ಆದಿಪರಾಶಕ್ತಿ:..
ಭಾರತದಲ್ಲಿ ಪೂಜಿಸಲ್ಪಡುವ ಎಲ್ಲಾ ಶಕ್ತಿಪೀಠಗಳು ಆದಿಪರಾಶಕ್ತಿಯ ಒಂದೊಂದು ಅವತಾರವಾಗಿದೆ. ಎಲ್ಲೆಡೆ ವಿಸ್ತಾರವಾಗುತ್ತಾ ಹೋಗುವ ‘ಶಕ್ತಿ ದೇವಿ’ ಪೀಠಗಳ ಮೂಲದೇವಿ ಗೌರಿ ಅಥವಾ ಪಾರ್ವತಿ ದೇವಿಯ ರೂಪಗಳೇ ಆಗಿದೆ. ಗೌರಿಯನ್ನು ಆರಾಧಿಸಿ ಪೂಜಿಸುವುದರಿಂದ ಸಂತಾನ ಭಾಗ್ಯ, ಮಾಂಗಲ್ಯ ಭಾಗ್ಯ ,ಕುಟುಂಬದಲ್ಲಿ ಸಾಮರಸ್ಯ ಹೀಗೆ ಎಲ್ಲಾ ಸಕಲ ಸಂಪತ್ತುಗಳನ್ನು ಅನುಗ್ರಹಿಸುವ ಮಾತೆ ಪಾರ್ವತಿ. ಈ ಪಾರ್ವತಿ ದೇವಿಯ ಮತ್ತೊಂದು ಶಕ್ತಿ ದುರ್ಗಾದೇವಿ ಈಕೆ ಶೌರ್ಯದ ಪ್ರತೀಕ ವಾಗಿದ್ದಾಳೆ. ಹಾಗೆಯೇ ದುಷ್ಟರನ್ನು ಸಂಹರಿಸುವ ಶಕ್ತಿ ಪಾರ್ವತಿಯ ಪ್ರತೀಕವಾದ ಕಾಳಿಕಾದೇವಿ. ಎಲ್ಲಾ ದೇವತೆಗಳ ಶಕ್ತಿಯ ಪ್ರತಿರೂಪವಾಗಿರುವುದು ಆದಿಪರಾಶಕ್ತಿ ದೇವಿ ಅಂಶ. ಅವುಗಳು ಶಾರದೆ, ಮೂಕಾಂಬಿಕೆ, ಭುವನೇಶ್ವರಿ, ತುಳಜಾ ಭವಾನಿ, ಶಾಂತೇಶ್ವರಿ ,ಗಾಯಿತ್ರಿ, ತ್ರಿಪುರ ಸುಂದರಿ, ಮೀನಾಕ್ಷಿ ,ಕಾಮಾಕ್ಷಿ ,ವಿಶಾಲಾಕ್ಷಿ, ಬಗಳಾ ಮುಖಿ, ರಾಜೇಶ್ವರಿ, ಇಂದ್ರಾಕ್ಷಿ, ಬನಶಂಕರಿ, ಶಾಕಾಂಬರಿ, ಚಂಡಿಕಾ, ಪ್ರತ್ಯಂಗಿರಾ ದೇವಿ, ಚಾಮುಂಡಿ, ಇವರೆಲ್ಲರೂ ಪಾರ್ವತಿ ದೇವಿಯ ಅವತಾರ. ಅಷ್ಟದಶ ಶಕ್ತಿಪೀಠ ಗಳಾದ ‘ಆದಿಪರಾಶಕ್ತಿ’ಯ ಕುರಿತಾದ ಒಂದು ಕಥೆ.
ಬ್ರಹ್ಮನ ಮಗ ದಕ್ಷ, ದಕ್ಷನಿಗೆ 27 ಜನ ಹೆಣ್ಣು ಮಕ್ಕಳು ಇವರಲ್ಲಿ ಸತಿ ಅಥವಾ ದಾಕ್ಷಾಯಿಣಿ ದಕ್ಷ ಪ್ರಜಾಪತಿಯ ಅತ್ಯಂತ ಪ್ರೀತಿಯ ಮಗಳು. ದಾಕ್ಷಾಯಣಿ ದಕ್ಷ ಪ್ರಜಾಪತಿಯ ಮಗಳಾಗಲು ಒಂದು ಹಿನ್ನೆಲೆ ಇದೆ. ದಕ್ಷ ಪ್ರಜಾಪತಿಯ ಕೆಲವು ಹೆಣ್ಣು ಮಕ್ಕಳನ್ನು ಚಂದ್ರ ನಿಗೂ, ಮತ್ತೆ ಕೆಲವು ಮಕ್ಕಳನ್ನು ಕಶ್ಯಪ ಮಹರ್ಷಿಗಳಿಗೂ
ಕೊಟ್ಟು ಮದುವೆ ಮಾಡುತ್ತಾನೆ. ಈ ಮದುವೆ ಸಮಾರಂಭಕ್ಕೆ ತ್ರಿಮೂರ್ತಿಯರಾದ ಬ್ರಹ್ಮ, ವಿಷ್ಣು ,ಮಹೇಶ್ವರರು, ಸ್ತ್ರೀ ಶಕ್ತಿ ದೇವತೆಯರಾದ ಪಾರ್ವತಿ, ಲಕ್ಷ್ಮಿ, ಮತ್ತು ಸರಸ್ವತಿಯರು, ಹಾಗೂ ಎಲ್ಲಾ ದೇವಾನುದೇವತೆಗಳು ಬಂದಿದ್ದರು. ಕಶ್ಯಪರ ಪತ್ನಿಯರಲ್ಲಿ ದಿತಿ -ಅದಿತಿಯರು ಪ್ರಮುಖರು. ಅದಿತಿ ದೈವಗುಣ ಸಂಪನ್ನಳು. ದಿತಿ ಅಸುರಿ ಗುಣದವಳು. ಇವಳು ಯಾರಿಗೂ ತಿಳಿಯದಂತೆ, ವಿವಾಹ ಸಮಾರಂಭಕ್ಕೆ ಬಂದಿದ್ದ ಆದಿಶಕ್ತಿ ಸ್ವರೂಪಿಣಿ ಪಾರ್ವತಿ ಹತ್ತಿರ ಆಶೀರ್ವಾದ ಪಡೆಯಲು ಬಂದಳು.
