ಸರ್ವಜ್ಞ ಪ್ರಮುಖವಾಗಿ ತ್ರಿಪದಿಗಳೆಂಬ ಮೂರು ಸಾಲಿನ ವಚನಗಳನ್ನು ರಚಿಸಿದ. ಸರ್ವಜ್ಞ ಜನಿಸಿದ್ದು ಇಂದಿನ ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲ್ಲೂಕು ಅಬಲೂರ.ಅವನ ಹೆತ್ತಮ್ಮ ಕುಂಬಾರ ಮಾಳೆ, ಪ್ರೀತಿಯಿಂದ ನಾಮಕರಣ ಮಾಡಿದ ಹೆಸರು -ಪುಷ್ಪದತ್ತ. ಸಾಕು ತಾಯಿ ಮಲ್ಲಕ್ಕ. ತಂದೆ ಬಸವರಸ.
ಸರ್ವಜ್ಞ ತನ್ನ ತ್ರಿಪದಿಗಳಿ೦ದ ವಿಶಿಷ್ಟವಾಗಿದ್ದಾನೆ. ಕೇವಲ ಮೂರು ಸಾಲಿನಲ್ಲಿ ಸಮಾಜದಲ್ಲಿನ ಹುಳುಕುಗಳನ್ನು ತೋರಿಸಿ ತಿದ್ದುವ ದಾರ್ಶನಿಕ ಸರ್ವಜ್ಞ. ಗೂಢಾರ್ಥ ಹೊ೦ದಿರುವ ಬೆಡಗಿನ ಶಬ್ಧಗಳ ಗುಚ್ಛವನ್ನು ಒಗಟು ಎ೦ದು ಕರೆಯಬಹುದು. ಬೆಡಗನ್ನು ಬಿಡಿಸುವಾಗ ಸಿಗುವ ಒಳ ಅರ್ಥದ ತಿರುಳಿನ ಆನ೦ದವೇ ಬೇರೆ. ಮು೦ಚೆ ಒಗಟು ಕಟ್ಟಿ ಬಿಡಿಸುವುದು ಮನೋರ೦ಜನೆಗಾಗಿ ಆಗುತ್ತಿತ್ತು. ಮನೋರ೦ಜನೆ ಅಷ್ಟೇ ಅಲ್ಲ, ಭಾಷೆಯನ್ನು ಸ್ವಾರಸ್ಯಗೊಳಿಸುವ ಕಾವ್ಯತ್ವವೂ ಒಗಟುಗಳಿಗಿದೆ ಎ೦ದರೆ ತಪ್ಪಾಗಲಾರದು.
ಈಗ ಕೆಲವು ಸರ್ವಜ್ಞನ ಒಗಟುಗಳನ್ನು ನೋಡೋಣ.
ಅರೆವ ಕಲ್ಲಿನ ಮೇಲೆ ಮರವು ಹುಟ್ಟಿದ ಕಂಡೆ, ಮರದ ಮೇಲೆರಡು ಕರ ಕಂಡೆ, ವಾಸನೆಯು ಬರುತಿಹುದ ಕಂಡೆ ಸರ್ವಜ್ಞ ।।
ಸಾಣೆಕಲ್ಲಿನ ಮೇಲೆ ಗಂಧದ ಕೊರಡು
ಆಡೆಂದರಾಡುವುದು; ಆಡ ಮರವೇರುವುದು; ಕೂಡದೆ ಕೊಂಕಿ ನಡೆಯುವುದು, ಕಡಿದರೆ ಬಾಡದದು ಹೇಳಿ ಸರ್ವಜ್ಞ ।।
ವೀಣೆಯ ತಂತಿ
ಇನ್ನು ಬಲ್ಲರೆ ಕಾಯಿ, ಮುನ್ನೂರ ಅರವತ್ತು ; ಹಣ್ಣು ಹನ್ನೆರಡು, ಗೊನೆ ಮೂರು, ತೊಟ್ಟೊಂದು; ಚೆನ್ನಾಗಿ ಹೇಳಿ ಸರ್ವಜ್ಞ ।।
ಒಂದು ವರ್ಷ
ಕತ್ತಿಗದು ಹರಿದಿಹುದು, ಮತ್ತೆ ಬರುತೇಳುವದು; ಕಿತ್ತು ಬಿಸಾಡಲಿದು ನೆಡದು; ಕವಿ ಜನರು ಅರ್ತಿಯಿಂ ಪೇಳಿ ಸರ್ವಜ್ಞ ।।
ತಲೆಗೂದಲು
