ತಾಳಿಯ ಪವಿತ್ರತೆ ಏನು?
ತಾಳಿಯ ಮಹತ್ವವೇನು..?
ಸನಾತನ ಧರ್ಮದಲ್ಲಿ ಮದುವೆಗೆ ಒಂದು ಮಹತ್ವ ಸ್ಥಾನವಿದೆ, ಯಾರಿಗವರೇ ಮದುವೆಯನ್ನು ಮಾಡಿಕೊಳ್ಳುವ ಹಾಗಿಲ್ಲ. ಕುಟುಂಬ ಜನ ಸಮಕ್ಷಮದಲ್ಲೇ ಮದುವೆಯಾಗಬೇಕು. ಕೇವಲ ಶಾರೀರಿಕ ಸುಖಕ್ಕಾಗಿ ಮದುವೆಯನ್ನು ಮಾಡಿಕೊಳ್ಳಬಾರದು. ಲೈಂಗಿಕ ಆನಂದಕ್ಕಾಗಿ ಮದುವೆಯಾಗುವುದಕ್ಕೆ ಧರ್ಮಶಾಸ್ತ್ರಗಳು ಅಂಗೀಕರಿಸುವುದಿಲ್ಲ.
“ವೈವಾಹಿಕೋ ವಿಧಿಃ ಸ್ತ್ರೀಣಾಂ ಸಂಸ್ಕಾರೋ ವೈದಿಕಃ ಸ್ಮೃತಃ | ಪತಿಸೇವಾಗೃಹೇವಾಸೋ ಗೃಹಾರ್ಧೇಗ್ನಿ ಪರಿಕ್ರಿಯಾ | “
-ಮನುಧರ್ಮಶಾಸ್ತ್ರ
“ಸ್ತ್ರೀಯರಿಗೆ ವಿವಾಹವಿಧಿ ವೈದಿಕ ಸಂಸ್ಕಾರವಾಗಿದೆ. ಪತಿಯ ಗೃಹನಿವಾಸವು ಅಗತ್ಯವಾಗಿದೆ. ಪುರುಷರು ಗುರುಕುಲ ನಿವಾಸಕ್ಕೆ ಹೋದಂತೆ ಸ್ತ್ರೀಯರು ಗಂಡನ ಮನೆಗೆ ಹೋಗಬೇಕು. ಗೃಹಕೃತ್ಯಗಳನ್ನು ಯಜ್ಞಯಾಗಗಳಂತೆ ನಿರ್ವಹಿಸಬೇಕು.” ಎನ್ನುತ್ತಿದೆ ಧರ್ಮಶಾಸ್ತ್ರ. ವಿವಾಹವು ಜೀವನ ಸಂಸ್ಕಾರವಾಗಿ ಭಾವಿಸುತ್ತಾರೆ ಸೃಷ್ಟಿಕಾರ್ಯನಿರ್ವಹಣೆಗಾಗಿ ನಡೆಯುವ ಪರಮ ಪವಿತ್ರವಿಧಿಯೇ ಮದುವೆ ಎಂದು ಹೇಳುತ್ತಾರೆ ಹಿರಿಯರು.
ಈ ಕಾರಣದಿಂದಲೇ
“ಧರ್ಮೇಚ, ಅರ್ಥೇಚ, ಕಾಮೇಚ, ಮೋಕ್ಷೇಚ, ನಾತಿಚರಾಮಿ’ ಎಂದು ವರನು ವಧುವಿಗೆ ಪ್ರಮಾಣ ಮಾಡುತ್ತಾನೆ. ‘ಓ ಧರ್ಮಪತ್ನಿ ! ಧರ್ಮದಾನಾದಿ ವಿಷಯಗಳಲ್ಲಿ, ಧನಧಾನ್ಯಾದಿ ಸಂಪತ್ತುಗಳ ವಿಷಯದಲ್ಲಿ ಶಾರೀರಿಕ ಸುಖಗಳ ವಿಷಯದಲ್ಲಿ, ದಾನ ಧರ್ಮಗಳಿಂದ ಲಭಿಸುವ ಪುಣ್ಯಫಲಗಳ ವಿಷಯದಲ್ಲಿ ಇಂದಿನಿಂದ ನೀನು ನನ್ನ ಸಮಭಾಜನಳಾಗಿರುವೆ. ನಿನ್ನನ್ನು ಅತಿಕ್ರಮಿಸಿ ನಾನು ನಡೆಯುವುದಿಲ್ಲ. ನೀನು ಸಹ ನನ್ನಂತೆಯೇ ಇರಬೇಕು’ ಎಂದು ದೈವಸಾಕ್ಷಿಯಾಗಿ ಪ್ರಮಾಣ ಮಾಡಿಸುತ್ತಾರೆ. ಈ ಪ್ರಮಾಣದ ನಂತರವೆ ಮಾಂಗಲ್ಯಧಾರಣೆ ನಡೆಯುತ್ತದೆ.
