ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಸರ್ಪ ಸಂಸ್ಕಾರ

ಸರ್ಪ ಸಂಸ್ಕಾರ

ಮಾನವನನ್ನು ಅನೇಕ ಸಮಸ್ಯೆಗಳು ಸುತ್ತುವರಿದಾಗ, ಆತನು ತನ್ನ ಪಂಚೇಂದ್ರಿಯಗಳು, ಮನಸ್ಸು, ಬುದ್ಧಿ ಅವುಗಳನ್ನು ಉಪಯೋಗಿಸಿ ಅವುಗಳಿಂದ ಹೊರಬರಲು ಶತಪ್ರಯತ್ನ ಮಾಡುತ್ತಾನೆ. ಅವುಗಳು ನಿಷ್ಫಲವಾದಾಗ ಆತನು ಜ್ಯೋತಿಷಿಗಳ ಮೊರೆ ಹೋಗುವುದು, ಅವರು ಸೂಚಿಸಿದಂತೆ ತೀರ್ಥಯಾತ್ರೆ, ಪೂಜೆ ಪುನಸ್ಕಾರಗಳು, ಹೋಮ ಹವನಗಳು, ಧಾರ್ಮಿಕ ವಿಧಿಗಳನ್ನು ನೆರವೇರಿಸುವುದು ಸರ್ವೇ ಸಾಮಾನ್ಯ.

ಮಾನವನಿಗೆ ಬರುವ ಸುಖ – ದುಃಖದ ವಿಧಗಳೆಂದರೆ (1) ಆಧಿಭೌತಿಕ (ಪಂಚ ಮಹಾಭೌತಿಕ ವಿಷಯಗಳಿಂದ ಉದಾ: ನಿಸರ್ಗ ಮತ್ತು ಪ್ರಾಣಿಗಳಿಂದ) (2) ಆಧಿದೈವಿಕ (ದೇವತೆಗಳ ಕೃಪೆಯಿಂದ ಸುಖ – ಶಾಪದಿಂದ ದುಃಖ) ಮತ್ತು ಆಧ್ಯಾತ್ಮಿಕ (ಅಂದರೆ ವಾತ, ಪಿತ್ತ, ಕಫಗಳೆಂಬ ಧಾತುಗಳ ಸಮಸ್ಥಿತಿಯಿಂದ ಶಾರೀರಿಕ ಸುಖ, ವಿಷಮಸ್ಥಿತಿಯಿಂದ ಬರುವ ರೋಗಗಳಿಂದ ದುಃಖ ಹಾಗೂ ಅರಿಷಡ್ವರ್ಗಗಳ ದೆಸೆಯಿಂದ ಬರುವ ಮಾನಸಿಕ ರೂಪದ ಕಾಯಿಲೆಗಳಿಂದ ದುಃಖ) ಆಧಿಭೌತಿಕ ಮತ್ತು ಆಧಿದೈವಿಕ ದುಃಖಗಳು ಬಾಹ್ಯಉಪಾಯಗಳಿಂದ (ಅಂದರೆ ಔಷಧೋಪಚಾರ ಇತ್ಯಾದಿಗಳಿಂದ ಹಾಗೂ ದೇವ ದೇವತೆಗಳ ಪೂಜೆ ಪುನಸ್ಕಾರದಿಂದ) ಹಾಗೂ ಮಾನಸಿಕ ದುಃಖವು ಅಂತರೋಪಾಯಗಳಿಂದ ನಿವಾರಣೆಯಾಗುತ್ತದೆ. ಆಧ್ಯಾತ್ಮಿಕ ತೊಂದರೆಗಳು ಆಧ್ಯಾತ್ಮಿಕ ಸಾಧನೆಯಿಂದ ನಿವಾರಣೆಯಾಗುತ್ತವೆ ಎಂಬುದು ಜನ ಸಾಮಾನ್ಯರಿಗೆ ತಿಳಿದಿರುವುದಿಲ್ಲ.

ಇತ್ತೀಚೆಗಿನ ಒಂದೆರಡು ದಶಕಗಳಲ್ಲಿ ದೇವಸ್ಥಾನಗಳಿಗೆ ಹೋಗಿ ಪೂಜೆ ಪುನಸ್ಕಾರ ಮಾಡಿಸಿ ಹರಿಕೆ ಸಲ್ಲಿಸುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದು ಕೇವಲ ಭಕ್ತಿ ಭಾವದಿಂದಲ್ಲ – ಬದಲಾಗಿ ತಮಗೊದಗಿರುವ ಕಷ್ಟ ಕಾರ್ಪಣ್ಯಗಳ ನಿವಾರಣೆಗಾಗಿ – ಸಕಾಮ ಸಾಧನೆಗಾಗಿ. ಅದರಲ್ಲೂ ಜ್ಯೋತಿಷಿಗಳ ಸಲಹೆ ಸೂಚನೆಯಂತೆ ಕುಕ್ಕೆ ಸುಬ್ರಹ್ಮಣ್ಯದಂತಹ ನಾಗಕ್ಷೇತ್ರಗಳಿಗೆ ತೆರಳಿ ಸರ್ಪಸಂಸ್ಕಾರ, ಆಶ್ಲೇಷಾ ಬಲಿ, ನಾಗಪ್ರತಿಷ್ಠೆಯಂತಹ ವಿಧಿಗಳನ್ನು ಅತಿ ಹೆಚ್ಚು ಭಕ್ತರು ನೆರವೇರಿಸುತ್ತಾರೆ. ಆದರೆ ಅಂತಹ ವಿಧಿಗಳನ್ನು ಮಾಡುವವರಿಗೆ ಅವುಗಳ ಉದ್ದೇಶ, ಮಹತ್ವ ಮತ್ತು ವಿಧಾನ ತಿಳಿದಿರುವುದಿಲ್ಲ. ಆದುದರಿಂದ ಅವರು ವಿಧಿಗಳನ್ನು ಮಾಡುವ ಮೊದಲು ಆಚಾರ್ಯರನ್ನು ಕಂಡು ಅವರ ಬಿಡುವಿನ ಸಮಯ ಅರಿತುಕೊಂಡು ಅವರಲ್ಲಿಗೆ ಹೋಗಿ ಈ ವಿಧಿಯು ಫಲಕಾರಿಯಾಗಲು ತಾವು ಅನುಸರಿಸಬೇಕಾದ ವಿಧಿವಿಧಾನಗಳನ್ನು (ಉದಾ: ತೀರ್ಥಸ್ನಾನ ಮಾಡುವುದು, ನಿಗದಿತ ವೇಳೆಯಲ್ಲಿ ಸಾತ್ವಿಕ ಆಹಾರ ಸೇವಿಸಿ ನಿಷ್ಟೆಯಿಂದಿದ್ದು ನಾಗಾಲಯಕ್ಕೆ ಅಥವಾ ದೇವಸ್ಥಾನಕ್ಕೆ ಪ್ರದಕ್ಷಿಣೆಗಳನ್ನು ಶ್ರದ್ಧಾ ಭಕ್ತಿ ಪೂರ್ವಕ ಮಾಡುವುದು ಇತ್ಯಾದಿ) ತಿಳಿದುಕೊಂಡು ಅದರಂತೆ ಕ್ರಿಯಾಕರ್ಮದಲ್ಲಿ  ಭಾಗವಹಿಸಿ ಸನ್ಮಾರ್ಗಕ್ಕೆ ದಾರಿ ತೋರುವ ಗುರುಸ್ಥಾನದಲ್ಲಿರುವ ಆಚಾರ್ಯರ ಆಶೀರ್ವಾದ ಪಡೆದುಕೊಂಡು ಕೃತಾರ್ಥರಾಗಬೇಕು ಹಾಗೂ ಮುಂದಿನ ಆಚರಣೆಗಳ ಬಗ್ಗೆ ತಿಳಿದುಕೊಂಡು ಆಚರಿಸಿದರೆ ಮಾತ್ರ ವಿಧಿಯ ಪೂರ್ಣ ಫಲ ದೊರೆಯುವುದು. ಕ್ರಿಯಾ ಕರ್ತೃವಿಗೆ ವಿಧಿಯ ಪೂರ್ಣ ಫಲ ದೊರೆಯುವುದು ಆತನ ಶ್ರದ್ಧಾಭಕ್ತಿ, ಆಚರಣೆ ಹಾಗೂ ಆಚಾರ್ಯರ ಮತ್ತು ದೇವರ ಪೂರ್ಣ ಆಶೀರ್ವಾದ ಇವುಗಳನ್ನು ಅವಲಂಬಿಸಿರುತ್ತದೆ.