ಕಪ್ಪು ಬಣ್ಣದ ಸೀರೆ ಒಪ್ಪುವಳು ಗಗನದಲಿ; ಕಪ್ಪಿನ ಸೀರೆ ಬಿಳಿಯಾಗೆ ಅವಳನ್ನು ಅಪ್ಪುವವರಿಲ್ಲ ಸರ್ವಜ್ಞ ।।
ಕಪ್ಪು ಮೋಡ
ಕಲ್ಲರಳಿ ಹೂವಾಗಿ, ಎಲ್ಲರಿಗೆ ಬೇಕಾಗಿ, ಮಲ್ಲಿಕಾರ್ಜುನನ ಶಿಖರಕ್ಕೆ ಬೆಳಕಾಗಿ ಬಲ್ಲವರು ಹೇಳಿ ಸರ್ವಜ್ಞ ।।
ಸುಣ್ಣದ ಹರಳು
ಕಾಲಿಲ್ಲದೆ ಹರಿಗು, ತೋಳಿಲ್ಲದೆ ಹೊರಗು, ನಾಲಿಗಿಲ್ಲದಲೆ ಉಲಿವುದು; ಕವಿಕುಲದ ಮೇಲುಗಳು ಪೇಳಿ ಸರ್ವಜ್ಞ ।।
ನದಿ
ಕೋಡಗವು ಕುದುರೆಯಲಿ, ನೋಡುತ ಹುಟ್ಟಿ ಕಾಡಾನೆಗೆರಡು ಗರಿಮೂಡಿ, ಗಗನದಿಂ- ದಾಡುವುದ ಕಂಡೆ ಸರ್ವಜ್ಞ ।।
ಮೋಡ
ತನ್ನ ಸುತ್ತಲೂ ಮಿಣೆಯು, ಬೆಣ್ಣೆ ಕುಡಿವಾಲುಗಳ ತಿನ್ನದಲೆ ಹಿಡಿದು ತರುತಿಹುದು, ಕವಿಗಳೇ, ನನ್ನಿಯಿಂ ಪೇಳಿ ಸರ್ವಜ್ಞ ।।
ಹಗ್ಗದ ಜೋಳಿಗೆ, ನಿಲ, ಕಾವುಲಿ
ನಳಿದೋಳಿನಾಕೆ ತಾ ಸುಳಿದೆಗೆದು ಬೆಳೆದಿಹಳು ಕಳೆಯುಳ್ಳ ಹಸುಳೆ ಹಲವಾಗೆ, ತಾನಾಗಿ ಅಳಿದು ಹೋಗುವಳು ಸರ್ವಜ್ಞ ।।
ಬಾಳೆಯ ಗಿಡ
ನೆತ್ತಿಯಲಿ ಉಂಬುವುದು, ಸುತ್ತಲೂ ಸುರಿಸುವುದು, ಎತ್ತಿದರೆ ಎರಡು ಹೋಳಹುದು, ಕವಿ ತಿಳಿದ- ರುತ್ತರವ ಪೇಳಿ ಸರ್ವಜ್ಞ ।।
ಬೀಸುಗಲ್ಲು
ಮಂಡೆ ಬಾಯಾಳಗಿಕ್ಕು, ಚಂಡಿಗೆಯು ಹೊರಗಿಕ್ಕು, ಹೆಂಡತಿಯು ಕಡೆಯೆ ಬರುತಿಕ್ಕು, ಕಡೆಗೊಂದು ಉಂಡೆಯಂತಕ್ಕು ಸರ್ವಜ್ಞ ।।
ಕಡಗೋಲು
ಸಂದಮೇಲ್ ಸುಡುತಿಹುದು, ಬೆಂದಮೇಲುರಿದಿಹುದು ಬಂಧುಗಳನೆದ್ದು ಬಡಿದಿಹುದು, ಕವಿಗಳಲಿ ನಂದನರು ಹೇಳಿ ಸರ್ವಜ್ಞ ।।
ಕೊಡಲಿಯ ಕಾವು
ಹತ್ತು ಸಾವಿರ ಕಣ್ಣು, ನೆತ್ತಿಲಾದರು ಬಾಲ; ಹುತ್ತಿನಾ ಹುಳುವ ಹಿಡಿಯುವುದು, ಕವಿಜನರ ಮೊತ್ತವಿದ ಪೇಳಿ ಸರ್ವಜ್ಞ ।।
ನವಿಲು
ಹಲ್ಲು ನಾಲಿಗೆಯಿಲ್ಲ, ಸೊಲ್ಲು ಸೋಜಿಗವಿಲ್ಲ ; ಕೊಲ್ಲದೆ ಮೃಗವ ಹಿಡಿಯುವುದು, ಲೋಕದೊಳ- ಗೆಲ್ಲ ಠಾವಿನಲಿ ಸರ್ವಜ್ಞ ।।
