🌻ದಿನಕ್ಕೊಂದು ಕಥೆ🌻
ಅಮ್ಮಾ…. ಏನದು ಅಲ್ಲಿ ಶಬ್ದ…?
ಆತ ಒರಟು ಧ್ವನಿಯಲ್ಲಿ ಮತ್ತು ಸಿಟ್ಟಲ್ಲಿ ಅಮ್ಮನತ್ರ ಕೇಳಿದ…
ಅಮ್ಮ – ನನ್ನ ಕೈ ತಾಗಿ ನಿನ್ನ ಮೊಬೈಲ್ ಫೋನ್ ಕೆಳಕ್ಕೆ ಬಿದ್ದದ್ದು ಪುಟ್ಟಾ…
ಯಾವ ಫೋನ್ ಅಮ್ಮಾ ಅಂತ ಕೇಳುತ್ತಾ ಆತ ಒಳಗಡೆ ಹೋಗಿ ನೋಡುತ್ತಾನೆ…
ಆತನ ಸಿಟ್ಟು ನೆತ್ತಿಗೇರಿತು.. ಏನಮ್ಮಾ ನಿಮ್ಮ ಕಣ್ಣು ಕುರುಡಾಗಿದೆಯಾ? ಈ ಮೊಬೈಲ್ ಫೋನಿನ ಬೆಲೆ ಎಷ್ಟು ಅಂತ ಗೊತ್ತಾ ನಿಮಗೆ…? ಇಪ್ಪತ್ತನಾಲ್ಕು ಸಾವಿರ ರುಪಾಯಿಗಳನ್ನು ಕೊಟ್ಟು ಖರೀದಿಸಿ ಒಂದು ತಿಂಗಳು ಕೂಡಾ ಆಗಿಲ್ಲ…… ನಿಜವಾಗಿಯೂ ಅಮ್ಮಾ… ಇತೀಚಿನ ದಿನಗಳಿಂದ ನಿಮ್ಮಿಂದ ತುಂಬಾ ನಷ್ಟಗಳನ್ನು ಅನುಭವಿಸುತ್ತಿದ್ದೇನೆ…..
ಆತನ ಮಾತುಗಳನ್ನೆಲ್ಲಾ ಕೇಳುತ್ತಾ ಭಯ ಮತ್ತು ಬೇಸರದಲ್ಲಿ ನಡುಗುತ್ತಾ ನಿಂತಿದ್ದಾರೆ ಆ ತಾಯಿ…
ಆಕೆ ಮೆಲ್ಲನೆ ಹೇಳುತ್ತಾಳೆ – ಕಂದಾ.. ನಾನು ಮಾತ್ರೆಗಳನ್ನು ತೆಗೆಯುವಾಗ ಕೈ ತಾಗಿ ಕೆಳಕ್ಕೆ ಬಿದ್ದದ್ದು…. ಬೇಕೂಂತ ಕೆಳಕ್ಕೆ ಹಾಕಿದ್ದಲ್ಲ ಪುಟ್ಟಾ… ಬಯ್ಯಬೇಡ ನನ್ನ ಮಗುವೇ….
ಆಕೆಯ ಕಣ್ಣುಗಳಿಂದ ಕಣ್ಣೀರು ಸುರಿಯತೊಡಗಿತು….
ಇನ್ನು ಅಳುತ್ತಾ ಇರಿ… ನನ್ನ ಬೆಲೆಬಾಳುವ ಮೊಬೈಲ್ ಒಡೆದು ಹಾಕಿದ್ದೀರಲ್ಲಾ….
