ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ನಾಗೋದ್ಭವ ಮತ್ತು ಗರುಡೋದ್ಭವ (ನಾಗರ ಪಂಚಮಿ)

ನಾಗೋದ್ಭವ ಮತ್ತು ಗರುಡೋದ್ಭವ
(ನಾಗರ ಪಂಚಮಿ)

ಬ್ರಹ್ಮದೇವರ ಮಗನಾದ ಮರೀಚಿ ಮುನಿಗೆ ಕರ್ದಮ ಮುನಿಯ ಮಗಳಾದ ಕಲಾ ಎಂಬವಳೊಂದಿಗೆ ವಿವಾಹವಾಗಿತ್ತು. ಈ ದಂಪತಿಗಳಿಗೆ ಹುಟ್ಟಿದವನೇ ಕಶ್ಯಪ ಮುನಿ. ಈ ಕಶ್ಯಪ ಮುನಿಗೆ ಹಲವು ಹೆಂಡಂದಿರು ಇದ್ದಿದ್ದರು. ದಕ್ಷ ಪ್ರಜಾಪತಿಯ ಹದಿಮೂರು ಹೆಣ್ಣು ಮಕ್ಕಳು ಕೂಡಾ ಕಶ್ಯಪನ ಹೆಂಡಿರಾಗಿದ್ದರು. ಆ ಹದಿಮೂರು ಮಂದಿ ಸಹೋದರಿಯರಲ್ಲಿ ಕದ್ರು ಮತ್ತು ವಿನತೆ ಎಂಬ ಇಬ್ಬರು ಅನ್ಯೋನ್ಯರಾಗಿ ಸದಾ ಒಟ್ಟಿಗೇ ಇರುತ್ತಿದ್ದರು.

ಒಂದು ದಿನ ಕಶ್ಯಪನು ಇವರಿಬ್ಬರನ್ನು ಬಳಿಗೆ ಕರೆದು “ನಾನು ಒಂದು ಯಾಗವನ್ನು ಮಾಡಲು ಉದ್ಯುಕ್ತನಾಗಿದ್ದೇನೆ , ಅದರ ಫಲವಾಗಿ ನಿಮ್ಮಿಬ್ಬರಿಗೆ ಸಂತಾನ ಭಾಗ್ಯ ಲಭಿಸಲಿದೆ. ನಿಮಗೆ ಎಂತಹ ಮಕ್ಕಳು ಬೇಕೆಂಬುದನ್ನು ತಿಳಿಸಿ” ಎಂದರು. ಆಗ ಕದ್ರುವು ತನಗೆ ಸಮಾನ ಬಲರಾದ ಒಂದು ಸಾವಿರ ನಾಗಗಳನ್ನು ಮಕ್ಕಳಾಗಿ ನೀಡಿ ಎಂದರೆ , ವಿನತೆಯು ಕದ್ರುವಿನ ಮಕ್ಕಳಿಗಿಂತ ಬಲವಂತರಾದ ಇಬ್ಬರು ಮಕ್ಕಳನ್ನು ಬೇಡಿದಳು. ಮುನಿಗಳು “ತಥಾಸ್ತು” ಎಂದು ನುಡಿದು ಯಾಗಕ್ಕೆ ತೆರಳಿದರು. ಅವರು ಮಾಡಿದ ಯಾಗದ ಫಲವಾಗಿ ಕದ್ರು ಮತ್ತು ವಿನತೆಯರಿಬ್ಬರೂ ಗರ್ಭಿಣಿಯರಾದರು.

ಹಲವು ವರ್ಷಗಳ ನಂತರ ಕದ್ರುವು ಚಿಕ್ಕ ಗಾತ್ರದ ಒಂದು ಸಾವಿರ ಅಂಡಗಳನ್ನು ಹಡೆದರೆ ವಿನತೆಯು ಎರಡು ಬೃಹತ್ ಅಂಡಗಳನ್ನು ಹಡೆದಳು. ಅವುಗಳನ್ನು ಗಂಡನ ಸಲಹೆಯಂತೆ ಮಡಕೆಗಳಲ್ಲಿ ಜೋಪಾನವಾಗಿ ಕಾಪಾಡಿಕೊಂಡಿರುವಾಗ ಮೊದಲು ಕದ್ರುವಿನ ಮೊಟ್ಟೆಗಳೆಲ್ಲವೂ ಬಿರಿದು ಬಲಶಾಲಿಗಳಾದ ಒಂದು ಸಾವಿರ ನಾಗ ಸರ್ಪಗಳು ಜನಿಸಿದವು.

