ಹನುಮಂತನ ನಿಸ್ವಾರ್ಥ ಭಕ್ತಿ ..
ಶ್ರೀರಾಮನ ಭಕ್ತ ಹನುಮಂತ ಎಂದು ತಿಳಿದಿದೆ. ಏಕೆಂದರೆ ಶ್ರೀರಾಮನಿಗೆ ಅಗತ್ಯ ವಿರುವುದನ್ನೆಲ್ಲ ಮಾಡಲು ಸದಾ ಆಂಜನೇಯ ಮುಂದಾಗಿರುತ್ತಿದ್ದ. ಬೇರೆ ಯಾರಿಗೂ ರಾಮನ ಸೇವೆ ಮಾಡಲು ಅವಕಾಶವೇ ಇರುತ್ತಿರಲಿಲ್ಲ.
ಶ್ರೀರಾಮನ ಸೇವೆ ಮಾಡುವುದರಲ್ಲಿ ಯಾರು ಮೊದಲಿಗರು ಎಂಬ ಸ್ಪರ್ಧೆ ಇಟ್ಟರೆ, ಹನುಮಂತನೇ ಮುಂಚೂಣಿಯಲ್ಲಿ ಬರುತ್ತಿದ್ದ. ಆದರೆ ಇದೆಲ್ಲ ಲಕ್ಷ್ಮಣ, ಭರತ, ಶತ್ರುಘ್ನ, ಹಾಗೂ ಸೀತೆಯು ಸೇರಿದಂತೆ ಯಾರಿಗೂ ಸರಿ ಹೋಗುತ್ತಿರಲಿಲ್ಲ. ಅವರೆಲ್ಲರೂ ರಾಮನಿಗೆ ತಾವುಗಳು ಏನಾದರೂ ಸೇವೆ ಮಾಡಬೇಕೆಂದು ಕೊಂಡಿದ್ದರೆ ಅದನ್ನೆಲ್ಲಾ ಹನುಮಂತನು ಊರಿಗ್ಮೊದಲೆ ಮಾಡಿ ಮುಗಿಸಿರುತ್ತಿದ್ದ . ಅವರ್ಯಾರಿಗೂ ಮಾಡಲು ಏನು ಇರುತ್ತಿರಲಿಲ್ಲ.
ಇದರಿಂದ ಅವರೆಲ್ಲರಿಗೂ ತುಂಬಾ ಬೇಸರವಾಗಿತ್ತು.
ಒಂದು ದಿನ ಅವರೆಲ್ಲರೂ ಒಂದಾಗಿ, ರಾಮನಿಗೆ ಏನೇನು ಸೇವೆಯನ್ನು ಯಾರ್ಯಾರು ಮಾಡಬೇಕೆಂದು ಪಟ್ಟಿ ಮಾಡಿಕೊಂಡರು. ಒಬ್ಬರು ಮಾಡಿದ ಕೆಲಸವನ್ನು ಮತ್ತೊಬ್ಬರು ಮಾಡಬಾರದು. ಹಾಗೆಯೇ ರಾಮನು ಸಹ ಯಾರ್ಯಾರ ಕೈಯಲ್ಲಿ ಯಾವ ಕೆಲಸವನ್ನು ತೆಗೆದುಕೊಳ್ಳಬೇಕೋ ಅದಕ್ಕೆ ಸಂಬಂಧಪಟ್ಟವರನ್ನು ಕೇಳಬೇಕು. ಏಕೆಂದರೆ ಕೆಲಸಗಳನ್ನೆಲ್ಲಾ ಒಬ್ಬೊಬ್ಬರು ಒಂದೊಂದು ಎಂದು ಹಂಚಿಕೊಂಡಿದ್ದರು. ಯಾರಿಗೂ ನೋವಾಗಬಾರದು ಬೇಸರವಾಗಬಾರದು ಎಂದು ಈ ವಿಷಯ ರಾಮನೆದುರಿಗೆ ಮಾತಾಡಿದ್ದರು. ರಾಮನೂ ಸಹ ಮುಗುಳ್ನಗುತ್ತಾ ಎಲ್ಲವನ್ನು ಒಪ್ಪಿಕೊಂಡಿದ್ದ. ಇದರಲ್ಲಿ ಆಂಜನೇಯನಿಗೆ ಯಾವ ಕೆಲಸವೂ ಇರಲಿಲ್ಲ.
