ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಉತ್ಥಾನದ್ವಾದಶಿ – ತುಳಸಿ ಹಬ್ಬ ದ ಹಿನ್ನಲೆ ಕಥೆ

ಉತ್ಥಾನದ್ವಾದಶಿ
ಉತ್ಥಾನದ್ವಾದಶಿಯ ಪೌರಾಣಿಕ ಹಿನ್ನೆಲೆ..
ಕಾರ್ತೀಕ ಶುದ್ಧ ದ್ವಾದಶಿಯಂದು ತುಲಸೀ ಪೂಜೆಯನ್ನು ಸ್ತ್ರೀಯರು ನಿಯಮದಿಂದ ಮಾಡುತ್ತಾರೆ. ದೇವರಿಗೆ ತುಳಸೀ ಅರ್ಚನೆ ಮಾಡಿಸುತ್ತಾರೆ. ಉತ್ಧಾನದ್ವಾದಶಿಯಂದು ವಿಶೇಷ ಪೂಜೆ ನಡೆಸುತ್ತಾರೆ. ಆ ದಿನ ಕ್ಷೀರಪಥದಲ್ಲಿ ಗಗನ ನೀಲಿಮೆಯ ಭಿತ್ತಿಯಲ್ಲಿ ನಕ್ಷತ್ರಗಳ ಚಿತ್ರ ವಿಸ್ತಾರದಲ್ಲಿ ಶಯನ ವಿಷ್ಣುವಿನ ಆಕಾರವನ್ನು ಕಾಣಬಹುದು; ಅನಂತನ ಭೋಗತಲ್ಪದಲ್ಲಿ ಶಯನನಾಗಿದ್ದವನು ಅಂದು ಮೇಲಕ್ಕೇಳುತ್ತಾನೆಂಬ ವಾಡಿಕೆ. ಇದಕ್ಕಾಗಿ ಈ ದಿನವನ್ನು ಉತ್ಥಾನದ್ವಾದಶಿಯೆಂದು ಹೇಳುವುದುಂಟು.
ತುಳಸಿಯ ಮಹಿಮೆ ಹಿರಿದಾಗಿದೆ. ತುಳಸಿಯ ದರ್ಶನದಿಂದ ಪಾಪ ಪರಿಹಾರ, ಸ್ಪರ್ಶದಿಂದ ಪವಿತ್ರತೆ, ನಮಸ್ಕಾರದಿಂದ ರೋಗಪರಿಹಾರ, ಪ್ರೋಕ್ಷಿಸಿಕೊಂಡರೆ ಆಯುರ್ವೃದ್ಧಿ, ಸಸಿ ನೆಡುವುದರಿಂದ ಶ್ರೀಕೃಷ್ಣನ ಸಾನಿಧ್ಯ ಪ್ರಾಪ್ತಿ, ಅರ್ಚಿಸಿದರೆ ಮೋಕ್ಷಪ್ರಾಪ್ತಿಯೆಂಬುದು ಸನಾತನ ಸಂಪ್ರದಾಯ. ಇದು ಕೇವಲ ಮಡಿವಂತರ ಅತ್ಯುಕ್ತಿಮಾತ್ರವಲ್ಲ; ಪುರಾಣಗಳಲ್ಲಿ, ಆಯುರ್ವೇದ ಶಾಸ್ತ್ರಗಳಲ್ಲಿ ತುಳಸಿಯ ಮಹಿಮೆ ಹೇಳಲ್ಪಟ್ಟಿದೆ.
ಹಿಂದೆ ಜಲಂಧರನೆಂಬ ಪ್ರಬಲ ರಾಕ್ಷಸನಿದ್ದನು. ಆತನ ಹೆಂಡತಿ ವೃಂದೆ. ಈಕೆ ಪರಮ ಪತಿವ್ರತೆ. ಈಕೆಯ ಪಾತಿವ್ರತ್ರಯ ಬಲದಿಂದ ಯಾವ ಯುದ್ಧದಲ್ಲಿಯೂ ಪತಿಗೆ ಸೋಲು ಸಂಭವಿಸಿರಲಿಲ್ಲ. ಆದರೆ ಈ ವಿಜಯೋನ್ಮತ್ತತೆಯಲ್ಲಿ ದೇವತೆಗಳನ್ನೂ ಸೋಲಿಸುತ್ತಾ ಬಂದನು. ಆಗ ದೇವಲೋಕದವರೆಲ್ಲ ವಿಷ್ಣುವಿನ ಮೊರೆಹೊಕ್ಕರು. ವೃಂದೆಯ ಪಾತಿವ್ರತ್ಯ ಪ್ರಭಾವವನ್ನು ತಿಳಿದಿದ್ದ ವಿಷ್ಣು, ಅದರ ಭಂಗಕ್ಕೆಂದು ಕಪಟೋಪಾಯವನ್ನು