ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಇದು ಯಾರ ಕಾಶ್ಮೀರ? – The Kashmiri Files ನೋಡುವ ಮುನ್ನ

TheKashmiriFiles ನೋಡುವ ಮುನ್ನ ಅಥವಾ ನೋಡಿದ ಮೇಲೂ ಒಮ್ಮೆ ಓದಿ…

ಇದು ಯಾರ ಕಾಶ್ಮೀರ?

ಹದಿಮೂರನೇ ಶತಮಾನದವರೆಗೂ ಕಾಶ್ಮೀರದಲ್ಲಿ 90% ಕ್ಕೂ ಹೆಚ್ಚು ಹಿಂದೂ ಮತ್ತು ಬೌದ್ಧರಿದ್ದರು. ಈಗಿನ ಅಂಕಿಅಂಶಗಳ ಪ್ರಕಾರ ಕಾಶ್ಮೀರದಲ್ಲಿ ಇರುವ ಹಿಂದೂಗಳ ಜನಸಂಖ್ಯೆ ಸುಮಾರು 2%…!
ಸುಮಾರು ಆರುಸಾವಿರ ವರ್ಷಗಳ ಇತಿಹಾಸವಿರುವ ಕಾಶ್ಮೀರದಲ್ಲಿ ಕೇವಲ ಆರುನೂರು ವರ್ಷಗಳಲ್ಲಿ ಇಂತಹ ಜನಾಂಗೀಯ ವರ್ಗದ ಏರುಪೇರಾಗಿದೆ ಎಂದರೆ ಇದರ ಹಿನ್ನಲೆಯಲ್ಲಿ ಅದೆಂತಹಾ ದಾರುಣ್ಯದ, ದೌರ್ಜನ್ಯದ ಮತಾಂತರ ನಡೆದಿರಬಹುದು ಊಹಿಸಿ. ಹೊರಗಿನಿಂದ ದರೋಡೆ ಮತ್ತು ಲೂಟಿ ಮಾಡಲು ಬಂದ ದರೋಡೆಕೋರರು ಇಲ್ಲಿನ ಸಂಪತ್ತನ್ನು ಕೊಳ್ಳೆಹೊಡೆದದ್ದು ಒಂದೇ ಅಲ್ಲಾ… ಇಲ್ಲಿನ ಸಾತ್ವಿಕ, ಶಾಂತಿಪ್ರಿಯ ಜನರನ್ನು ಬಲಾತ್ಕಾರ, ಬಲವಂತದ ಮತಾಂತರ ಮತ್ತೆ ಅದಕ್ಕೆ ಒಪ್ಪದಿದ್ದರೆ ಅತ್ಯಂತ ಕ್ರೌರ್ಯದ ಸಾವಿಗೀಡುಮಾಡಿಬಿಡುತ್ತಿದ್ದರು. ದೇವನಾಡಾಗಿದ್ದ ಕಾಶ್ಮೀರ ಭಯದ ಬೀಡಾಯಿತು…
ಹಂತಹಂತವಾಗಿ ಇಲ್ಲಿನ ಸಂಪತ್ತು, ಸೌಂದರ್ಯ, ಸುಸಂಸ್ಕೃತತೆ ಮಾಯವಾಗಿ ಕರಾಳ ರೌದ್ರತೆ ನರ್ತಿಸತೊಡಗಿತು…ಇಂತಹದ್ದೊಂದು ವಿಕೃತ ದೌರ್ಜನ್ಯ ನಡೆದದ್ದು 19/01/1990 ರಂದು. ಬರೋಬ್ಬರಿ ಮೂವತ್ತೆರಡು ವರ್ಷಗಳ ಹಿಂದೆ. ಕಾಶ್ಮೀರದ ಕಣಿವೆಯಲ್ಲಿ ಅಂದು ಪ್ರಾರಂಭವಾದ ಹಿಂಸಾಚಾರ ಲಕ್ಷಾಂತರ ಕಾಶ್ಮೀರಿ ಪಂಡಿತರ ಅವರ ಕುಟುಂಬದ ಸದಸ್ಯರ ಜೀವನವನ್ನು ಅಲ್ಲೋಲಕಲ್ಲೋಲ ಮಾಡಿತು.

ಶ್ರೀನಗರ, ಜನವರಿ 4, 1990 : ಜಮಾತ್ ಎ ಇಸ್ಲಾಮಿನ ಅಂಗಸಂಸ್ಥೆಯಾದ ಹಿಜಬ್ ಉಲ್ ಮುಜಾಹಿದೀನ್, ಹೊರಡಿಸಿದ ಪತ್ರಿಕಾ ಹೇಳಿಕೆಯೊಂದನ್ನು “ಅಫ್ತಾಬ್” ಹೆಸರಿನ ಶ್ರೀನಗರದ ಸ್ಥಳೀಯ ಉರ್ದು ಪತ್ರಿಕೆಯೊಂದು ಪ್ರಕಟಪಡಿಸುತ್ತದೆ. ಉದ್ದೇಶ: ಜಮ್ಮು ಮತ್ತು ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸಿ, ಪಾಕಿಸ್ತಾನದ ಜತೆ ಸೇರಿಸುವ ಸಲುವಾಗಿ “ಜಿಹಾದ್” ಗೆ ಕರೆ. ಮೊದಲ ಹೆಜ್ಜೆಯಾಗಿ, ಕಾಶ್ಮೀರದ ಹಿಂದುಗಳಿಗೆ ಆದೇಶಕೊಡಲಾಗುತ್ತದೆ…., ಹಿಂದುಗಳೇ, ಕಾಶ್ಮೀರವನ್ನು ಬಿಟ್ಟು ಗಂಟು ಮೂಟೆ ಕಟ್ಟಿಕೊಂಡು ಹೊರಡಿ ಎಂದು. ಮತ್ತೊಂದು ಸ್ಥಳೀಯ ಪತ್ರಿಕೆ, “ಅಲ್ ಸಫಾ” ಈ ಹೊರದಬ್ಬುವ ಆದೇಶವನ್ನು ಪುನರುಚ್ಚರಿಸುತ್ತದೆ. ಮುಂಬರುವ ಕೆಲವೇ ದಿನಗಳಲ್ಲಿ ಕಾಶ್ಮೀರ ಕಣಿವೆಯಲ್ಲಿ ಪ್ರಕ್ಷುಬ್ಧ ಸ್ಥಿತಿಗೆ ತಲುಪುತ್ತದೆ. ಮುಖ್ಯಮಂತ್ರಿ ಫಾರುಖ್ ಅಬ್ದುಲ್ಲಾ ಮತ್ತವರ ರಾಷ್ಟ್ರೀಯ ಕಾನ್ಫರೆನ್ಸ್ ತನ್ನೆಲ್ಲ ಜವಾಬ್ದಾರಿಯನ್ನು ಕೊಡವಿಕೊಂಡು ಬಿಡುತ್ತದೆ. ಮುಖವಾಡಧಾರಿ ಮನುಷ್ಯರು ಎಲ್ಲೆಲ್ಲಿಯೂ ತಮ್ಮ “ಕೆಲ್ಯಾಶ್ನಿಕೋವ್” ಗಳನ್ನು ತೋರಿಸಿಕೊಂಡು ಭಾರತ ವಿರೋಧಿ ಘೋಷಣೆಗಳನ್ನು ಕೂಗುತ್ತ ಓಡಾಡುತ್ತಿರುತ್ತಾರೆ. ಕಾಶ್ಮೀರಿ ಪಂಡಿತರ ಹತ್ಯೆಯ ಸುದ್ದಿಗಳು ಒಂದೊಂದಾಗಿ ಕಣಿವೆಯಲ್ಲಿ ಹರಡುತ್ತಾಹೋಗುತ್ತವೆ. ಅಲ್ಲಿಲ್ಲಿ ಸ್ಫೋಟಗಳಾಗುತ್ತಿವೆ; ಯಾವ ಧ್ವನಿವರ್ಧಕಗಳು ಜನರನ್ನು ನಮಾಜಿಗೆ ಕರೆಯುತ್ತಿದ್ದವೋ ಅದೇ ಮಸೀದಿಗಳಿಂದ ಉದ್ರೇಕಕಾರಿ ಭಾಷಣಗಳು ಕೇಳಿ ಬರುತ್ತವೆ. ಒಂದು ಅನೂಹ್ಯ ಭಯದ ವಾತಾವರಣ ಕಾಶ್ಮೀರಿ ಪಂಡಿತರಲ್ಲಿ ಮನೆಮಾಡುತ್ತದೆ. 5000 ವರ್ಷಗಳಿಂದ ಕಾಶ್ಮೀರದ ಸಾಂಸ್ಕೃತಿಕ ಮತ್ತು ನಾಗರಿಕ ಚರಿತ್ರೆಯಲ್ಲಿ ದಾಖಲೆಯಾಗಿರುವ ಮೂಲನಿವಾಸಿಗಳಾಗಿದ್ದ ಕಾಶ್ಮೀರಿ ಪಂಡಿತರ ಮನೆ, ಅಂಗಡಿ, ವಠಾರಗಳು ಗುರುತು ಮಾಡಲ್ಪಟ್ಟಿವೆ; ಅವುಗಳ ದ್ವಾರಗಳಿಗೆ ಸೂಚನಾಪತ್ರಗಳನ್ನು ಹಚ್ಚಲಾಗಿದೆ; “24 ಗಂಟೆಗಳಲ್ಲಿ ಕಾಶ್ಮೀರ ಬಿಟ್ಟು ತೊಲಗಿ, ಇಲ್ಲವೇ ಸಾಯಲು ಸಿದ್ಧರಾಗಿ”. ಕೆಲವು ಸೂಚನಾ ಪತ್ರಗಳು ಮತ್ತಷ್ಟು ನಿಚ್ಚಳ ಸಂದೇಶ ಕೊಡುತ್ತವೆ.

