18 ಪುರಾಣಗಳು : ವಾಯು ಪುರಾಣ ಏನು ಹೇಳುತ್ತದೆ?
ವಾಯು ಪುರಾಣ
ಶ್ಲೋಕ ಸಂಖ್ಯೆ 24,000 ಎಂಬ ಹೇಳಿಕೆಯಿದ್ದರೂ ಮುದ್ರಿತಪ್ರತಿಯ ಸಂಖ್ಯೆ 12,000 ಮಾತ್ರ. ಇದು ಬಹುಶಃ ಪುರಾಣದ ಒಂದನೆಯ ಖಂಡದಷ್ಟೇ ಆಗಿರಬೇಕು. ಅನುಕ್ರಮಣಿಕೆಗಳ ಕಾಲದಲ್ಲಿ ದೇವಾದಿ ಮಾಹಾತ್ಮ್ಯಗಳು ಇದಕ್ಕೆ ಸೇರಿದ್ದವೆಂದು ತೋರುತ್ತದೆ. ಇದು ಎಲ್ಲ ಪುರಾಣಗಳಿಗಿಂತ ಹೆಚ್ಚು ಪ್ರಾಚೀನವೆಂದು ನಂಬಲಾಗಿದೆ. ವಾಯು ಬ್ರಹ್ಮಾಂಡಗಳೆರಡೂ ವಾಯುಪ್ರೋಕ್ತ ಪುರಾಣಗಳಾದುದರಿಂದ ಇವು ಮೊದಲು ಒಂದೇ ಕೃತಿಯಾಗಿದ್ದುವೆಂದು ಪಾರ್ಗಿಟರ್ನ ಮತ. ಮಹಾಭಾರತ, ಹರಿವಂಶಗಳು ವಾಯುಪುರಾಣವನ್ನು ಉಲ್ಲೇಖಿಸುತ್ತವೆ, ಶ್ಲೋಕಗಳನ್ನು ಉದ್ಧರಿಸುತ್ತವೆ. ಕ್ರಿ.ಶ. 4ನೆಯ ಶತಮಾನದ ಗುಪ್ತಚಕ್ರವರ್ತಿಗಳ ಆಳ್ವಿಕೆ ಇಲ್ಲಿ ವರ್ಣಿತವಾಗಿದೆ.
ಆದುದರಿಂದ ಪ್ರಾಚೀನತಮವಾದ ಮೂಲವಾಯು ಪುರಾಣದ ಕಾಲ ಯಾವುದೇ ಆದರೂ ಅದರ ಇಂದಿನ ರೂಪದ ಬಹುಭಾಗ ಪ್ರ.ಶ. ಸು. 5ನೆಯ ಶತಮಾನದ್ದೆಂದು ವಿಂಟರ್ನಿಟ್ಜನ ಅಭಿಪ್ರಾಯ. ಜನತ್ಸೃಷ್ಟಿ ವಂಶವೃಕ್ಷ ಮುಂತಾದ ಪ್ರಾಚೀನ ಪೌರಾಣಿಕ ವಿಷಯಗಳೂ ಶಿವೋತ್ಕರ್ಷವನ್ನು ಸಾಧಿಸುವ ಕತೆಗಳೂ ಜಗತ್ಪ್ರಳಯವೂ ಯೋಗಮಾರ್ಗ ಪ್ರಶಂಸೆಯೂ ಶಿವಪುರ ವರ್ಣನ, ವಿಷ್ಣುಪ್ರಭಾವ, ಶ್ರಾದ್ಧ, ಗೀತಾಲಂಕಾರ, ಗಯಾ ಮಾಹಾತ್ಮ್ಯಗಳೂ ಈ ಪುರಾಣದ ಮುಖ್ಯಾಂಶಗಳು. ಇದಕ್ಕೆ ಸೇರಿದವೆಂದು ಹೇಳಲಾಗುವ ಇನ್ನೂ ಎಷ್ಟೋ ಸ್ತೋತ್ರಗಳೂ ಮಾಹಾತ್ಮ್ಯಗಳೂ ಕರ್ಮವಿಧಿಗ್ರಂಥಗಳೂ ದೊರಕುತ್ತವೆ. ಪ್ರಸ್ತುತ ವಾಯುಪುರಾಣದಲ್ಲಿರುವ ಪ್ರಾಚೀನ ಭಾಗಗಳ ಕಾಲ ಪ್ರ.ಶ. 200 ಅಥವಾ ಅದಕ್ಕೂ ಹಿಂದೆ ಹೋಗಬಹುದು.