ಮಾಂಗಲ್ಯಧಾರಣಾ ಸಮಯದಲ್ಲಿ ವರನು ಮಂತ್ರಪೂರ್ವಕವಾಗಿಯೇ ತಾಳಿ ಕಟ್ಟಬೇಕು. ಇದು ವೈದಿಕ ಪ್ರಮಾಣವೇ ಆಗಿರುತ್ತದೆ.
ಮಾಂಗಲ್ಯಂ ತಂತುನಾನೇನ ಮಮ ಜೀವನ ಹೇತುನಾ |
ಕಂಠೇ ಬಧ್ನಾಮಿ ಸುಭಗೇ! ತ್ವಂ ಜೀವ ಶರದಶ್ಯತಂ ॥
“ಓ ಮಾಂಗಲ್ಯವೇ ! ನನ್ನ ಜೀವನ ಸೌಭಾಗ್ಯಕ್ಕೆ ಕಾರಣಳಾಗಿರುವ ಈ ನನ್ನ ಧರ್ಮಪತ್ನಿಯ ಕೊರಳಲ್ಲಿ ನಿನ್ನನ್ನು ಅಲಂಕರಿಸುತ್ತಿದ್ದೇನೆ. ನೀನು ಈ ಸೌಭಾಗ್ಯವತಿಗೆ ರಕ್ಷೆಯಾಗಿ ನೂರು ವರ್ಷಗಳ ಕಾಲವು ಇರುವಂತಾಗಲೀ ! ಸಮಸ್ತ ದೇವತೆಗಳು ನಿನ್ನನ್ನು ಆಶೀರ್ವದಿಸಲೀ” ಎಂದು ಪವಿತ್ರ ತಾಳಿಯನ್ನು ವಧುವಿನ ಕೊರಳಲ್ಲಿ ‘ಮೂರು ಗಂಟುಗಳು’ ಹಾಕಿ ಕಟ್ಟುತ್ತಾನೆ. ಮೂರೇ ಗಂಟುಗಳು ಯಾಕೆ ಹಾಕಬೇಕು ? ಇದರ ಅರ್ಥವೇನೆಂದರೆ ತ್ರಿಮಾತೆಯರಾದ ಲಕ್ಷ್ಮೀ, ಸರಸ್ವತಿ, ಪಾರ್ವತಿಯರ ಸಾಕ್ಷಿಯಾಗಿ, ತ್ರಿಮೂರ್ತಿಗಳಾದ ಬ್ರಹ್ಮ ವಿಷ್ಣು ಮಹೇಶ್ವರರ ಸಾಕ್ಷಿಯಾಗಿ ತ್ರಿಸಂಧ್ಯೆಗಳ ಸಾಕ್ಷಿಯಾಗಿ, ಋಗ್- ಯಜು-ಸಾಮಗಳೆಂಬ ತ್ರಿವೇದಗಳ ಸಾಕ್ಷಿಯಾಗಿ ಮೂರು ಗಂಟುಗಳನ್ನು ಹಾಕಿಸುತ್ತಾರೆ. ಮೂರು ಗಂಟುಗಳು ಹಾಕಿದ ನಂತರ ಅರಿಶಿಣ ಕುಂಕುಮಗಳನ್ನು ಆ ಗಂಟುಗಳ ಮೇಲೆ ಇಟ್ಟು ವರನು ತಾಳಿಗೆ ನಮಸ್ಕರಿಸುತ್ತಾನೆ.