“ಈ ಕೂಡಲೇ ಮತಾಂತರಗೊಳ್ಳಬೇಕು, ಇಲ್ಲಾ ಕಾಶ್ಮೀರ ಬಿಟ್ಟು ತೊಲಗಿ..ಇಲ್ಲಾ ಸಾಯಲು ಸಿದ್ಧರಾಗಿ”
ಎನ್ನುವ ಭಯೋತ್ಪಾದಕರ ಬೆದರಿಕೆಗಳು ತಲೆತಲಾಂತರದಿಂದ ಕಾಶ್ಮೀರದಲ್ಲಿ ನೆಲಸಿದ್ದ ಪಂಡಿತರ ಜಂಘಾಬಲವನ್ನು ಉಡುಗಿಸಿಬಿಟ್ಟವು. ರಾತ್ರೋರಾತ್ರಿ ಉಟ್ಟಬಟ್ಟೆಯಲ್ಲೇ ಸಾವಿರಾರು ಪಂಡಿತರು ತಮ್ಮ ಕುಟುಂಬದವರೊಂದಿಗೆ ಕಣಿವೆಯಿಂದ ಹೊರಬಂದು ಪ್ರಾಣ ಉಳಿಸಿಕೊಂಡರು…ತಮ್ಮ ದೇಶದಲ್ಲೇ
ನಿರಾಶ್ರಿತ ಜೀವನ ನಡೆಸುವ ಅಭಿಶಾಪಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲಾ.ಮೂವತ್ತೆರಡು ವರ್ಷಗಳೇ ಕಳೆದಿವೆ.

ಈ ಕಾಶ್ಮೀರ ಪಂಡಿತರದ್ದಲ್ಲವೇ? ಹಾಗಾದರೆ ಇದು ಯಾರ ಕಾಶ್ಮೀರ?

ಇದು ಋಷಿ ಕಶ್ಯಪರ ನಾಡು ಕಾಶ್ಮೀರ…

‘ಮೈರಾ’ ಎನ್ನುವ ಸಂಸ್ಕೃತ ಪದದ ಅರ್ಥ ಬರಿದಾದ ಸರೋವರ ಎಂದು. ಈ ಕಶ್ಯಪರ ಮೈರಾವನ್ನೇ ಕಾಶ್ಮೀರ ಎಂದು ಕರೆಯಲಾಯಿತು. ನಮ್ಮ ಧರ್ಮ ಗ್ರಂಥಗಳ ವಿಂಗಡಣೆಯಲ್ಲಿ ಮಹಾಭಾರತವನ್ನು ಇತಿಹಾಸದಡಿಯಲ್ಲಿ ಸೇರಿಸಿದರೆ ಕಾಶ್ಮೀರದ ಇತಿಹಾಸವನ್ನು ಪುರಾಣದಲ್ಲಿ ಸೇರಿಸಿರುತ್ತಾರೆ. ಇದರ ಹೆಸರು ನೀಲಮತ ಪುರಾಣ ಎಂದು. ಇದು ಪ್ರಾರಂಭ ವಾಗುವುದೇ ವೈಶಂಪಾಯನ ಮತ್ತು ಜನಮೇಜಯರ ಸಂವಾದದಲ್ಲಿ. ಕುರುಕ್ಷೇತ್ರ ಯುದ್ಧದಲ್ಲಿ ಕಾಶ್ಮೀರದ ರಾಜ ಯಾಕೆ ಪಾಲ್ಗೊಳ್ಳಲಿಲ್ಲ ಎನ್ನುವ ವಿಷಯದೊಂದಿಗೆ. ಮುಂದೆ ಹನ್ನೆರಡನೇ ಶತಮಾನದಲ್ಲಿ ಕಲ್ಹಣ ಎನ್ನವ ಕಾಶ್ಮೀರಿ ವಿದ್ವಾಂಸ ನೀಲಮತ ಪುರಾಣದ ಆಧಾರಿತ ಬೃಹತ್ ಗ್ರಂಥವನ್ನು ರಚಿಸುತ್ತಾರೆ ಅದರ ಹೆಸರು ರಾಜತರಂಗಿಣಿ ಎಂದು. ಇದು ಕಾಶ್ಮೀರದ ಇತಿಹಾಸವನ್ನು ವಿವರವಾಗಿ ತಿಳಿಸಿಕೊಡುತ್ತದೆ.

ಈಗಿನ ಏಳನೇ ಮನ್ವಂತರದ ಹೆಸರು ವೈವಸ್ವತ ಎಂದು. ಈ ಮನ್ವಂತರದಲ್ಲಿ, ಸಪ್ತರ್ಷಿಗಳು ಕಶ್ಯಪ, ಅತ್ರಿ, ವಶಿಷ್ಠ, ಅಂಗೀರ, ಗೌತಮ, ಅಗಸ್ತ್ಯಮತ್ತು ಭಾರಧ್ವಜ ಇವರುಗಳು. ಇವರುಗಳಲ್ಲಿ ಬರುವ ಮೊದಲ ಹೆಸರೇ ಕಶ್ಯಪರು, ಇವರ ತಂದೆಯಾದ ಮಹರ್ಷಿ ಮಾರೀಚಿ, ಬ್ರಹ್ಮನ ಮಾನಸ ಪುತ್ರ. ಪ್ರಜಾಪಿತ ಬ್ರಹ್ಮನ ಮಗನಾದ ಮರೀಚಿ ಮಹರ್ಷಿ ಕರ್ದಮ ಮುನಿಯ ಮಗಳಾದ ಕಲಾಳನ್ನು ಮದುವೆಯಾದರು. ಈ ದಂಪತಿಗಳಿಗೆ ಜನಿಸಿದ ಮಗನೇ ಕಶ್ಯಪ. ಈತನಿಗೆ ದಿತಿ, ಅದಿತಿ, ದನು, ಕಲಾ, ದನಾಯು, ಸಿಂಹಿಕಾ, ಕ್ರೋಧಾ, ಪ್ರಾಧಾ, ವಿಶ್ವಾ, ವಿನತಾ, ಕಪಿಲಾ, ಮುನಿ, ಕದ್ರು ಎಂಬ ಹದಿಮೂರು ಪತ್ನಿಯರು. ಒಬ್ಬಬ್ಬ ಪತ್ನಿಯರಿಂದ ಒಂದೊಂದು ಪ್ರಾಣಿ ಸಂಕುಲ ದ ಪ್ರಾರಂಭವಾಯಿತು ಎನ್ನುವ ಪ್ರತೀತಿ ಇದೆ. ಅದಿತಿಯ ಮಕ್ಕಳೇ ಆದಿತ್ಯರು. ದಿತಿಯ ಮಕ್ಕಳು ದೈತ್ಯರು. ಉಳಿದ ಪತ್ನಿಯರಲ್ಲಿ ನಾಗರು, ಉರಗರು ಮೊದಲಾದವರ ಉತ್ಪತ್ತಿಯಾಯಿತು. ಕಶ್ಯಪ ಗೋತ್ರ ಆರಂಭವಾಗುವುದೇ ಇಲ್ಲಿಂದ. ಇವರ ಸಂತಾನದಲ್ಲಿ, ದೇವತೆಗಳು, ದೈತ್ಯರು, ದಾನವರು, ನಾಗಾಗಳು, ಮಾನವರು ಎಲ್ಲಾ ಪಂಗಡಗಳ ಜೀವಿಗಳು ಸೇರಿರುತ್ತಾರೆ.