ವಾಯುಪುರಾಣ ದೇವರಲ್ಲಿಯ ಸೃಷ್ಟಿಮಾಡುವ ಪ್ರವೃತ್ತಿಯ ಮೂಲಕಾರಣವನ್ನು ಅಪ್ರಮೇಯವೆನ್ನುತ್ತದೆಯಲ್ಲದೆ, ಅದನ್ನು ಬ್ರಹ್ಮ, ಪ್ರಧಾನ, ಪ್ರಕೃತಿ, ಪ್ರಕೃತಿ-ಪ್ರಸೂತಿ, ಆತ್ಮ, ಗುಹ, ಯೋನಿ, ಚಕ್ಷುಸ್, ಕ್ಷೇತ್ರ, ಅಮೃತ, ಅಕ್ಷರ, ಶುಕ್ರ, ತಪಸ್, ಸತ್ಯ ಅಥವಾ ಅತಿಪ್ರಕಾಶ ಎಂದೂ ಕರೆಯುತ್ತದೆ, ಅದು ಲೋಕಪಿತಾಮಹನಾದ ಎರಡನೆಯ ಪುರುಷನನ್ನು ಸುತ್ತುವರಿದಿರುತ್ತದೆ. ಕಾಲಸಂಪರ್ಕ ಮತ್ತು ರಜಃ ಪ್ರಾಧಾನ್ಯಗಳಿಂದ ಕ್ಷೇತ್ರಜ್ಞನಿಗೆ ಸಂಬಂಧಿಸಿದ ಎಂಟು ಪರಿವರ್ತನಗಳಾಗುತ್ತವೆ.
ಪ್ರಕೃತಿ ಮೂಲತಃ ಇಂದ್ರಿಯಗ್ರಾಹ್ಯ ಗುಣಗಳುಳ್ಳದ್ದಲ್ಲ; ಸತ್ತ್ವಾದಿಗುಣತ್ರಯದಿಂದ ಕೂಡಿದ್ದು; ಕಾಲಾತೀತ ಮತ್ತು ಅಜ್ಞೇಯ. ತನ್ನ ಮೂಲಸ್ವರೂಪ ವಾದ ಗುಣತ್ರಯ ಸಾಮ್ಯಾವಸ್ಥೆಯಲ್ಲದ್ದು ತಮೊರೂಪದಿಂದ ಎಲ್ಲವನ್ನೂ ಆವರಿಸಿತ್ತು. ಸೃಷ್ಟಿಕಾಲದಲ್ಲಿ ಅದಕ್ಕೆ ಕ್ಷೇತ್ರಜ್ಞ ಸಂಪರ್ಕವುಂಟಾಗಿ ಅದರಿಂದ ಮಹತ್ತತ್ತ್ವ ಹುಟ್ಟಿತು. ಈ ಮಹತ್ತನ್ನು ಮನಸ್, ಮತಿ, ಬ್ರಹ್ಮ, ಪುರ್, ಬುದ್ಧಿ, ಖ್ಯಾತಿ, ಈಶ್ವರ, ಚಿತಿ, ಪ್ರಜ್ಞೆ, ಸ್ಮೃತಿ, ಸಂವಿತ್, ವಿಪುರ ಎಂಬ ಹೆಸರುಗಳಿಂದ ಕರೆಯುತ್ತಾರೆ.
ಸತ್ತ್ವಪ್ರಧಾನವೂ ಶುದ್ಧಾಸ್ತಿತ್ವ ಸ್ವರೂಪವುಳ್ಳದ್ದೂ ಆದ ಮಹತ್ತು ಸೃಜಿಸುವ ಇಚ್ಛೆಯುಂಟಾದಾಗ ಧರ್ಮಾಧರ್ಮಾದಿ ಪದಾರ್ಥಗಳನ್ನು ನಿರ್ಮಿಸುತ್ತದೆ. ಇಡೀ ವಿಶ್ವದ ಚರಾಚರಗಳೆಲ್ಲವೂ ಮಹತ್ತ್ವದ ಪರಿಣಾಮಗಳು. ಕ್ಷೇತ್ರ, ಕ್ಷೇತ್ರಜ್ಞರಲ್ಲಿ ಅದೇ ಜ್ಞಾತೃ. ಕ್ಷೇತ್ರಜ್ಞನೇ ಬ್ರಹ್ಮ, ಹಿರಣ್ಯ ಗರ್ಭ. ಗುಣತ್ರಯದ ಸಹಕಾರದಿಂದಾಗಿ ಮೊಟ್ಟೆಯಿಂದ ಆತ ಹುಟ್ಟಿದವ. ಪ್ರತಿ ಪ್ರಳಯದಲ್ಲೂ ಬ್ರಹ್ಮನ ಶರೀರ ನಾಶವಾಗುತ್ತದೆ. ಮೊಟ್ಟೆಯ ರೂಪದ ಬ್ರಹ್ಮಾಂಡ ಜಲ, ಪ್ರಕಾಶ, ಉಷ್ಣತೆ, ವಾಯು, ಆಕಾಶ, ಭೂತಾದಿ, ಮಹತ್ ಮತ್ತು ಅವ್ಯಕ್ತಗಳಿಂದ ಆವೃತವಾಗಿದೆ.
