ಅರ್ಚಕನ ಬೆಲೆ – ಒಂದು ಸಣ್ಣ ಕಥೆ

ಅರ್ಚಕನ ಬೆಲೆ.

ಒಂದು ದಿನ ಒಂದು ಕೋರ್ಟಿನಲ್ಲಿ ಜಡ್ಜ್ ಮುಂದೆ ಒಂದು ಕೇಸ್ ಬಂದಿತ್ತು.
ಒಬ್ಬ ಫಿರ್ಯಾದಿ ತಂದ ಕೇಸ್ ಹೀಗಿತ್ತು.
‘ಒಬ್ಬ ಮಾಮೂಲಿ ಅರ್ಚಕ, ದೇವಸ್ಥಾನದಲ್ಲಿ ಮಂಗಳಾರತಿ ತಟ್ಟೆಯ ಪುಡಿಗಾಸಿನಿಂದ ಬದುಕುವವನು, ಸರ್ಕಾರಕ್ಕೆ ಯಾವುದೇ ತೆರಿಗೆ ಕಟ್ಟದೇ ಕೆಲವೇ ಸಮಯದಲ್ಲಿ ಶ್ರೀಮಂತನಾದ ಎಂದರೆ ಅವನು ಅಕ್ರಮ ರೀತಿಯಲ್ಲಿ ಧನಸಂಪಾದನೆ ಮಾಡಿರಬೇಕು. ಆದ್ದರಿಂದ ಆ ಅರ್ಚಕನ ಅಕ್ರಮ ಸಂಪಾದನೆಯ ಬಗ್ಗೆ ವಿಚಾರಣೆ ನಡೆಸಿ ಸೂಕ್ತ ಶಿಕ್ಷೆ ವಿಧಿಸಬೇಕೆಂದು ಪ್ರಾರ್ಥನೆ ‘
ಜಡ್ಜ್ ಮೊದಲು ಆ ಅರ್ಚಕನನ್ನು ಪ್ರಶ್ನೆ ಮಾಡಿದರು
“ನಿಮ್ಮ ಮೇಲೆ ಅಕ್ರಮ ಧನ ಸಂಪಾದನೆಯ ಆರೋಪವಿದೆ. ನಿಮ್ಮ ಸಂಪಾದನೆ ಸಕ್ರಮವೋ ಅಕ್ರಮವೋ ಸ್ಪಷ್ಟ ಪಡಿಸಿ”
ಅರ್ಚಕರು ಹೇಳಿದರು ” ಅಯ್ಯಾ, ನನ್ನ ಬಳಿಯಿರುವ ಧನವೆಲ್ಲಾ ಸಕ್ರಮವಾಗಿ ನನಗೆ ಬಂದಿದ್ದು”.
ಜಡ್ಜ್ ಸವಾಲು ಹಾಕಿದರು ” ಸಾಧಾರಣ ಅರ್ಚಕವೃತ್ತಿಯಿಂದ ಬದುಕುತ್ತಿರುವ ನೀವು ಗಳಿಸಿದ್ದೆಲ್ಲಾ ಸಕ್ರಮವಾಗಿ ಎಂದು ಹೇಗೆ ನಂಬುವುದು?”
ಅರ್ಚಕರು ಹೇಳುತ್ತಾರೆ”ಅಯ್ಯಾ, ಒಂದು ದಿನ ನಾನು ಊರಿನ ಕೆರೆಯಬಳಿ ಸಂಧ್ಯಾವಂದನೆಯಲ್ಲಿರುವಾಗ ಸಂಜೆಯ ಮಬ್ಬು ಬೆಳಕಿನಲ್ಲಿ ಯಾರೋ ಇಬ್ಬರು ಕೆರೆಯಂಚಿನಲ್ಲಿ ನಿಂತು ಅಳುವುದು ಕೇಳಿಸಿ ನಾನು ಅಲ್ಲಿಗೆ ಧಾವಿಸಿದೆ. ದಂಪತಿಗಳು ಇಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದರಲ್ಲಿದ್ದರು ಎಂದು ತಿಳಿಯಿತು. ನಾನು ಅವರು ಮಾಡುತ್ತಿದ್ದಿದ್ದು ಮಹಾಪಾಪದ ಕೆಲಸ, ಹುಟ್ಟಿಸಿದ ದೇವರು ಇಂಥಾ ಹೇಡಿತನವನ್ನು ಮೆಚ್ಚುವುದಿಲ್ಲ. ದಯವಿಟ್ಟು ಆತ್ಮಹತ್ಯೆಯ ಯೋಚನೆ ಬಿಟ್ಟು ಮನೆಗೆ ಹೋಗಿ. ಖಂಡಿತವಾಗಿಯೂ ನಿಮಗೆ ಕೆಲವು ದಿನಗಳಲ್ಲಿ ಒಳ್ಳೆಯದಾಗುತ್ತದೆ ಎಂದು ಸಮಾಧಾನ ಮಾಡಿ ವಾಪಸ್ ಕಳಿಸಿದೆ.