ಯತ್ನಿಸಿದನು. ಜಲಂಧರ-ದೇವತೆಗಳೊಂದಿಗೆ ಯುದ್ಧ ಮಾಡುತ್ತಿದ್ದಾಗ ವಿಷ್ಣು ತಾನೇ ಜಲಂಧರನ ವೇಷಧರಿಸಿ, ಬೇರ್ಪಟ್ಟ ರುಂಡ-ಮುಂಡಗಳ ವಿಕೃತ ರೂಪದಲ್ಲಿ ಕಾಣಿಸಿಕೊಂಡನು. ಸತಿ ವೃಂದೆಯು ಪತಿಯನ್ನು ಕಳೆದುಕೊಂಡೆನೆಂದು ಶೋಕಿಸಿದರು. ಅಷ್ಟರಲ್ಲಿ ವಿಷ್ಣು ಸಾಧುವೇಶದಿಂದ ಪುನಃ ಕಾಣಿಸಿಕೊಂಡು ಸಂಜೀವಿನಿ ವಿದ್ಯೆಯಿಂದ ಆ ಬೇರ್ಪಟ್ಟ ರುಂಡ-ಮುಂಡವನ್ನು ಕೂಡಿಸಿದನು. ವೃಂದೆಯು ಸಂತೋಷದಿಂದ ಪತಿಯನ್ನಪ್ಪಿದಳು! ಆದರೆ ವಾಸ್ತವವಾಗಿ ವ್ರತಭಂಗವಾಯಿತು. ವೃಂದೆ ಮೋಸದಿಂದ ಜಾರಿದಳು. ಅತ್ತ ಜಲಂಧರ ಮೃತನಾದನು. ಸತ್ಯಸಂಗತಿ ತಿಳಿದ ಮೇಲಂತೂ ಉದ್ವೇಗಗೊಂಡ ವೃಂದೆಯು, ವಿಷ್ಣುವಿಗೆ – ʼನಿನಗೆ ಪತ್ನಿ ವಿಯೋಗ ಒದಗಲಿʼ ಎಂದು ಶಪಿಸಿದಳು. ಆನಂತರ ಚಿತೆಯನ್ನೇರಿದಳು. ಇದೇ ತ್ರೇತಾಯುಗದಲ್ಲಿ ಶ್ರೀರಾಮನಿಗೆ ಆದ ಸೀತಾವಿಯೋಗ.
ಪಾರ್ವತಿಯು ವೃಂದೆಗಾಗಿ ಚಿತೆಯ ಸುತ್ತಲೂ ವೃಂದಾವನ ನಿರ್ಮಿಸಿದಳು. ಅಲ್ಲಿ ಬೆಳೆದ ತುಳಸಿಯನ್ನು ವಿಷ್ಣು ಹೃತ್ಪೂರ್ವಕವಾಗಿ ಸ್ವೀಕರಿಸಿ ಧರಿಸಿದನು. ವೃಂದೆಯ ವನ – ವೃಂದಾವನವಾಯಿತು. ಉತ್ಥಾನದ್ವಾದಶಿಯಂದು ತುಳಸೀ ವೃಂದಾವನಕ್ಕೆ ಧೂಪ-ದೀಪ ಗಂಧಾಕ್ಷತೆಗಳಿಂದ ವಿಶೇಷ ಪೂಜೆ ಮಾಡುವರು. ಅಗಸೆ, ನೆಲ್ಲಿ ಮತ್ತು ತುಳಸಿ ಇವು ಮೂರು ಬಹು ಪವಿತ್ರವಾದವುಗಳು. ತ್ರಿಮೂರ್ತ್ಯಾತ್ಮಕವಾದವುಗಳು. ಆದ್ದರಿಂದ ಇವುಗಳನ್ನು ಈ ದಿನ ಪೂಜೆಗೆ ಅಗತ್ಯವಾಗಿ ಉಪಯೋಗಿಸುವರು. ವೃಂದಾದೇವಿಯ ಅನುಗ್ರಹಕ್ಕೆ ಪಾತ್ರರಾಗಲು, ತ್ರಿಮೂರ್ತಿಗಳೂ, ಅವರ ಪತ್ನಿಯರಾದ ಶಕ್ತಿದೇವಿಯರೂ ಮತ್ತು ಇತರ ದೇವತೆಗಳೂ ಅಲ್ಲಿ ಸೇರುತ್ತಾರೆಂದು ʼತುಳಸಿʼ ಮಹಾತ್ಮೆಯಲ್ಲಿ ಹೇಳಿದೆ. ಈ ದಿನ ಕಾರ್ತೀಖ ದಾಮೋದರ ಸ್ವಾಮಿಯನ್ನು ಷೋಡಶೋಪಚಾರಗಳಿಂದ ಪೂಜಿಸಿ, ಶಂಖದಲ್ಲಿ ಹಾಲೆರೆದು ʼಉತ್ತಿಷ್ಠೋತ್ತಿಷ್ಠ ಗೋವಿಂದ, ಉತ್ತಿಷ್ಠ ಗರುಡಧ್ವಜ, ಉತ್ತಿಷ್ಠಕಮಲಾಕಾಂತ ತ್ರೈಲೋಕ್ಯಂ ಮಂಗಳಂ ಕುರುʼ ಎಂದು ಪ್ರಾರ್ಥಿಸುವ ಪದ್ಧತಿಯಿದೆ. ತುಳಸಿಪೂಜೆಯಿಂದ ಸಕಲ ಅಭೀಷ್ಠ ಸಿದ್ಧಿಯೆಂದು ಪದ್ಮಪುರಾಣದಲ್ಲಿ ಹೇಳಿದೆ.
