ಇಷ್ಟಾರ್ಥ ಸಿದ್ಧಿ ಆಂಜನೇಯ ದೇವಸ್ಥಾನ ಗಳ ಮಾಹಿತಿ…!
ಐತಿಹಾಸಿಕ ನಗರ ಉಜ್ಜಯಿನಿಯಿಂದ ಸುಮಾರು 15 ಕಿ.ಮೀ. ದೂರದಲ್ಲಿರುವ ಸಾನ್ವೀರ್‌ನಲ್ಲಿ ನೆಲೆಸಿರುವ ಉಲ್ಟಾ ಹನುಮಾನ್ ಮಂದಿರದ ಬಗ್ಗೆ ತಿಳಿಯೋಣ ಬನ್ನಿ. ಇಲ್ಲಿನ ವಿಶೇಷ ಆಕರ್ಷಣೆ ತಲೆಕೆಳಗಾಗಿರುವ ಹನುಮಂತ ದೇವರ ವಿಗ್ರಹ. ಆದ್ದರಿಂದಲೇ ಇದು ಉಲ್ಟಾ ಹನುಮಾನ್ ಮಂದಿರವೆಂದು ಖ್ಯಾತ. ಈ ವಿಗ್ರಹ ಹನುಮಂತನ ಮುಖವನ್ನು ಮಾತ್ರ ಹೊಂದಿದೆ.
ಈ ದೇವಾಲಯವು ಬಹಳ ಪ್ರಾಚೀನವಾದುದು ಎನ್ನುವ ಗ್ರಾಮದ ನಿವಾಸಿಗಳು ಹಿನ್ನೆಲೆಯಾಗಿ ರಾಮಾಯಣದ ಕಾಲದ ಕಥೆಯೊಂದನ್ನು ಬಿಚ್ಚಿಡುತ್ತಾರೆ, ಅಹಿರಾವಣನು ರಾಮ, ಲಕ್ಷ್ಮಣರನ್ನು ಅಪಹರಿಸಿ ಪಾತಾಳಲೋಕಕ್ಕೆ ಕೊಂಡೊಯ್ದಾಗ ಹನುಮಂತ ದೇವರು ಪಾತಾಳಕ್ಕೆ ಹೋಗಿ ಅವರ ಪ್ರಾಣ ರಕ್ಷಿಸಿದ್ದು, ಜನರ ನಂಬಿಕೆಯಂತೆ ಈ ಪ್ರದೇಶದಿಂದಲೇ ಹನುಮಂತ ದೇವರು ಪಾತಾಳಕ್ಕೆ ಇಳಿದಿದ್ದರು. ಹನುಮಂತ ದೇವರ ವಿಗ್ರಹವು ಬಹು ಶಕ್ತಿಶಾಲಿ ಎಂಬುದು ಪ್ರತೀತಿ. ಈ ದೇವಾಲಯದ ಬಳಿ ಹಲವಾರು ಸಂತರ ಮಂದಿರಗಳು ಅಸ್ತಿತ್ವದಲ್ಲಿವೆ. ಈ ಮಂದಿರಗಳು 1200 ವರ್ಷಗಳಷ್ಟು ಹಳೆಯ ಇತಿಹಾಸವನ್ನು ಹೊಂದಿವೆ ಎಂದು ತಿಳಿದು ಬಂದಿದೆ.
ಹನುಮಾನ್ ದೇವಾಲಯದ ಆವರಣದಲ್ಲಿ ಅಶ್ವತ್ಥ, ಆಲ, ಬೇವು, ಪಾರಿಜಾತ ಮತ್ತು ತುಳಸಿಯ ಮರಗಳು ಇವೆ. ಪ್ರಾಚೀನ ಕಥೆಗಳ ಪ್ರಕಾರ ಹನುಮಂತ ದೇವರು ಈ ಮರಗಳಲ್ಲಿ ವಾಸವಾಗಿದ್ದಾರೆ. ಪಾರಿಜಾತ ಮರದಲ್ಲಿ ಬಹಳಷ್ಟು ಗಿಳಿಗಳು ವಾಸವಾಗಿವೆ. ದಂತಕಥೆಗಳ ಪ್ರಕಾರ ಗಿಳಿಯು ಬ್ರಾಹ್ಮಣನ ಅವತಾರ ತಾಳುತ್ತದೆ. ಹನುಮ ದೇವರು ಕೂಡ ಗಿಳಿ ರೂಪ ತಾಳಿದ್ದು ಈ ಮೂಲಕವಾಗಿ ತುಳಸಿದಾಸರಿಗೆ ಶ್ರೀರಾಮನ ದರ್ಶನ ಸಾಧ್ಯವಾಯಿತು ಎನ್ನಲಾಗುತ್ತಿದೆ.
ದೇವಾಲಯದ ಪ್ರಾಕಾರದಲ್ಲಿ ರಾಮ, ಸೀತಾ, ಲಕ್ಷ್ಮಣ ಶಿವ ಪಾರ್ವತಿಯರ ಮೂರ್ತಿಗಳಿವೆ. ಹನುಮಾನ್ ವಿಗ್ರಹದ ಮೇಲೆ ಪ್ರತಿ ಮಂಗಳವಾರ ಕೇಸರಿ ಕುಂಕುಮ ಲೇಪಿಸಲಾಗುತ್ತದೆ. ಮೂರರಿಂದ ನಾಲ್ಕು ವಾರಗಳವರೆಗೆ ದೇವಾಲಯಕ್ಕೆ ನಿರಂತರ ಭೇಟಿ ನೀಡಿದರೆ ತಮ್ಮ ಅಪೇಕ್ಷೆಗಳು ಈಡೇರುತ್ತವೆ ಎಂಬುದು ಜನರ ನಂಬಿಕೆ. ಹನುಮಂತ ದೇವರ ಮೇಲಿರುವ ಅಚಲ ನಂಬಿಕೆಯು ಭಕ್ತಾದಿಗಳನ್ನು ಉಲ್ಟಾ ಮಂದಿರದೆಡೆಗೆ ಸೆಳೆಯುತ್ತಿದೆ. ಇಲ್ಲಿನ ಆಂಜನೇಯನಿಗೆ ನಕಾರಾತ್ಮಕ ಅಂಶಗಳನ್ನು ಹೊಡೆದೋಡಿಸುವ ಶಕ್ತಿಯಿದೆ ಎಂದು ಹೇಳಲಾಗುತ್ತದೆ.
ಹೋಗುವುದು ಹೇಗೆ: ರಸ್ತೆ ಮಾರ್ಗ: ಉಜ್ಜಯಿನಿ(15ಕಿ.ಮೀ.) ,ಇಂದೋರ್(30ಕಿ.ಮೀ.)ಗಳಿಂದ ಬಸ್ ಅಥವಾ ಟಾಕ್ಸಿ ಮೂಲಕ ತಲುಪಬಹುದು. ವಾಯು ಮಾರ್ಗ: ಹತ್ತಿರದ ವಿಮಾನ ನಿಲ್ದಾಣ ಇಂದೋರ್.