ಆ ದಿನವೆಲ್ಲ ಹನುಮಂತ ರಾಮನ ಪಾದದ ಪಕ್ಕದಲ್ಲಿ ಕುಳಿತೇ ಇದ್ದ. ಅವನಿಗೆ ರಾಮನ ಸೇವೆ ಮಾಡುವ ಯಾವ ಅವಕಾಶಗಳು ಇರಲಿಲ್ಲ. ರಾಮನ ಸೇವೆ ಮಾಡಲು ಎಲ್ಲರೂ ಸಿದ್ಧರಾಗಿದ್ದಾರೆ. ನಾನು ರಾಮನ ಸೇವೆ ಬಿಟ್ಟು ಏನು ಮಾಡಲಿ ಎಂದು ಚಿಂತಿತನಾಗಿದ್ದನು. ಆಗ ರಾಮನು ಅವನನ್ನು ನೋಡಿ ಹನುಮಂತ ಏನಾದ್ರೂ ನನ್ನ ಹತ್ತಿರ ನಿನಗೆ ಮಾತನಾಡಲು ಇದೆಯೇ ಎಂದು ಕೇಳಿದ. ಆಗ ಹನುಮಂತನು ಪ್ರಭು ಮಾತಾಡಲು ಏನು ಇಲ್ಲ. ಆದರೆ ನನ್ನ ಒಂದು ಕೋರಿಕೆಯನ್ನು ಪೂರೈಸುವಿರಾ ಎಂದು ಕೇಳಿದೆ. ರಾಮನು ಆಯಿತು ಎಂದ. ಆಗ ಹನುಮಂತನು ಪ್ರಭು ನೀವು ಆಕಳಿಸಿದಾಗಲೆಲ್ಲಾ ನಿಮ್ಮ ಬಾಯಿ ಮುಂದೆ ‘ಚಿಟಿಕೆ’ ಹೊಡೆಯುವ ಸೌಭಾಗ್ಯವನ್ನು ನನಗೆ ಕೊಡುತ್ತೀರಾ? ಹಾಗೂ ಈ ಕೆಲಸಕ್ಕೆ ಬೇರೆ ಯಾರೂ ಬರುವಂತಿಲ್ಲ ಇದನ್ನು ನಾನೇ ಮಾಡಬೇಕು ಎಂದು ಹನುಮಂತ ಎಳೆ ಮಕ್ಕಳಂತೆ ಕೇಳಿದ್ದಕ್ಕೆ ನಕ್ಕು ರಾಮನು ಆಯಿತು ಎಂದ. ಇಲ್ಲಿಂದ ಆಂಜನೇಯನ ಕೆಲಸ ಶುರುವಾಯಿತು. ರಾಮನ ಪದತಲ ಬಿಟ್ಟು ಅವನು ಏಳಲೇ ಇಲ್ಲ. ಏಕೆಂದರೆ ರಾಮ ಯಾವಾಗ ಆಕಳಿಸುತ್ತಾನೋ ಎಂದು ಅವನ ಮುಖವನ್ನೇ ನೋಡುತ್ತಾ ‘ಚಿಟಿಕೆ’ ಹೊಡೆಯಲು ತಯಾರಾಗಿ ಕುಳಿತಿರುತ್ತಿದ್ದ. ಹೀಗಾಗಿ ರಾಮನ ಪಾದದ ಪಕ್ಕದಲ್ಲೆ ಕುಳಿತು ಅವನ ಮುಖವನ್ನೇ ನೋಡುತ್ತಿದ್ದ. ರಾಮ ಆಕಳಿಸುವ ಒಂದೇ ಒಂದು ಅವಕಾಶವನ್ನು ಕಳೆದು ಕೊಳ್ಳಬಾರದೆಂದು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದ.