ಆತನ ರಂಪಾಟ ಕೇಳುತ್ತಾ ಅಡುಗೆ ಮನೆಯಲ್ಲಿದ್ದ ಆತನ ಪತ್ನಿ ಶಾಲಿನಿ ಅಲ್ಲಿಗೆ ಬಂದಳು. ಯಾಕೆರೀ…? ಅಮ್ಮನಿಂದ ಅರಿಯದೆ ಆದ ತಪ್ಪಲ್ಲವೇ…?ಅದಕ್ಕೆ ಯಾಕೆ ಇಷ್ಟೊಂದು ರೇಗಾಡುತ್ತಿದ್ದೀರಾ..?
ಓ…. ಇನ್ನು ನೀನು ಕೂಡಾ ಏನನ್ನಾದರೂ ಎಲ್ಲಾ ತೆಗೆದು ಎಸೆದು ಒಡೆದಾಕು… ನೀವೆಲ್ಲಾ ಸೇರಿ ನನಗೆ ಹುಚ್ಚು ಹಿಡಿಸುತ್ತೀರಿ… ಅಂತ ಹೇಳುತ್ತಾ ಆತ ಕೋಪದಲ್ಲಿ ಮನೆಯಿಂದ ಹೊರ ನಡೆದ…..
ಆ ತಾಯಿ ಆ ಕೋಣೆಯ ಮೂಲೆಯಲ್ಲಿ ಕುಳಿತು ಬಿಕ್ಕಿ ಬಿಕ್ಕಿ ಅತ್ತಳು…
ಸೊಸೆ ಶಾಲಿನಿ ಆಕೆಯ ಹತ್ತಿರ ಬಂದು ಆಕೆಯನ್ನು ಹಿಡಿದು ಎಬ್ಬಿಸುತ್ತಾ – ” ಬಿಟ್ಟಾಕಿ ಅಮ್ಮಾ… ಅಳಬೇಡಿ… ನಿಮ್ಮ ಮಗನಿಗೆ ಹುಚ್ಚು… ಏನೋ ಟೆನ್ಷನ್ ನಲ್ಲಿ ಏನೋ ಹೇಳಿದ್ದಾರೇಂತ ಬೇಜಾರು ಮಾಡ್ಕೋಬೇಡಿ ” ಅಂತ ಸಾಂತ್ವನ ಹೇಳುತ್ತಾಳೆ.
ಕಣ್ಣೀರನ್ನು ಒರೆಸುತ್ತಾ ಆ ತಾಯಿ ಹೇಳುತ್ತಾಳೆ – ” ಮಗಳೇ ನಾನು ಈಗ ಬರುತ್ತೇನೆ ” ಅಂತ ಮನೆಯಿಂದ ಹೊರಗಡೆ ಹೆಜ್ಜೆ ಹಾಕುವಷ್ಟರಲ್ಲಿ
ಸೊಸೆ ಶಾಲಿನಿ ಕೇಳಿದಳು ” ಈಗ ಎಲ್ಲೋಗುತ್ತೀದ್ದೀರಾ ಅಮ್ಮಾ…”?
ಅಮ್ಮ – ನಾನು ಬೇಗನೇ ಬರುತ್ತೇನೆ….
ಮಧ್ಯಾಹ್ನ ಊಟಕ್ಕೆ ಬಂದ ಮಗ ಪತ್ನಿ ಶಾಲಿನಿಯತ್ರ ಅಮ್ಮನನ್ನು ವಿಚಾರಿಸಿದ- ” ಅಮ್ಮ ಎಲ್ಲಿ…?”
ಶಾಲಿನಿ – ” ನಂಗೊತ್ತಿಲ್ಲ… ಅತ್ತು ಅತ್ತು ಸುಸ್ತಾದ ಅಮ್ಮ ಬೇಗ ಬರುತ್ತೇನೆ ಅಂತ ಹೇಳುತ್ತಾ ಎಲ್ಲೋ ಹೋದರು.
ಆತ – ಹಾ… ಕತ್ತಲಾಗುವಾಗ ಬರಬಹುದು….