  ಕರ್ನಾಟಕ ಸಂಗೀತ ಪಿತಾಮಹ ಶ್ರೀಪುರಂದರ ದಾಸರ ಆರಾಧನೆ

ನೀಲಮತ ಪುರಾಣದ ಪ್ರಕಾರ ಈಗಿನ ಕಾಶ್ಮೀರವಿರುವ ಸ್ಥಳದಲ್ಲಿ ‘ಸತೀಸರ’ಎನ್ನುವ ಬಹುದೊಡ್ಡ ಸರೋವರವಿತ್ತಂತೆ. ಶಿವನ ಪತ್ನಿ ಸತಿಗೆ ಅದು ತುಂಬಾ ಪ್ರಿಯವಾದ ಸರೋವರವಾಗಿದ್ದರಿಂದ ಕಶ್ಯಪರು ಈ ಸರೋವರವನ್ನು ಶಿವ ಸತಿಯರಿಗ ಬಳುವಳಿಯಾಗಿ ಕೊಟ್ಟಿದ್ದರಂತೆ. ಆದರೆ ಆ ಸರೋವರದಲ್ಲಿ ಜಲೋಧ್ಭವ ಎನ್ನುವ ರಾಕ್ಷಸ ಅಡಗಿಕೊಂಡು ಕಶ್ಯಪರ ಸಂತಾನಗಳಿಗೆ ಕಿರುಕುಳ ಕೊಡುತ್ತಿದ್ದ. ಆಗ ಕಶ್ಯಪರು ಅವರ ಮಗ ‘ಅನಂತ ನಾಗ’ನ ಜೊತೆಗೂಡಿ ಒಂದು ವರಾಹ ಮುಖ (ಇಂದಿನ ಬಾರಮುಲ್ಲ) ಎನ್ನುವ ಕಣಿವೆಯನ್ನು ಕಡಿದು ಆ ಸರೋವರದ ನೀರನ್ನು ಹೊರಹರಿಸುತ್ತಾರೆ. ಹೀಗೆ ಹರಿದ ನೀರು ಪಶ್ಚಿಮದ ಇನ್ನೊಂದು ಕಣಿವೆಗೆ ಹರಿಯುತ್ತದೆ. ಅದನ್ನು ಕಶ್ಯಪ ಸಾಗರವೆಂದೂ(ಇಂದಿನ ಕ್ಯಾಸ್ಪಿಯನ್ ಸಮುದ್ರ )ಕರೆಯುತ್ತಾರೆ.
ನಂತರ ವಿಷ್ಣುದೇವ ಆ ಜಲೋಧ್ಭವ ರಾಕ್ಷಸರ ಸಂಹಾರ ಮಾಡುತ್ತಾರೆ. ಹೀಗೆ ಬರಿದು ಮಾಡಿದ ಸರೋವರದ ತಪ್ಪಲಿನಲ್ಲಿ ವೇದವ್ಯಾಸಂಗಕ್ಕೆಂದೇ ವಿಷೇಶವಾಗಿ ಒಂದು ಪವಿತ್ರ ಕ್ಷೇತ್ರವನ್ನು ನಿರ್ಮಿಸುತ್ತಾರೆ…ಅದನ್ನು ‘ಕಶ್ಯಪರ ಮೈರಾ’..ಕಶ್ಯಪ ಪುರ…ಕ್ರಮೇಣ “ಕಾಶ್ಮೀರ” ದ ಉಧ್ಭವವಾಗುತ್ತದೆ. ಹಾಗಾದರೆ ಇದು ಕಶ್ಯಪರ ಕಾಶ್ಮೀರವಲ್ಲವೇ?

ಹಾಗಾದರೆ ಇದು ಮತ್ಯಾರ ಕಾಶ್ಮೀರ?
ಇದು ಶಾರದಾದೇವಿಯ ಕಾಶ್ಮೀರ.

“ನಮಸ್ತೇ ಶಾರದಾದೇವಿ ಕಾಶ್ಮೀರ ಪುರವಾಸಿನಿ
ತ್ವಾಮಹಂ ಪ್ರಾರ್ಥಯೇ ನಿತ್ಯಂ ವಿದ್ಯಾದಾನಂಚ ದೇಹಿಮೇ “

ಹೀಗೆ…ಶಾರದಾದೇವಿಯನ್ನು ಸ್ತುತಿಸುವುದೇ ‘ಕಾಶ್ಮೀರ ಪುರವಾಸಿನಿ’ ಎಂದು. ಕಾಶ್ಮೀರದ ಲಿಪಿಯ ಹೆಸರೇನು ಗೊತ್ತೇ?… ‘ಶಾರದ’ ! ಅಂದಿನ ಕಾಶ್ಮೀರದ ವೇದಶಾಲೆಗಳನ್ನು ಏನೆಂದು ಕರೆಯುತ್ತಿದ್ದರು?….ಶಾರದ ಪೀಠ! ಇದೆಲ್ಲಾ ಇರಲಿಬಿಡಿ.. ಅಂದೊಮ್ಮೆ ಇಡೀ ಕಾಶ್ಮೀರವನ್ನೇ ‘ಶಾರದ ದೇಶ’ ಎಂದು ಕರೆಯುತ್ತಿದ್ದರು. ಇಷ್ಟಿಲ್ಲದಿದ್ದರೆ ಶಂಕರಾಚಾರ್ಯರು ಒಂಭತ್ತನೇ ಶತಮಾನದಲ್ಲಿ ಕಾಶ್ಮೀರಕ್ಕೆ ಏಕೆ ಹೋಗುತ್ತಿದ್ದರು. ಅಲ್ಲಿಯೇ ತಪಸ್ಸು ಮಾಡಿ ತಮ್ಮ ಕೃತಿ ಶೃಂಗಾರ ಲಹರಿ ರಚಿಸಿದರಂತೆ.
ಅಲ್ಲಿಯ ಕೃಷ್ಣಗಂಗೆ ನದಿಯ ತೀರದಲ್ಲಿರುವ ಶಾರದ ಪೀಠದ ಸೊಬಗನ್ನು ನೋಡಿ, ಅದೇ ತರಹದ ಇನ್ನೊಂದು ಶಾರದ ದೇವಸ್ಥಾನವನ್ನು ತುಂಗಾನದಿಯ ತೀರದ ಶೃಂಗೇರಿಯಲ್ಲಿ ಸ್ಥಾಪಿಸಲು ಪ್ರೇರಣೆ ಸಿಕ್ಕಿದ್ದು ಆ ಕಾಶ್ಮೀರದ ಶಾರದ ಪೀಠದಿಂದ. ಶಾರದಾ ದೇವಿಯ ಶ್ರೀಗಂಧದ ಮೂಲ ವಿಗ್ರಹವನ್ನು ಕಾಶ್ಮೀರದಿಂದಲೇ ಶೃಂಗೇರಿಗೆ ತರಲಾಗಿತ್ತಂತೆ. ಇದು ಕಾಶ್ಮೀರಕ್ಕೂ ಕರ್ನಾಟಕಕ್ಕೂ ಇರುವ ಪ್ರಮುಖ ನಂಟು.

ಅಂದಿನ ಶಾರದಾ ಪೀಠ, ದುರದೃಷ್ಟವಶಾತ್ ಈಗ ಪಾಕೀಸ್ತಾನದ ಆಳ್ವಿಕೆಯ ಕಾಶ್ಮೀರದ ಭಾಗದಲ್ಲಿದೆ. ಅಲ್ಲಿಗೆ ಹೋಗಲು ಯಾರಿಗೂ ಅನುಮತಿ ಸಿಗುತ್ತಿಲ್ಲ. ಶಾರದಾ ದೇವಸ್ಥಾನ ಶಿಥಿಲಗೊಂಡು ದಿನೇ ದಿನೇ ಧರೆಗುರುಳುತ್ತಿದೆ. ಹೀಗೆ ಶಾರದಾದೇವಿಯ ಕೃಪಾಕಟಾಕ್ಷ ಅನಾದಿಕಾಲದಿಂದಲೂ ಕಾಶ್ಮೀರದ ಮೇಲಿರುವಾಗ..ಕಾಶ್ಮೀರ ಇನ್ನಾರದಾಗಲು ಸಾಧ್ಯ?

ಇದು ಸನಾತನ ಧರ್ಮದ ಬೃಹತ್ ಗ್ರಂಥಾಲಯದ ಕಾಶ್ಮೀರ. ರಾಮಾನುಜಾಚಾರ್ಯರು ತಮ್ಮ ಗುರುಗಳಾದ ಯಮುನಾಚಾರ್ಯರಿಗೆ ಕೊಟ್ಟ ಮೂರು ಆಶ್ವಾಸನೆಗಳಲ್ಲಿ ಒಂದು…’ಬ್ರಹ್ಮ ಸೂತ್ರ’ ದ ಅಧ್ಯಯನದ ಆಧಾರಿತ ವಿಶಿಷ್ಟಾದ್ವೈತವನ್ನು ಪ್ರತಿಪಾದಿಸುವ ಒಂದು ಗ್ರಂಥ ರಚನೆ ಮಾಡುತ್ತೇನೆ ಎಂದು…ಆದರೆ ಎಲ್ಲಿದೆ ಈ ಬಾದರಾಯಣ ವಿರಚಿತ ‘ಬ್ರಹ್ಮ ಸೂತ್ರ’? ಆ ಅಖಂಡ ಗ್ರಂಥವಿದ್ದದ್ದು ಕಾಶ್ಮೀರದ ರಾಜನ ಗ್ರಂಥಾಲಯದಲ್ಲಿ ಮಾತ್ರ!