ಶ್ರೀರಾಮನಿಗೂ ಸಹ ಆಂಜನೇಯನು ಮಾಡುತ್ತಿದ್ದ ಸೇವೆ ಬಹು ಪ್ರಿಯವಾಗಿತ್ತು. ಈಗಲೂ ಮನಸಿನಲ್ಲಿ ಅದೇ ಇತ್ತು ಬೇರೆಯವರು ತೆಗೆದುಕೊಂಡಿದ್ದು ರಾಮನಿಗೆ ಸರಿ ಹೋಗಿರಲಿಲ್ಲ . ಹೀಗಾಗಿ ರಾಮನು ತಾನು ಆಕಳಿಸಿದಾಗೆಲ್ಲಾ ಹನುಮಂತನಿಗೆ ಚಿಟಕಿ ಹೊಡೆಯುವ ಕೆಲಸವನ್ನು ಬಹಳ ಸಂತೋಷವಾಗಿ ಕೊಟ್ಟಿದ್ದ. ತನ್ನ ಕರ್ತವ್ಯವನ್ನು ನಿಷ್ಠೆಯಿಂದ ಮಾಡುತ್ತಿದ್ದ ಹನುಮಂತನಿಗೆ ಹಿಂದೆಂದಿಗಿಂತಲೂ ಜಾಸ್ತಿ ಕೆಲಸವಾಯಿತು. ಅದು ಅಲ್ಲದೆ ಸದಾ ರಾಮನ ಜೊತೆಗೆ ಇರತೊಡಗಿದ. ಹಗಲು-ರಾತ್ರಿಯೆನ್ನದೆ ದಿನಪೂರ್ತಿಯೂ ಆಂಜನೇಯನು ರಾಮನ ಮುಂದೆ ಕುಳಿತಿದ್ದರಿಂದ ರಾಮನ ಸಹೋದರರಿಗೆ, ಸೀತೆಗೆ ಕಿರಿಕಿರಿಯಾಯಿತು. ಯಾವಾಗ ಬಂದು ನೋಡಿದರು ರಾಮನ ಜೊತೆ ಹನುಮಂತ ಇರುತ್ತಿದ್ದ. ಅದು ಹಿಂದೆಂದಿಗಿಂತಲೂ ಅಂದರೆ ಹೊತ್ತು ಗೊತ್ತಿಲ್ಲದೆ ರಾಮನನ್ನು ನೋಡಲು ಬಂದಾಗಲೆಲ್ಲಾ ಹನುಮಂತನೇ ಇರುತ್ತಿದ್ದ. ಇದರಿಂದ ಅವರಿಗೆಲ್ಲ ಅಸಮಾಧಾನವಾಗಿ ಅವರ್ಯಾರಿಗೂ ಶ್ರೀರಾಮನ ಜೊತೆ ಹೆಚ್ಚು ಸಮಯ ಕಳೆಯಲು ಅವಕಾಶವಿಲ್ಲವಾಯಿತು.
