.
ಅದಕ್ಕೆ ರೈತನ ಉತ್ತರ ಅತ್ಯಂತ ಮಾರ್ಮಿಕವಾಗಿತ್ತು…
“12 ವರ್ಷಗಳು ಮಳೆ- ಬೆಳೆ ಬರುವುದಿಲ್ಲ ಎಂದು ನನಗೆ ಗೊತ್ತಿದೆ. ಆದರೂ ಇದನ್ನೆಲ್ಲಾ ಮಾಡುತ್ತಿರುವುದು, ಉತ್ತನೆ, ಬಿತ್ತನೆಯ ಅಭ್ಯಾಸ ಇರಲಿ ಎಂಬ ಕಾರಣಕ್ಕಾಗಿ. 12 ವರ್ಷಗಳ ನಂತರ ಮಳೆ ಬಂದು, ಎಲ್ಲ ಸರಿಯಾದಾಗ, ನಾನು ಕೆಲಸವನ್ನೇ ಮರೆತು, ಅಭ್ಯಾಸವಿಲ್ಲದೇ ಸೋಮಾರಿಯಾಗಿ ಬಿಟ್ಟಿರಬಾರದಲ್ಲ” .
ಇದನ್ನು ಕೇಳಿದ ದೇವಿ ಪಾರ್ವತಿಗೆ ಖುಷಿಯಾಯಿತಂತೆ. ತಾಯಿಯೂ ಶಿವನ ಬಳಿ ತೆರಳಿ “12 ವರ್ಷಗಳ ಕಾಲ ನೀನೂ ಡಮರುಗ ಬಾರಿಸದಿದ್ದರೆ, ನಿನಗೆ ಅದನ್ನು ಬಾರಿಸುವುದೂ ಮರೆತು ಬಿಟ್ಟರೆ ಗತಿಯೇನು?” ಎಂದು ಕೇಳಿದಳಂತೆ. ಅದಕ್ಕೆ ಭೋಲೇನಾಥನು ಯೋಚಿಸಿ ನೋಡಿ, ಕುತೂಹಲದಿಂದ ಕೂಡಲೇ ಡಮರುಗವನ್ನು ಬಾರಿಸಿದನಂತೆ.
ತಕ್ಷಣ ದೇವೇಂದ್ರನ ಮಾತಿನಂತೆ ಮಳೆಯೂ ಆಯಿತು. ಈ ರೈತನೊಬ್ಬ ಮಾತ್ರ ಬಿತ್ತಿದ್ದರಿಂದ ಇವನೊಬ್ಬನಿಗೆ ಮಾತ್ರ ಬೆಳೆ ಬಂದಿತಂತೆ. ಇವನನ್ನು ನೋಡಿ ಉಳಿದ ರೈತರೆಲ್ಲರೂ ನಿರಾಶರಾಗಿ, ತಾವೂ ಉತ್ತು, ಬಿತ್ತನೆ ಮಾಡಬೇಕಿತ್ತು ಎಂದು ಪರಿತಪಿಸಿದರಂತೆ.
ಈ ಅಭ್ಯಾಸ ಬಲವೇ ನಮ್ಮನ್ನು ಪರಿಪೂರ್ಣರನ್ನಾಗಿ ಮಾಡುವುದು.
ಒಳ್ಳೆಯ ಬದುಕು ಬೇಕೆಂದರೆ ಅದಕ್ಕೆ ಒಳ್ಳೆಯ ಅಭ್ಯಾಸಗಳಿರಲೇ ಬೇಕು.
ಆ ರೈತರು ‘ಮಳೆ ಬರಲಿ, ಆಮೇಲೆ ನೋಡೋಣ’ ಎಂದಂತೆ, ನಾವೂ ಕೂಡ, ಆಮೇಲೆ ನೋಡಿದರಾಯಿತು ಎನ್ನುವುದು ಬೇಡ.
ಇಂದಿನಿಂದಲೇ, ನಮ್ಮ ಕೌಶಲ್ಯಗಳು, ಜ್ಞಾನ ವನ್ನು ಹೆಚ್ಚಿಸಿಕೊಳ್ಳುತ್ತ, ಮುಂಬರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸಿದ್ಧರಾಗೋಣ👍