ಗಾದೆಗಳು ಜನಜನಿತವಾದ ಅನುಭವಿಗಳಿಂದ ನುಡಿಯಲ್ಪಟ್ಟ ಸತ್ಯವಾಕ್ಯಗಳು. ಹಲವು ಬಾರಿ ಈ ವಾಕ್ಯಗಳು ರೂಪಕ, ಉಪಮೆ, ದೀಪಕ, ಅಲಂಕಾರಗಳಾಗಿರುತ್ತವೆ. ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳು . ಗಾದೆಗಳು ನಮ್ಮ ಬಾಳಿಗೆ ಮಾರ್ಗದರ್ಶನ ನೀಡಿ ನಮ್ಮ ಬಾಳನ್ನು ಹಸನು ಗೊಳಿಸುತ್ತವೆ.
” ವೇದ ಸುಳ್ಳಾದರೂ ಗಾದೆ ಸುಳ್ಳಾಗದು “
ಹಿಂದೂಸಂಸ್ಕೃತಿಯಲ್ಲಿ ವೇದಗಳಿಗೆ ಮಹತ್ತರಸ್ಥಾನವಿದೆ. ವೇದ ಮತ್ತು ಉಪನಿಷತ್ತು ನಮ್ಮ ಜ್ಞಾನ ಭಂಡಾರಗಳಿದ್ದಂತೆ. ಹೀಗೆ ವೇದಗಳಿಗೆ ನಮ್ಮಲ್ಲಿ ಅತ್ಯಂತ ಉನ್ನತ ಸ್ಥಾನವಿದೆ. ಇಂತಹ ವೇದ ಬೇಕಾದರೂ ಸುಳ್ಳಾಗಬಹದು ಆದರೆ ಗಾದೆ ಸುಳ್ಳಾಗುವುದಿಲ್ಲ ಎಂದು ಹೇಳಬೇಕೆಂದರೆ ಗಾದೆಯಲ್ಲಿ ವೇದಗಳ ಸಾರಗಳಲ್ಲಿ ಇರುವ ನಂಬಿಕೆಗಿಂತ ಹೆಚ್ಚಿನ ನಂಬಿಕೆ ಇದೆ .
ನಮ್ಮ ವೇದಗಳು ಜ್ಞಾನದಸಾಗರ. ವೇದ ಸೃಷ್ಟಿಸಿದವರು ಪಂಡಿತರು , ಜ್ಞಾನಿಗಳು. ಅವನ್ನು ಅರ್ಥ ಮಾಡಿಕೊಳ್ಳುವುದು ಎಲ್ಲರಿಗೂ ಸಾಧ್ಯವಿಲ್ಲ, ಆದರೆ ಗಾದೆ ಹಾಗಲ್ಲ , ಎಲ್ಲ ಜನಸಾಮಾನ್ಯರು ಆಡು ಭಾಷೆಯಲ್ಲಿ ಬಳಸಿ ಅರ್ಥಮಾಡಿಕೊಳ್ಳಬಹುದಾಗಿದ್ದು ಹಾಗಾಗಿ ಗಾದೆ ಸುಳ್ಳಾಗುವ ಸಂಭವ ಇಲ್ಲ ಎಂದು ಈ ಮೇಲಿನ ಗಾದೆ ಮಾತಿನಲ್ಲಿ ಹೇಳಿದ್ದಾರೆ.