ಶಾಲಿನಿ – ರೀ… ಅಮ್ಮ ಎಲ್ಲಿಗೆ ಹೋಗಿದ್ದು ಅಂತ ಗೊತ್ತಿಲ್ಲ… ನಿಮ್ಮ ತಂಗಿಯ ಮನೆಗೇನಾದರೂ ಹೋಗಿರಬಹುದೇ…? ಒಮ್ಮೆ ಹೋಗಿ ವಿಚಾರಿಸಿ ಬನ್ನಿ…
ಆತನ ಸಿಟ್ಟು ಇನ್ನೂ ಕಡಿಮೆಯಾಗಿರಲಿಲ್ಲ…. ” ಹುಡುಕೋದಕ್ಕೆ ನನಗೆ ಸಮಯವಿಲ್ಲ ಬೇಕಿದ್ದರೆ ನೀನೇ ಹೋಗಿ ಹುಡುಕು…” ಆತ ಸಿಟ್ಟಲ್ಲಿ ಹೇಳಿದ.
ರಾತ್ರಿ ತಡವಾಗಿ ಆತ ಮನೆಗೆ ಬಂದ…
ಬಾಗಿಲನ್ನು ತಟ್ಟುತ್ತಾ – “ಶಾಲೂ ( ಶಾಲಿನಿ ) ಬಾಗಿಲು ತೆರೆ…”
ಶಾಲಿನಿ ಬಾಗಿಲನ್ನು ತೆರೆಯುತ್ತಾ ಆತನನ್ನು ದುರುಗುಟ್ಟಿ ನೋಡಿದಳು…
ಯಾಕೋ ನಿನ್ನ ಮುಖ ಊದಿಕೊಂಡಿದೆ…? ಊಟ ಬಡಿಸು….
ಶಾಲಿನಿ ತುಸು ಕೋಪದಿಂದ ” ಬೇಕಿದ್ದರೆ ಬಡಿಸಿ ತಿನ್ನಿ….
ಆತ ಯಾಕೋ… ಏನಾಯಿತೋ…? ಮತ್ತೆ ನೀನಿರೋದು ಯಾಕೇಳು…? ಅಮ್ಮ ಬಂದ್ರಾ…? ಎಷ್ಟೊತ್ತಿಗೆ ಬಂದದ್ದು….?
ಶಾಲಿನಿ – ಮ್… ಸಂಜೆ ಬಂದರು… ಪಾಪ ಮಲಗಿದ್ದಾರೆ….
ತಗೊಳ್ಳಿ… ನೀವು ಬರುವಾಗ ನಿಮ್ಮತ್ರ ಕೊಡೋಕ್ಕೆ ಹೇಳಿ ನನ್ನತ್ರ ಕೊಟ್ಟು , ಅಮ್ಮ ಈಗ ಮಲಗಿದಷ್ಟೇ… ಅಂತ ಹೇಳುತ್ತಾ ಶಾಲಿನಿ ಒಂದು ಚಿಕ್ಕ ಕವರನ್ನು ತೆಗೆದು ಆತನ ಕೈಯಲ್ಲಿ ಕೊಟ್ಟಳು.
ಆತ ಆ ಕವರನ್ನು ಓಪನ್ ಮಾಡಿ ನೋಡಿದ.
ತುಂಬಾ ಎರಡು ಸಾವಿರದ ನೋಟುಗಳು…!! ಇದೆಲ್ಲಿಂದ ಅಮ್ಮನಿಗೆ ಸಿಕ್ಕಿದ್ದು….!!??ಇದನ್ನು ನನಗೆ ಯಾಕೆ ಕೊಟ್ಟಿದ್ದಾಳೆ….?