ಸರ್ಪ ಸಂಸ್ಕಾರದ ಉದ್ದೇಶ, ಮಹತ್ವ, ಮಾನವನಿಗೆ ವಿವಿಧ ರೀತಿಗಳಿಂದ ತಗಲುವ ಪಾಪಗಳು ಇತ್ಯಾದಿಗಳು. “ಪ್ರಾಯಶ್ಚಿತ್ತ ಸಂಕಲ್ಪ”ದ ಭಾಗವನ್ನು ಓದಿದಾಗ ತಿಳಿಯುವುವು.

ನಾಗನಿಗೇಕೀ ಮಹತ್ವ? :

ನಮ್ಮ ಶಾಸ್ತ್ರ ಪುರಾಣಗಳಲ್ಲಿ ನಾವು ವಾಸಿಸುವ ಪೃಥ್ವಿಯನ್ನು ಮಹಾಶೇಷನೆಂಬ ಸರ್ಪವು ಧರಿಸಿಕೊಂಡಿರುತ್ತದೆ ಎಂದು ಪರಿಗಣಿಸಲಾಗಿದೆ. ಸರ್ಪನೇ ಮಹಾವಿಷ್ಣುವಿಗೆ ಶಯ್ಯೆಯಾಗಿದ್ದಾನೆ. ಮಹಾವಿಷ್ಣುವು ಶ್ರೀ ರಾಮಚಂದ್ರನಾಗಿ ಅವತಾರವೆತ್ತಿದಾಗ, ಆತನ ಸಹೋದರ ಲಕ್ಷ್ಮಣನಾಗಿ, ಆತನನ್ನು  ನೆರಳಿನಂತೆ ಹಿಂಬಾಲಿಸಿ, ಆತನಿಗೆ ಬೆಂಗಾವಲಾಗಿ ನಿಂತು ಶ್ರೀ ರಾಮಚಂದ್ರನ ಪ್ರೀತಿಪಾತ್ರನಾದವನೂ ಅವನೇ ಎಂಬ ಪ್ರತೀತಿ. ಕೃಷ್ಣಾವತಾರದಲ್ಲಿ ಶ್ರೀ ಕೃಷ್ಣನು ಸೆರೆಮನೆಯಲ್ಲಿ  ಜನ್ಮತಾಳಿ, ತಂದೆ ವಸುದೇವನಿಂದ ನಂದಗೋಕುಲಕ್ಕೆ ಒಯ್ಯಲ್ಪಡುತ್ತಿದ್ದಾಗ ಸುರಿದ ಮುಸಲ ಧಾರಾವರ್ಷದ ಒಂದು ಹನಿ ಜಲವೂ ಆ ಶಿಶುವಿಗೆ ತಗಲದಂತೆ ತನ್ನ ಹೆಡೆಯನ್ನು ಛತ್ರದೋಪಾದಿಯಲ್ಲಿ ಹಿಡಿದು ಉಪಕರಿಸಿದವನೂ ಆತನೇ. ಮಹಾವಿಷ್ಣುವಿಗೆ ಪ್ರಿಯನಾದ ಮಹಾಶೇಷ, ಮಹಾಮಹಿಮನಾದ ಪರಶಿವನಿಗೂ ಪ್ರೀತಿಪಾತ್ರನಾಗಿ ಕಂಠಾಭರಣನಾದ. ಸಮುದ್ರ ಮಥನದಲ್ಲಿ ಉದ್ಭವಿಸಿದ ಹಾಲಾಹಲವೆಂಬ ಭಯಂಕರ ವಿಷವನ್ನು ಪಾನಮಾಡಿ ಶಿವನು ವಿಷ ಕಂಠನೆನಿಸಿದಾಗ ಆ ಮಹೇಶನ ಕಂಠವನ್ನು ಸುತ್ತಿಕೊಂಡು ಭಯಂಕರವಾದ ಉರಿಯನ್ನು ತಣಿಸಿದ. ಪಾರ್ವತೀ ಪುತ್ರನಾದ ಮಹಾಗಣಪತಿಗೆ ಕಟಿ ಬಂಧವಾಗಿಯೂ ಗಣೇಶನಿಗೆ ಪ್ರಿಯನಾದ. ಪಾರ್ವತೀ ಪರಮೇಶ್ವರರ ಪ್ರಿಯಪುತ್ರ ದೇವ ಸೇನಾನಿ ಸುಬ್ರಹ್ಮಣ್ಯನೊಡನೆ ಸಮೀಕರಿಸಲ್ಪಟ್ಟು ಪೂಜೆಗೊಳ್ಳುತ್ತಲೂ ಬಂದಿದ್ದಾನೆ. ಸಮುದ್ರ ಮಥನಕ್ಕೆ ಕಡಗೋಲಾಗಿದ್ದ ಮಂದರಗಿರಿಗೂ ರಜ್ಜುವಾಗಿ ಮಣಿದವನು ತ್ರಿಪುರ ಮಥನ ಕಾಲಕ್ಕೆ ಶಿವನ ಮಹಾ ಧನುಸ್ಸಿಗೂ ಹೆದೆಯಾಗಿ ಸೆಟೆದುನಿಂತು – ಹಾವು ಹಗ್ಗವಾಗಿ – ದೇವತೆಗಳಿಗೆ ಉಪಕರಿಸಿದನೀತ. ಕುಂಡಲಿನೀ ಎಂಬ ಪ್ರಾಣಾಕಾರ ಜೀವಶಕ್ತಿಯ ದಿವ್ಯ ಸಂಕೇತವೂ ಆತನೇ. ಕೃಷಿಕರಿಗೆ ಆತ ಕೃಷಿ ಪ್ರಧಾನ ದೇವತೆ. ಸಕಾಲದಲ್ಲಿ ಮಳೆ ಬೆಳೆಗಳನ್ನು ಅನುಗ್ರಹಿಸುವಾತ. ಸಂತಾನವಿಲ್ಲದೆ ಕೊರಗುವವರಿಗೆ ಸಂತಾನ ಭಾಗ್ಯ ಕರುಣಿಸಬಲ್ಲ ಮಹಾಮಹಿಮ, ಕರುಣಾಳು. ರೋಗ ರುಜಿನಗಳನ್ನು ತಡೆಯಬಲ್ಲ ವಿಶ್ವ ವೈದ್ಯನೀತ. ಈ ಲೋಕದ ರಜತಮಗಳನ್ನು ಹೀರಿ ವಿಷದ ರೂಪದಲ್ಲಿ ಸಂಗ್ರಹಿಸಿಟ್ಟುಕೊಂಡು ಭಕ್ತರಿಗೆ ರಕ್ಷಣೆ ನೀಡುವಾತ. ರೈತಾಪಿ ಜನರು ತಮ್ಮಲ್ಲಿರುವ ಧನಕನಕಗಳನ್ನು ಸಂರಕ್ಷಿಸಿಕೊಳ್ಳಲು ಭಧ್ರವಾದ ತಿಜೋರಿಗಳಿಲ್ಲದ ಕಾಲದಲ್ಲಿ ಅವುಗಳನ್ನು ಕುಡಿಕೆಗಳಲ್ಲಿ ತುಂಬಿಸಿ ಭೂಮಿಯಲ್ಲಿ ಹೂತಿಟ್ಟುದನ್ನು ರಕ್ಷಿಸುವ ನಿಧಿಸಂರಕ್ಷಕನೀತ. ನಾಗದೇವನ ಮಹಿಮೆಯನ್ನು ಏನೆಂದು ಬಣ್ಣಿಸಲಿ!

