ಸೆಗಣಿಯ – ಪಾಂಡವರ ಪ್ರತಿಷ್ಠಾಪನೆ ಪುರಾಣ ಹಿನ್ನೆಲೆ…!
ಪೂರ್ವದಿಂದಲೂ ಸೆಗಣಿ ರೈತನಿಗೆ ಅನ್ನ ನೀಡುವ ಸಂಜೀವಿನಿಯೂ ಹೌದು ಎನ್ನಲು ಇದೊಂದು ಅತ್ಯುತ್ತಮ ನಿದರ್ಶನ.
ಧಾರ್ಮಿಕ ಹಿನ್ನೆಲೆ ಭೂಲೋಕಕ್ಕೆ ಕಂಟಕಪ್ರಾಯನಾಗಿ ಜನತೆಯನ್ನು ಕಷ್ಟದ ಕಣ್ಣೀರಿನಲ್ಲಿ ಕೆತೊಳೆಯುವಂತೆ ಮಾಡಿದ್ದ ನಂದ ರಾಕ್ಷಸನನ್ನು ವಿಷ್ಣು ದೇವನು ಸಂಹರಿಸಿದನಂತೆ.
ಇದರ ಸವಿನೆನಪಿಗಾಗಿ ದೀಪಾವಳಿಯ ಅಮವಾಸ್ಯೆಯ ಪಾಡ್ಯದ ದಿವಸ ಪಾಂಡವರ ಮೂರ್ತಿಯನ್ನು ಮಾಡಿ ಪೂಜಿಸುವುದು ಧಾರ್ಮಿಕ ಹಿನ್ನೆಲೆ.
ಪಾಂಡವರನ್ನು ಅಲಂಕರಿಸುವುದು ಖುಷಿಯೋ ಖುಷಿ ದೀಪಾವಳಿ ಅಮವಾಸ್ಯೆಯ ಮರು ದಿವಸ ಪಾಡ್ಯದಂದು ಬೆಳಗ್ಗೆ ಸೆಗಣಿಯಿಂದ ಪಾಂಡವರು ಎಂದು ಐದು ಮೂರ್ತಿಗಳನ್ನು ಮಾಡಿ ಅದಕ್ಕೆ ಉತ್ರಾಣಿ ಕಡ್ಡಿ, ಹೊನ್ನುರಕಿ ಹೂ, ಅಣ್ಣಿ ಹೂ, ಸೇರಿದಂತೆ ವಿವಿಧ ರೀತಿಯ ಹೂವುಗಳಿಂದ ಅಲಂಕಾರ ಮಾಡುತ್ತಾರೆ.
ಸುಣ್ಣದಿಂದ ಪಾಂಡವರು ಬರುವ ದಾರಿಗೆ ಸಣ್ಣ ಸಣ್ಣ ಹೆಜ್ಜೆಗಳ ಗುರುತು ಸಹ ಮಾಡಿ ಭಕ್ತಿಯಿಂದ ಪೂಜೆ ಸಲ್ಲಿಸುವುದು ಒಂದು ವೈಶಿಷ್ಟ್ಯ.
ಏನಿದು ಪಾಂಡವರ ಪೂಜೆ ಆಕಳು(ಗೋಮಾತೆ) ಸೆಗಣಿಯಿಂದ ನಂದಾ, ಭದ್ರಾ, ಸುಗುಣ, ಶಶಿಲಾ, ಸುರಭಿ ಎನ್ನುವ ಗೋವುಗಳು ಶಿವನಲ್ಲಿ ನಾವು ಭೂಲೋಕಕ್ಕೆ ಬರುತ್ತೇವೆ ನಮ್ಮನ್ನು ಕೂಡಾ ಪೂಜೆಗೊಳ್ಳುವಂತೆ ವರ ನೀಡಿ ಎಂದಾಗ ಶಿವನು ಬಲಿಪಾಡ್ಯದ ದಿನದಂದು ಆ ಐದು ಗೋವುಗಳ ಪೂಜೆಯ ಸಂಕೇತವಾಗಿ ಈ ಮೂರ್ತಿಗಳನ್ನು ತಯಾರಿಸುತ್ತಾರೆ.
ಇವುಗಳಿಗೆ ವಿವಿಧ ತರಹದ ಹೂಗಳಿಂದ ಅಲಂಕಾರ ಮಾಡಿ ಪೂಜಿಸುತ್ತಾರೆ. ಇದನ್ನು ವಿಷ್ಣುವು ನಂದ ರಾಕ್ಷಸನನ್ನು ಕೊಂದ ನೆನಪಿಗಾಗಿ ದೀಪಾವಳಿಯ ಪಾಡ್ಯದ ದಿವಸ ಪಾಂಡವರನ್ನು ಪ್ರತಿಷ್ಠಾಪಿಸುವುದು ಹಿಂದಿನಿಂದ ನಡೆದುಕೊಂಡ ಬಂದ ಸಂಪ್ರದಾಯವಾಗಿದೆ.