ನನ್ನ ಮಾತಿನ ಮೇಲೆ ವಿಶ್ವಾಸವಿಟ್ಟು ಆ ದಂಪತಿಗಳು ಮನೆಗೆ ಹಿಂತಿರುಗಿದರು. ಕೆಲವು ತಿಂಗಳುಗಳ ನಂತರ ಆ ದಂಪತಿಗಳು ನನ್ನ ಬಳಿ ಬಂದರು. ಈ ಬಾರಿ ಸಂತೋಷ ಉತ್ಸಾಹಗಳಿಂದ ಇದ್ದರು. ಕಾರಣವೇನೆಂದರೆ ಅವರಿಗೆ ವಂಶೋದ್ಧಾರಕನೊಬ್ಬನು ಹುಟ್ಟುವ ಸೂಚನೆ ಇತ್ತು. ಮಕ್ಕಳಾಗುವುದಿಲ್ಲವೆಂಬ ಜಿಗುಪ್ಸೆಯಿಂದ ಅವರು ತಮ್ಮ ಆಸ್ತಿ, ಧನ ಕನಕಾದಿಗಳನ್ನೆಲ್ಲಾ ದೇವಾಲಯಕ್ಕೆ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗುವುದರಲ್ಲಿದ್ದರು. ನಾನು ಅವರಿಗೆ ಸಮಾಧಾನ ಹೇಳಿ ಕಳಿಸಿದಮೇಲೆ ಅವರು ಪುನಃ ಸಾಂಸಾರಿಕ ಜೀವನ ನಡೆಸಲು ಉದ್ಯಮಿಸಿದ್ದರು. ದೇವರ ದಯದಿಂದ ಅವರಿಗೆ ಮಗುವಿನ ಯೋಗ ಬಂದಿತ್ತು. ಅವರು ನನಗೆ ಕೃತಜ್ಞತೆಗಳನ್ನು ಹೇಳಿ ಸ್ವಲ್ಪ ಧನವನ್ನು ನಾನು ಎಷ್ಟೋ ಬೇಡವೆಂದರು ಕೇಳದೆ ಕೊಟ್ಟು ಹೋದರು.
ಇನ್ನೂ ಕೆಲವು ತಿಂಗಳುಗಳ ನಂತರ ಆ ದಂಪತಿಗಳು ಪುನಃ ಬಂದು ತಮಗೆ ಪುತ್ರರತ್ನ ಪ್ರಾಪ್ತಿಯಾದ ಸಂತೋಷದ ವಿಷಯ ತಿಳಿಸಿ ‘ಅವತ್ತು ನೀವು ನಮ್ಮನ್ನು ಉಳಿಸಿ ‘ದೇವರು ಒಳ್ಳೆಯದು ಮಾಡುತ್ತಾನೆ’ ಎಂದು ಆಶೀರ್ವದಿಸಿದ್ದಿರಿ ಸ್ವಾಮಿ. ನಿಮ್ಮ ಮಾತು ಇಂದು ನಿಜವಾಯಿತು’ ಎಂದು ಹೇಳಿ ಇನ್ನೂ ಒಂದಿಷ್ಟು ಧನವನ್ನು ಅರ್ಪಿಸಿ ಹೋದರು. ಅವರ ಕೃತಜ್ಞತಾ ಪೂರ್ವಕ ಕಾಣಿಕೆಗಳಿಂದ ನನ್ನ ಬಡತನ ನೀಗಿಸಿಕೊಂಡೆ.
ಕೆಲವು ವರ್ಷಗಳ ನಂತರ ಪುನಃ ಆ ದಂಪತಿಗಳು ತಮ್ಮ ಮಗನೊಂದಿಗೆ ಬಂದು ಅವನಿಗೆ ಅಕ್ಷರಾಭ್ಯಾಸ ಮಾಡಲು ನಾಂದಿ ಹಾಕಬೇಕು ಎಂದು ಕೋರಿದರು.
ಅವರ ಆಶಯದಂತೆ ಅವನಿಗೆ ಅಕ್ಷರಾಭ್ಯಾಸ ಪ್ರಾರಂಭಿಸಿ ‘ಮುಂದೆ ದೊಡ್ಡ ವ್ಯಕ್ತಿ ಯಾಗಿ ಸಮಾಜಕ್ಕೆ ಅನುಕೂಲವಾಗಿ ನಿಮಗೆ ಕೀರ್ತಿ ತರಲಿ’ ಎಂದು ಆಶೀರ್ವದಿಸಿದೆ. ಆಗ ಕೃತಜ್ಞತಾ ಪೂರ್ವಕವಾಗಿ ಮತ್ತೆ ಒಂದಿಷ್ಟು ಧನ ಕನಕಗಳನ್ನು ಕಾಣಿಕೆಯಾಗಿ ನೀಡಿದರು.