  "ಶ್ರೀಮದ್ಭಾಗವತ" - ಸಾವನ್ನೇ ಸಾಯಿಸುವ ಶಕ್ತಿಯುಳ್ಳ, ನೇರವಾಗಿ ಮನಸ್ಸಿಗೆ ಕೊಡುವ ಮದ್ದು…

    ಈ ಜಗತ್ತಿನಲ್ಲಿ ವಿದ್ಯಾವಂತ, ನಿಷ್ಠಾವಂತ, ಆಚಾರವಂತ, ಸದ್ಗುಣಿ ಹಾಗೂ ಧಾರ್ಮಿಕ ಶ್ರದ್ಧೆಯಿಂದ ಧರ್ಮಪಾಲನೆ ಮತ್ತು ಧರ್ಮ ರಕ್ಷಣೆಯ ಕಾರ್ಯದಲ್ಲಿ ಸದಾ ನಿರತರಾಗಿರುವ ಗುರುವರ್ಯರು, ಋಷಿಮುನಿಗಳು, ಯತಿಗಳು, ಸಾಧುಸಂತರು, ದಾಸವರೇಣ್ಯರು ಹಾಗೂ ದೈವಿಕ ಬ್ರಾಹ್ಮಣ ವರ್ಣದವರು ಪೂಜನೀಯ ಮಾನವ ಶ್ರೇಷ್ಠರು. ವೃಕ್ಷಗಳಲ್ಲಿ ಅಶ್ವತ್ಥ, ವಟ (ಗೋಳಿ), ಔದುಂಬರ (ಅತ್ತಿ), ಶಮಿ, ಪಾಲಾಶ, ಅಪಾಮಾರ್ಗ (ಉತ್ತರಣೆ), ಬಿಲ್ವ, ಖದಿರ, ಆಮಲಕ (ನೆಲ್ಲಿ) ಅರ್ಕ (ಎಕ್ಕೆ), ದರ್ಭೆ, ತುಳಸಿ, ದೂರ್ವೆ(ಗರಿಕೆ) ಇತ್ಯಾದಿಗಳಲ್ಲಿ ದೈವಿಕ ಗುಣಗಳಿದ್ದು ಪೂಜನೀಯವಾಗಿವೆ.  ಅಂತೆಯೇ ಗೋವು, ಬಸವ, ಸರ್ಪ, ಗಜ, ಮಯೂರ, ಗರುಡ ಇತ್ಯಾದಿಗಳು ಪೂಜನೀಯ ಪ್ರಾಣಿ – ಪಕ್ಷಿಗಳು. ಇವುಗಳಲ್ಲಿ ಸರ್ಪ ರಾಜನಿಗೆ ಮೇಲೆ ಹೇಳಿದ ಕಾರಣಗಳಿಂದ  ಉನ್ನತ ಸ್ಥಾನವಿದೆ. ಸರ್ಪರಾಜನಾದ ವಾಸುಕಿಯು ಶ್ರೀ ಸುಬ್ರಹ್ಮಣ್ಯನೊಂದಿಗೆ ಸಮೀಕರಿಸಲ್ಲಟ್ಟು ಎಲ್ಲೆಡೆ ಪೂಜೆಗೊಳ್ಳುತ್ತಾನೆ. ಕೇವಲ ಹುಲು ಮಾನವನು ಮೃತಪಟ್ಟಾಗ ಔಧ್ರ್ವದೈಹಿಕ ಕ್ರಿಯಾಕರ್ಮಗಳನ್ನು ನೆರವೇರಿಸುವಂತೆಯೇ ಸರ್ಪ ನಾಶವಾದಾಗಲೂ ಯೋಗ್ಯವಾಗಿ ದೋಷ ಪರಿಹಾರಾತ್ಮಕ ಕ್ರಿಯಾಕರ್ಮಗಳನ್ನು ಮಾಡುವುದು ಮಾನವನ ಕರ್ತವ್ಯವಾಗಿದೆ.