ಇದಾಗಿ ಅನೇಕ ದಿನಗಳು ಕಳೆದರೂ ವಿನತೆಯ ಅಂಡಗಳು ಬಿರಿಯಲೇ ಇಲ್ಲ. ಹೀಗಾಗಿ ವಿನತೆಯ ಮನಸ್ಸು ಚಂಚಲವಾಯಿತು. ಮೊದಲು ಕದ್ರುವಿನೊಂದಿಗೆ ಎಷ್ಟೇ ಅನ್ಯೋನ್ಯತೆಯಿಂದ ಇದ್ದರೂ ಕೂಡಾ ಆಕೆಯ ಮಕ್ಕಳು ಬೆಳೆಯುತ್ತಿರುವುದನ್ನು ನೋಡಿ ವಿನತೆಗೆ ಅಸೂಯೆ ಉಂಟಾಯಿತು. ಹೀಗಾಗಿ ಅವಸರದಿಂದ ಅವಳು ತನ್ನ ಒಂದು ಮೊಟ್ಟೆಯನ್ನು ಅದು ತಾನಾಗಿ ಬಿರಿಯುವ ಮುನ್ನವೇ ಒಡೆದಳು. ಒಡನೆಯೇ ಅದರಿಂದ ಪುತ್ರನೊಬ್ಬ ಹೊರಗೆ ಬಂದನು. ಆದರೆ ಅವನ ಕಾಲುಗಳು ಇನ್ನೂ ಸಂಪೂರ್ಣವಾಗಿ ಬೆಳೆದಿರಲಿಲ್ಲ. ಮಗ ಹೆಳವನಾಗಿದ್ದ. ತನ್ನ ತಪ್ಪಿಗಾಗಿ ವಿನತೆ ಅತಿಯಾಗಿ ನೊಂದು ಪಶ್ಚಾತ್ತಾಪ ಪಟ್ಟಳು. ಆದರೆ ಕಾಲ ಮಿಂಚಿಹೋಗಿತ್ತು.

ಹೊರಬಂದ ಪುತ್ರನು ಕೋಪಾವಿಷ್ಟನಾಗಿ ತನ್ನ ತಾಯಿಯನ್ನೇ ಶಪಿಸಿದನು. “ತಾಯಿಯೇ, ತಾಳ್ಮೆ ತಪ್ಪಿ ನೀನು ಅವಸರದಿಂದ ತಪ್ಪು ಮಾಡಿದೆ. ಅದಕ್ಕೆ ನೀನು ಬೆಲೆ ತೆರಲೇಬೇಕಾಗುತ್ತದೆ. ಐದು ನೂರು ವರ್ಷಗಳವರೆಗೆ ನೀನು ಮತ್ತೊಬ್ಬರ ದಾಸಿಯಾಗಿರು. ಆದರೆ ಭಯಪಡುವ ಅಗತ್ಯವಿಲ್ಲ. ಮತ್ತೊಂದು ಮೊಟ್ಟೆಯಿಂದ ನನ್ನ ತಮ್ಮ ಹುಟ್ಟುತ್ತಾನೆ. ಅವನು ನಿನ್ನನ್ನು ದಾಸ್ಯದಿಂದ ಬಿಡುಗಡೆ ಮಾಡುತ್ತಾನೆ.” ಎಂದು ನುಡಿದು , ಮರು ಕ್ಷಣವೇ ಆಕಾಶಕ್ಕೆ ಹಾರಿದನು. ಅವನು ಮುಂದೆ ‘ಅರುಣ’ ಎನ್ನುವ ಹೆಸರಿನಿಂದ ಸೂರ್ಯದೇವನ ಸಾರಥಿಯಾದನು.