ಶಾಲಿನಿ – ” ನಿಮ್ಮ ಫೋನ್ ಒಡೆದದ್ದಕ್ಕೆ ಅಮ್ಮ ಕೊಟ್ಟದ್ದು…. ಬೆಳಿಗ್ಗೆ ಹೋಗಿ ಹೊಸತು ಖರೀದಿಸಿಕೊಳ್ಳಿ… ಈಗ ನಿಮಗೆ ಸಂತೋಷ ಆಯಿತಲ್ಲಾ… ” ಆಕೆ ಸ್ವಲ್ಪ ಕೋಪದಿಂದ ಹೇಳಿದಳು…
ಆತ – ಎಲ್ಲಿಂದ ಅಮ್ಮನಿಗೆ ಇಷ್ಟೊಂದು ದುಡ್ಡು…? ಆತ ಆಶ್ಚರ್ಯದಿಂದ ಕೇಳಿದ.
ಶಾಲಿನಿ – ” ನಿಮ್ಮ ಅಪ್ಪಾಜಿ ಸಾವನ್ನಪ್ಪೋದಕ್ಕೆ ಮುಂಚೆ ಖರೀದಿಸಿ ಕೊಟ್ಟದ್ದು ಅಂತ ಹೇಳುತ್ತಾ ಕಿವಿಯೋಲೆಯನ್ನು ತುಂಬಾ ಜಾಗರೂಕತೆಯಿಂದ ಜೋಪನವಾಗಿ ಧರಿಸುತ್ತಿದ್ದರಲ್ಲಾ…?
ಅಂದು ನೀವು ಬೈಕ್ ಖರೀದಿಸಲು ಆ ಕಿವಿಯೋಲೆಯನ್ನು ಅಡವಿಡಲು ಕೇಳಿದಾಗ , ಇದು ನಿನ್ನ ಅಪ್ಪಾಜಿಯ ಕೊನೆಯ ಗಿಪ್ಟಾಗಿದೆ… ಇದನ್ನು ನಾನು ಸತ್ತ ನಂತರವೇ ಕಿವಿಯಿಂದ ತೆಗೆದರೆ ಸಾಕು ಅಂತ ಹೇಳಿರಲಿಲ್ಲವೇ….? ಅದನ್ನೇ ಅಮ್ಮ ಮಾರಿದ್ದಾರೆ… ಪಾಪ….
ಆತ ತಲೆತಗ್ಗಿಸಿ ನಿಂತ…..
ಶಾಲಿನಿ ಮುಂದುವರಿಸುತ್ತಾ ರೀ… ನಿಮ್ಮ ಫೋನ್ ಒಡೆದಾಗ ನೀವು ಅಮ್ಮನಿಗೆ ಕೋಪದಲ್ಲಿ ಏನೆಲ್ಲಾ ಹೇಳಿದಿರಿ…? ನಿಮ್ಮನ್ನು ಅಮ್ಮನ ಹೊಟ್ಟೆಯಿಂದ ಆಪರೇಷನ್ ಮಾಡಿ ಹೊರತೆಗೆಯುವಾಗ ಅಮ್ಮನ ರಕ್ತವೆಷ್ಟು ಹೋಗಿರಬಹುದು….? ಆ ಅಮ್ಮ ಎಷ್ಟೊಂದು ನೋವನ್ನು ಸಹಿಸಿರಬಹುದು…? ಹೊಲಿಗೆ ಮಾಡಿದ ಆ ಹೊಟ್ಟೆಯ ಮೇಲೆ ಮಲಗಿಸಿ ನೋವನ್ನು ಲೆಕ್ಕಿಸದೆ, ನಿಮ್ಮ ಅಳುವನ್ನು ನಿಲ್ಲಿಸುವ ಸಲುವಾಗಿ ಎಷ್ಟು ಬಾರಿ ನಿಮ್ಮನ್ನು ಮುದ್ದಿಸಿರಬಹುದು….? ಬರೀ ಒಂದು ಮೊಬೈಲಿಗೋಸ್ಕರ ಲೆಕ್ಕ ಹೇಳಿದ್ದೀರಲ್ಲಾ…?