ಸರ್ಪಗಳ ಜನ್ಮ, ಸರ್ಪ ಸಂಕುಲ:

    ಕಶ್ಯಪ ಮಹರ್ಷಿಯ ಹದಿಮೂರು ಮಂದಿ ಪತ್ನಿಯರಲ್ಲಿ ಕದ್ರು ಎಂಬಾಕೆ ಸರ್ಪಗಳ ಮಾತೆ. ಅವಳ ಮಕ್ಕಳಲ್ಲಿ ತಕ್ಷಕ, ವಾಸುಕಿ ಪ್ರಧಾನರು. ಅನಂತ, ಮಹಾಶೇಷ, ಕಪಿಲ, ನಾಗ, ಕುಳಿಕ, ಶಂಖಪಾಲ, ಭೂಧರ, ತಕ್ಷಕ, ವಾಸುಕಿ ಇವರು ನವನಾಗರೆಂದು ಪ್ರಸಿದ್ಧರು. ಇವರಲ್ಲೇ 52 ಮಂದಿ ಸರ್ಪಶ್ರೇಷ್ಠರೂ, ಹದಿನಾರು ಸಾವಿರ ಪ್ರಕಾರಗಳ ಸರ್ಪಗಳೂ ಇವೆಯೆಂದು ಬ್ರಹ್ಮ ಪುರಾಣದಲ್ಲಿ ವರ್ಣಿತವಾಗಿದೆ. ವಿಷಮಯವಾದ ಹಲ್ಲುಗಳು, ಅಗ್ನಿ ಜ್ವಾಲೆಗಳನ್ನು ಹೊರಸೂಸುವಂತೆ ತೀಕ್ಷ್ಣವಾಗಿ ಹೊಳೆಯುವ ಕೆಂಗಣ್ಣುಗಳು, ಭಯಂಕರವಾದ ಕಡುಕೋಪ ಇವು ಸರ್ಪಗಳ ಮುಖ್ಯ ಲಕ್ಷಣಗಳು. ನಂಬಿ ಪೂಜಿಸಿದವರಿಗೆ ಅವು ತಾರಕ ಶಕ್ತಿಗಳು – ನಂಬದೆ ಹಾನಿಯುಂಟು ಮಾಡಿದವರಿಗೆ ಮಾರಕ ಶಕ್ತಿಗಳಾಗಿ ಪರಿಣಮಿಸುತ್ತವೆ. ಅದಕ್ಕಾಗಿಯೇ “ಹಾವಿನ ದ್ವೇಷ ಹನ್ನೆರಡು ವರುಷ” ಎಂಬ ನಾಣ್ಣುಡಿ ಪ್ರಚಲಿತವಾಗಿದೆ.

ಸರ್ಪಸಂಸ್ಕಾರಕ್ಕೆ ಮೊದಲು ಪ್ರಾಯಶ್ಚಿತ್ತ ಸಂಕಲ್ಪ

    ಸರ್ಪ ಸಂಸ್ಕಾರ ಮಾಡಲು ಸಂಕಲ್ಪ ಮಾಡಿರುವ ಮಾನವನು ನಿತ್ಯ ವಿಧಿಗಳನ್ನು ತೀರಿಸಿ, ತೀರ್ಥಸ್ನಾನ ಮಾಡಿ, ಶುಭ್ರವಸ್ತ್ರಧಾರಿಯಾಗಿ, ದೇವದರ್ಶನಗೈದು, ಪ್ರಾರ್ಥಿಸಿ, ಆಚಾರ ಸಂಪನ್ನರೂ, ವಿದ್ಯಾವಂತರೂ, ದೈವಿಕ ಬ್ರಾಹ್ಮಣ ವರ್ಣದವರೂ ಆಗಿರುವ ವಿಪ್ರರ ಎದುರಲ್ಲಿ ನತಮಸ್ತಕನಾಗಿ ನಿಂತು ಪಾಪಗಳ ಪ್ರಾಯಶ್ಚಿತ್ತವೆಂದು ಈ ರೀತಿ ಅವರಲ್ಲಿ ಪ್ರಾರ್ಥಿಸುತ್ತಾನೆ:

“ಪೂಜ್ಯರಾದ ವಿಪ್ರವರ್ಯರೆ, ನನ್ನ ವಿಜ್ಞಾಪನೆಯನ್ನು ಆಲಿಸಿ ನನ್ನಿಂದ ಸಮರ್ಪಿಸಲ್ಪಟ್ಟ ಸುವರ್ಣಮಯವಾದ ಈ ಕಿಂಚಿತ್ ದಕ್ಷಿಣೆಯನ್ನು ಯಥಾಯೋಗ್ಯವಾಗಿ ಸ್ವೀಕರಿಸಿ ……………… ಗೋತ್ರದ ……….. ನಕ್ಷತ್ರದ ……………. ರಾಶಿಯ …………… ಎಂಬ ಹೆಸರಿನ ನಾನು ಮತ್ತು ನನ್ನ ಕುಟುಂಬದವರು ಈ ಜನ್ಮದಲ್ಲಿ, ಜನ್ಮ ಜನ್ಮಾಂತರಗಳಲ್ಲಿ ಕಾಮ, ಕ್ರೋಧವೇ ಮೊದಲಾದ ಅರಿಷಡ್ವರ್ಗಗಳಿಂದ ಮಾಡಿರಬಹುದಾದ ಸರ್ಪ, ಗಿಳಿ, ಶಾರಿಕಾ(ಮೈನಾಹಕ್ಕಿ), ಮಾರ್ಜಾಲ(ಬೆಕ್ಕು) ಮೊದಲಾದವುಗಳ ಪ್ರಾಣಿ ಹಿಂಸೆ, ಗರ್ಭಪಾತಕ್ಕಾಗಿ ನೀಡಿರಬಹುದಾದ ಔಷಧಗಳು, ಬೇರೆಯವರ ಮನೆಯನ್ನು ನಮ್ಮದೆಂದು ದಾನಮಾಡಿದ ದೋಷ, ಹುತ್ತದ ನಾಶ, ವೃಕ್ಷನಾಶ, ಸರ್ಪಗಳ ವಾಸಸ್ಥಳಗಳ (ನಾಗಬನ ಇತ್ಯಾದಿಗಳ) ನಾಶ, ಮನೆಯಲ್ಲಿ ಸರ್ಪವಧೆ, ಸರ್ಪದಹನ, ವಿಷಪೂರಿತ ಚೂರ್ಣಾದಿ ಅಭಿಚಾರ ಪ್ರಯೋಗಗಳಿಂದ ಗರ್ಭ ಪ್ರತಿಬಂಧನ, ಕಾಗೆಗೆ, ಬಾಳೆ ಗಿಡಕ್ಕೆ ಬಂಜೆತನ ಬರುವಂತೆ ಮಾಡಿರಬಹುದಾದ ಕೃತ್ಯಗಳು ಇತ್ಯಾದಿಗಳಿಂದ ಬಂದ ದೋಷಗಳು, ಸ್ತ್ರೀರಜಸ್ವಲಾದೋಷ (ಮುಟ್ಟುದೋಷ), ಮಕ್ಕಳಿಲ್ಲದಿರುವುದು, ಗರ್ಭಸ್ರಾವ, ಶಿಶುಹತ್ಯಾದೋಷ, ಕ್ರಿಮಿಕೀಟಗಳ ನಾಶ, ಅಧಿಕ ರಕ್ತಸ್ರಾವ, ಭೂತಗ್ರಹ, ಪ್ರೇತಗ್ರಹ, ವಿಶಾಚ ಗ್ರಹ, ಬ್ರಹ್ಮರಾಕ್ಷಸಗ್ರಹ, ಕೃತ್ರಿಮ ಗ್ರಹಗಳಿಂದ ಉಂಟಾದ ಮೋಹಿನಿ ಸ್ವರೂಪದ ದೋಷ, ಸಂಭೋಗದಲ್ಲಿ ತಲ್ಲೀನವಾದ ಜೋಡಿಯ ವಿಘಟನೆ ಇತ್ಯಾದಿಗಳಿಂದ ಬಂದಿರಬಹುದಾದ ಸಮಸ್ತ ದೋಷಗಳ ನಿವಾರಣೆಗಾಗಿ, ಶೀಘ್ರ ವೀರ್ಯ ಸ್ಖಲನ, ಶುಕ್ಲವು ನೀರಿನಂತೆ ತೆಳುವಾಗುವುದು ಇಂತಹ ದೋಷಗಳು ತಿಳಿದೋ ತಿಳಿಯದೆಯೋ ನಡೆದಿದ್ದರೆ  ಅಂತಹ ದೋಷಗಳ ನಿವಾರಣೆಗಾಗಿ, ಪಿತೃಶಾಪ, ದೇವಶಾಪ, ಶತ್ರುಶಾಪ, ವಿಷ್ಣುಶಾಪ, ಸ್ತ್ರೀಶಾಪ, ಮಾತೃಶಾಪ, ಸರ್ಪಶಾಪ, ಬ್ರಹ್ಮಶಾಪ, ಬ್ರಾಹ್ಮಣಶಾಪ, ಅಣ್ಣ, ತಮ್ಮ, ಜೀವದ ಗೆಳೆಯ, ಆಪ್ತ ಸಂಬಂಧಿಕರ ಶಾಪ, ಮಾತುಲ(ಸೋದರ ಮಾವ)ಶಾಪ, ಪತ್ನಿಶಾಪ, ಪ್ರೇತಶಾಪ ಇವುಗಳ ನಿವಾರಣೆಗಾಗಿ, ಭ್ರೂಣಹತ್ಯೆ, ಸ್ತ್ರೀಪುರುಷರ ಬಂಜೆತನ, ಅನ್ಯರ ಕುಟುಂಬವನ್ನು ನಾಶ ಮಾಡಿದ ದೋಷ, ದೇವತಾಗ್ರಹಗಳ ನಾಶ ಇತ್ಯಾದಿ ಸಕಲ ದೋಷಗಳು ನಿವೃತ್ತಿಯಾಗಿ ಆಯುಷ್ಮಂತರಾದ ಸಂತಾನ ಪ್ರಾಪ್ತಿಗಾಗಿ, ದೃಢಗರ್ಭ ಮತ್ತು ಶಿಶು ಸಂರಕ್ಷಣೆಗಾಗಿ, ಸುಪುತ್ರರ ಜನನದ ಮುಖಾಂತರ ವಂಶಾಭಿವೃದ್ಧಿಗಾಗಿ, ಮೂಕ(ಬಾಯಿ ಬಾರದ), ಸ್ತಬ್ಧ(ಅತ್ತಿತ್ತ ಚಲಿಸಲಾರದ), ಬಧಿರ(ಕಿವುಡ), ಮೂಢ(ಮೂರ್ಖ) ಅಪಸ್ಮಾರ ರೋಗಿಯಾದ, ಬುದ್ಧಿಹೀನ, ಅಂಗಹೀನ, ಸದಾರೋಗಿಯಾಗಿರುವ, ವಿಚಿತ್ರಾಂಗಗಳೊಂದಿಗೆ ಜನಿಸಿದ, ವಿಕಾರರೂಪದ, ಕೈಕಾಲುಗಳಿಲ್ಲದೆ ಜನಿಸಿದ, ಹುಟ್ಟುಕುರುಡನಾಗಿ ಜನಿಸಿದ, ಕಣ್ಣುಗಳಲ್ಲಿ ಹೂ ಬಂದಿರುವ, ಬಾಲ್ಯದಲ್ಲಿ, ತಾರುಣ್ಯದಲ್ಲಿ ಅಂಗವೈಕಲ್ಯ, ಅಕಾಲ ಮರಣ, ಅಲ್ಪಾಯುಷ್ಯ, ಬಾಲಗ್ರಹ ಪೀಡೆ, ಅಷ್ಟದಾರಿದ್ರ್ಯ, ಆಜನ್ಮರೋಗ, ಜನಿಸುವಾಗಲೇ ದಾರಿದ್ರ್ಯ ಮೊದಲಾದ ಸಕಲ ದೋಷ ನಿವಾರಣೆಗಾಗಿ, ಸರ್ಪದೋಷ, ಸರ್ಪಶಾಪ ನಿವಾರಣೆಗಾಗಿ, ಪುತ್ರ ಸಂತಾನ ಪ್ರಾಪ್ತಿಗಾಗಿ, ಸಮಸ್ತ ಪಾಪ ನಿವಾರಣೆಗಾಗಿ, ನವನಾಗಗಳ ಪ್ರೀತಿಗಾಗಿ, ಕುಟುಂಬದ ಎಲ್ಲರ ಪಾಪ ಪರಿಹಾರಕ್ಕಾಗಿ, ದೇವತೆಗಳ, ಬ್ರಾಹ್ಮಣರ ಅನುಗ್ರಹಕ್ಕಾಗಿ, ಆತ್ಮಶುದ್ಧಿಗಾಗಿ, ನಾಗದೇವತಾ ಪೂಜೆಯ ಅಧಿಕಾರ ಸಿದ್ಧಿಗಾಗಿ, ಅಷ್ಟದಾರಿದ್ರ್ಯ ನಿವಾರಣೆಗಾಗಿ, ಸರ್ಪ ಪ್ರಾಯಶ್ಚಿತ್ತವಾಗಿ ಈ ಕಿಂಚಿತ್ ದಕ್ಷಿಣೆಯನ್ನು ಸ್ವೀಕರಿಸಿ ಸರ್ಪದೇವತಾ ಪೂಜೆಯನ್ನು ಮಾಡುವ ಅಧಿಕಾರ ಪ್ರಾಪ್ತಿಗಾಗಿ ನನ್ನನ್ನು ನೀವು ಅನುಗ್ರಹಿಸಿರಿ” ಎಂದು ಹೇಳಿ ಶಕ್ತ್ಯಾನುಸಾರ ದಕ್ಷಿಣೆ ನೀಡಿ ನಮಸ್ಕರಿಸುತ್ತಾನೆ.