ಎಷ್ಟೋ ವರ್ಷಗಳ ನಂತರ ಅವರ ಮಗ ಓದಿ ಬರೆದು ವಿದ್ಯಾವಂತನಾಗಿ ತಮ್ಮಂತೆ ನ್ಯಾಯಾಧೀಶನಾದನೆಂದು ತಿಳಿದುಬಂತು. ಆ ದಂಪತಿಗಳು ಕಾಲವಾದರೆಂದೂ ತಿಳಿಯಿತು. ಆ ಮಗ ಎಲ್ಲಿದ್ದಾನೋ ಏನೋ. ಎಲ್ಲಿದ್ದರೂ ಅವನ ತಂದೆತಾಯಿಗಳ ಆತ್ಮಕ್ಕೆ ಶಾಂತಿ ತಂದು ಕೀರ್ತಿ ಗಳಿಸೇ ಇರುತ್ತಾನೆ. ಅಯ್ಯಾ ಹೀಗೆ ನನಗೆ ಸಂದ ಅವರ ಧನಸಹಾಯದಿಂದ ಇಷ್ಟರಮಟ್ಟಿಗೆ ಬದುಕಿದ್ದೇನೆ. ಈಗ ನೀವೇ ನಿರ್ಧರಿಸಬೇಕು, ನಾನು ಸಂಪಾದಿಸಿದ್ದು ಅಕ್ರಮವೋ ಸಕ್ರಮವೋ ಎಂದು” ಅರ್ಚಕರು ತಮ್ಮ ಹೇಳಿಕೆಯನ್ನು ಮುಗಿಸಿದರು.
ಜಡ್ಜ್ ಕಣ್ಣುಮುಚ್ಚಿಕೊಂಡು ಸ್ವಲ್ಪ ಹೊತ್ತು ಧ್ಯಾನಿಸಿ ನಂತರ ತಮ್ಮ ಅಭಿಪ್ರಾಯವನ್ನು ತಿಳಿಸಿದರು.
“ಆ ದಿನ ನೀವು ಆ ದಂಪತಿಗಳ ಜೀವ ಉಳಿಸಿಲ್ಲದಿದ್ದರೆ ಅವರ ಮಗ ಉನ್ನತ ಸ್ಥಾನಕ್ಕೆ ಏರುತ್ತಿರಲಿಲ್ಲ. ತಮ್ಮ ಜೀವ ಉಳಿಸಿ ತಮ್ಮ ಅಭ್ಯುದಯಕ್ಕೆ ಕಾರಣರಾದ ನಿಮಗೆ ಅವರು ಕೃತಜ್ಞತಾ ಪೂರ್ವಕವಾಗಿ ನೀಡಿದ ಧನ ಅಕ್ರಮವೆನಿಸಿಕೊಳ್ಳುವುದಿಲ್ಲ. ಅದು ಸಕ್ರಮವೇ”
ಎಂದು ಹೇಳಿ ಆ ಕೇಸು ವಜಾ ಮಾಡಿದರು. ನಂತರ ಅರ್ಚಕರನ್ನು ಕೇಳಿದರು” ಆ ದಂಪತಿಗಳ ಹೆಸರು ನೆನಪಿದೆಯೇ?”.
ಅರ್ಚಕರು ಆ ಧನವಂತನ ಹೆಸರನ್ನು ಹೇಳಿದ ಕೂಡಲೇ
ಜಡ್ಜ್ ತಮ್ಮ ಆಸನ ಬಿಟ್ಟು ಕೆಳಗಿಳಿದು ಬಂದು ಅದು ಕೋರ್ಟ್ ರೂಂ ಎನ್ನುವುದನ್ನೂ ಲೆಕ್ಕಿಸದೆ ಅರ್ಚಕರಿಗೆ ಸಾಷ್ಟಾಂಗ ನಮಸ್ಕಾರ ಮಾಡಿ “ನೀವು ಅಕ್ಷರಾಭ್ಯಾಸ ಮಾಡಿಸಿದ ಬಾಲಕ ನಾನೇ. ಆ ದಂಪತಿಗಳು ನನ್ನ ತಂದೆ ತಾಯಿಗಳು. ನಿಮ್ಮ ಆಶೀರ್ವಾದ ನನಗೂ ಇರಲಿ. “
ಎಂದು ಭಾವುಕರಾಗಿ ನುಡಿದು ಬಾಗಿಲತನಕ ಬಂದು ಅವರನ್ನು ಬೀಳ್ಕೊಟ್ಟರು.
***
(ತೆಲುಗಿನಿಂದ. ಭಾವಾನುವಾದ: ಜೆ.ಬಿ.ಪ್ರಸಾದ್)

Leave a Reply

Your email address will not be published. Required fields are marked *

Translate »