ಶ್ರೀ ರಾಮನವಮಿ ಆಚರಣೆಯ ಆಧ್ಯಾತ್ಮಿಕ ಮಹತ್ವವೇನು ಗೊತ್ತಾ?
ಹಿಂದೂ ಧರ್ಮದಲ್ಲಿ ಶ್ರೀ ರಾಮನವಮಿ ಎಂದರೆ ಹಬ್ಬದ ಸಂಭ್ರಮ. ಚೈತ್ರ ಮಾಸದ ಒಂಭತ್ತನೇ ದಿನ, ಅಂದರೆ ನೂತನ ಸಂವತ್ಸರದ ಮೊದಲ ಮಾಸದಲ್ಲಿ ಬರುವ ಹಬ್ಬ. ಮಹಾವಿಷ್ಣುವಿನ ಏಳನೇಯ ಅವತಾರವಾದ ಶ್ರೀರಾಮನು ಜನಿಸಿದ ನವಮಿಯಂದು ಈ ಹಬ್ಬ ಆಚರಿಸಲಾಗುತ್ತದೆ. ಈ ದಿನ ಪುನರ್ವಸು ನಕ್ಷತ್ರದಲ್ಲಿ ಮಧ್ಯಾಹ್ನದ ವೇಳೆಯಲ್ಲಿ ಕರ್ಕಾಟಕ ಲಗ್ನದಲ್ಲಿ ಅಯೋಧ್ಯೆಯಲ್ಲಿ ರಾಮನು ಜನಿಸಿದನೆಂಬ ನಂಬಿಕೆ ಇದೆ. ರಾಮನವಮಿ ಆಚರಣೆಯ ಕುರಿತಾದ ಇನ್ನಷ್ಟು ಮಾಹಿತಿ ಇಲ್ಲಿದೆ.
ಪೌರಾಣಿಕ ಹಿನ್ನೆಲೆ
ಧರ್ಮ ಶಾಸ್ತ್ರಗಳ ಪ್ರಕಾರ, ಅಯೋಧ್ಯೆಯ ರಾಜನಾದ ದಶರಥನಿಗೆ ಕೌಸಲ್ಯಾ, ಕೈಕೇಯೀ ಹಾಗೂ ಸುಮಿತ್ರೆ ಮೂರು ಜನ ಪತ್ನಿಯರಿದ್ದರು. ಆದರೆ ಯಾರಿಗೂ ಪುತ್ರ ಸಂತಾನವಾಗಿರಲಿಲ್ಲ. ನಂತರ ದಶರಥನು ಋಷಿಮುನಿಗಳ ಸಲಹೆಯಂತೆ ಪುತ್ರಕಾಮೇಷ್ಠಿ ಯಾಗವನ್ನು ಮಾಡಿಸಿದ. ಈ ಯಜ್ಞದಿಂದ ಸಂತುಷ್ಟನಾದ ಪ್ರಜಾಪತಿಯು ದಶರಥನಿಗೆ ದಿವ್ಯಪಾಯಸವನ್ನು ನೀಡುತ್ತಾನೆ. ಈ ದಿವ್ಯ ಪಾಯಸವನ್ನು ದಶರಥನು ತನ್ನ ಮೂವರು ಪತ್ನಿಯರಿಗೂ ಹಂಚುತ್ತಾನೆ. ಇದರಂತೆ ಚೈತ್ರ ಮಾಸದ ಶುಕ್ಲಪಕ್ಷದ ನವಮಿ ತಿಥಿಯಂದು ಮಧ್ಯಾಹ್ನ ಪುನರ್ವಸು ನಕ್ಷತ್ರದಲ್ಲಿ ಕೌಸಲ್ಯೆಗೆ ರಾಮನೂ, ಪುಷ್ಯನಕ್ಷತ್ರದ ದಶಮಿಯಂದು ಸೂರ್ಯೋದಯಕ್ಕೆ ಮುನ್ನ ಕೈಕೇಯಿಗೆ ಭರತನೂ, ಅದೇ ದಿನ ಆಶ್ಲೇಷಾ ನಕ್ಷತ್ರದಲ್ಲಿ ಮಧ್ಯಾಹ್ನ ಲಕ್ಷ್ಮಣ, ಶತ್ರುಘ್ನರೂ ಜನಿಸುತ್ತಾರೆ. ಹೀಗೆ ರಾಮನು ಜನಿಸಿದ ನವಮಿಯಂದು ರಾಮನವಮಿಯನ್ನಾಗಿ ಆಚರಿಸುತ್ತಾರೆ.