ಜೇಡರ ಬಲೆ
ಹಲ್ಲುಂಟು ಮೃಗವಲ್ಲ ; ಸೊಲ್ಲು ಸೋಜಿಗವಲ್ಲ ; ಕೊಲ್ಲುವುದು ತನ್ನ ನಂಬಿದರ, ಅರಿದರಿದ ಬಲ್ಲವರು ಹೇಳಿ ಸರ್ವಜ್ಞ ।।
ಗರಗಸ
ಹುಟ್ಟಿದಾ ಮನೆ ಬಿಟ್ಟು ಸಿಟ್ಟಿನಲಿ ಹೊರಟಿಹಳು; ಸಿಟ್ಟಿಳಿದು ಮನೆಗೆ ಬರುತಿಹಳು, ಕವಿಗಳಲಿ ದಿಟ್ಟರಿದ ಹೇಳಿ ಸರ್ವಜ್ಞ ।।
ಹಬೆ, ಮೋಡ, ಮಳೆ
ಹೊತ್ತೇಳುತಲೆ ಕೆಂಪು, ಮತ್ತಾರುತಲೆ ಕಪ್ಪು, ಹೆತ್ತವ್ವನೊಡಲನುರಿಸುವುದು, ಕವಿಗಳಿದ ಅರ್ಥವನು ಹೇಳಿ ಸರ್ವಜ್ಞ ।।
ಒಲೆಯಲ್ಲಿ ಬೆಂಕಿ
ಅಕ್ಕನಿಗೆ ಆರ್ಕಣ್ಣು, ಮುಕ್ಕನಿಗೆ ಮೂರ್ಕಣ್ಣು, ಚಿಕ್ಕವನು ಪಾಪಿ ನನಗೆ ಒಕ್ಕಣ್ಣು, ಯಾರ್ಯಾರು ತಕ್ಕವರು? ಬಿಡಿಸಿ ಒಗಟನ್ನ ಸರ್ವಜ್ಞ ।।
ಕೊಳಲು, ತೆಂಗಿನಕಾಯಿ, ಸೂಜಿ
ಬದಿನಲ್ಲಿ ಹುಟ್ಟುವುದು, ಬದಿನಲ್ಲಿ ಬೆಳೆಯುವುದು ಬದಿಯಲ್ಲಿ ಹೋಗುವರ ಸೆಳೆವುದು, ಎಲೆ ಬಾಲೆ ಇದರರ್ಥ ಒಡೆದು ಬಿಡಿಸಮ್ಮ ಸರ್ವಜ್ಞ ।।
ಉತ್ತರಾಣಿ
ನಕ್ಕರೆ ಉದುರುವುದು, ಹಲ್ಲುಗಳು ಒಂದೊಂದು, ಹೆಕ್ಕಿಕ್ಕಿ, ಬಿಡಿಸಿ ಒಗಟನ್ನ ಸರ್ವಜ್ಞ ।।
ದಾಳಿಂಬೆ ಹಣ್ಣು
ಅಯ್ಯಯ್ಯೋ ಜೋಗಿ, ಮೈಯ್ಯೆಲ್ಲ ಬೂದಿ, ಕಯ್ಯಲ್ಲ, ಕಂಕುಳ ಕಾಮಾಕ್ಷಿ, ತಲೆಯಲ್ಲಿ ಅಯ್ಯಗಳ ರುದ್ರಾಕ್ಷಿ, ಬಿಡಿಸಣ್ಣ ಸರ್ವಜ್ಞ ।।
ಹರಳು ಗಿಡ
ಉರಿ ಬ೦ದು ಬೇಲಿಯನು ಹರಿದು ಹೊಕ್ಕುದ ಕ೦ಡೆ , ಅರಿಯದದು ಬಗೆಗೆ ಕವಿಕುಲದ ಶ್ರೇಷ್ಠರುಗಳು , ಅರಿತರಿತು ಪೇಳಿ ಸರ್ವಜ್ಞ
ಬಿಸಿಲು
ಹರೆಯಲ್ಲಿ ಹಸಿರಾಗಿ ನೆರೆಯಲ್ಲಿ ಕಿಸುವಾಗಿ ಸುರರರಿಯದಮೃತವು ನರರಿ೦ಗೆ ದೊರೆದಿಹುದು ಅರಿದರಿದ ಪೇಳಿ ಸರ್ವಜ್ಞ ।।
ಮಾವು
ಸಾವಿರಕ್ಕೂ ಹೆಚ್ಚು ಸಂಪೂರ್ಣ ಸರ್ವಜ್ಞ ನ ವಚನಗಳನ್ನ ಓದಿ ಈ ಕೆಳಗಿನ ಲಿಂಕ್ ನಲ್ಲಿ
https://vishaya.in/vachana/sarvajna-vachana-collection/