ಪವಿತ್ರತಾಸೂಚಕವಾಗಿ ತಾಳಿಯ ದಾರವನ್ನು ಅರಿಶಿನದಿಂದ ಸಂಸ್ಕರಿಸುತ್ತಾರೆ. ತಾಳಿಯ ಸೂತ್ರದಲ್ಲಿ ತಾಳಿಗಳನ್ನು ಮುತ್ತೈದೆಯರು ಮಾತ್ರ ಪೋಣಿಸಬೇಕೆಂಬ ನಿಯಮವೂ ಇದೆ. ಕೆಲವರು ಮದುವೆಗೆ ಮುಂದಿನ ದಿನವೇ ತಾಳಿಯನ್ನು ದೇವರ ಮುಂದೆಯಿಟ್ಟು ದೇವರ ಆಶೀರ್ವಾದಗಳನ್ನು ಬಯಸುತ್ತಾರೆ.
ಮದುವೆಯಾದ ನಂತರ ತಾಳಿಗಳು ಸರ್ವಕಾಲ ಸರ್ವಾವಸ್ಥೆಗಳಲ್ಲಿಯೂ ಕೊರಳಲ್ಲೇ ಇರಬೇಕಾಗಿರುತ್ತದೆ. ಮಾಂಗಲ್ಯವು ಅಲಂಕಾರದ ವಸ್ತುವಲ್ಲ. ಪವಿತ್ರವಾದ ವಸ್ತು, ಎಂಥಾ ಕಾಮುಕ ಪುರುಷನಾದರೂ ತಾಳಿಯನ್ನು ನೋಡಿದ ಕೂಡಲೇ ತಲೆ ತಗ್ಗಿಸಿ ಕೈಮುಗಿಯುವಂಥಾ ಮಹತ್ವ ತಾಳಿಗೆ ಇದೆ. ಜನಿವಾರ ಮತ್ತು ಶಿವದಾರ ಹೇಗೆ ಪವಿತ್ರವಾದವೋ ತಾಳಿಯೂ ಸ್ತ್ರೀಯರಿಗೆ ಪವಿತ್ರವಾದದ್ದು.
ತಾಳಿಯ ಮಹತ್ವವನ್ನು ಕಣ್ಣಾರೆ ನಾವೇ ಕಾಣಬಹುದು. ತಾಳಿ ಕೊರಳಲ್ಲಿ ಬೀಳುವುದಕ್ಕೆ ಮುಂದೆ ಇರುವ ಹೆಣ್ಣಿನ ವರ್ತನೆಗೂ, ಮದುವೆಯಾದ ನಂತರ ಇರುವ ಹೆಣ್ಣಿನ ವರ್ತನೆಗೂ ಬಹು ವ್ಯತ್ಯಾಸವಿರುತ್ತದೆ. ನೋಡುವ ನೋಟ, ಆಡುವ ಮಾತು, ಮಾಡುವ ಚೇಷ್ಟೆ, ಮನಸಿನ ಬಯಕೆ ಎಲ್ಲದರಲ್ಲಿಯೂ ನಾವು ಬದಲಾವಣೆಯನ್ನು ಕಾಣಬಹುದು. ಇದೆಲ್ಲಾ ತಾಳಿಯ ಮಹತ್ವವೇ
ತಾಳಿ ಕೊರಳಲ್ಲಿ ಬಿದ್ದ ದಿನದಿಂದಲೇ ಹೆಣ್ಣಿನ ನಡೆನುಡಿಗಳಲ್ಲಿ ಬದಲಾವಣೆಗಳು ಸ್ವಾಗತಾರ್ಹವೇ! ಮೊದಲಿನಂತೆಯೇ ಎಲ್ಲರ ಜೊತೆಯಲ್ಲಿ ಮಾತನಾಡುವುದು, ಆಡುವುದು, ಕೂಗುವುದು, ಕುಪ್ಪಳಿಸುವುದು, ಕುಣಿಯುವುದು ನಡೆಯೋಲ್ಲ. ಕುಮಾರೀ ಸ್ವಾತಂತ್ರ್ಯವು ಈಗಿರುವುದಿಲ್ಲ. ಈಗ ಅವಳು ಪರವಸ್ತುವಾಗಿದ್ದಾಳೆ. ಅಣ್ಣ-ತಮ್ಮಂದಿರ ಜೊತೆ ಜಗಳವಾಡುವುದು, ಅಮ್ಮ ಅಪ್ಪನ ಜೊತೆ ಮುನಿದುಕೊಂಡು ಮಲಗುವುದು ಅವಳಿಗೆ ಈಗ ಸರಿಯಲ್ಲ.