ರಾಮನವಮಿಯ ಮಹತ್ವ
ಶ್ರೀರಾಮನು ಜನಿಸಿದ ದಿನವೆಂದು ಆಚರಿಸಲಾಗುವ ಹಬ್ಬ ರಾಮನವಮಿ. ಅಯೋಧ್ಯೆಯ ರಾಜ ದಶರಥ ಹಾಗೂ ಕೌಸಲ್ಯೆಯ ಪುತ್ರನಾಗಿ ಮಹಾವಿಷ್ಣುವಿನ ಏಳನೇ ಅವತಾರವಾಗಿ ಶ್ರೀರಾಮನು ಜನಿಸುತ್ತಾನೆ. ಹಿಂದೂ ಗ್ರಂಥಗಳಲ್ಲಿ ಉಲ್ಲೇಖವಿರುವಂತೆ ನಾಲ್ಕು ಯುಗಗಳಲ್ಲಿ ಒಂದಾದ ತ್ರೇತಾಯುಗದಲ್ಲಿ ರಾಮನು ಜನಿಸಿದನು. ಈ ದಿನ ಶ್ರೀರಾಮನನ್ನು ಪೂಜಿಸಿದರೆ ಕೆಟ್ಟ ಶಕ್ತಿಗಳು ನಿವಾರಣೆಯಾಗಿ, ಭೂಮಿಯ ಮೇಲೆ ದೈವೀಕ ಶಕ್ತಿಯು ನೆಲೆಸುತ್ತದೆ.
ಧಾರ್ಮಿಕ ನಂಬಿಕೆಯ ಪ್ರಕಾರ ದೇವತೆಗಳು ಹಾಗೂ ದೇವರುಗಳು ಅವತಾರ ತಾಳಿದ ದಿನದಂದು ಭೂಮಿಯ ಮೇಲೆ ಅವರ ದೈವೀ ತತ್ವಗಳು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತದೆ. ಶ್ರೀರಾಮ ನವಮಿಯಂದು ಶ್ರೀರಾಮತತ್ವವು ಎಂದಿಗಿಂತಲೂ ಸಾವಿರಪಟ್ಟು ಹೆಚ್ಚು ಭೂಮಿಯಲ್ಲಿ ಕಾರ್ಯನಿರತವಾಗಿರುತ್ತದೆ. ಹೀಗಾಗಿ ಈ ದಿನ ರಾಮನಾಪ ಜಪ, ಶ್ರೀರಾಮನ ಉಪಾಸನೆಗಳನ್ನು ಮಾಡುವುದರಿಂದ ಸಾಕಷ್ಟು ಪ್ರಯೋಜನವನ್ನು ಪಡೆಯಬಹುದೆಂದು ಹೇಳಲಾಗುತ್ತದೆ.
ರಾಮನವಮಿಯ ಆಧ್ಯಾತ್ಮಿಕ ಮಹತ್ವ
ರಾಮ ಎನ್ನುವ ಎರಡು ಅಕ್ಷರದಲ್ಲಿ ಮಹತ್ವಪೂರ್ಣವಾದ ಅರ್ಥವಿದೆ ‘ರಾ’ ಎಂದರೆ ಬೆಳಕು ‘ಮ’ ಎಂದರೆ ಒಳಗೆ. ಅಂದರೆ ನಿಮ್ಮೊಳಗಿನ ದೈವಿಕ ಬೆಳಕು ರಾಮ.
