ತುಳಸೀ ಪೂಜೆ
ಒಮ್ಮೆ ಪರಶಿವನನ್ನು ಭೇಟಿಯಾಗಲೆಂದು ದೇವತೆಗಳು ಕೈಲಾಸಕ್ಕೆ ಹೊರಟರು. ಕೈಲಾಸ ಪರ್ವತ ಇರುವುದು ಭೂಲೋಕದಲ್ಲಿ. ಭೂಲೋಕದಲ್ಲಿ ಇರುವವರಿಗೆ ಹಸಿವು ಬಾಯಾರಿಕೆ ಇವುಗಳೆಲ್ಲ ಸಹಜವಾಗಿ ಉಂಟಾಗುತ್ತವೆ. ಹೀಗಾಗಿ ಸ್ವರ್ಗದಲ್ಲಿರುವಾಗ ಎಂದೂ ಬಾಯಾರಿಕೆಯನ್ನು ಅನುಭವಿಸದ ಆ ದೇವತೆಗಳಿಗೆ ಭೂಲೋಕಕ್ಕೆ ಬಂದಾಗ , ಲೋಕ ನಿಯಮದಂತೆ ಪ್ರಯಾಣದ ಮಧ್ಯೆ ಬಾಯಾರಿಕೆಯಾಗುತ್ತದೆ. ಇದನ್ನರಿತ ರಕ್ಕಸರು ವೇಷ ಪಲ್ಲಟಿಸಿಕೊಂಡು ಬಂದು ದೇವತೆಗಳಿಗೆ ಮೋಸದಿಂದ ನೀರಿನ ಬದಲು ಸುರೆಯನ್ನು ಕುಡಿಸುತ್ತಾರೆ.
ಹೀಗೆ ಪಾನಮತ್ತರಾದ ದೇವತೆಗಳು ಕೈಲಾಸಕ್ಕೆ ಹೋಗಿ ಅಲ್ಲಿ ಶಿವನನ್ನು ನಿಂದಿಸುತ್ತಾರೆ. ಇದರಿಂದ ಕುಪಿತನಾದ ಶಿವನು ದೇವತೆಗಳನ್ನು ಸುಡಲು ತನ್ನ ಮೂರನೇ ಕಣ್ಣನ್ನು ತೆರೆಯುತ್ತಾನೆ. ಆಗ ಉಂಟಾಗಬಹುದಾದ ಅಪಾಯವನ್ನು ಅರಿತ ವರುಣನು ಪರಶಿವನ ಕಣ್ಣಿಂದ ಹೊರಟ ಜ್ವಾಲೆಗೆ ದೇವತೆಗಳು ಸಿಗದಂತೆ ತಪ್ಪಿಸಿ , ಆ ಜ್ವಾಲೆಯು ಸಮುದ್ರದ ನೀರಿಗೆ ಬೀಳುವಂತೆ ಮಾಡುತ್ತಾನೆ. ಅದು ಅಲ್ಲಿ ಶಿಶುವಿನ ರೂಪವನ್ನು ತಳೆಯುತ್ತದೆ. ಹೀಗೆ ಜನಿಸಿದ ಶಿಶುವೇ ‘ಜಲಂಧರ’ ಎಂಬ ರಕ್ಕಸ. ದೊಡ್ಡವನಾದ ಮೇಲೆ ಆತ ಲೋಕಕಂಟಕನಾಗುತ್ತಾನೆ. ಶಿವನನ್ನು ತಪಸ್ಸಿನಲ್ಲಿ ಮೆಚ್ಚಿಸಿದ ಜಲಂಧರನು “ತನ್ನ ಪತ್ನಿಯ ಪಾತಿವ್ರತ್ಯ ಕೆಟ್ಟಾಗ ಮಾತ್ರ ತನಗೆ ಮರಣ ಬರಲಿ” ಎಂಬ ವರವನ್ನು ಪಡೆಯುತ್ತಾನೆ.