ಏನಿದು “ಬ್ರಹ್ಮ ಸೂತ್ರ” ಏನಿದೆ ಅದರಲ್ಲಿ?
ಇದೊಂದು 555 ಸೂತ್ರಗಳನ್ನೊಳಗೊಂಡ, ಸನಾತನ ಧರ್ಮದ ಸಾರವನ್ನು ನಾಲ್ಕು ಅಧ್ಯಾಯಗಳಲ್ಲಿ ವಿವರಿಸಿರುವ ಅಗಾಧ ಗ್ರಂಥ. ಇದರಾಧಾರಿತ ಅನೇಕ ಸಿಧ್ಧಾಂತಗಳು ಸೃಷ್ಟಿಗೊಂಡಿದ್ದವು. ಇದನ್ನು ಜನಸಾಮಾನ್ಯರಿಗೆ ಅರ್ಥವಾಗುವಹಾಗೆ ವಿಶಿಷ್ಟಾದ್ವೈತ ಸಿಧ್ಧಾಂತವನ್ನು ಪ್ರತಿಪಾದಿಸುವ ಒಂದು ಗ್ರಂಥ ರಚನೆಯನ್ನು ಮಾಡಬೇಕಿತ್ತು ರಾಮಾನುಜರಿಗೆ. ತಮ್ಮ ಶಿಷ್ಯ ಕುರತಾಳ್ವಾರ್ (ಕುರೇಸ) ರವರ ಜೊತೆಗೂಡಿ ಹಲವಾರು ತಿಂಗಳುಗಳ ಪ್ರಯಾಣದ ನಂತರ ಕಾಶ್ಮೀರ ತಲುಪುತ್ತಾರೆ ರಾಮಾನುಜರು. ಸಕಲ ಮರ್ಯಾದೆಯೊಂದಿಗೆ ಅವರನ್ನು ಸ್ವಾಗತಿಸಲಾಗುತ್ತದೆ. ಅವರ ಕೋರಿಕೆಯನ್ನು ಮನ್ನಿಸಿ ಅವರನ್ನು ಗ್ರಂಥಾಲಯದ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತದೆ,ಆದರೆ ಒಂದು ಶರತ್ತು.. ಬ್ರಹ್ಮ ಸೂತ್ರವನ್ನು ಗ್ರಂಥಾಲಯದಿಂದ ಹೊರತರುವ ಹಾಗಿಲ್ಲ ಮತ್ತು ಯಾವ ತರಹದ ಟಿಪ್ಪಣಿಗಳನ್ನು ಬರೆದುಕೊಳ್ಳುವಂತಿಲ್ಲ.
ಇದಕ್ಕೆ ರಾಮಾನುಜರು ಸಮ್ಮತಿಸುತ್ತಾರೆ. ಅವರ ಶಿಷ್ಯ ಕುರತ್ತಾಳ್ವಾರ್ ಸಾಮಾನ್ಯರಲ್ಲ!. ಅವರದು ‘ಏಕ ಚಿತ್ತ ಸ್ಮೃತಿ’, ಒಮ್ಮೆ ಕೇಳಿದರೆ ಅವರ ಸ್ಮೃತಿಪಟಲದಲ್ಲಿ ಶಾಶ್ವತವಾಗಿರುತ್ತದೆ.
ಕಾಶ್ಮೀರದಿಂದ ಶ್ರೀರಂಗಕ್ಕೆ ಮರಳಿದ ಮೇಲೆ ಇಬ್ಬರೂ ಸೇರಿ ಒಂದು ಅದ್ಭುತ ಗ್ರಂಥದ ರಚನೆ ಮಾಡುತ್ತಾರೆ.
ಅದೇ “ಶ್ರೀ ಭಾಷ್ಯ” ಹಲವಾರು ವರ್ಷಗಳ ನಂತರ ರಾಮಾನುಜರು ಇನ್ನೊಮ್ಮೆ ಕಾಶ್ಮೀರಕ್ಕೆ ಮರಳುತ್ತಾರೆ. ಈ ಸಲ ದೇವಿ ಶಾರದೆಯ ಉಪಾಸನೆಗಾಗಿ. ದೇವಿ ಶಾರದೆ ಪ್ರತ್ಯಕ್ಷಳಾಗಿ ಇವರಿಗೆ ಹಯಗ್ರೀವದ ವಿಗ್ರಹವೊಂದನ್ನು ದಯಪಾಲಿಸುತ್ತಾಳೆಂಬ ಪ್ರತೀತಿ ಇದೆ. ಮುಂದೆ ಈ “ಬ್ರಹ್ಮಸೂತ್ರ” ಮತ್ತು “ಶ್ರೀ ಭಾಷ್ಯ” ಜರ್ಮನಿ ,ಫ್ರೆಂಚ್ ಮತ್ತು ಇಂಗ್ಲೀಷ್ ಸೇರಿದಂತೆ ಹಲವಾರು ಭಾಷೆಗಳಲ್ಲಿ ಅನುವಾದಗೊಂಡು ವಿಶ್ವದೆಲ್ಲೆಡೆ ಸಂಚರಿಸುತ್ತವೆ. ಹೀಗೆ ಸನಾತನ ಧರ್ಮಕ್ಕೆ ಸಂಬಂಧಿಸಿದ ಎಲ್ಲಾ ಗ್ರಂಥಗಳನ್ನು ತನ್ನ ಗರ್ಭದಲ್ಲಿರಿಸಿಕೊಂಡಿದ್ದ ಕಾಶ್ಮೀರ ಇನ್ಯಾರದಾಗಲು ಸಾಧ್ಯ?

ಕಾಶ್ಮೀರದ ಕಲ್ಹಣ..
ಕರ್ನಾಟಕದ ಬಿಲ್ಹಣ..

ಅನಾದಿಕಾಲದಿಂದಲೂ ಈ ದೇವನಾಡಿನಲ್ಲಿ ಪ್ರಚಲಿತವಾದ ದೇವಭಾಷೆ ಸಂಸ್ಕೃತ.
ಹನ್ನೊಂದನೇ ಶತಮಾನದಲ್ಲಿ ‘ಕಲ್ಹಣ’ ಎಂಬ ಮಹಾನ್ ಕವಿ ಕಾಶ್ಮೀರದ ಇತಿಹಾಸದ ಬಗ್ಗೆ, ಇಲ್ಲಿಯ ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಒಂದು ಬೃಹತ್ ಗ್ರಂಥವನ್ನು ಬರೆಯುತ್ತಾರೆ. ಅದೇ “ರಾಜತರಂಗಿಣಿ”.
ಇದೇ ಸಮಯದಲ್ಲಿ “ಬಿಲ್ಹಣ” ಎನ್ನುವ ಬಹುಮುಖ ಪ್ರತಿಭೆಯ ಕಾಶ್ಮೀರದ ಕವಿಯೊಬ್ಬರ ರಚನೆಗಳು ಬೆಳಕಿಗೆ ಬರುತ್ತವೆ. ಆದರೆ ಅವರು ಪ್ರಖ್ಯಾತಿ ಪಡೆದಿದ್ದು ಮತ್ತು ಅವರ ರಚನೆಗಳು ಬೆಳಕು ಕಂಡಿದ್ದು ಅಂದಿನ ಕರ್ನಾಟಕದಲ್ಲಿ! ಕಾಶ್ಮೀರದಿಂದ ಹೊರಬಂದು ವಿಧರ್ಭ, ವಂಗ, ಮಾಳವ ದೇಶಗಳನ್ನೆಲ್ಲಾ ಸುತ್ತಾಡಿ ಅಂದಿನ ಕಲ್ಯಾಣ ಕರ್ನಾಟಕಕ್ಕೆ ಬಂದು ಸೇರುತ್ತಾರೆ. ಅದು ಚಾಳುಕ್ಯ ವಂಶದ ರಾಜರಾದ ಆರನೇ ವಿಕ್ರಮಾದಿತ್ಯರ ರಾಜಧಾನಿ. ವಿಕ್ರಮಾದಿತ್ಯರು ಇವರ ಸಂಸ್ಕೃತದ ಪಾರಂಗತ್ಯವನ್ನು ಮೆಚ್ಚಿ ಅವರಿಗೆ ಆಸ್ಥಾನ ಕವಿಯ ಸ್ಥಾನವನ್ನು ಕೊಟ್ಟು ಗೌರವಿಸುತ್ತಾರೆ. ಇಲ್ಲಿ ಅವರು “ವಿಕ್ರಮಾಂಕ ದೇವಚರಿತ” ವನ್ನು ಬರೆಯುತ್ತಾರೆ.