ಆ ದಿನ ರಾತ್ರಿ ಊಟ ಮಾಡಿದ ಮೇಲೆ ರಾಮನು ತನ್ನ ಕೋಣೆಗೆ ಮಲಗಲು ಹೋದನು. ಸ್ವಲ್ಪ ಹೊತ್ತಿಗೆ ಸೀತಾಮಾತೆಯು ಮಲಗಲು ಕೋಣೆಗೆ ಬಂದಳು.ಅಲ್ಲಿಯೇ ಮಂಚದ ಕೆಳಗೆ ಹನುಮಂತ ಕೂತಿರುವುದನ್ನು ನೋಡಿ ಗಾಬರಿಗೊಂಡಳು. ನಾವು ಮಲಗುವ ಕೋಣೆಯಲ್ಲಿ ಏನು ಮಾಡುತ್ತಿರುವೆ ನಾವು ಮಲಗಬೇಕು ನೀನು ಇಲ್ಲಿಂದ ಎದ್ದು ಹೊರಗೆ ಹೋಗು ಎಂದಳು. ಆಗ ಹನುಮಂತನು ಚಿಂತಿಸಬೇಡಿ ತಾಯಿ ದಯವಿಟ್ಟು ನೀವು ನಿಮ್ಮ ಪಾಡಿಗೆ ನಿದ್ದೆ ಮಾಡಿ ರಾತ್ರಿ ಸಮಯದಲ್ಲಿ ರಾಮ ಆಕಳಿಸಿದರೆ ನಾನು ನನ್ನ ಕರ್ತವ್ಯವನ್ನು ಪಾಲಿಸಬೇಕು ನನ್ನ ಪಾಡಿಗೆ ನಾನು ಕುಳಿತಿರುತ್ತೇನೆ ಎಂದನು.
ಸೀತೆ ರಾಮನ ಅಸಹಾಯಕತೆಯನ್ನು ನೋಡಿ, ಸ್ವಾಮಿ ನಾವು ರಾತ್ರಿ ನಿದ್ದೆ ಮಾಡುವ ಸಮಯದಲ್ಲೂ ಚಿಟಿಕೆ ಹೊಡೆಯಲು ಹನುಮಂತನಿಗೆ ಅನುಮತಿ ನೀಡಿದ್ದೀರಾ ಎಂದು ಕೇಳಿದಳು. ಆಗ ರಾಮನು ಯಾವುದೇ ಕಾರಣಕ್ಕೂ ಅವರವರ ಕರ್ತವ್ಯವನ್ನು ಮಾಡಲು ಅವರವರಿಗೆ ಬಿಡಬೇಕು ಅಪ್ಪಿತಪ್ಪಿಯೂ ಬದಲಾಯಿಸಿಕೊಳ್ಳುವುದಿಲ್ಲವೆಂದು ನಾನು ಮಾತು ಕೊಟ್ಟಿದ್ದೇನೆ ಅಲ್ಲವೇ? ನಾನು ಈಗ ಅಸಹಾಯಕನಾಗಿದ್ದೇನೆ. ನಾನು ನನ್ನ ಭಕ್ತರ ಗುಲಾಮ ಎಂಬುದು ನಿನಗೆ ಗೊತ್ತಿದೆ ತಾನೆ, ಶ್ರೀರಾಮ ನಗುತ್ತಾ ಸೀತೆಯನ್ನು ಕೇಳಿದ. ಈ ಮಾತಿನಿಂದ ಸೀತೆಗೆ ನಾಚಿಕೆಯಾಗಿ ತನ್ನ ತಪ್ಪಿನ ಅರಿವಾಯಿತು.
