ಕೆಮ್ಮು ಮತ್ತು ನೆಗಡಿ
ಆಹಾರದಲ್ಲಿ ಹೆಚ್ಚು ಶುಂಠಿ ಹಾಗೂ ಮೆಣಸು ಬಳಸಿ. ನಿತ್ಯ ಕುಡಿಯುವ ನೀರಿಗೆ ತುಳಸಿ ಹಾಗೂ ಶುಂಠಿ ಹಾಕಿ ಕುದಿಸಿ, ಆರಿಸಿ ಕುಡಿಯಿರಿ. ಒಂದು ಚಿಟಿಕಿ ಹಿಪ್ಪಲಿಯನ್ನು ಜೇನುತುಪ್ಪದೊಂದಿಗೆ ಸೇವಿಸಿ. ನೈಸರ್ಗಿಕವಾಗಿ ದೇಹದ ಉಷ್ಣತೆ ಪ್ರಮಾಣ ಹೆಚ್ಚಿಸುವ ಕಷಾಯ, ಸೂಪ್ ಕುಡಿಯಿರಿ. ಸ್ನಾನ ಮಾಡುವಾಗ ಕೂಡ ಒಂದೆರಡು ಹನಿ ನೀಲಗಿರಿ ತೈಲವನ್ನು ನೀರಿಗೆ ಬೆರೆಸಿ ಸ್ನಾನ ಮಾಡಿ.
• ಒಂದು ಬಟ್ಟಲು ನೀರಿಗೆ ಅರ್ದ ಟೀ ಚಮಚ ದಾಲ್ಚಿನ್ನಿ ಚೂರ್ಣ ಮತ್ತು ೧ ಚಿಟಿಕೆ ಕಾಳುಮೆಣಸಿನಪುಡಿ ಸೇರಿಸಿ ಚೆನ್ನಾಗಿ ಕುದಿಸಿ, ನಂತರ ಈ ಕಷಾಯಕ್ಕೆ ೧ ಚಮಚ ಜೇನುತುಪ್ಪ ಸೇರಿಸಿ ದಿನಕ್ಕೆ ಮೂರು ಬಾರಿ ಕುಡಿದರೆ ನೆಗಡಿ ಇಲ್ಲವಾಗುತ್ತದೆ.
• ಬಿಸಿಯಾದ ಹಸುವಿನ ಹಾಲಿಗೆ ಕಾಳುಮೆಣಸಿನಪುಡಿ ಮತ್ತು ಕಲ್ಲು ಸಕ್ಕರೆ ಸೇರಿಸಿ ಕುಡಿಯುವುದರಿಂದ ನೆಗಡಿ ಕಡಿಮೆಯಾಗುತ್ತದೆ.
• ತುಪ್ಪದಲ್ಲಿ ಹುರಿದ ಮೆಣಸನ್ನು ಸಮಭಾಗ ಸಕ್ಕರೆಯೊಂದಿಗೆ ಸೇರಿಸಿ ಚೆನ್ನಾಗಿ ಪುಡಿಮಾಡಿ ದಿನಕ್ಕೆ ೩ ಸಲ ಅರ್ಧ ಟೀ ಚಮಚ ತಿಂದರೆ ನೆಗಡಿ ಮತ್ತು ಕೆಮ್ಮು ಕಡಿಮೆಯಾಗುತ್ತದೆ.
• ಚೆನ್ನಾಗಿ ಮಾಗಿದ ರಸಬಾಳೆ ಹಣ್ಣಿನೊಂದಿಗೆ ಅರ್ಧ ಟೀ ಚಮಚ ಕಾಳು ಮೆಣಸಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಮಸೆದು ದಿನಕ್ಕೆ ಮೂರು ಬಾರಿ ಸೇವಿಸಿದರೆ ನೆಗಡಿ ಮತ್ತು ಕೆಮ್ಮು ನಿವಾರಣೆಯಾಗುತ್ತದೆ.