  ಭಗವಾನ್ ಶ್ರೀ ಕೃಷ್ಣನ ಕುರಿತ ವಿಶಿಷ್ಟವಾದ ಮಾಹಿತಿ

ಆದರೆ ಬಿಲ್ಹಣರ ರಸಿಕತೆಯ ಪರಿಚಯವಾಗುವುದು ಅವರ ಇನ್ನೊಂದು ಕೃತಿ..”ಚೌರ ಪಂಚಶಿಖಾ” ಎನ್ನುವ ಐವತ್ತು ಪ್ರೇಮಗೀತೆಗಳ ಕೃತಿಯಿಂದ. ಇದರ ಹಿನ್ನಲೆಯಲ್ಲಿ ಒಂದು ಸ್ವಾರಸ್ಯಕರ ಘಟನೆ ಇದೆ.
ವಿಕ್ರಮಾದಿತ್ಯರ ರಾಜ್ಯಕ್ಕೂ ಬರುವ ಮೊದಲು, ಬಿಲ್ಹಣ ಅಂದಿನ ಗುಜರಾತಿನ ವೀರಸೇನರ ಆಸ್ಥಾನದ ವಿದ್ವಾಂಸರಾಗಿರುತ್ತಾರೆ. ಈ ಯುವ ಕವಿಗೆ ರಾಜಕುಮಾರಿ ಚಂಪಾವತಿಯ ಶಿಕ್ಷಣದ ಜವಾಬ್ದಾರಿಯನ್ನು ವಹಿಸಿದ್ದರು. ಆದರೆ ಇದಕ್ಕೆ ಕೆಲವು ನಿರ್ಭಂದನೆಗಳನ್ನು ವಹಿಸಿದ್ದರು. ಅಪ್ರತಿಮ ಸುಂದರಿಯಾದ ರಾಜಕುಮಾರಿ ಈ ಸುಂದರ, ಪ್ರತಿಭಾನ್ವಿತ ಕವಿಯಿಂದ ಸಾಹಿತ್ಯದ, ಸಂಸ್ಕೃತದ ಶಿಕ್ಷಣದ ಸಮಯದಲ್ಲಿ ವಯೋಸಹಜವಾದ ವಾಂಛನೆಗಳು ಬರಬಾರದು ಎಂದು ರಾಜ ವೀರಸೇನ ಬಿಲ್ಹಣನ ಕಣ್ಣು ಕಟ್ಟಿ..ಇವರು ಕುರುಡರು ಎಂದು , ರಾಜಕುಮಾರಿ ಕುಷ್ಟರೋಗಿ ಎಂದು ಒಬ್ಬರಿಗೊಬ್ಬರನ್ನು ಪರಿಚಯಿಸಿ ನಡುವೆ ಒಂದು ದಪ್ಪನೆಯ ಪರದೆಯನ್ನು ಹಾಕುತ್ತಾರೆ. ಇದೇ ನಿಜವೆಂದು ನಂಬಿ ರಾಜಕುಮಾರಿಯ ವ್ಯಾಸಂಗ ನಡೆಯುತ್ತಿರುತ್ತದೆ. ಒಮ್ಮೆ ಬೆಳದಿಂಗಳ ಚಂದ್ರನನ್ನು ವರ್ಣಿಸುತ್ತಾ ಒಂದು ಪ್ರೇಮಕವಿತೆಯನ್ನು ಹೇಳಿಕೊಡುತ್ತಾರೆ. ಆಗ ಬರುತ್ತದೆ ನೋಡಿ ರಾಜಕುಮಾರಿಗೆ ಬಿಲ್ಹಣನ ಬಗ್ಗೆ ಅನುಮಾನ…ಒಬ್ಬ ಕುರುಡನು, ಎಂದೂ ಚಂದ್ರನನ್ನು ನೋಡದವನು ಇಷ್ಟು ಸುಂದರವಾದ ವಿವರಣೆ ಕೊಡುವುದು ಹೇಗೆ ಸಾಧ್ಯ? ಕುತೂಹಲ ತಾಳಲಾರದೆ ರಾಜಕುಮಾರಿ ಪರದೆಯಿಂದ ಹೊರಗೆ ಬಂದು ಬಿಲ್ಹಣನ ಕಣ್ಣಿನ ಬಟ್ಟೆಯನ್ನು ಬಿಚ್ಚುತ್ತಾಳೆ. ಬಿಲ್ಹಣನೂ ರಾಜಕುಮಾರಿಯ ಸೌಂದರ್ಯಕ್ಕೆ ಮಾರು ಹೋಗುತ್ತಾನೆ.
ಇಬ್ಬರೂ ರೋಮಾಂಚಿತರಾಗಿ ಕ್ಷಣಾರ್ಧದಲ್ಲಿ ಪ್ರೇಮಾಂಕುರವಾಗಿ ಬಿಡುತ್ತದೆ! ಕಾಲಾನಂತರ ವಿಷಯ ತಿಳಿದ ರಾಜ, ಕೋಪಗೊಂಡು ಬಿಲ್ಹಣನನ್ನು ಸೆರೆಮನೆಗೆ ತಳ್ಳಿಬಿಡುತ್ತಾನೆ. ಅಲ್ಲಿ ರಚಿತವಾಗುತ್ತದೆ
“ಚೌರ ಪಂಚಶಿಖಾ” ಎನ್ನುವ ಐವತ್ತು ಪ್ರೇಮ ಮತ್ತು ವಿರಹಗೀತೆಗಳ ಸಂಗ್ರಹ. ಸೆರೆಮನೆಯಲ್ಲಿ ಇನ್ನೂ ಉತ್ಕಟಕ್ಕೇರಿದ ಪ್ರೇಮಾಯಣದ ಅರಿವಾದ ರಾಜ ವಿರಸೇನ ಬಿಲ್ಹಣನನ್ನು ಸೆರೆಯಿಂದ ಬಿಡುಗಡೆ ಮಾಡಿ ಅವರಿಬ್ಬರ ಮದುವೆಗೆ ಸಮ್ಮತಿಸುತ್ತಾನೆ ಎನ್ನುವ ಪ್ರತೀತಿ. ಅಂತೂ ಬಿಲ್ಹಣ ಮತ್ತು ಚಂಪಾವತಿಯರ ಪ್ರೇಮಗಾಥೆ ಸುಖಾಂತ್ಯವನ್ನು ಕಾಣುತ್ತದಂತೆ. ಮುಂದೊಮ್ಮೆ ಈ ಪ್ರೇಮಗ್ರಂಥ ಹಲವಾರು ಭಾಷೆಗಳಲ್ಲಿ ಭಾಷಾಂತರಿಸಲ್ಪಟ್ಟು ದೇಶವಿದೇಶಗಳಲ್ಲಿ ಪ್ರಸಿಧ್ಧಿ ಪಡೆಯುತ್ತದೆ. 1948 ರಲ್ಲಿ ಮದ್ರಾಸಿನಲ್ಲಿ ಈ ಕಥೆಯಾಧಾರಿತ ಚಲನಚಿತ್ರವೊಂದೂ ಸಹ ಬಿಡುಗಡೆಯಾಗುತ್ತದೆ!

ಇದು ರಿಷಿಗಳ, ಸಂತರ, ಕವಿಗಳ ಕಾಶ್ಮೀರ..