  ವಿಭೂತಿಯನ್ನು ಹಣೆಗೆ ಏಕೆ ಹಚ್ಚಿಕೊಳ್ಳಲಾಗುತ್ತದೆ

    ಅನಂತರ ಆಚಾರ್ಯರಿಂದ ಅನುಗ್ರಹಿತನಾಗಿ ಪೂಜಾ ವಿಧಿಯ ಸಂಕಲ್ಪವನ್ನು ಕ್ರಿಯಾಕರ್ತೃವು ಈ ಕೆಳಗಿನಂತೆ ಮಾಡುತ್ತಾನೆ.

    “………… ಗೋತ್ರದ………… ನಕ್ಷತ್ರದ …………… ರಾಶಿಯ ……………… ಎಂಬ ಹೆಸರಿನ ನಾನು ವಿವಾಹಕ್ಕೆ ತಡೆಯುಂಟುಮಾಡುವ ದೋಷಗಳ ನಿವಾರಣೆಗಾಗಿ, ಕುಜ(ರಾಹು)ದೋಷ ನಿವಾರಣೆ, ಆದಿತ್ಯಾದಿ ನವಗ್ರಹರ ಪ್ರೀತ್ಯರ್ಥವಾಗಿ ಜನ್ಮ ನಕ್ಷತ್ರ, ಜನ್ಮ ರಾಶಿ, ನಾಮ ನಕ್ಷತ್ರ, ನಾಮರಾಶಿ, ಗೋಚಾರ ದೋಷ ನಿವಾರಣೆಗಾಗಿ, ವರ್ಗಜ, ರೂಪಜ, ಬಲಾಬಲ ಭಾವಗಳಲ್ಲಿ ಯಾವ ಗ್ರಹರು ಅರಿಷ್ಠ ಸ್ಥಾನದಲ್ಲಿರುವರೋ ಆ ಗ್ರಹದಿಂದ ಶುಭಫಲ ಪ್ರಾಪ್ತಿಗಾಗಿ, ಶುಭಸ್ಥಾನಗಳಲ್ಲಿರುವ ಶುಭಗ್ರಹರಿಂದ ಶುಭಫಲ ಪ್ರಾಪ್ತಿಗಾಗಿ, ಜನ್ಮಲಗ್ನದೋಷ, ನಾಮ ಲಗ್ನದೋಷ, ಅಂಶಲಗ್ನ ದೋಷ, ಮಹದಶಾಧಿಪತಿ ದೋಷ, ಮಹಾಭುಕ್ತಿನಾಥ ದೋಷ, ಷಡ್ಬಲ ವೇಧ ದೋಷ, ಗೋಚಾರ ವೇಧ ದೋಷ, ವಾಮವೇಧ ದೋಷ, ತ್ರಿವಿಧಿ ಶಾಸ್ತೋಕ್ತ ವೇಧ ದೋಷ, ಕಾಲಚಕ್ರದೋಷ, ಸರ್ವತೋಭದ್ರ ಚಕ್ರ ದೋಷ, ಅಷ್ಟಕ ವರ್ಗದೋಷ, ಅಂಗಗ್ರಹ ದೋಷ, ಭಾವಗ್ರಹ ದೋಷ, ಪಕ್ಷಗ್ರಹ ದೋಷ, ಭೂತಗ್ರಹ ದೋಷ, ಇವುಗಳಿಂದಾಗಿ ಫಲವೃಕ್ಷಗಳನ್ನು ಕಡಿದುದರಿಂದ, ಹುತ್ತವನ್ನು ನಾಶಪಡಿಸಿದುದರಿಂದ, ದೇವತೆಗಳ, ಬ್ರಾಹ್ಮಣರ ಸೊತ್ತನ್ನು ಅಪಹರಿಸಿದುದರಿಂದ, ವ್ಯಾಪಾರದಲ್ಲಿ ಮಾಡಿದ ಮೋಸದಿಂದ, ಪರಸ್ತ್ರೀಗಮನದಿಂದ, ದುಮಾರ್ಗದಿಂದ ಗಳಿಸಿದ ಸಂಪತ್ತಿನಿಂದ ಮಾಡಿದ ಅನ್ನದಾನದಿಂದ, ಗುರುವಿಗೆ ಅರ್ಪಿಸಿದುದನ್ನು ಮರಳಿ ವಶಪಡಿಸಿಕೊಳ್ಳುವುದರಿಂದ, ಧರ್ಮ ಗ್ರಂಥಗಳನ್ನ ಮರೆಯುವುದರಿಂದ, ಹೆಣ್ಣು ಕೊಟ್ಟ ಮಾವನನ್ನು ನಿಂದಿಸಿದುದರಿಂದ, ಹೀನ ಕರ್ಮದಿಂದ, ಬ್ರಾಹ್ಮಣ, ವೈಶ್ಯ, ಕ್ಷತ್ರಿಯರ ಹಾಸಿಗೆಯೇ ಮೊದಲಾದ ಭೋಗ ವಸ್ತುಗಳನ್ನು ಕದಿಯುವುದರಿಂದ, ತಿಳಿದೋ ತಿಳಿಯದೆಯೋ ಪಾದರಕ್ಷೆಗಳ ಅಪಹರಣದಿಂದ, ಸುಳ್ಳು ಸಾಕ್ಷಿ ನುಡಿಯುವುದರಿಂದ, ದೇವ ಪಿತೃ ಕಾರ್ಯಗಳ ನಿಂದನೆಯಿಂದ, ಇನ್ನೊಬ್ಬರ ಜಾಗದ ಅಪಹರಣದಿಂದ, ಸ್ವಾರ್ಥದ ಭೋಗಕ್ಕಾಗಿ ಮಾಡಿದ ಅನ್ಯಾಯದಿಂದ ಉಂಟಾದ ದೋಷಗಳ ಪರಿಹಾರಾರ್ಥವಾಗಿ, ಸಮಸ್ತ ದಶಾಧಿಪತಿ, ಭುಕ್ತಿನಾಥ, ಅಂತರನಾಥ, ಪ್ರಾಣದಶಾ, ಸೂಕ್ಷ್ಮದಶಾದಿ ಗ್ರಹದೋಷ ನಿವಾರಣೆಗಾಗಿ, ಯತ್ನಿಸಿದ ಕಾರ್ಯದ ವಿಘ್ನ ನಿವಾರಣೆಗಾಗಿ, ಶುಭ ಕಾರ್ಯಕ್ಕೆ ಉಂಟಾಗುವ ಪ್ರತಿಬಂಧಕ ನಿವಾರಣೆಗಾಗಿ, ವಾದ – ವಿವಾದಗಳಲ್ಲಿ ಜಯಪ್ರಾಪ್ತಿಗಾಗಿ, ದಾರಿದ್ರ್ಯ ನಿವಾರಣೆಗಾಗಿ, ನವನಾಗರ ಪ್ರೀತಿಗಾಗಿ ಸರ್ಪಸಂಸ್ಕಾರವನ್ನು ಮಾಡುತ್ತೇನೆ”.

