🌻 ದಿನಕ್ಕೊಂದು ಕಥೆ🌻
ಒಂದು ಊರಿನಲ್ಲಿ ಒಂದು ನದಿ. ಆ ನದಿಯ ದಡದಲ್ಲಿ ಎರಡು ಮರಗಳಿರುತ್ತವೆ.
ಅದೇ ದಾರಿಯಲ್ಲಿ ಹೋಗುತ್ತಿದ್ದ ಒಂದು ಗುಬ್ಬಿ, ತನಗೂ ತನ್ನ ಮರಿಗಳಿಗೂ ಒಂದು ಗೂಡು ಕಟ್ಟಿಕೊಳ್ಳ ಬೇಕೆಂದುಕೊಳ್ಳುತ್ತದೆ.
ಮೊದಲನೇ ಮರದ ಬಳಿ ಹೋಗಿ ” ಮಳೆಗಾಲ ಬರುತ್ತಿದೆ, ನಾನು ನನ್ನ ಮರಿಗಳು ವಾಸಿಸಲು ನಿನ್ನ ಕೊಂಬೆಯ ಮೇಲೆ ಒಂದು ಗೂಡು ಕಟ್ಟಿಕೊಳ್ಳಲೇ?’ ಎಂದು ಕೇಳುತ್ತದೆ.
” ಬೇಡ” ಎನ್ನಿತು ಮೊದಲ ಮರ.
ಆ ಚಿಕ್ಕ ಗುಬ್ಬಿಗೆ ಬೇಸರವಾಯಿತು.ನಿರಾಶೆಯಿಂದ ಎರಡನೇ ಮರದ ಬಳಿ ಹೋಗಿ ಸಹಾಯ ಮಾಡೆಂದು ಕೇಳಿಕೊಳ್ಳುತ್ತದೆ.
” ಸರಿ” ಎನ್ನುತ್ತದೆ ಎರಡನೇ ಮರ.
ಗುಬ್ಬಿ ಮಹದಾನಂದದಿಂದ ಕುಣಿದು ಕುಪ್ಪಳಿಸುತ್ತಾ…ಗೂಡು ಕಟ್ಟಲು ಪ್ರಾರಂಭಿಸಿತು. ಮಳೆಗಾಲ ಪ್ರಾರಂಭವಾಗುವುದಕ್ಕೆ ಮುನ್ನವೇ ಎರಡನೇ ಮರದ ಮೇಲೆ ಗೂಡು ಕಟ್ಟಿತು.
ಗುಬ್ಬಿ ತನ್ನ ಮರಿಗಳೊಂದಿಗೆ ಆನಂದದಿಂದ ಕಾಲ ಕಳೆಯತೊಡಗಿತು. ಅಷ್ಟರಲ್ಲೇ ಮಳೆಗಾಲ ಪ್ರಾರಂಭವಾಯಿತು.
ಧಾರಾಕಾರವಾಗಿ ಮಳೆ ಸುರಿಯಲಾರಂಭಿಸಿತು. ಪ್ರವಾಹ ಪ್ರಾರಂಭವಾಯಿತು. ಆ ಪ್ರವಾಹದಲ್ಲಿ… ಮೊದಲ ಮರ ಬೇರು ಸಮೇತ ಕೊಚ್ಚಿಕೊಂಡು ಹೋಯಿತು. ಎರಡನೇ ಮರದ ಮೇಲೆ ಕುಳಿತಿದ್ದ ಗುಬ್ಬಿ ಆದೃಶ್ಯವನ್ನು ನೋಡಿ…
” ದೇವರು ನಿನಗೆ ಶಿಕ್ಷೆ ನೀಡಿದ್ದಾನೆ, ನನಗೆ ಸಹಾಯ ಮಾಡಲು ನಿರಾಕರಿಸಿದೆ ಯಲ್ಲವೇ?” ಎಂದು ನಗುತ್ತಾ ಹೇಳಿತು.
ನಾನು ಬಲಹೀನಳೆಂದು ನನಗೆ ಗೊತ್ತು. ಪ್ರವಾಹ ಬಂದರೆ, ಕೊಚ್ಚಿಕೊಂಡು ಹೋಗುತ್ತೇನೆಂದೂ ಸಹ ಗೊತ್ತು. ನನ್ನೊಂದಿಗೆ ನಿನ್ನ ಗೂಡು ಕೊಚ್ಚಿಕೊಂಡು ಹೋಗಬಾರದೆಂದು ಗೂಡು ಕಟ್ಟಲು ನಿನಗೆ ಅನುಮತಿ ನೀಡಲಿಲ್ಲ. ನನ್ನನ್ನು ಕ್ಷಮಿಸು. ನೀನು ನಿನ್ನ ಮರಿಗಳೊಂದಿಗೆ ಹಲವು ವರ್ಷ ಸುಖವಾಗಿ ಬಾಳು” ಎಂದು ಮೊದಲನೇ ಮರ ಹೇಳಿತು.
ಈ ಮಾತುಗಳನ್ನು ಕೇಳಿದ ಪುಟ್ಟ ಗುಬ್ಬಿಗೆ ಅತೀವ ವೇದನೆಯಾಯಿತು.
ನೀತಿ : ಯಾರಾದರೂ ನಮಗೆ ಸಹಾಯ ಮಾಡಲು ನಿರಾಕರಿಸಿದರೆ ತಪ್ಪಾಗಿ ಭಾವಿಸಬಾರದು. ಅವರ ಪರಿಸ್ಥಿತಿಯ ಬಗ್ಗೆ ಅವರಿಗೆ ಮಾತ್ರ ಅರಿವಿರುತ್ತದೆ
ತಾಳ್ಮೆಯೊಂದೇ ಸಂಬಂಧಗಳನ್ನು ಹೆಚ್ಚು ಸಮಯ ಮುಂದುವರೆಯುವಂತೆ ಮಾಡುತ್ತದೆ.
ಸಂಗ್ರಹ: ವೀರೇಶ್ ಅರಸೀಕೆರೆ