13 ನೇ ಶತಮಾನದಿಂದ ಆರಂಭವಾದ ಮತಾಂತರ, ಕೇವಲ ಏಳು ಶತಮಾನಗಳಲ್ಲಿ ಹಿಂದೂ ಮತ್ತು ಬೌಧ್ಧರ ಸಂಖ್ಯೆಯನ್ನು….. ಶತ ಪ್ರತಿಶತದಿಂದ ಕೇವರ ಎರಡು ಪ್ರತಿಶತಕ್ಕಿಳಿಸಿ ಬಿಟ್ಟಿತ್ತು!.
ಭಾರತದಲ್ಲಿ ಈ ತರಹದ ಕ್ಷಿಪ್ರವಾಗಿ ನಡೆದ ಮತಾಂತರದ ಉದಾಹರಣೆಗಳು ಬಹುಷಃ ಬೇರೆಲ್ಲೂ ಕಾಣಸಿಗದು…. of course …ಗೋವಾ ಒಂದನ್ನು ಹೊರತು ಪಡಿಸಿ. ಈ ರಕ್ತಸಿಕ್ತ ಇತಿಹಾಸದ ಅವಧಿಯಲ್ಲೂ ಕಾಶ್ಮೀರದಲ್ಲಿ ಹಲವು ಕ್ರಾಂತಿಕಾರಕ ಘಟನೆಗಳು ನಡೆಯುತ್ತವೆ, ಸೂಫಿ ಸಂತರ, ನಂದ ರಿಷಿಯಂತಹ ಮುಸ್ಲಿಂ ಸನ್ಯಾಸಿಯ ಮತ್ತು ಲಲ್ಲೇಶ್ವರಿಯಂತಹ ಸಂತ ಕವಿಗಳ ಉಧ್ಭವವಾಗುತ್ತದೆ.
ಹನ್ನೆರಡನೇ ಶತಮಾನದಲ್ಲಿ ಕರ್ನಾಟಕದಲ್ಲಿ ನಡೆದ ಅಕ್ಕಮಹಾದೇವಿಯ ವೃತ್ತಾಂತ ಹದಿನಾಲ್ಕನೇ ಶತಮಾನದಲ್ಲಿ ಕಾಶ್ಮೀರದಲ್ಲಿ ಲಲ್ಲೇಶ್ವರಿಯ ಹೆಸರಿನಲ್ಲಿ ಪುನಾರಾವರ್ತನೆಯಾಗುತ್ತದೆಯೇನೋ ಎನ್ನುವಷ್ಟು ಹೊಂದಾಣಿಕೆ. ಇಬ್ಬರೂ ಶಿವಾರಾಧಕರು, ಇಬ್ಬರೂ ಅಪ್ರತಿಮ ಸುಂದರಿಯರು, ಇಬ್ಬರೂ ವಿವಾಹ ಬಂಧನದಿಂದ ಹೊರಬಂದು ಆಧ್ಯಾತ್ಮದ ಹಾದಿಯಲ್ಲಿ ನಡೆದವರು ಮತ್ತು ಇಬ್ಬರೂ ಅಧ್ಭುತ ಕಾವ್ಯಗಳ, ಸಾಹಿತ್ಯದ ರಚನಾಕಾರರು…ಅಕ್ಕಮಹಾದೇವಿ ವಚನನಗಳನ್ನು ರಚಿಸಿದರೆ ಲಲ್ಲೇಶ್ವರಿಯ ರಚನೆಗಳು ‘ವಾಕ್’ ಹೆಸರಿನಲ್ಲಿ ವಿಶ್ವವದೆಲ್ಲೆಡೆ ಹೆಸರುವಾಸಿಯಾಗಿವೆ.
ಅಕ್ಕಮಹಾದೇವಿಯನ್ನು ‘ಅಕ್ಕ’ ಎಂದು ಸಂಭೋದಿಸದರೆ ಲಲ್ಲೇಶ್ವರಿಯನ್ನು ಅಮ್ಮ (ಲಲ್ ದೇಡ್) ಎಂದು ಸಂಭೋದಿಸಲಾಗುತ್ತದೆ. ಇಬ್ಬರೂ ಆಕಾಶವೇ ಹೊದಿಕೆ ಎಂದು ಕೇಶವಸ್ತ್ರಧಾರಿಗಳಾಗಿ ನಡೆದಾಡುತ್ತಿದ್ದರಂತೆ ಎನ್ನುವ ಪ್ರತೀತಿ. ಲಲ್ಲೇಶ್ವರಿಯ ವೈಶಿಷ್ಟ್ಯವೆಂದರೆ ಅವರ ಶಿಷ್ಯವರ್ಗದಲ್ಲಿ ಸೂಫಿ ಸಂತರು, ಮುಸ್ಲೀಮರೇ ಹೆಚ್ಚು!’ಹಿಂದೂ ಮುಸ್ಲೀಮರೆನ್ನುವ ಭೇದ ಭಾವ ಬೇಡ ಶಿವ ಸೂತ್ರವೇ ಎಲ್ಲದರ ಮೂಲ’ ಎಂದು ಭೋಧಿಸಿ ಶಿವಾರಾಧಕರ.. ಸೂಫಿ ಸಂತರ..ಮಾತೆಯಾಗಿ ಮೆರೆದಳು ಕಾಶ್ಮೀರದ ಲಲ್ಲೇಶ್ವರಿ.

ಮಹಾಭಾರತ ಕಾಲದಿಂದ ಹದಿಮೂರನೇ ಶತಮಾನದವರೆಗೆ ಸುಮಾರು 132 ಹಿಂದೂ ರಾಜರು ಕಾಶ್ಮೀರವನ್ನು ಆಳಿದ್ದರು. ಅಂದಿನ ಕಾಶ್ಮೀರ ಇಂದಿನ ಇರಾನಿನವರೆಗೆ ವಿಶಾಲವಾಗಿ ಹರಡಿತ್ತು. ಈ ರಾಜರುಗಳಲ್ಲಿ ಪ್ರಮುಖರು ಲಲಿತಾದಿತ್ಯ ಮುಕ್ತಾಪೀಡ (724-760) ಇವರ ಆಡಳಿತದ ಸಮಯವನ್ನು ಕಾಶ್ಮೀರದ ಸ್ವರ್ಣಯುಗ ಎಂದು ಕರೆಯಲಾಗುತ್ತದೆ. ಇವರ ಸಾಮ್ರಾಜ್ಯದ ವಿಸ್ತಾರವೆಷ್ಟಿತ್ತು ಎಂದರೆ ಪೂರ್ವದ ಟಿಬೆಟ್ಟಿನಿಂದ ಪಶ್ಚಿಮದ ಉಜ್ಬೆಕಿಸ್ಥಾನದವರೆಗೆ ಮತ್ತು ದಕ್ಷಿಣದ ಕೊಂಕಣವರೆಗೆ. ಇವರ ಅವಧಿಯಲ್ಲಿ ಮೊಹಮ್ಮದ್ ಬಿನ್ ಕಾಸಿಮನಿಂದ ನಡೆದ ಇಸ್ಲಾಮಿನ ಅತಿಕ್ರಮಣವನ್ನು ಯಶಸ್ವಿಯಾಗಿ ತಡೆಗಟ್ಟಲಾಗಿತ್ತು. ಅವಂತಿವರ್ಮ (855-883) ಜಯಸಿಂಹ (1128-1155) ಸಹದೇವ (1300-1320) ಹೀಗೆ ಹಲವಾರು ರಾಜರುಗಳ ಸದೃಢ ಆಡಳಿತ ನಡೆದಿರುತ್ತದೆ.
13 ನೇ ಶತಮಾನದ ಲೋಹಾನರ ರಾಜವಂಶದ ರಾಜ ರಾಮಚಂದ್ರನೇ ಕೊನೆಯ ಹಿಂದೂ ರಾಜ. ಅಷ್ಟೊತ್ತಿಗಾಗಲೇ ಮಂಗೋಲಿನ ರಾಜ ಕರ್ಮಸೇನನ ಸೈನ್ಯಾಧಿಪತಿ ‘ದುಲ್ಚ ‘ಎನ್ನುವ ದುಷ್ಟ ಕಾಶ್ಮೀರದ ಮೇಲೆ ಒಂದು ಬೃಹತ್ ಸೈನ್ಯದೊಂದಿಗೆ ಬಂದು ಆಕ್ರಮಣ ಮಾಡಿ, ಸುಮಾರು ಎಂಟು ತಿಂಗಳವರೆಗೆ ಕೊಳ್ಳೆ ಹೊಡೆದು, ಅಲ್ಲಿಯ ಸಂಪತ್ತನ್ನು ಲೂಟಿ ಮಾಡಿ ಮತ್ತು ಹೋಗುವಾಗ ಸುಮಾರು ಐವತ್ತು ಸಾವಿರ ಕಾಶ್ಮೀರಿಗಳನ್ನು ಗುಲಾಮನರನ್ನಾಗಿ ಸೆರೆಹಿಡಿದು ಕೊಂಡು ಹೋದ. ಆದರೆ ಅತ್ಯಂತ ತೀವ್ರ ಛಳಿಗಾಲದ ಹೊಡೆತಕ್ಕೆ ಸಿಲುಕಿಕೊಂಡು ದೇವಸರ ಪರ್ವತದ ಬಳಿ ಇಡೀ ಸೈನ್ಯ ನಶಿಸಿ ಹೋಗುತ್ತದೆ.