ದಶರಥ: ಶ್ರೀರಾಮನ ತಂದೆ ದಶರಥ ‘ದಶ’ ಎಂದರೆ ಹತ್ತು, ‘ರಥ’ ಎಂದರೆ ರಥ. ಹತ್ತು ರಥಗಳು ಎಂದರೆ ಐದು ಕಾರ್ಯ ಇಂದ್ರಿಯಗಳು. ಇದನ್ನು ಕರ್ಮೇಂದ್ರಿಯಗಳು ಎಂದೂ ಕರೆಯುತ್ತಾರೆ. ಇದರಲ್ಲಿ ಮಾತನಾಡುವ ಸಾಮರ್ಥ್ಯ, ಕೈಗಳು, ಕಾಲುಗಳು, ಚಲಿಸುವ ಭಾಗಗಳು ಹಾಗೂ ಜನನಾಂಗಗಳು ಸೇರಿವೆ. ಉಳಿದವು ಐದು ಜ್ಞಾನೇಂದ್ರಿಗಳು ಇದರಲ್ಲಿ ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಸ್ಪರ್ಶ ಪ್ರಜ್ಞೆ ಸೇರಿದೆ.
ಕೌಸಲ್ಯಾ: ಕೌಸಲ್ಯೆ ರಾಮನ ತಾಯಿ. ಕೌಸಲ್ಯಾ ಹೆಸರಿನ ಅರ್ಥ ‘ಕೌಶಲ್ಯ’ . ಒಬ್ಬ ನುರಿತ ರಥಿಕನು ಹತ್ತು ರಥಗಳನ್ನು ಸವಾರಿ ಮಾಡುತ್ತಾನೆ. ಇಂತಹ ಶಕ್ತಿಯು ರಾಮನಲ್ಲಿದೆ.
ಅಯೋಧ್ಯೆ: ಶ್ರೀರಾಮನು ಜನಿಸಿದ ಸ್ಥಳ. ‘ಯೋಧ್ಯಾ’ ಎಂದರೆ ಯುದ್ಧ, ‘ಅ’ ಎಂದರೆ ಯುದ್ಧದ ಋಣಾತ್ಮಕ ಪೂರ್ವಪ್ರತ್ಯಯ. ಅಂದರೆ ಯುದ್ಧವಿಲ್ಲದ, ಸಮೃದ್ಧಿ ಹಾಗೂ ನ್ಯಾಯಯುತವಾಗಿರುವ ಸ್ಥಳವನ್ನು ಅಯೋಧ್ಯೆ ಎಂದು ಕರೆಯುತ್ತಾರೆ.
ನಮ್ಮೊಳಗಿರುವ ಶ್ರೀ ರಾಮ
ಸತ್ಯಯುಗದಲ್ಲಿ ವಿವಿಧ ಗ್ರಹಗಳ ದೇವರು ಹಾಗೂ ರಾಕ್ಷಸರ ಮಧ್ಯೆ ಯುದ್ಧ ನಡೆದವು. ತ್ರೇತಾಯುಗದಲ್ಲಿ ಒಂದೇ ಗ್ರಹದಲ್ಲಿ ವಾಸಿಸುತ್ತಿದ್ದ ದೇವರು ಮತ್ತು ಅಸುರರ ಮಧ್ಯೆ ಯುದ್ಧ ನಡೆದವು. ಅಂದರೆ ಅಯೋಧ್ಯೆಯಿಂದ ರಾಮ ಹಾಗೂ ಲಂಕೆಯ ರಾವಣನ ಮಧ್ಯೆ ಯುದ್ಧ ನಡೆಯಿತು. ದ್ವಾಪರ ಯುಗದಲ್ಲಿ ಒಂದೇ ಕುಟುಂಬದಲ್ಲಿರುವ ಜನರ ಮಧ್ಯೆ ಯುದ್ಧಗಳು ನಡೆದವು. ಅಂದರೆ ಪಾಂಡವರು ಮತ್ತು ಕೌರವರ ಮಧ್ಯೆ. ಕಲಿಯುಗದಲ್ಲಿ ಯುದ್ಧಗಳು ನಮ್ಮೊಳಗೇ ನಡೆಯುತ್ತಿವೆ.