  ಮಧ್ಯಪ್ರದೇಶದ ಅಗರ್ ಬೈಜನಾಥ್ ಮಹಾದೇವ ಮಂದಿರದ ವಿಸ್ಮಯ

ಇದಾಗಿ ಕೆಲವು ದಿನಗಳ ನಂತರ ದೇವತೆಗಳು ಮತ್ತು ರಕ್ಕಸರು ಕೂಡಿ ಸಮುದ್ರಮಥನ ಕಾರ್ಯ ನಡೆಸತೊಡಗಿದರು. ಆ ಸಮುದ್ರಮಥನದಲ್ಲಿ ಅನೇಕ ಸುವಸ್ತುಗಳು ಹುಟ್ಟಿ ಬಂದವು. ಅವುಗಳಲ್ಲಿ “ಉಚ್ಚೈಶ್ರವ” ಎಂಬ ಕುದುರೆ ಕೂಡಾ ಒಂದಾಗಿತ್ತು. ಈ ಉಚ್ಚೈಶ್ರವ ಕುದುರೆಯ ವಿಷಯದ ಬಗ್ಗೆ ಮಾತನಾಡುತ್ತಾ ಅಕ್ಕ ತಂಗಿಯರು ಅದರ ಬಣ್ಣದ ಬಗೆಗೆ ಮಾತನಾಡತೊಡಗಿದರು. ಕದ್ರುವು ಉಚ್ಚೈಶ್ರವದ ಬಾಲವು ಕಪ್ಪಾಗಿರುತ್ತದೆ ಎಂದರೆ ವಿನತೆಯು ಆ ಕುದುರೆಯು ಸಂಪೂರ್ಣವಾಗಿ ಬಿಳಿಯಾಗಿರುತ್ತದೆ ಎಂದಳು. ಮೊದ ಮೊದಲು ಹುಡುಗಾಟಿಕೆಯ ಮಾತಾಗಿದ್ದುದು ನಂತರ ಪಂಥಕ್ಕೆ ತಿರುಗಿತು. ಯಾರು ಹೇಳಿದ್ದು ತಪ್ಪಾಗುತ್ತದೋ ಅವರು ಇನ್ನೊಬ್ಬರ ದಾಸಿಯಾಗಿರಬೇಕು ಎಂದು ನಿರ್ಣಯವಾಯಿತು.

ಪಂಥದಲ್ಲಿ ತಾನು ಸೋಲುತ್ತೇನೆ ಎಂಬ ಭಯ ಕದ್ರುವಿಗೆ ಉಂಟಾಗತೊಡಗಿತು. ಹೇಗಾದರೂ ಮಾಡಿ ತಾನು ಗೆಲ್ಲಲೇಬೇಕು , ಅದಕ್ಕೆ ಬೇಕಾಗಿ ಅದರ ಬಾಲವನ್ನು ಕೃತಕವಾಗಿಯಾದರೂ ಕಪ್ಪಾಗಿ ಕಾಣಿಸುವಂತೆ ಮಾಡಬೇಕು ಎಂದು ಹಠ ತೊಟ್ಟ ಅವಳು ತನ್ನ ಮಕ್ಕಳನ್ನೆಲ್ಲಾ ಬಳಿಗೆ ಕರೆದು “ಉಚ್ಚೈಶ್ರವವು ಈ ದಾರಿಯಲ್ಲಿ ಹಾದುಹೋಗುವಾಗ ನೀವೆಲ್ಲರೂ ಅದರ ಬಾಲಕ್ಕೆ ಸುತ್ತಿಕೊಂಡು ಅದು ಕಪ್ಪಾಗಿ ಕಾಣಿಸುವಂತೆ ಮಾಡಬೇಕು” ಎಂದಳು. ಆದರೆ ಅವಳ ಮಕ್ಕಳು ಹಾಗೆ ಮೋಸ ಮಾಡಲು ಒಪ್ಪಲಿಲ್ಲ. ಆಗ ಕದ್ರುವು ಕೋಪದಿಂದ “ನನ್ನ ಮಾತನ್ನು ನಡೆಸದೇ ಇರುವವರೆಲ್ಲರೂ ಅಗ್ನಿಗೆ ಬಿದ್ದು ಸಾಯುವಂತಾಗಲಿ” ಎಂದು ತನ್ನ ಮಕ್ಕಳಿಗೇ ಶಾಪಕೊಟ್ಟಳು.

ತಾಯಿಯ ಶಾಪಕ್ಕೆ ಹೆದರಿದ ಉಳಿದ ಕೆಲವು ಕರಿ ನಾಗಗಳು ಉಚ್ಚೈಶ್ರವದ ಬಾಲವನ್ನು ಸುತ್ತಿಕೊಂಡು ದೂರದಿಂದ ನೊಡುವವರಿಗೆ ಅದರ ಬಾಲವು ಕಪ್ಪಾಗಿ ಕಾಣಿಸುವಂತೆ ಮಾಡಿದವು. ಇದರಿಂದಾಗಿ ವಿನತೆಯು ಪಂಥದಲ್ಲಿ ಸೋಲುವಂತಾಯಿತು. ಪರಿಣಾಮವಾಗಿ ಅವಳು ಕದ್ರುವಿನ ದಾಸಿಯಾಗಬೇಕಾಯಿತು. ಕದ್ರುವಿನ ಶಾಪಕ್ಕೆ ತುತ್ತಾದ ನಾಗಗಳು ಮುಂದೆ ದ್ವಾಪರಾ ಯುಗದ ಅಂತ್ಯದಲ್ಲಿ ಜನಮೇಜಯನು ನಡೆಸುವ ಸರ್ಪಯಾಗದಲ್ಲಿ ಬಿದ್ದು ಸತ್ತು ಹೋಗುತ್ತವೆ.