ವರನಾಗಿ ಮದುವೆ ಮಾಡಿಕೊಂಡಿರುವವನ ಬಾಧ್ಯತೆಯೂ ಕಡಿಮೆಯೇನಲ್ಲ. ಮೊದಲಿನಂತೆ ಗೆಳೆಯರ ಜೊತೆ ತಿರುಗುವುದು. ಅರ್ಧರಾತ್ರಿಗೆ ಮನೆಗೆ ಸೇರುವುದು, ಕೆಲಸಗಳನ್ನು ಅಣ್ಣಅಪ್ಪಂದಿರ ಮೇಲೆ ಹಾಕಿ ಹಾಯಾಗಿ ತಿರುಗಾಡುವುದನ್ನು ಬಿಡಬೇಕು. ಮದುವೆಯಾದನಂತರ ಸದಾಕಾಲವೂ ಹೆಂಡತಿಯ ಜೊತೆಯಲ್ಲಿ ಸರಸವಾಡುತ್ತಾ ಇರಬಾರದು. ಹಾಗೆಂದು ಮಾತನಾಡದೇ ಇರಬಾರದು.
ಮದುವೆಯಾದ ಹೆಣ್ಣನ್ನು ‘ಅರ್ಧಾಂಗಿ’ ಎನ್ನುತ್ತಾರೆ. ಅರ್ಧಾಂಗಿ ಅಂದರೆ ಗಂಡನ ಶರೀರದಲ್ಲಿ ಅರ್ಧ ಭಾಗವನ್ನು ಆಕ್ರಮಿಸಿದವಳು ಎಂದರ್ಥ. ಹೆಂಡತಿಯನ್ನು ಅರ್ಧಾಂಗಿಯಾಗಿಯೇ ಕಾಣಬೇಕು. ಮನ್ನಿಸಬೇಕು. ಪ್ರೀತಿಸಬೇಕು. ಹುಟ್ಟಿ ಬೆಳೆದಿರುವ ಮನೆಯನ್ನು ಬಿಟ್ಟುಬಂದ ಮಡದಿಗೆ ಮನನೋವಾಗುವಂತೆ ಮಾತನಾಡಬಾರದು. ಹೆಂಡತಿಯೆಂದರೆ ಗೆಳತಿ, ಸಾಧಾರಣ ಗೆಳತಿಯಲ್ಲ. ಸಾವಿನ ತುದಿಘಳಿಗೆಯವರೆಗೂ ಜೊತೆಬಿಡದ ಮಹಾಗೆಳತಿ!
ಮಾಂಗಲ್ಯದ ಪವಿತ್ರತೆಯನ್ನು ಗಂಡ ಹೆಂಡತಿಯರಿಬ್ಬರೂ ಅಜೀವ ಪರ್ಯಂತರವೂ ಕಾಪಾಡಿಕೊಂಡು ಬರಬೇಕು. ಎಂಥಾ ಸಮಸ್ಯೆಗಳು ಎದುರಾದರೂ ವಿವಾಹ ಬಂಧನದಲ್ಲಿ ಬಿರುಕು ಬರಬಾರದು. ನೊಂದುಕೊಳ್ಳುವ ವಿಷಯದಲ್ಲಿಯೂ ಹೊಂದಿಕೊಂಡೇ ನಡೆಯಬೇಕು.