  ದೀಪ ಲಕ್ಷಣ: ಮನೆಯೊಳಗೆ ದೇವರ ದೀಪ ಹೇಗಿರ ಬೇಕು?

    ಈ ರೀತಿ ಸಂಕಲ್ಪ ಮಾಡಿದ ಬಳಿಕ ಶಾಸ್ತ್ರೀಯವಾಗಿ ಸರ್ಪ ಸಂಸ್ಕಾರ ವಿಧಿಯನ್ನು ಆರಂಭಿಸಿ ಪೂರ್ತಿಗೊಳಿಸಬೇಕು. ಸರ್ಪಸಂಸ್ಕಾರ ವಿಧಿಯನ್ನು ಮಾಡಬಲ್ಲವರಾದರೆ ಅವರೇ ಮಾಡಿದರೆ ವಿಶೇಷ ಫಲ ಸಿಗುತ್ತದೆ. ಸ್ವತಃ ಸರ್ಪ ಸಂಸ್ಕಾರ ಮಾಡಿದರೆ ಬ್ರಾಹ್ಮಣರಿಗೆ ದಾನಗಳನ್ನು ಕೊಡಬೇಕು. ತನಗೆ ವಿಧಿ ಮಾಡುವುದು ತಿಳಿದಿಲ್ಲವಾದರೆ ಆಚಾರ್ಯ ಮುಖೇನ ವಿಧಿಯನ್ನು ಮಾಡಿಸಬೇಕು.

ಕಟ್ಟುಕಟ್ಟಳೆಗಳ ಪಾಲನೆ :   