ತುಳಸಿಯು ಮನೆ ಮನೆಯ ಕಲ್ಪವೃಕ್ಷ
ಶಿವನಿಗೆ ಬಿಲ್ವಪತ್ರೆಯು ಪ್ರಿಯವಾದಂತೆ, ವಿಷ್ಣುವಿಗೆ ತುಳಸಿಯು ಪ್ರಿಯವಾದುದು. ಅನೇಕರು ತುಳಸಿಯ ತೀರ್ಥ ತೆಗೆದುಕೊಳ್ಳದೆ ಊಟಮಾಡುವುದಿಲ್ಲ. ತುಳಸಿಯಲ್ಲಿ ಬಿಳಿ ತುಳಸಿ, ಕಪ್ಪು ತುಳಸಿ, ಅರಣ್ಯ ತುಳಸಿ, ಬಿಲ್ವ-ಗಂಧ ತುಳಸಿ, ವಿಶ್ವಗಂಧ ತುಳಸಿ ಎಂಬ ಅನೇಕ ವಿಧಗಳುಂಟು. ವೈದ್ಯಶಾಸ್ತ್ರದಲ್ಲಿ ತುಳಸಿಗೆ ಹೆಚ್ಚು ಪ್ರಾಧಾನ್ಯತೆಯಿದೆ. ತುಳಸಿಯಿರುವೆಡೆ ಸೊಳ್ಳೆಗಳ ಕಾಟವಿಲ್ಲ. ಅಂಟುರೋಗಗಳ ಬಾಧೆಯಿಲ್ಲ. ಮಕ್ಕಳ ಕೆಮ್ಮು, ನೆಗಡಿಗೆ ಇದು ಹತ್ತಿರ ವೈದ್ಯ. ಚರ್ಮವ್ಯಾಧಿಗಳಿಗೂ ಉತ್ತಮ ಪರಿಹಾರ. ಪಾಶ್ಚಾತ್ಯರೂ ಸಹ ತುಳಸಿಯ ವೈದ್ಯಕೀಯ ಗುಣವನ್ನು ಕಂಡು ಮೆಚ್ಚಿದ್ದಾರೆ. ಜಪಾನ್‌ ನಲ್ಲಿ ಮನೆಗಳ ಮುಂದೆ ತುಳಸೀ ತೋಟಗಳುಂಟು.
ಈ ಬಾರಿಯ ತುಳಸಿ ಪೂಜೆಯನ್ನು ೫ನೇ ನವೆಂಬರ್‌ ೨೦೨೨ ಶನಿವಾರ ಆಚರಿಸಲಾಗುತ್ತದೆ.
ದ್ವಾದಶಿ ತಿಥಿ ಸಮಯ: ನವೆಂಬರ್ 04, ಸಂಜೆ 6:08 ರಿಂದ ನವೆಂಬರ್ 05, ಸಂಜೆ 5:07 ರವರೆಗೆ.
ತುಳಸಿ ಪೂಜೆಯನ್ನು ಭಾರತದಾದ್ಯಂತ ವಿವಾಹಿತ ಮಹಿಳೆಯರು ತಮ್ಮ ಪತಿ ಮತ್ತು ಕುಟುಂಬದ ಸದಸ್ಯರ ಯೋಗಕ್ಷೇಮಕ್ಕಾಗಿ ಆಚರಿಸುತ್ತಾರೆ. ಇಂಥ ಪೌರಾಣಿಕ ಮತ್ತು ಆಯುರ್ವೇದದಲ್ಲಿ ಮಹತ್ವ ಪಡೆದುಕೊಂಡಿರುವ ತುಳಸಿಯನ್ನು ಪೂಜೆ, ದೇವಿ ಕೃಪೆಗೆ ಪಾತ್ರರಾಗೋಣ.

  ಲೋಕಮಾತೆ ವಾಸವಿ ದೇವಿ

ಶ್ರೀಕೃಷ್ಣಾರ್ಪಣಮಸ್ತು

Leave a Reply

Your email address will not be published. Required fields are marked *

Translate »