ಕಾಲನೇಮಿ ಎಂಬ ರಕ್ಕಸನೋರ್ವನ ಪುತ್ರಿಯಾದ ‘ವೃಂದಾ’ ಎಂಬಾಕೆಯು ಒಮ್ಮೆ ತಪಸ್ಸನ್ನು ಆಚರಿಸುತ್ತಿರುವ ಗಣಪತಿಯನ್ನು ನೋಡಿ ಮೋಹಿತಳಾಗುತ್ತಾಳೆ. ಅವನನ್ನು ಒಲಿಸಿಕೊಳ್ಳಲು ಹಲವು ಪ್ರಯತ್ನಗಳನ್ನು ಮಾಡುತ್ತಾಳೆ. ಆತನ ಇದಿರಿನಲ್ಲಿ ಇಂಪಾಗಿ ಗಾಯನ ಹಾಡುತ್ತಾಳೆ , ಅನೇಕ ರೀತಿಯ ಹಾವ ಭಾವಗಳಿಂದ ನೃತ್ಯ ಮಾಡುತ್ತಾಳೆ , ಗೆಜ್ಜೆಯನ್ನು ಕುಣಿಸಿ ಸದ್ದು ಮಾಡುತ್ತಾಳೆ. ಆದರೆ ಗಣಪತಿಯು ಇವಳ ಯಾವ ಚೇಷ್ಟೆಗೂ ಬಗ್ಗದೇ ಇದ್ದಾಗ ತುಳಸಿಯು ಸಿಟ್ಟಾಗುತ್ತಾಳೆ. ಅಲ್ಲದೇ “ನೀನು ನಿನ್ನ ಸುಂದರ ರೂಪದಿಂದ ಅಹಂಕಾರ ಪಡುತ್ತಿರುವಿ , ಆದ್ದರಿಂದ ನಿನ್ನ ಸೌಂದರ್ಯಕ್ಕೆ ಕಾರಣವಾದ ಈ ದಂತಗಳಲ್ಲಿ ಒಂದು ದಂತವು ಮುಂದೆ ಪರಶುರಾಮನೊಡನೆ ನಡೆಯುವ ಯುದ್ಧದಲ್ಲಿ ನಾಶವಾಗಲಿ” ಎಂದು ಎಂದು ಗಣಪತಿಗೆ ಶಾಪವನ್ನು ಕೊಡುತ್ತಾಳೆ.
ಆಗ ತಪಸ್ಸಿನಿಂದ ಎಚ್ಚೆತ್ತ ಗಣಪತಿಗೂ ಸಿಟ್ಟು ಬರುತ್ತದೆ. ಸಿಟ್ಟಾದ ಗಣಪತಿಯು “ನೀನು ಗಿಡವಾಗಿ ಹುಟ್ಟು” ಎಂದು ತುಲಸಿಗೆ ಪ್ರತಿ ಶಾಪವನ್ನು ಕೊಡುತ್ತಾನೆ. ಆಗ ತುಳಸಿಯು ದುಃಖದಿಂದ ಗಣಪತಿಯಲ್ಲಿ ಕ್ಷಮೆ ಕೇಳಿ “ನನಗೆ ಅನುಗ್ರಹ ಮಾಡಬೇಕು” ಎಂದು ಪ್ರಾರ್ಥಿಸುತ್ತಾಳೆ. ಆಗ ಗಣಪತಿಯು “ನೀನು ಗಿಡವಾಗಿ ಹುಟ್ಟಿದರೂ ವಿಷ್ಣುವಿಗೆ ಅತ್ಯಂತ ಪ್ರಿಯಳಾಗುತ್ತೀ” ಎಂಬುದಾಗಿ ಹೇಳಿ ಆಕೆಯನ್ನು ಸಂತೈಸಿ ಕಳುಹಿಸುತ್ತಾನೆ.
ಮುಂದೆ ಜಲಂಧರನು ವೃಂದೆಯನ್ನು ವಿವಾಹವಾಗುತ್ತಾನೆ. ಆ ವೃಂದೆಯು ಮಹಾ ಪತಿವ್ರತೆಯಾಗಿದ್ದಳು. ಇದರಿಂದಾಗಿ ಜಲಂಧರನಿಗೆ ವರಬಲದಂತೆ ಸೋಲು ಅಥವಾ ಮರಣ ಎಂಬುದೇ ಇರಲಿಲ್ಲ. ಹೀಗಾಗಿ ಆತ ಸ್ವರ್ಗದ ಮೇಲೆ ದಾಳಿ ಮಾಡಿ ದೇವತೆಗಳನ್ನು ಸೋಲಿಸುತ್ತಾನೆ. ಈತನ ಉಪಟಳ ತಾಳಲಾಗದ ದೇವತೆಗಳು ವಿಷ್ಣುವಿನ ಮೊರೆ ಹೋಗುತ್ತಾರೆ.