ಈ ವಿಧೀಯನ್ನು ಆಶ್ವಲಾಯನ ಸೂತ್ರ, ಬೋಧಾಯನ ಸೂತ್ರ ಅಥವಾ ಆಪಸ್ತಂಭ ಸೂತ್ರ ಪ್ರಕಾರ ಆಯಾಯ ಶಾಖೆಯವರು ಮಾಡಬಹುದು/ ಮಾಡಿಸಬಹುದು. ಆದರೆ ಅವರು ಆಚರಿಸುವ ವಿಧಿ ವಿಧಾನಗಳಲ್ಲಿ ದೇಶ ಕಾಲ ಪರಿಸರ ಇವುಗಳನ್ನನುಸರಿಸಿ ಅಲ್ಪ ಸ್ವಲ್ಪ ಬದಲಾವಣೆಗಳಿರಬಹುದು. ಆದರೆ ಆಯಾಯ ಸೂತ್ರದ ಋಷಿ ಮುನಿಗಳ ಸಂಕಲ್ಪದಂತೆ ಅದನ್ನು ಮಾಡಿದವರಿಗೆ ಫಲವು ನಿಶ್ಚಿತವಾಗಿಯೂ ದೊರೆಯುತ್ತದೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ಆಚರಿಸುವ ವಿಧಿವಿಧಾನಗಳಲ್ಲಿ ವ್ಯತ್ಯಾಸವಿದ್ದರೂ ಆಯಾಯ ಕ್ಷೇತ್ರದ ಮಹಿಮೆಯಿಂದ ಕ್ರಿಯಾ ಕರ್ತೃವಿಗೆ ವಾಂಛಿತ ಫಲ ಸಿಗುವುದರಲ್ಲಿ ಅನುಮಾನವಿಲ್ಲ. ಈ ವಿಧಿಯನ್ನು ಮಾಡುವಾಗ ಆಯಾಯ ಕ್ಷೇತ್ರದ ಕಟ್ಟು ಕಟ್ಟಳೆಗಳನ್ನು ಅವಶ್ಯಕವಾಗಿ ಪಾಲಿಸಬೇಕು. ಹಾಗೂ ಅಲ್ಲಿನ ಆಚಾರ್ಯರ ಸೂಚನೆಗಳಂತೆ ನಡೆದುಕೊಳ್ಳಬೇಕು. ಸರ್ಪ ಸಂಸ್ಕಾರ ಮಾಡಿದ ದಿನ ಮಧ್ಯಾಹ್ನ ಭೋಜನ ಪ್ರಸಾದವನ್ನು ಸ್ವೀಕರಿಸಿ, ಸಂಜೆ ಫಲಹಾರ ಸ್ವೀಕರಿಸಬೇಕು. ರಾತ್ರಿ ಊಟ ನಿಷಿದ್ಧವಾಗಿದೆ. ಸರ್ಪ ಸಂಸ್ಕಾರ ಪ್ರಾರಂಭಿಸಿದ ನಂತರ ಆ ದಿನ ದೇವಸ್ಥಾನದ ಒಳಾಂಗಣವನ್ನು ಪ್ರವೇಶಿಸಬಾರದು. ಮುಂದಿನ ದಿನ ನಾಗಪ್ರತಿಷ್ಠೆ, ಆಶ್ಲೇಷ ಬಲಿ ಬಗ್ಗೆ ಆಚಾರ್ಯರಿಂದ ಮಾರ್ಗದರ್ಶನ ಪಡೆದು ಅಂತೆಯೇ ನಡೆದುಕೊಳ್ಳಬೇಕು.

ಈ ವಿಧಿಯನ್ನು ಯಾರು, ಯಾವಾಗ ಮಾಡಿಸಬಹುದು?:

    ಸರ್ಪ ಸಂಸ್ಕಾರ ವಿಧಿಯನ್ನು ಯಾರು ಮಾಡಿಸಬಹುದು. ಯಾವುದೇ ಗ್ರಹ ಅಸ್ತವಾಗಿದ್ದಾಗಲೂ ಮಾಡಿಸಬಹುದು. ಶುಭಕಾರ್ಯಕ್ಕೆ ಗುರುಬಲ ಇಲ್ಲದವರು ಸರ್ಪಸಂಸ್ಕಾರ ಮಾಡಿ ಗುರುಪೂಜೆ ಮಾಡಿದಲ್ಲಿ ಗುರುಬಲವೂ ಪ್ರಾಪ್ತಿಯಾಗುತ್ತದೆ. ತೀವ್ರತರದ ಕಾಯಿಲೆಗಳಿಗಾಗಿ ಆಪರೇಷನ್‍ಗೆ ಒಳಗಾಗುವ ವ್ಯಕ್ತಿಯಿಂದ ಈ ವಿಧಿ ಮಾಡಿಸಿದಲ್ಲಿ ಚಿಕಿತ್ಸೆ ಬೇಗನೇ ಫಲಕಾರಿಯಾಗುತ್ತದೆ. ಆದರೆ ಕಲಹ, ಅಶಾಂತಿಯ ಸಮಯದಲ್ಲಿ ಈ ವಿಧಿ ಮಾಡಿಸುವುದು ಯೋಗ್ಯವಲ್ಲ. ಅಪಘಾತದಿಂದ ಮನೆಯಲ್ಲಿ ದುರ್ಮರಣ ಸಂಭವಿಸಿದ್ದರೆ ಇದನ್ನು ಸುದರ್ಶನ ಹೋಮದೊಂದಿಗೆ ಮಾಡುವುದು ಶ್ರೇಯಸ್ಕರವಾಗಿದೆ.

ಪ್ರಯೋಜನಗಳು :

    ಸರ್ಪ ಸಂಸ್ಕಾರ ಮಾಡುವುದರಿಂದ ಆರಂಭದಲ್ಲಿ ಸಂಕಲ್ಪದಲ್ಲಿ ಹೇಳಿದಂತೆ ಎಲ್ಲ ದೋಷಗಳೂ ನಿವಾರಣೆಯಾಗುತ್ತವೆ. ವಿಶೇಷವಾಗಿ ಸತ್ಸಂತಾನ ಪ್ರಾಪ್ತಿಗಾಗಿ, ಬಾಲಗ್ರಹ ನಿವಾರಣೆಗಾಗಿ, ದಾಂಪತ್ಯದಲ್ಲಿ ಸರಸ ಹಾಗೂ ಕುಟುಂಬದಲ್ಲಿ ಸುಖ ಶಾಂತಿ ನೆಮ್ಮದಿಗಾಗಿ, ಉದ್ಯೋಗ ವ್ಯಾಪಾರ ಅಭಿವೃದ್ಧಿಗಾಗಿ, ಆರ್ಥಿಕ ಮುಗ್ಗಟ್ಟು ಪರಿಹಾರಕ್ಕಾಗಿ, ಕೋರ್ಟು ಕಛೇರಿಗಳಲ್ಲಿ, ಸುಗಮ ವ್ಯವಹಾರಕ್ಕೆ, ಆರೋಗ್ಯ ಭಾಗ್ಯಕ್ಕೆ ಈ ವಿಧಿಯಿಂದ ವಿಶೇಷ ಪ್ರಯೋಜನ ದೊರೆಯುತ್ತದೆ. ಈ ಲೇಖನವನ್ನು ಓದಿ ಈ ಕ್ರಿಯಾ ಭಾಗದ ಉದ್ದೇಶ, ಮಹತ್ವ ವಿಧಿವಿಧಾನ ಇತ್ಯಾದಿಗಳನ್ನು ಭಕ್ತಜನತೆ ಅರಿತು ಆಚರಿಸಿ ತಮ್ಮ ಪಾಪ ಸಂಚಯದ ನಿವಾರಣೆ ಮಾಡಿಕೊಳ್ಳುವಂತಾಗಲೆಂದು ಶ್ರೀ ವಾಸುಕೀ ನಾಗರಾಜದೇವರ ಚರಣಗಳಲ್ಲಿ ಪ್ರಾರ್ಥನೆ.

Leave a Reply

Your email address will not be published. Required fields are marked *

Translate »