ದನದ ಕೊಟ್ಟಿಗೆಯಲ್ಲಿಯೇ ಪೂಜೆ ಸೆಗಣಿಯಿಂದ ತಯಾರಾದ ಮೂರ್ತಿಗಳನ್ನು ಬಾಗಿಲು ಹಾಗೂ ದನದ ಕೊಟ್ಟಿಗೆಗಳಲ್ಲಿ ಇಟ್ಟು ಪೂಜಿಸುತ್ತಾರೆ.
ಇದಕ್ಕೆ ಕಾರಣವೆಂಬಂತೆ ಗೋವುಗಳು ನಡೆದ ಹೆಜ್ಜೆಯನ್ನು ಸಹ ಸುಣ್ಣದಿಂದ ಹಾಕಿ ಬಾಗಿಲಿನಿಂದ ದನದ ಕೊಟ್ಟಿಗೆಯವೆರೆಗೂ ಹೆಜ್ಜೆಯ ಗುರುತುಗಳನ್ನು ಹಾಕಿ ಅವುಗಳನ್ನು ಪೂಜಿಸುವುದು ಸಂಪ್ರದಾಯವಾಗಿದೆ.
ಇದಕ್ಕೆ ಗೋವುಗಳ ಪಾದವು ಹಿಂದು ಧರ್ಮದಲ್ಲಿ ಪವಿತ್ರ ಎನ್ನುವ ಸಂಕೇತವಾಗಿದೆ.
ಶಿವನ ಜಡೆ ಸೆಗಣಿಯಿಂದ ತಯಾರಾದ ಈ ಮೂರ್ತಿಗಳಿಗೆ ವಿವಿಧ ರೀತಿಯ ಹೂಗಳಿಂದ ಅಲಂಕಾರ ಮಾಡುವುದು ಅಲ್ಲದೇ ವಿಶೇಷವಾಗಿ ಉತ್ರಾಣಿ ಕಡ್ಡಿಯನ್ನು ಮೂರ್ತಿಯ ನೆತ್ತಿಯ ಮೇಲೆ ನೆಡುತ್ತಾರೆ.
ಈ ಉತ್ರಾಣಿ ಕಡ್ಡಿಯು ಜಡೆಯಂತೆ ಇರುವುದರಿಂದ ಇದು ಶಿವನ ಜಡೆ ಎಂದು ತಿಳಿದುಕೊಂಡು ಶ್ರದ್ಧೆ ಭಕ್ತಿಯಿಂದ ಪೂಜಿಸುತ್ತಾರೆ.
ದನದ ಕೊಟ್ಟಿಗೆಯಲ್ಲಿ ಪೂಜೆ ನಾಡಿನ ರೆತ ಕುಟುಂಬಗಳಲ್ಲಿ ಜಾನುವಾರುಗಳ ಕೊಟ್ಟಿಗೆಗೆ ಪೂಜ್ಯನೀಯ ಸ್ಥಾನ. ದನದ ಕೊಟ್ಟಿಗೆಯಲ್ಲಿ ಲಕ್ಷ್ಮೀಯ ಗೂಡು ಇರುವುದು ಕಡ್ಡಾಯವಾಗಿದೆ.
ಇದರ ಉದ್ದೇಶ ಕೊಟ್ಟಿಗೆಯಲ್ಲಿರುವ ಗೋವುಗಳ ಜೊತೆಗೆ ಲಕ್ಷ್ಮೀಯು ವಾಸವಾಗಿರುತ್ತಾಳೆ ಎನ್ನುವುದು ಒಂದು ನಂಬಿಕೆಯಾಗಿದೆ.
ಆದ್ದರಿಂದ ರೈತರ ದನಕರುಗಳಿಗೆ ಏನಾದರೂ ಆಪತ್ತು ಬಂದರೆ ಲಕ್ಷ್ಮೀ ಪೂಜೆಯನ್ನು ಮಾಡುವುದು ನಂದಾ ದೀಪವನ್ನು ಬೆಳಗಿಸುವುದು ಇಂದಿಗೂ ನಡೆದು ಬಂದ ಸಂಪ್ರದಾಯವಾಗಿದೆ.
ನಾಡಿನ ಎಲ್ಲೆಡೆ ಆಚರಿಸುತ್ತಿರುವ ಪ್ರತಿ ಹಬ್ಬದಲ್ಲಿ ಒಂದೊಂದು ವಸ್ತು ಪೂಜೆಗೊಳ್ಳುತ್ತವೆ. ಎಲ್ಲವೂ ಮಾನವನ ಜೀವನಕ್ಕೆ ಹತ್ತಿರವಾದುದು ಎನ್ನುವುದಕ್ಕೆ ಸೆಗಣಿಯಿಂದ ತಯಾರಾದ ಈ ಪಾಂಡವ ಮೂರ್ತಿಗಳೇ ಸಾಕ್ಷಿ.
ಪೂರ್ವದಿಂದಲೂ ಸೆಗಣಿ ರೈತನಿಗೆ ಅನ್ನ ನೀಡುವ ಸಂಜೀವಿನಿಯೂ ಹೌದು ಎನ್ನಲು ಇದೊಂದು ಅತ್ಯುತ್ತಮ ನಿದರ್ಶನ.🙏