ಸೀತಾಮಾತೆ ಅರಿತೋ ಅರಿಯದೆಯೋ ತನ್ನ ಸ್ವಾರ್ಥದಲ್ಲಿ ಆಂಜನೇಯನ ನಿಜವಾದ ಭಕ್ತಿಯನ್ನು ಅಲಕ್ಷ ಮಾಡಿದ್ದಳು. ಹನುಮಂತನು ತನ್ನ ಸ್ವಾಮಿಗೆ ಕಾಡಿನಲ್ಲಿ ಅದೆಷ್ಟು ಭಕ್ತಿ, ನಿಷ್ಠೆಗಳಿಂದ ಸೇವೆಸಲ್ಲಿಸಿದ್ದನೆಂದು ನೆನಪು ಮಾಡಿಕೊಂಡಳು. ಕ್ಲಿಷ್ಟಕರ ಸನ್ನಿವೇಶಗಳಲ್ಲಿ ,ರಾಮ-ರಾವಣರ ಯುದ್ಧದಲ್ಲಿ ಹಸಿವು, ಆಯಾಸ, ನಿದ್ರೆ, ನೀರಡಿಕೆಯ ಹಂಗನ್ನು ತೊರೆದು, ರಾಮಚಂದ್ರನ ಕೆಲಸ ಕಾರ್ಯಗಳನ್ನು ಚಿಟಿಕೆ ಹೊಡೆಯುವಷ್ಟರಲ್ಲಿ ಮಾಡಿ ಮುಗಿಸುತ್ತಿದ್ದ ಹನುಮಂತ ಎಡೆಬಿಡದೆ ರಾಮನ ಸೇವೆ ಮಾಡಿದ್ದಾನೆ. ಅಂಥ ಸ್ವಾಮಿ ಭಕ್ತನ ಸೇವೆಯನ್ನು ಕಿತ್ತುಕೊಂಡು ಎಂಥ ತಪ್ಪು ಮಾಡಿದ್ದೆ ಎಂದುಕೊಂಡು ಕೂಡಲೇ ಲಕ್ಷ್ಮಣ, ಭರತ, ಶತ್ರುಘ್ನ ರನ್ನು ಕರೆದು ಒಬ್ಬೊಬ್ಬರು ವಹಿಸಿ ಕೊಂಡಿದ್ದ ಕರ್ತವ್ಯಗಳನ್ನು ಹನುಮಂತನಿಗೆ ಬಿಟ್ಟು ಕೊಡಲು ಹೇಳಿದಳು. ಹನುಮಂತನನ್ನು ಸಂತೈಸಿದಳು. ನಿರಪೇಕ್ಷೆಯಾದ ಸೇವೆಗೆ ಯಾವತ್ತಿದ್ದರೂ ಫಲ ದೊರಕುತ್ತದೆ ಎನ್ನುವುದಕ್ಕೆ ರಾಮನ ಬಂಟ ಹನುಮಂತನ ಸ್ವಾರ್ಥರಹಿತ ಸೇವೆ ಉದಾಹರಣೆಯಾಗಿದೆ.
ಮನೋಜವಂ ಮಾರುತತುಲ್ಯ ವೇಗಂ
ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ
ವಾತಾತ್ಮಜಂ ವಾನರಯೂಥ ಮುಖ್ಯಂ
ಶ್ರೀ ರಾಮದೂತಂ ಶಿರಸಾ ನಮಾಮಿ.
ಹನುಮಂತನ ಸ್ಮರಣೆಮಾಡುವುದರಿಂದ ಬುದ್ಧಿ ,ಶಕ್ತಿ ,ಕೀರ್ತಿ, ಧೈರ್ಯ, ನಿರ್ಭಯತೆ, ಆರೋಗ್ಯ, ಉತ್ಸಾಹ ಮತ್ತು ವಾಕ್ಪಟುತ್ವ ಇವುಗಳು ಸಿದ್ಧಿಸುತ್ತವೆ. ವಾಯುವಿಗೆ ಸಮಾನ ವೇಗವುಳ್ಳ , ಜಿತೇಂದ್ರಿಯನಾದ, ಬುದ್ಧಿವಂತರಲ್ಲಿ ಶ್ರೇಷ್ಠನಾದ ವಾಯುಪುತ್ರನಾದ, ವಾನರ ಸಮೂಹಕ್ಕೆ ಮುಖ್ಯನಾದ ಶ್ರೀರಾಮದೂತನಾದ ಹನುಮಂತನಿಗೆ ನಮಸ್ಕರಿಸುತ್ತೇನೆ.
ವಂದನೆಗಳೊಂದಿಗೆ,
ಬರಹ:- ಆಶಾ ನಾಗಭೂಷಣ.
ರಮ್ಯ ಪುರಾಣ ಪುಣ್ಯಕಥೆಗಳು