ಅಷ್ಟೆಲ್ಲಾ ಅಮ್ಮನತ್ರ ಹೇಳಬಾರದಿತ್ತು ರೀ… ಆ ಅಮ್ಮ ಸಹಿಸಿದ ತ್ಯಾಗ , ಸಹನೆಗೆ ಬೆಲೆಕಟ್ಟಲು ನಿಮ್ಮಿಂದ ಸಾಧ್ಯವೇ….? ನಿಮಗೋಸ್ಕರ ವ್ಯಯಿಸಿದ ನಿದ್ದೆಯಿಲ್ಲದ ರಾತ್ರಿಗಳಿಗೆ ನಿಮ್ಮಿಂದ ಬೆಲೆ ಕಟ್ಟಲು ಸಾಧ್ಯವೇ…?
ಈ ಜನ್ಮವಿಡೀ ನೀವು ಸಂಪಾದಿಸಿದ ಸಂಪತ್ತನ್ನೆಲ್ಲಾ ಅಮ್ಮನ ಹೆಸರಿಗೆ ಬರೆದು ಕೊಟ್ಟರೂ ನಿಮಗಾಗಿ ಆ ಅಮ್ಮ ಅನುಭವಿಸಿದ ತ್ಯಾಗ ಸಹನೆಗಳಿಗೆ ಬೆಲೆಕಟ್ಟಲು ಸಾಧ್ಯವೇ ಇಲ್ಲಾರಿ….
ತನ್ನ ತಪ್ಪಿನ ಅರಿವಾಗಿ ಆತನ ಕಣ್ಣುಗಳು ತುಂಬ
ಿದವು…
ಆತ – ಶಾಲೂ ನೀನು ದೇವತೆಯಾಗಿದ್ದಿ…. ಆ ಅಮ್ಮನ ಸೊಸೆಯಾಗಲು ನಿನಗಿಂತಲೂ ಯೋಗ್ಯಳಾದ ಹೆಣ್ಣೊಬ್ಬಳು ಬೇರೆ ಯಾರೂ ಇರಲಾರಳು….
ಅಯ್ಯೋ ದೇವರೇ… ನಾನು ಬೆಳಗ್ಗೆ ಅಮ್ಮನತ್ರ ಏನೆಲ್ಲಾ ಹೇಳಿರುವೆ….! ಆತ ಅತ್ತೇಬಿಟ್ಟ….
ಶಾಲಿನಿ – ಪರವಾಗಿಲ್ಲ ರೀ…. ತಪ್ಪಿನ ಅರಿವಾಗಿದೆಯಲ್ಲಾ… ನಾಳೆ ಬೆಳಿಗ್ಗೆ ಅಮ್ಮನಲ್ಲಿ ಕ್ಷಮೆ ಕೇಳಿ ಪ್ರಾಯಶ್ಚಿತ್ತ ಮಾಡಿದರಾಯಿತು… ಅಂತ ಸಾಂತ್ವನ ಹೇಳಿದಳು ಆಕೆ…..
ಬೆಳಿಗ್ಗೆ ಅಮ್ಮ ಏಳೋದಕ್ಕೆ ಮುಂಚೆನೇ ಆತ ಬೈಕ್ ನಲ್ಲಿ ಹೊರಟ.. ಅಮ್ಮನ ಪರ್ಸ್ ನಿಂದ ಕಿವಿಯೋಲೆ ಮಾರಿದ ಬಿಲ್ಲನ್ನು ತೆಗೆದ.. ಅಡ್ರಸ್ ಹುಡುಕುತ್ತಾ ಆ ಚಿನ್ನದ ಅಂಗಡಿಯನ್ನು ತಲುಪಿದ.