ಮುಂದೆ ‘ರಿನ್ಚೆನ್’ ಎನ್ನುವ ಬೌಧ್ಧ ಧರ್ಮದ ಸೇನಾನಿ ರಾಮಚಂದ್ರ ರಾಜನನ್ನು ಮೋಸದಿಂದ ಕೊಂದು ತಾನೇ ರಾಜನಾದ. ಇಲ್ಲೊಂದು ಕುತೂಹಲಕಾರಿ ವಿದ್ಯಾಮಾನ ನಡೆಯುತ್ತದೆ. ‘ರಿನ್ಚೆನ್’ ಕಾಶ್ಮೀರದ ಪ್ರಜೆಗಳನ್ನು ಓಲೈಸಲು “ಶೈವ” ಮತಕ್ಕೆ ಮತಾಂತರಗೊಳ್ಳಲು ನಿರ್ಧರಿಸುತ್ತಾನೆ. ಇದನ್ನು ರಾಜಗುರು ದೇವಸ್ವಾಮಿಯ ಹತ್ತಿರ ವಿಚಾರಣೆ ಮಾಡುತ್ತಾನೆ. ದೇವಸ್ವಾಮಿ ಈ ವಿಷಯವನ್ನು ಕಾಶ್ಮೀರಿ ಪಂಡಿತರ ಬಳಿ ನಿಷ್ಕರ್ಶಿಸಿ, ಇದಕ್ಕೆ ಶೈವ ಮತದಲ್ಲಿ ಅವಕಾಶವಿಲ್ಲವೆಂದು ಹೇಳಿಬಿಡುತ್ತಾರೆ! ಇದರಿಂದ ಅವಮಾನಿತನಾದ ರಿನ್ಛೆನ್ ಮುಸ್ಲೀಮ್ ಧರ್ಮಕ್ಕೆ ಮತಾಂತರಗೊಂಡು, ಜೊತೆಗೆ ಹತ್ತು ಸಾವಿರ ಪಂಡಿತರನ್ನೂ ಇಸ್ಲಾಮಿಗೆ ಮತಾಂತರಗೊಳಿಸಿಬಿಡುತ್ತಾನೆ. ಇಲ್ಲಿಂದ ಶುರುವಾಗುತ್ತದೆ ನೋಡಿ ಭಟ್ಟರ ಮತಾಂತರದ, ಮಾರಣಹೋಮದ ವೃತ್ತಾಂತ.

  ಉಲ್ಟಾ ಹನುಮಾನ್ ಮಂದಿರ ಉಜ್ಜಯಿನಿ

ಬಂದೇಬಿಟ್ಟೆರು ಹೊರಗಿನ ದರೋಡೆಕೋರರು

ಹತ್ತು- ಹನ್ನೊಂದನೇ ಶತಮಾನದಲ್ಲಿ ಭಾರತದ ಮೇಲೆ ಘಜ್ನಿ ಮೊಹಮ್ಮದನ ದಾಳಿಗಳು ನಡೆಯುತ್ತವೆ. ಸತತವಾಗಿ ಹದಿನೇಳು ಬಾರಿ ದಂಡೆತ್ತಿ ಬಂದು ಭಾರತದ ಸಂಪತ್ತನ್ನು, ವಿಷೇಶವಾಗಿ ದೇವಸ್ಥಾನಗಳಲ್ಲಿದ್ದ ಅಪಾರ ಧನಕನಕಗಳನ್ನು ಲೂಟಿ ಮಾಡಿಕೊಂಡು ಹೋಗುತ್ತಾನೆ. ವಿಚಿತ್ರವೆಂದರೆ ಈ ದುಷ್ಟನ ಜೊತೆ ಅಲ್ ಬಿರೂನಿ ಎನ್ನುವ ಒಬ್ಬ ಮಿತ್ರನೂ ಭಾರತಕ್ಕೆ ಬರುತ್ತಾನೆ. ಇವನೊಬ್ಬ ಮೇಧಾವಿ, ವಿಜ್ಞಾನಿ, ಖಗೋಳ ಶಾಸ್ತ್ರದ, ವೈದ್ಯಕೀಯ ಶಾಸ್ತ್ರದ ವಿಧ್ಯಾರ್ಥಿ. ಗಾಂಧಾರ ದೇಶದ ಸಾಹಿ ರಾಜನ ಆಸ್ಥಾನದಲ್ಲಿ ಇವನಿಗೆ ವಿಶೇಷ ಗೌರವ ಕೊಟ್ಟು ಸನ್ಮಾನಿಸುತ್ತಾರೆ. ಅಲ್ಲಿದ್ದ ಕೆಲವು ಗ್ರಂಥಗಳನ್ನು ಅಭ್ಯಾಸ ಮಾಡಿ ಭಾರತದ ಬಗ್ಗೆ, ಸನಾತನ ಧರ್ಮದ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದುಕೊಂಡಿರುತ್ತಾನೆ. ಘಜ್ನಿ಼ಯ ಮೊಹಮ್ಮದನ ಜೊತೆ ಕಾಶ್ಮೀರಕ್ಕೆ ಬಂದ ಅಲ್ ಬಿರೂನಿ ಮೊದಲು ಹೋಗುವುದೇ ಅಲ್ಲಿಯ ಗ್ರಂಥಾಲಯಗಳಿಗೆ. ಸಂಸ್ಕೃತ ಕಲಿಯದೇ ಈ ಗ್ರಂಥಗಳನ್ನು ಅರ್ಥ ಮಾಡಿಕೊಳ್ಳಲು ಅಸಾಧ್ಯ ಎಂದರಿತವನು ಕೂಡಲೇ ಕೆಲವು ಪಂಡಿತರ ಸಹಾಯದಿಂದ ವಿದ್ಯಾರಂಭ ಪ್ರಾರಂಭಿಸಿ ಬಿಡುತ್ತಾನೆ. ಘಜ್ನಿ ಮೊಹಮ್ಮದನಿಗೆ ಇಲ್ಲಿನ ಧರ್ಮ ಗ್ರಂಥಗಳನ್ನು ಮಾತ್ರ ಮುಟ್ಟಬೇಡ…ಎನ್ನುವ ಕೋರಿಕೆಗೆ ಮನಸ್ಸಿಲ್ಲದ ಸಮ್ಮತಿಯೂ ಸಿಗುತ್ತದೆ. ಸಾಯವಬಾಲ ಎನ್ನುವ ಕಾಶ್ಮೀರಿ ಬ್ರಾಹ್ಮಣ ಮಿತ್ರನ ಸಹಾಯದಿಂದ ಸಂಸ್ಕೃತದಲ್ಲಿ ಎಂತಹ ಪರಿಣಿತಿ ಪಡೆಯುತ್ತಾನೆಂದರೆ ಕೆಲವೇ ದಿನಗಳಲ್ಲಿ ಸಂಸ್ಕೃತದಲ್ಲಿ ಒಂದು ಪುಸ್ತಕವನ್ನೇ ಬರೆದು ಬಿಡುತ್ತಾನೆ.! ಈಗ ಪ್ರಚಲಿತವಾಗುತ್ತಿರುವ INDOLOGY ಯ ಪ್ರಥಮ ಪ್ರವರ್ತಕ ಅಲ್ ಬಿರೂನಿ ಎನ್ನಬಹುದು ಅಷ್ಟು ಸುಧೀರ್ಘವಾಗಿ ಭಾರತದ ಬಗ್ಗೆ, ಸನಾತನ ಧರ್ಮದ ಬಗ್ಗೆ, ಇಲ್ಲಿಯ ಸಾಂಸ್ಕೃತಿಕತೆಯ ಬಗ್ಗೆ ಹಲವಾರು ಪುಸ್ತಕಗಳನ್ನು ಅರೇಬಿಕ್ ಮತ್ತು ಪರ್ಷಿಯನ್ ಭಾಷೆಗೆ ಭಾಷಾಂತರಿಸುತ್ತಾನೆ. ಹಾಗೆ ಭಾಷಾಂತರಿಸಿದ ಅನೇಕ ಪುಸ್ತಕಗಳಲ್ಲಿ ಒಂದು “ಕಿತಾಬ್ ಎಲ್ ಬತಾಂಜಲ್”. ಇದು ಪತಂಜಲಿಯ ಯೋಗಸೂತ್ರದ ಅವತರಣ! ಪ್ರಪಂಚದ ಸುಮಾರು ನಲವತ್ತಕ್ಕೂ ಹೆಚ್ಚು ಭಾಷಗಳಿಗೆ ಅನುವಾದಗೊಂಡಿರುವ ಈ ಮಹಾನ್ ಗ್ರಂಥದ ಬಗ್ಗೆ ನಮಗೆಷ್ಟು ತಿಳಿದಿದೆ?