ಜಲಂಧರನು ಪಡೆದಿರುವ ವರದ ವಿಷಯವನ್ನು ಅರಿತಿರುವ ವಿಷ್ಣುವು ಉಪಾಯದಿಂದ ಜಲಂಧರನನ್ನು ಕೊಲ್ಲಬೇಕೆಂದುಕೊಂಡು ಆತನಿರುವಲ್ಲಿಗೆ ಹೊರಡುತ್ತಾನೆ. ಆಗ ಲಕ್ಷ್ಮಿಯು “ಆತ ಸಮುದ್ರದಲ್ಲಿ ಜನಿಸಿದವನಾದ್ದರಿಂದ ಸಂಬಂಧದಲ್ಲಿ ನನಗೆ ತಮ್ಮನಾಗುತ್ತಾನೆ. ಹೀಗಾಗಿ ನಾನು ಅವನನ್ನು ಒಮ್ಮೆ ನೋಡಬೇಕು” ಎಂದುಕೊಂಡು ತಾನೂ ವಿಷ್ಣುವಿನ ಜತೆಯಲ್ಲಿ ಹೊರಡುತ್ತಾಳೆ. ಜಲಂಧರನು ಅಕ್ಕ ಭಾವ ಇಬ್ಬರನ್ನೂ ಕೂಡಾ ಸತ್ಕರಿಸಿ ತನ್ನ ಮನೆಯಲ್ಲಿಯೇ ಇರಿಸಿಕೊಳ್ಳುತ್ತಾನೆ.
ಅಷ್ಟ ದಿಕ್ಪಾಲಕರಲ್ಲಿ ಓರ್ವನಾದ ಈಶ್ವರನು ದೇವತೆಗಳ ಪರವಾಗಿ ಜಲಂಧರನೊಡನೆ ಯುದ್ಧಕ್ಕೆ ಬರುತ್ತಾನೆ. ಈಶ ಜಲಂಧರರ ನಡುವೆ ಹಲವು ದಿನಗಳವರೆಗೆ ಯುದ್ಧ ನಡೆಯುತ್ತದೆ. ಹಲವು ದಿನಗಳು ಕಳೆದರೂ ತನ್ನ ಪತಿಯು ಹಿಂತಿರುಗದೇ ಇದ್ದುದನ್ನು ಕಂಡ ವೃಂದೆಯು ತಾನೇ ಪತಿಯನ್ನು ಹುಡುಕುತ್ತಾ ಹೋಗುತ್ತಾಳೆ. ಮಾರ್ಗ ಮಧ್ಯದಲ್ಲಿ ಮಹಾವಿಷ್ಣುವೇ ಜಲಂಧರನ ರೂಪ ಧರಿಸಿ ವೃಂದೆಯ ಇದಿರಿಗೆ ಬರುತ್ತಾನೆ. ಆತನೇ ತನ್ನ ಪತಿಯೆಂದುಕೊಂಡು ವೃಂದೆಯು ಓಡೋಡಿ ಬಂದು ಅವನನ್ನು ತಬ್ಬಿಕೊಳ್ಳುತ್ತಾಳೆ. ಹೀಗೆ ಆಕೆಗೆ ಅರಿವಿಲ್ಲದೇ ಆಕೆಯ ಪಾತಿವ್ರತ್ಯ ಕೆಡುತ್ತದೆ. ಅದೇ ಸಮಯದಲ್ಲಿ ಪರಶಿವನು ಜಲಂಧರನನ್ನು ಸಂಹರಿಸುತ್ತಾನೆ. ಆತನ ರುಂಡವು ವೃಂದೆಯ ಎದುರು ಬಂದು ಬೀಳುತ್ತದೆ.