ವಾಯು ಮತ್ತು ಬ್ರಹ್ಮಾಂಡ ಪುರಾಣಗಳ ಪ್ರಕಾರ ಸೃಷ್ಟಿಯ ಆ ಆದಿಕಾಲದಲ್ಲಿ ಬ್ರಹ್ಮ ಸಾತ್ತ್ವಿಕ, ರಾಜಸ, ಸಾತ್ತ್ವಿಕ ರಾಜಸ, ಮತ್ತು ತಾಮಸಿಕ ಎಂಬ ನಾಲ್ಕು ಬಗೆಗಳ ಮನುಷ್ಯರನ್ನು ತನ್ನ ಬಾಯಿ, ಎದೆ, ತೊಡೆ ಮತ್ತು ಪಾದಗಳಿಂದ ಹುಟ್ಟಿಸಿದನೆಂದೂ ಅವರೆಲ್ಲರೂ ಮೇಲು-ಕೀಳೆಂಬ ಭೇದವಿಲ್ಲದೆ ಸಮಾನರಾಗಿ ಬಾಳುತ್ತಿದ್ದರೆಂದೂ ಅವರಲ್ಲಾಗ ವರ್ಣಾಶ್ರಮ ಭೇದಗಳಿರಲಿಲ್ಲವೆಂದೂ ಚಳಿಬಿಸಿಲುಗಳ ಅಂಜಿಕೆಯಿಲ್ಲದೆ, ಮನೆ-ಮಠಗಳನ್ನಾಶ್ರಯಿಸದೆ ದಿವ್ಯ ಜೀವನ ನಡೆಸುತ್ತಿದ್ದರೆಂದೂ ತಿಳಿಯುತ್ತದೆ.
ತಮ್ಮ ದಿವ್ಯತೆಯನ್ನವರು ಕಳೆದುಕೊಂಡು ಮರ್ತ್ಯರಾದಾಗ ತಮ್ಮ ಕರ್ಮಕ್ಕೆ ತಕ್ಕಂತೆ ಮುಂದೆ ಜನ್ಮಗಳನ್ನು ಪಡೆದು, ಹಿಂದಿನದಕ್ಕೆ ವ್ಯತಿರಿಕ್ತವಾದ ಸ್ಥಿತಿಗಿಳಿದರು. ವರ್ಣ ಜಾತಿಗಳ ಮತ್ತು ರಾಜಾಧಿಕಾರದ ಅಗತ್ಯವುಂಟಾಗಲು ಮಾನವರು ಭ್ರಮಿಷ್ಠರಾಗಿ, ಪಾಪಮಾಡಿ, ದಿನೇ ದಿನೇ ಅಧಃಪತನ ಹೊಂದುತ್ತ ಹೋದುದೇ ಕಾರಣವೆಂದು ಉಕ್ತಪುರಾಣಗಳ ಮತ.
ಕೃತಯುಗದಿಂದ ಕಲಿಯುಗದವರೆಗೆ ಧರ್ಮ ಕ್ಷೀಣವಾಗುತ್ತ ಹೋದ ಹಾಗೆ ಅದನ್ನು ಅರ್ಜಿಸುವ ವಿಧಾನಗಳ ಬಿಗಿಯೂ ಕಡಿಮೆಯಾಗುತ್ತದೆ, ರಾಜಾಧಿಕಾರ ದೇವಾಧಿಕಾರಕ್ಕೆ ಸರಿದೊರೆಯಾಗುತ್ತದೆ; ಪ್ರಭು ಪ್ರಜೆಗಳಿಬ್ಬರೂ ಪರಸ್ಪರರ ಬಗ್ಗೆ ಮಾಡಬೇಕಾದ ಕರ್ತವ್ಯಗಳನ್ನು ಮಾಡದಿದ್ದರೆ ದಂಡನೀಯವಾಗುತ್ತಾರೆ-ಎಂಬೀ ಅಂಶಗಳನ್ನೂ ವಿಷ್ಣು ಭಾಗವತ, ಮಾರ್ಕಂಡೇಯ ಪುರಾಣಗಳಂತೆಯೇ ಇವೂ ಪ್ರತಿಪಾದಿಸಿವೆ. ಸರ್ವರೂ ಧರ್ಮಾಧೀನರೆಂಬ ಸ್ಮೃತಿಪರಂಪರೆಗಿದು ಸಮ್ಮತ.🙏
|| ಕೃಷ್ಣಾರ್ಪಣಾಮಸ್ತು |l
ಅಡ್ಮಿನ್ ಬಳಗ .
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿ ನಿಮ್ಮಗೇ ಬೇಕಾದಲ್ಲಿ. ಸಂಪಾದಕೀಯ ಶಾಖೆ ಮಂಗಳೂರು.ಮೊಬೈಲ್ +919945295560 ಮುಖ್ಯ ಕಛೇರಿ ಯುರೋಪ್.
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿ ನಿಮ್ಮಗೇ ಬೇಕಾದಲ್ಲಿ. WhatsApp:https://chat.whatsapp.com/ISbrOeVLYcP5M7irDdsxKc
⬆️ಇಲ್ಲಿ ಕ್ಲಿಕ್ ಮಾಡಿ.