  ಶ್ರೀಮದ್ ಅನಂತ ಚತುರ್ದಶಿ ವ್ರತ

ಕೆಲವು ದಿನಗಳ ನಂತರ ವಿನತೆಯ ಇನ್ನೊಂದು ಅಂಡವು ಬಿರಿದು ಅದರಿಂದ ಗರುಡನು ಜನಿಸಿ ಬಂದನು. ಗರುಡನು ಹುಟ್ಟುತ್ತಲೇ ಬೃಹದಾಕಾರವಾಗಿ ಬೆಳೆದು , ಆಕಾಶಕ್ಕೆ ಹಾರಿ ಇಡೀ ಭೂಮಂಡಲವನ್ನೇ ಪ್ರದಕ್ಷಿಣೆ ಮಾಡಿ ಬಂದನು. ಮಗನ ಬಲ ಸಾಹಸಗಳನ್ನು ಕಂಡು ವಿನತೆಗೆ ಸಂತೋಷವಾಯಿತು. ಆದರೆ ಏನು ಮಾಡೋಣ ಅವಳು ದಾಸಿಯಾಗಿರುವುದರಿಂದ ಅವಳ ಮಗ ಗರುಡನೂ ಕದ್ರು ಮತ್ತು ಅವಳ ಮಕ್ಕಳ ದಾಸನಾಗಬೇಕಾಯಿತು. ಹೀಗೆ ಹಲವು ವರ್ಷಗಳು ಉರುಳಿದವು.

ಒಂದು ದಿನ ತನ್ನ ಮಕ್ಕಳನ್ನು ಹೆಗಲ ಮೇಲೆ ಕೂರಿಸಿಕೊಂಡು ದೂರದ “ರಮಣಕ” ಎಂಬ ದ್ವೀಪಕ್ಕೆ ವಿಹರಿಸಲು ಕರೆದುಕೊಂಡು ಹೋಗುವಂತೆ ಕದ್ರುವು ಗರುಡನಿಗೆ ಆಜ್ಞಾಪಿಸಿದಳು. ಅಲ್ಲದೇ ತನ್ನನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುವಂತೆ ವಿನತೆಗೆ ಆಜ್ಞಾಪಿಸಿದಳು. ತಾಯಿಗೆ ಕಷ್ಟ ಕೊಡುತ್ತಿರುವುದನ್ನು ನೋಡಿ ಗರುಡನಿಗೆ ಒಮ್ಮೆಲೇ ಕೋಪ ಬಂದಿತು. ಆದರೆ ತಾಯಿಯ ಸೂಚನೆಯಂತೆ ಮೌನವಾಗಿ ಸಹಿಸಿಕೊಂಡು ಎಲ್ಲರನ್ನೂ ಆ ರಮಣಕ ದ್ವೀಪಕ್ಕೆ ಕರೆದೊಯ್ದನು.

ಅಲ್ಲಿಗೆ ಹೋದ ಸ್ವಲ್ಪಹೊತ್ತಿನಲ್ಲೆ ಆ ನಾಗಗಳು ಮತ್ತೆಲ್ಲಿಗೋ ತಮ್ಮನ್ನು ಕರೆದುಕೊಂಡು ಹೋಗುವಂತೆ ಹೇಳಿದವು. ಆಗ ಗರುಡನಿಗೆ ಸಿಟ್ಟು ನೆತ್ತಿಗೇರಿತು. ನಾಗಗಳೊಡನೆ ಜಗಳವಾಡಿದನು. ಆದರೆ ತಾಯಿ ಮಾಡಿಕೊಂಡ ಒಪ್ಪಂದವನ್ನು ಮುರಿಯುವುದು ಅಧರ್ಮವಾಗುತ್ತದೆ ಎಂದು ತಿಳಿದು “ನಿಮ್ಮ ದಾಸ್ಯದಿಂದ ನಮ್ಮಿಬ್ಬರನ್ನು ಬಿಡುಗಡೆಗೊಳಿಸಬೇಕಾದರೆ ನಾನು ಏನು ಮಾಡಬೇಕು ಹೇಳಿ” ಎಂದನು. ಆಗ ಆ ನಾಗಗಳು ಸ್ವಲ್ಪ ಹೊತ್ತು ಆಲೋಚಿಸಿ ನಂತರ “ಮೊನ್ನೆ ತಾನೇ ನಡೆದ ಸಮುದ್ರ ಮಥನದಲ್ಲಿ ದೊರಕಿದ ಅಮೃತ ಕಲಶವು ದೇವಲೋಕದಲ್ಲಿ ಇದೆ. ಅದನ್ನು ಹೋಗಿ ತೆಗೆದುಕೊಂಡು ಬಾ” ಎಂದವು.