ಪತಿಯ ಮರಣದ ವಾರ್ತೆಯನ್ನು ತಿಳಿದ ವೃಂದೆಯು ಆತನ ರುಂಡದ ಸಹಿತವಾಗಿ ಅಗ್ನಿಗೆ ಹಾರಿ ಸಹಗಮನ ಮಾಡಿಕೊಳ್ಳುತ್ತಾಳೆ. “ನಮಗೆ ಆಶ್ರಯ ನೀಡಿದವರನ್ನೇ ಕೊಂದೆವೆಂಬ ಅಪಕೀರ್ತಿಯನ್ನು ನಾನು ಎಷ್ಟಕ್ಕೂ ಸಹಿಸೆನು , ಆದ್ದರಿಂದ ನಾನು ಇನ್ನು ವೈಕುಂಠಕ್ಕೆ ಮರಳಲಾರೆ” ಎಂದುಕೊಂಡು ಲಕ್ಷ್ಮಿಯು ತಾನೂ ಕೂಡಾ ವೃಂದೆಯೊಡನೆ ಚಿತೆಯಲ್ಲಿ ಬಿದ್ದು ದೇಹತ್ಯಾಗ ಮಾಡಲು ಉದ್ಯುಕ್ತಳಾಗುತ್ತಾಳೆ. ಸ್ವತಹ ತ್ರಿಮೂರ್ತಿಗಳೇ ಬಂದು , ಖಳನನ್ನು ವಧಿಸಲು ಬೇರೆ ಉಪಾಯವೇ ಇರಲಿಲ್ಲ ಎಂದು ಪರಿಸ್ಥಿತಿಯ ಅನಿವಾರ್ಯತೆಯನ್ನು ತಿಳಿಸಿ ಅವಳನ್ನು ಸಂತೈಸುತ್ತಾರೆ. ಆದರೂ ಆಕೆ ಒಪ್ಪದೇ “ನಾನು ಈ ವೃಂದೆಯೊಡನೆಯೇ ಇರುತ್ತೇನೆ” ಎಂದು ದೇಹತ್ಯಾಗ ಮಾಡುತ್ತಾಳೆ.
ಹೀಗೆ ಸಹಗಮನ ಮಾಡಿಕೊಂಡ ವೃಂದೆಯು ತುಲಸೀ ಗಿಡವಾಗಿ ಜನಿಸುತ್ತಾಳೆ. ಮುಂದೆ ಅದುವೇ ‘ವೃಂದಾವನ’ ಎಂಬುದಾಗಿ ಭೂಲೋಕದಲ್ಲಿ ಪ್ರಸಿದ್ಧವಾಗುತ್ತದೆ. ಲಕ್ಷ್ಮಿಯು ಕೂಡಾ ತುಳಸೀಕಟ್ಟೆಯ ರೂಪ ಧರಿಸಿ ಆಕೆಯನ್ನು ಆಧರಿಸುತ್ತಾ ಆ ವೃಂದಾವನದಲ್ಲಿಯೇ ನೆಲೆಸುತ್ತಾಳೆ. ಎಲ್ಲಿ ಲಕ್ಷ್ಮಿಯು ಇರುವಳೋ ತಾನೂ ಅಲ್ಲಿಯೇ ಇರುವೆ ಎಂದುಕೊಂಡು ಮಹಾವಿಷ್ಣುವೂ ಕೂಡಾ ಆ ವೃಂದಾವನದಲ್ಲಿಯೇ ನೆಲೆಸುತ್ತಾನೆ. ಎಲ್ಲಿ ಶ್ರೀ ಹರಿ ಇರುವನೋ ನಾವೂ ಅಲ್ಲಿಯೇ ಇರುತ್ತೇವೆ ಎಂದುಕೊಂಡು ಹರ ಬ್ರಹ್ಮರು ಮಾತ್ರವಲ್ಲದೇ ದೇವತೆಗಳೆಲ್ಲರೂ ನಿರ್ಧರಿಸುತ್ತಾರೆ. ವೃಂದಾವನದಲ್ಲಿರುವ ತುಳಸಿ ಗಿಡದ ಬುಡದಲ್ಲಿ ಬ್ರಹ್ಮನೂ , ನಡುವಿನಲ್ಲಿ ವಿಷ್ಣುವೂ , ತುದಿಯಲ್ಲಿ ಈಶ್ವರನೂ ನೆಲೆಸಿರುವುದರಿಂದ ಆ ವೃಂದಾವನವು ಪ್ರಸಿದ್ಧ ಪುಣ್ಯಕ್ಷೇತ್ರವಾಗುತ್ತದೆ.