ಕಾಶ್ಮೀರದ ಪಂಡಿತರನ್ನು ‘ಭಟ್ಟರು’ ಎಂದು ಕರೆಯುತ್ತಾರೆ. ಇವರು ಶೈವ ಸಾರಸ್ವತ ಬ್ರಾಹ್ಮಣರು. ಸುಂದರ ಕಾಶ್ಮೀರದ ಶಾಂತಿ ಪ್ರಿಯ ಜನಾಂಗ. ವೇದ ಪಾರಾಯಣ, ಪೂಜೆ ಪುನಸ್ಕಾರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸುಖೀಜೀವನ ನಡೆಸುತ್ತಿದ್ದ ಜನಾಂಗ. ಕಣಿವೆಯ ಜನರಲ್ಲಿ ಒಂದು ರೀತಿಯ ಭೌಗೋಳಿಕ ಏಕಾಂತತೆ ಇರುತ್ತದೆ. ಹೊರಗೆ ಏನಾಗುತ್ತಿದೆ ಎಂದು ತಿಳಿಯುವುದಿಲ್ಲ, ಹಾಗೇ ಹೊರಗಿನವರಿಗೆ ಸುಲಭವಾಗಿ ಒಗ್ಗಿಕೊಳ್ಳುವುದಿಲ್ಲ, ಹಾಗೂ ತಮ್ಮ ತಮ್ಮಲ್ಲೇ ಒಗ್ಗಟ್ಟೂ ಇರುವುದಿಲ್ಲ. ಇವರನ್ನು ರಕ್ಷಿಸಲೆಂದೇ ಸ್ವಾಮಿನಿಷ್ಟ ಯೋಧರ ಪಡೆಯೊಂದು ಸದಾ ಇವರ ಬೆಂಗಾವಲಿಗಿರುತ್ತಿತ್ತು ಅವರೇ ಲೋಹಾರಾಣಾ ಎನ್ನುವ ಜನಾಂಗದ ಖಡ್ಗಧಾರಿಗಳು. ಇನ್ನು ಇತ್ತೀಚಿನ ಇತಿಹಾಸಕ್ಕೆ ಬಂದರೆ ಸುಮಾರು ಎಂಟರಿಂದ ಹನ್ನೊಂದನೇ ಶತಮಾನದವರೆಗೆ ಭಾರತಕ್ಕೆ ಇಸ್ಲಾಂ ಪ್ರವೇಶಿಸದಂತೆ ಆಫ್ಘಾನಿಸ್ತಾನದಲ್ಲೇ ತಡೆಗಟ್ಟಿದ್ದು ಈ ಲೋಹಾರಾಣರ ಅಪ್ರತಿಮ ಸಾಹಸದಿಂದಲೇ. ಕ್ರಮೇಣ ಇವರಲ್ಲಿ ಕೆಲವರು ಮತಾಂತರದ ಇಸ್ಲಾಮೀಕರಣದ ಭೀತಿಯಿಂದ ದಕ್ಷಿಣದ ಕಡೆ ವಲಸೆ ಹೋಗಲು ಪ್ರಾರಂಭಿಸಿದರು. ಹಾಗೆ ವಲಸೆ ಬಂದ ಲೋಹಾನರು ವರ್ತಕ ವೃತ್ತಿಯನ್ನು ಅಳವಡಿಸಿಕೊಂಡು, ಸಿಂಧ್, ಗುಜರಾತ್ ಹಾಗೂ ಮುಂಬೈಗಳಲ್ಲಿ ನೆಲಸಿದರು. ಲೋಹಾನರ ಈ ವರ್ತಕ ಗುಂಪನ್ನು ‘ಥಕ್ಕರ್’ ಎನ್ನುವ ಉಪನಾಮದಿಂದಲೂ ಕರೆಯುತ್ತಾರೆ.

ಹೀಗೆ ವಲಸೆ ಬಂದವರಲ್ಲಿ ಪ್ರೇಮ್ ಜಿ ಥಕ್ಕರ್ ಕಾಥಿಯಾವಾಡದಲ್ಲಿ ಒಬ್ಬ ವ್ಯಾಪಾರಿಯಾಗಿ ನೆಲೆಸಿರುತ್ತಾನೆ.
ಥಕ್ಕರ್ ವಂಶಸ್ತರು ದವಸ ಧಾನ್ಯಗಳ, ಆಹಾರ ವಸ್ತುಗಳ ವ್ಯಾಪಾರ ಮಾಡುತ್ತಿದ್ದರೆ, ಪ್ರೇಮ್ ಭಾಯಿಯ ಮಗ ಪೂಂಜಾಲಾಲನಿಗೆ ಹೇಗಾದರೂ ಸರಿ ಬೇಗ ದುಡ್ಡು ಮಾಡಿಕೊಳ್ಳಬೇಕು ಎಂಬ ದುರಾಸೆ ಹುಟ್ಟಿಕೊಂಡು ಅವನು ಮೀನಿನ ಸಗಟು ವ್ಯಾಪಾರ ಪ್ರಾರಂಭಿಸಿಬಿಡುತ್ತಾನೆ. ಆಚಾರವಂತರು, ಮಡಿವಂತರು ಹಾಗೂ ಸಂಪೂರ್ಣ ಸಸ್ಯಹಾರಿ ಥಕ್ಕರ್ ವಂಶಸ್ಥರು ಅವಾಕ್ಕಾಗಿ ಹೋಗಿಬಿಡುತ್ತಾರೆ.
ಪ್ರೇಮ್ ಭಾಯಿಯ ಕುಟುಂಬಕ್ಕೆ ಜಾತಿಯಿಂದ ಬಹಿಷ್ಕಾರ ಹಾಕಿಬಿಡುತ್ತಾರೆ. ಇವರ ಮಗ ಪೂಂಜಿಲಾಲ ಇದರಿಂದ ಕೋಪಗೊಂಡು ಕಾಥಿಯಾವಾಡವನ್ನು ಬಿಟ್ಟು ಕರಾಚಿಗೆ ಬಂದು ನೆಲಸಿಬಿಡುತ್ತಾನೆ ಮತ್ತು. ಅದೇ ಸಿಟ್ಟಿನಲ್ಲಿ ಕುಟುಂಬ ಸಮೇತ ಇಸ್ಲಾಮಿಗೆ ಮತಾಂತರಗೊಂಡುಬಿಡುತ್ತಾನೆ. ತನ್ನ ಚಿಕ್ಕ ಮಗನ ಹಿಂದೂ ಹೆಸರನ್ನು ಬದಲಾಯಿಸಿ ಅವನಿಗೆ ಮೊಹಮ್ಮದ್ ಆಲಿ ಜಿನ್ನಾ ಎಂದು ಮರುನಾಮಕರಣ ಮಾಡುತ್ತಾನೆ.

ನೋಡಿ ಎಂತಹ ವಿಪರ್ಯಾಸ.. ಯಾವ ವಂಶ ತಲತಲಾಂತರಗಳಿಂದಲೂ ಸನಾತನ ಧರ್ಮದ ರಕ್ಷಣೆಗೆ ಟೊಂಕಕಟ್ಟಿ ನಿಂತು ಹೋರಾಡುತ್ತಿತ್ತೋ ಅದೇ ಸಮುದಾಯದ ಕುಡಿ ಪೂಂಜಾಲಾಲನ ಮಗ ಮಹಮ್ಮದಾಲಿ ಜಿನ್ನಾ ಜಿದ್ದಿಗೆ ಬಿದ್ದು ರಾಮಾಯಣದಲ್ಲಿ ಲವಾನಗರಿ ಎಂದು ಪ್ರಸಿದ್ಧಿ ಪಡೆದಿದ್ದ ಲಾಹೋರನ್ನು ರಾಜಧಾನಿಯಾಗಿ ಮಾಡಿ ಪಾಕಿಸ್ತಾನ ಎನ್ನುವ ಹೆಸರಿನ ಒಂದು ಇಸ್ಲಾಂ ದೇಶವನ್ನೇ ಸೃಷ್ಟಿ ಮಾಡಿಬಿಟ್ಟ!

✍️…ವಿಂಗ್ ಕಮಾಂಡರ್ ಸುದರ್ಶನ

ಕೃಪೆ: ವಾಟ್ಸಪ್

One thought on “ಇದು ಯಾರ ಕಾಶ್ಮೀರ? – The Kashmiri Files ನೋಡುವ ಮುನ್ನ

  1. ರಿಂಚೆನ್ ಎನ್ನುವ ಬೌದ್ಧ ಧರ್ಮದ ಸೇನಾನಿಯು ಶೈವ ಧರ್ಮಕ್ಕೆ ಮತಾಂತರಗೊಳ್ಳಲು ಇಚ್ಚಿಸಿದಾಗ ಪಂಡಿತರು ಅದಕ್ಕೆ ಶೈವ ಧರ್ಮದಲ್ಲಿ ಅವಕಾಶವಿಲ್ಲವೆಂದು ಹೇಳಿದರು. ಅವರು ಹೇಗಾದರೂ ಮಾಡಿ ಅವನಿಗೆ ಶೈವ ಧರ್ಮಕ್ಕೆ ಸೇರಿಸಿಕೊಂಡಿದ್ದರೆ?! ಆಗ ಅವನಿಂದ ಸಾಮೂಹಿಕವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರ ನಡೆಯುತ್ತಿರಲಿಲ್ಲ.
    ದುಡ್ಡಿನ ಲಾಲಸೆಯಿಂದ ಮೀನಿನ ವ್ಯಾಪಾರವನ್ನು ಪ್ರಾರಂಭಿಸಿದ ಪೂಂಜಿಲಾಲನ ಮನೆತನಕ್ಕೆ ಬಹಿಷ್ಕಾರ ಹಾಕದಿದ್ದರೆ ಪಾಕಿಸ್ತಾನವೇ ಉದಯವಾಗುತ್ತಿರಲಿಲ್ಲ. ಅಲ್ಲವೇ?

Leave a Reply

Your email address will not be published. Required fields are marked *

Translate »