ಆತ ಅಂಗಡಿಯಾತನತ್ರ ಹೇಳಿದ – ಸರ್ ಈ ಬಿಲ್ಲಿನಲ್ಲಿರುವ ಚಿನ್ನವನ್ನು ನಿನ್ನೆ ನನ್ನ ಅಮ್ಮ ಇದೇ ಅಂಗಡಿಯಲ್ಲಿ ಮಾರಿದ್ದಾರೆ… ಅದು ನನಗೆ ವಾಪಾಸ್ ಬೇಕು…
ಅಂಗಡಿಯಾತ – ಬೋಸ್ , ಚಿನ್ನ ಇಲ್ಲೇ ಇದೆ. ಹಣ ಕೊಟ್ಟು ಚಿನ್ನವನ್ನು ತೆಗೊಂಡು ಹೋಗಿ….
ಆತ ದುಡ್ಡುಕೊಟ್ಟು ಚಿನ್ನವನ್ನು ತೆಗೊಂಡ. ಮನೆಗೆ ಹಿಂತಿರುಗಿದ…
ದೂರದಿಂದ ಮನೆಯ ಮುಂದೆ ಸೇರಿರುವ ಜನರನ್ನು ನೋಡಿದ..
ಆತ ಬೈಕ್ ನಿಲ್ಲಿಸಿ ಮನೆಯೊಳಗೆ ಓಡಿದ….
ಆವೇಶಭರಿತನಾಗಿ ಬಂದ ಆತನನ್ನು ಪಕ್ಕದ ಮನೆಯ ಮದ್ಯವಯಸ್ಕರೊಬ್ಬರು ಹಿಡಿದು ನಿಲ್ಲಿಸಿದರು.
ನಿನ್ನ ಅಮ್ಮ ರಾತ್ರಿಯೇ ನಿಮ್ಮೆಲ್ಲರನ್ನು ಅಗಲಿದ್ದಾರೆ…
ಆತ ಅಮ್ಮ ಮಲಗಿದ ಕೋಣೆಯೊಳಗೆ ಓಡಿ ಹೋಗಿ ಅಮ್ಮನ ಪಾದದ ಮೇಲೆ ತಲೆಯಿಟ್ಟು ಚಿಕ್ಕ ಮಕ್ಕಳ ಹಾಗೆ ಕಿರುಚುತ್ತಾ ಅತ್ತ….
ಅತ್ತು ಸುಸ್ತಾದ ಆತ ಒಬ್ಬ ಹುಚ್ಚನಂತೆ ಅಮ್ಮನ ಕಿವಿಯಲ್ಲಿ ಕಿವಿಯೋಲೆಯನ್ನು ಹಾಕುತ್ತಾ ಅಮ್ಮನ ಮುಖದಲ್ಲೆಲ್ಲಾ ಮುದ್ದಾಡಿದ….
ಆಗಲೂ ಆತನ ಕಿವಿಯಲ್ಲಿ ಅಮ್ಮನ ಆ ಮಾತುಗಳು ಮೊಳಗುತ್ತಿತ್ತು – ” ಇದು ನಿನ್ನ ಅಪ್ಪಾಜಿ ಖರೀದಿಸಿಕೊಟ್ಟ ಕೊನೆಯ ಗಿಪ್ಟಾಗಿದೆ… ಇದನ್ನು ನಾನು ಸತ್ತ ನಂತರವೇ ನನ್ನ ಕಿವಿಯಿಂದ ತೆಗೆದರೆ ಸಾಕು.”
ಒಂದು ಮಾತಿನಿಂದ ಕೂಡಾ ಹೆತ್ತವರನ್ನು ನೋಯಿಸದಿರಿ ಸ್ನೇಹಿತರೆ…. ಕ್ಷಮೆ ಕೇಳಲು ಕೂಡಾ ಸಮಯ ಕೊಡದೆ ನಮ್ಮನ್ನು ಅಗಲಿ ದೂರವಾಗಬಹುದು.
ಮನುಷ್ಯರನ್ನು ಪ್ರೀತಿಸಿ
ವಸ್ತುಗಳನ್ನು ಉಪಯೋಗಿಸಿ