ದೇವಲೋಕಕ್ಕೆ ಹೋಗಿ ಅಮೃತ ಕಲಶವನ್ನು ತರುವುದು ಗರುಡನಿಗೆ ಅಸಾಧ್ಯವಾದ ಕೆಲಸ ಎಂದು ತಿಳಿದೇ ಆ ನಾಗಗಳು ಹಾಗೆ ಹೇಳಿದ್ದವು. ಅಷ್ಟಾದರೂ ಒಂದು ವೇಳೆ ಅವನು ಅಮೃತವನ್ನು ತಂದರೆ ತಾವೆಲ್ಲ ಅದನ್ನು ಸೇವಿಸಿ ಅಮರರಾಗಬಹುದು ಎಂಬುದು ನಾಗಗಳ ಲೆಕ್ಕಾಚಾರವಾಗಿತ್ತು. ಗರುಡನು ದೇವಲೋಕಕ್ಕೆ ಹೋಗಿ ಅಮೃತ ಕಲಶವನ್ನು ಕೊಡುವಂತೆ ದೇವೇಂದ್ರನನ್ನು ಕೇಳಿದಾಗ ದೇವೇಂದ್ರನಿಗೂ ಗರುಡನಿಗೂ ಯುದ್ಧವಾಯಿತು. ದೇವೇಂದ್ರನು ಸೋತಾಗ ದೇವತೆಗಳ ಪಕ್ಷಕ್ಕೆ ಶ್ರೀಹರಿಯು ಬರಬೇಕಾಯಿತು. ಆಗ ಶ್ರೀಹರಿಗೆ ಗರುಡನ ಶಕ್ತಿ ಸಾಹಸಗಳನ್ನು ನೋಡಿ ಸಂತೋಷವಾಯಿತು. ಗರುಡನು ಕ್ಷಣ ಮಾತ್ರದಲ್ಲಿ ಹಾರುವುದನ್ನು ಕಂಡಾಗ ಅವನನ್ನು ತನ್ನ ವಾಹನವಾಗಿಸಿಕೊಳ್ಳಬೇಕೆಂಬ ಬಯಕೆಯಾಯಿತು. ಅಂತೆಯೇ ಗರುಡನಲ್ಲಿ ತನ್ನ ಬಯಕೆಯನ್ನು ತಿಳಿಸಿದಾಗ ಗರುಡನು “ನನ್ನ ಅಮ್ಮನನ್ನು ದಾಸ್ಯದಿಂದ ಬಿಡುಗಡೆಗೊಳಿಸಿದರೆ, ನಾನು ಜೀವನ ಪರ್ಯಂತ ನಿಮ್ಮ ದಾಸನಾಗಿರುತ್ತೇನೆ” ಎಂದ.