ರಾಮನು ನಮ್ಮ ಆತ್ಮವಾದರೆ, ಸೀತೆಯು ನಮ್ಮ ಮನಸ್ಸು, ಹನುಮಾನ್ ನಮ್ಮ ಜೀವಶಕ್ತಿಯಾದರೆ ರಾವಣನು ನಮ್ಮ ಅಹಂ. ಅಹಂ ಮನಸ್ಸನ್ನು ಆವರಿಸಿಕೊಂಡಾಗ ನಮ್ಮ ಆತ್ಮವು ಪ್ರಕ್ಷುಬ್ಧಗೊಳ್ಳುತ್ತದೆ. ಮನಸ್ಸು ಮತ್ತು ಆತ್ಮವನ್ನು ಸಮನತ್ವಯಗೊಳಿಸಲು, ಧ್ಯಾನ ಮಾಡಿ, ಉಸಿರಾಟದ ಮೂಲಕ ನಮ್ಮ ಮನಸ್ಸು ಮತ್ತು ಆತ್ಮವನ್ನು ನಿಯಂತ್ರಿಸಬಹುದು. ರಾಮ ಮತ್ತು ಸೀತೆ ಒಂದಾದರೆ ಅಹಂ ನಾಶವಾಗುತ್ತದೆ.
ರಾಮ ನವಮಿಯ ಆಚರಣೆ
ಅನೇಕ ಕಡೆಗಳಲ್ಲಿ ಚೈತ್ರ ಮಾಸದ ಪ್ರತಿಪಾದದಿಂದ ಒಂಭತ್ತು ದಿನಗಳವರೆಗೆ ರಾಮನವಮಿ ಉತ್ಸವವು ನಡೆಯುತ್ತದೆ. ರಾಮನವಮಿಯಂದು ಶ್ರೀರಾಮನನ್ನು ಪೂಜಿಸಿ, ಅರ್ಚಿಸಲಾಗುತ್ತದೆ.ಈ ದಿನದಂದು ಉಪವಾಸವನ್ನು ಮಾಡಿದರೆ ಅತ್ಯಂತ ಶ್ರೇಷ್ಠ. ರಾಮನವಮಿಯಂದು ಬೆಳಗ್ಗೆಯಿಂದ ಮರುದಿನ ಬೆಳಗ್ಗೆಯವರೆಗೂ ಉಪವಾಸವನ್ನು ಕೈಗೊಳ್ಳಬೇಕು. ಈ ಸಮಯದಲ್ಲಿ ಶ್ರೀರಾಮ ಜಪ, ರಾಮಾಯಣ ಪಾರಾಯಣ, ಶ್ರೀ ರಾಮ ಸೀತಾ ಕಲ್ಯಾಣ್ಯೋತ್ಸವವನ್ನೂ ಮಾಡಬಹುದು.
ಕೆಲವೆಡೆ ಪ್ರತಿಪಾದದಿಂದ ನವಮಿಯವರೆಗೂ ಒಂಭತ್ತು ದಿನಗಳಲ್ಲಿ ಭಜನೆ ಹಾಗೂ ಕೀರ್ತನೆಗಳನ್ನು ಆಯೋಜಿಸುತ್ತಾರೆ.ಈ ದಿನ ಕೆಲವು ಭಕ್ತರು ಕಟ್ಟುನಿಟ್ಟಾದ ಉಪವಾಸ ವ್ರತವನ್ನು ಆಚರಿಸುತ್ತಾರೆ ಮತ್ತು ನಿರಾಹಾರ ಉಪವಾಸವನ್ನೂ ಮಾಡುವವರಿದ್ದಾರೆ. ಕೆಲವರು ಸೌಮ್ಯವಾದ ಉಪವಾಸವನ್ನು ಆಚರಿಸಿ, ನೀರು ಹಾಗೂ ಹಣ್ಣುಗಳನ್ನು ಸೇವಿಸುತ್ತಾರೆ. ರಾಮನವಮಿಯಂದು ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯೆಗೆ ಭೇಟಿ ನೀಡಿ ಸರಯೂ ನದಿಯಲ್ಲಿ ಮಿಂದು ಶ್ರೀರಾಮನ ದರ್ಶನ ಮಾಡಿ ಪಾವನರಾಗುತ್ತಾರೆ.