ಹೀಗೆ ದೇವಾನುದೇವತೆಗಳೆಲ್ಲರೂ ಒಂದೇ ಕಡೆ ನೆಲೆಸಿದಾಗ ಲೋಕದ ಆಗುಹೋಗುಗಳೆಲ್ಲ ಏರುಪೇರಾಗುತ್ತವೆ. ಹೀಗೆ ಉಂಟಾದ ಸಮಸ್ಯೆಯನ್ನು ಪರಿಹರಿಸುವುದಕ್ಕಾಗಿ ‘ಈ ವೃಂದಾವನದಲ್ಲಿ ವರುಷಕ್ಕೊಮ್ಮೆ ಕಾರ್ತಿಕ ಶುದ್ಧ ದ್ವಾದಶಿಯಂದು ನಾವೆಲ್ಲರೂ ಬಂದು ಇಲ್ಲಿ ನೆಲೆಸೋಣ’ ಎಂಬ ಒಪ್ಪಂದದೊಂದಿಗೆ ತ್ರಿಮೂರ್ತಿಗಳು ಹಾಗೂ ದೇವಾನುದೇವತೆಗಳೆಲ್ಲರೂ ಅಲ್ಲಿಂದ ತೆರಳುತ್ತಾರೆ.
ಹೀಗೆ ವೃಂದಾವನವು ಪುಣ್ಯ ಸ್ಥಳವಾಗಿರುವುದರಿಂದ ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ತುಳಸೀ ಕಟ್ಟೆಯೊಂದನ್ನು ನಿರ್ಮಿಸಿಕೊಂಡು ಅದರಲ್ಲಿ ತುಳಸಿಯನ್ನು ಹುಲುಸಾಗಿ ಬೆಳೆಸುತ್ತಾರೆ. ಅದನ್ನೇ ತಮ್ಮ ‘ವೃಂದಾವನ’ ಎಂದುಕೊಂಡು ಪೂಜಿಸುತ್ತಾರೆ. ಪ್ರತಿ ವರ್ಷ ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿಯ ದಿನದಂದು ತ್ರಿಮೂರ್ತಿಗಳ ಸಹಿತರಾಗಿ ದೇವತೆಗಳೆಲ್ಲರೂ ಅಲ್ಲಿ ಬಂದು ನೆಲೆಸಿರುತ್ತಾರೆ ಎಂಬ ನಂಬಿಕೆಯಿಂದ ಜನರೆಲ್ಲರೂ ಅಂದು ತುಳಸೀ ಪೂಜೆಯನ್ನು ನೆರವೇರಿಸುತ್ತಾರೆ.