  ಮಂತ್ರ-ಜಪದ ಸಿದ್ಧಿ ಸಂದೇಹದ ಕಥೆ

ಆಗ ಶ್ರೀಹರಿಯೇ ದೇವೇಂದ್ರನನ್ನು ಕರೆದು ಅಮೃತ ಕಲಶವನ್ನು ಗರುಡನಿಗೆ ಕೊಡುವಂತೆ ಹೇಳಿದನು. ದೇವೇಂದ್ರನು ಸಂಶಯ ವ್ಯಕ್ತಪಡಿಸಿದಾಗ ಗರುಡನೇ ದೇವೇಂದ್ರನಿಗೆ “ನೀವು ನನ್ನ ಜೊತೆಯಲ್ಲಿಯೇ ಬನ್ನಿ , ನಾನು ಅಮೃತ ಕಲಶವನ್ನು ಅವರಿಗೆ ಕೊಟ್ಟು ನನ್ನ ಅಮ್ಮನನ್ನು ದಾಸ್ಯದಿಂದ ಬಿಡಿಸಿಕೊಂಡ ತಕ್ಷಣವೇ ನೀವು ಆ ಕಲಶವನ್ನು ಮರಳಿ ತರಬಹುದು” ಎಂಬ ಉಪಾಯವನ್ನು ಹೇಳಿದನು. ಅಂತೆಯೇ ಗರುಡ ದೇವೇಂದ್ರ ಇಬ್ಬರೂ ರಮಣಕ ದ್ವೀಪಕ್ಕೆ ಹೋದರು. ಗರುಡನು ದರ್ಭೆಗಳನ್ನು ಕತ್ತರಿಸಿ ನೆಲದ ಮೇಲೆ ರಾಶಿ ಹಾಕಿ ಅದರ ಮೇಲೆ ಅಮೃತ ಕಲಶವನ್ನು ಇರಿಸಿದನು. ದೇವೇಂದ್ರನನ್ನೂ , ಅಮೃತ ಕಲಶವನ್ನೂ ನೋಡಿದ ನಾಗಗಳಿಗೆ ಸಂತೋಷವಾಯಿತು. ಅವು ವಿನತೆಯನ್ನು ದಾಸ್ಯದಿಂದ ಬಿಡುಗಡೆಗೊಳಿಸಿದವು.

ತಕ್ಷಣವೇ ದೇವೇಂದ್ರನು ಆ ಅಮೃತಕಲಶವನ್ನು ತೆಗೆದುಕೊಂಡು ಮಾಯವಾದನು. ಆಗ ದರ್ಭೆಯ ಮೇಲೆ ಅಮೃತವು ಚೆಲ್ಲಿದಂತೆ ಭ್ರಮೆಯಾಗಿದ್ದರಿಂದ ಅಮೃತದ ಆಸೆಯಲ್ಲಿದ್ದ ನಾಗಗಳೆಲ್ಲವೂ ನಾ ಮುಂದು ತಾ ಮುಂದು ಎನ್ನುತ್ತಾ ದರ್ಭೆಯನ್ನು ನೆಕ್ಕಿದವು. ದರ್ಭೆಯು ಹರಿತವಾಗಿರುವುದರಿಂದ ನಾಗಗಳ ನಾಲಿಗೆಗಳು ಹರಿದು ಸೀಳಾದವು. ಹೀಗಾಗಿ ಇಂದಿಗೂ ನಾಗಗಳ ನಾಲಗೆಗಳು ಎರಡು ಸೀಳಾಗಿಯೇ ಇವೆ.

ಗರುಡನು ತಮಗೆ ಮೋಸ ಮಾಡಿದನೆಂದುಕೊಂಡು ನಾಗಗಳು ಗರುಡನೊಂದಿಗೆ ಯುದ್ಧಕ್ಕೆ ನಿಂತವು. ಆದರೆ ಮಹಾನ್ ಬಲಶಾಲಿಯಾದ ಗರುಡನ ಮುಂದೆ ನಾಗಗಳ ಆಟ ಸಾಗಲಿಲ್ಲ. ನಾಗಗಳೆಲ್ಲವೂ ಸೋತು ಶರಣಾದವು. ಆಗ ಗರುಡನು ಪ್ರತಿ ತಿಂಗಳಿಗೆ ಒಂದು ನಾಗವನ್ನು ತನಗೆ ಆಹಾರವಾಗಿ ಬಲಿ ಕಪ್ಪದ ರೂಪದಲ್ಲಿ ಕೊಡಬೇಕು ಎಂಬುದಾಗಿ ಅಪ್ಪಣೆ ವಿಧಿಸಿ , ತಾಯಿಯನ್ನು ಕರೆದುಕೊಂಡು ಹೊರಟು ಹೋದನು. ನಾಗಗಳಿಗೆ ರಮಣಕ ದ್ವೀಪವೇ ಆಶ್ರಯ ತಾಣವಾಯಿತು. ಅದರಂತೆ ಪ್ರತಿ ತಿಂಗಳೂ ತಪ್ಪದೇ ಒಂದೊಂದು ನಾಗವು ಗರುಡನಿಗೆ ಬಲಿ ಕಪ್ಪವಾಗಿ ಅರ್ಪಣೆಯಾಗತೊಡಗಿದವು.

Leave a Reply

Your email address will not be published. Required fields are marked *

Translate »