ದ್ವಾದಶಿಯ ದಿನವೇ ಏಕೆ ? ಎಂಬುದಕ್ಕೂ ಕಾರಣವಿದೆ. ಆಷಾಢ ಮಾಸದ ಶುಕ್ಲ ಪಕ್ಷದ ಪ್ರಥಮೈಕಾದಶಿಯಂದು ಮಹಾವಿಷ್ಣುವು ಕ್ಷೀರಸಾಗರದಲ್ಲಿ (ಕ್ಷೀರಾಬ್ಧಿಯಲ್ಲಿ) ಮಲಗುತ್ತಾನೆ (ಶಯನಿಸುತ್ತಾನೆ). ಆದ್ದರಿಂದ ಅದನ್ನು ‘ಶಯನೈಕಾದಶೀ’ ಎಂದು ಕರೆಯುತ್ತಾರೆ. ಅಂದು ಮಲಗಿದ ಮಹಾವಿಷ್ಣುವು ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ಎದ್ದೇಳುತ್ತಾನೆ. ಆದ್ದರಿಂದ ಅದನ್ನು ‘ಉತ್ಥಾನದ್ವಾದಶೀ’ ಎಂದು ಕರೆಯುತ್ತಾರೆ. (ಉತ್ಥಾನ ಅಂದರೆ ಎದ್ದೇಳುವುದು ಎಂದರ್ಥ) ಹೀಗೆ ಮಹಾವಿಷ್ಣುವು ನಿದ್ದೆಯಿಂದ ಎದ್ದೇಳುವ ದಿನವೇ ನಮ್ಮ ತುಳಸೀ ಪೂಜೆಯ ದಿನವಾಗಿದೆ. ಪತಿಯು ಎದ್ದೇಳುವ ಮುನ್ನವೇ ಪತ್ನಿಯು ಎದ್ದೇಳುವುದು ಸ್ವಾಭಾವಿಕ ಅಲ್ಲವೇ ? ಅಂತೆಯೇ ಮಹಾವಿಷ್ಣುವಿನ ಪತ್ನಿಯಾದ ಮಹಾಲಕ್ಷ್ಮಿಯು ಎದ್ದೇಳುವ ದಿನವು ಉತ್ಥಾನದ್ವಾದಶಿಗಿಂತ ಪೂರ್ವದಲ್ಲಿ ಬರುವ ದೀಪಾವಳಿಯ ದಿನವಾಗಿದೆ. ಹೀಗಾಗಿ ಲಕ್ಷ್ಮಿಗೆ ದೀಪಾವಳಿಯಂದೇ ಪೂಜೆ ಮಾಡುತ್ತೇವೆ.
ತುಳಸೀ ಕಟ್ಟೆಗೆ ದೀಪಾವಳಿ ದಿನದಿಂದ ಆರಂಭವಾಗಿ ಉತ್ಥಾನ ದ್ವಾದಶಿಯವರೆಗೂ ಪ್ರತಿದಿನವೂ ಪೂಜೆ ಸಲ್ಲಿಸುತ್ತೇವೆ. ಉತ್ಥಾನದ್ವಾದಶಿಯ ದಿನದಂದು ವಿಶೇಷವಾಗಿ ಪೂಜೆ ಮಾಡುತ್ತೇವೆ. ಅಂದು ತುಳಸೀ ಕಟ್ಟೆಯನ್ನು ಶುದ್ಧೀಕರಿಸಿ , ರಂಗೋಲಿ ಹಾಕಿ , ನೆಲ್ಲಿಯ ಟೊಂಗೆ , ಮಾವಿನ ತಳಿರುಗಳಿಂದ ಅಲಂಕರಿಸಿ, ಕೃಷ್ಣನ ವಿಗ್ರಹ ಇಟ್ಟು , ಆ ಕ್ಷೀರಾಬ್ಧಿಶಯನನೊಡನೆ ತುಳಸೀಕಲ್ಯಾಣ ಪೂಜೆಯನ್ನು ಮಾಡುತ್ತಾರೆ. ಆದ್ದರಿಂದ ಅದಕ್ಕೆ ಚುಟುಕಾಗಿ ‘ಕ್ಷೀರಾಬ್ಧಿ’ ಎಂದೇ ಕರೆಯುತ್ತಾರೆ. ಅಂದು ಕೃಷ್ಣನಿಗೆ ಪ್ರಿಯವಾದ ಅವಲಕ್ಕಿಯ ಪಂಚಕಜ್ಜಾಯವನ್ನು ನೈವೇದ್ಯ ಮಾಡುತ್ತಾರೆ. ಲಕ್ಷ್ಮೀನಾರಾಯಣರ ಭಜನೆ ಮಾಡುತ್ತಾರೆ. ಹೀಗೆ ತುಳಸೀ ಪೂಜೆಗೂ ದೀಪಾವಳಿಗೂ ಅವಿನಾಭಾವ ಸಂಬಂಧ ಇದೆ.
- ಹರಿಕೃಷ್ಣ ಹೊಳ್ಳ , ಅಧ್ಯಾಪಕ , ಬ್ರಹ್ಮಾವರ.