ಅಸುರ ಗುಣದವಳಾದ ದಿತಿ ಯು, ಆದಿಶಕ್ತಿಗೆ ನಮಸ್ಕರಿಸಿ, ತಾಯಿ ಆದಿಪರಾ ಶಕ್ತಿ ದೇವಿ, ನನಗೆ ವರವನ್ನು ಕೊಡಿ ಎಂದು ಕೇಳಿದಳು ಏನು ಬೇಕು ಎಂದು ಪಾರ್ವತಿ ಕೇಳಿದಾಗ, ದಿತಿ ಹೇಳಿದಳು, ಅದಿತಿಗೆ ಸಂತಾನವಾಗುವ ಮೊದಲು ನನಗೆ ಸಂತಾನ ವಾಗಬೇಕು ಎಂಬ ವರವನ್ನು ಕೇಳಿದಳು, ಆದಿಪರಾಶಕ್ತಿಗೆ ಅವಳ (ದಿತಿ) ಕುಟಿಲ ಬುದ್ಧಿ ಗೊತ್ತಾಯಿತು. ದೇವಿ ಆಕೆಗೆ ಹೇಳಿದಳು ‘ದಿತಿ’ ನೀನು, ನಿನ್ನ ಸಹೋದರಿ ಅದಿತಿಯ ಮೇಲಿನ ದ್ವೇಷದಿಂದಾಗಿ ಇಂಥ ವರವನ್ನು ಕೇಳಿರುವೆ. ನಿನಗೂ ವರ ಕೊಡುವೆ ಹಾಗೆ ನಿನ್ನ ತಂಗಿಗೂ ಸಹ ಅದೇ ವರ ಫಲಿಸುತ್ತೆ ಎಂದಳು. ಹಾಗೆಯೇ ಇನ್ನೊಂದು ಮುಖ್ಯವಾದ ವಿಷಯ. ಯಾರಿಗೆ ಮಾತೃ ಹೃದಯ ಇರುವುದೋ ಅವರಿಗೆ ಶ್ರೇಷ್ಠ ಸಂತಾನವಾಗುತ್ತದೆ ಎಂದು ವರ ಕೊಟ್ಟಳು. ಅದಿತಿಗೆ ಮಾತೃ ವಾತ್ಸಲ್ಯ ಇದ್ದ ಕಾರಣ ಅವಳಿಗೆ ಬೇಕಾದಷ್ಟು ಮಕ್ಕಳು ಹುಟ್ಟಿದವು ಅವರೆಲ್ಲ ದೇವತೆಗಳಾದರು. ದಿತಿಗೂ ಸಂತಾನವಾಯಿತು. ಆ ಮಕ್ಕಳೆಲ್ಲಾ ರಾಕ್ಷಸರಾದರು. ನಂತರ ಆದಿಪರಾಶಕ್ತಿಯು ಅದಿತಿ ಮಕ್ಕಳಾದ ದೇವತೆಗಳ ಅಧಿಕಾರಕ್ಕೆ ಸ್ವರ್ಗವನ್ನು ಕೊಟ್ಟರೇ, ದಿತಿ ಮಕ್ಕಳಾದ ರಾಕ್ಷಸರಿಗೆ ಪಾತಾಳ ಲೋಕವನ್ನು ವಹಿಸಿಕೊಟ್ಟಳು.
ಇದರಿಂದಾಗಿ ‘ಅದಿತಿ’ಯು ಆದಿಪರಾಶಕ್ತಿಯನ್ನು ಶ್ರದ್ಧಾ ಭಕ್ತಿಯಿಂದ ಆರಾಧಿಸಿ
ಪ್ರಾರ್ಥಿಸುತ್ತಿದ್ದಳು. ಆದರೆ ‘ದಿತಿ’ ಆದಿಪರಾಶಕ್ತಿಯ ಮೇಲೆ ಕೋಪ ಬಂದು ಸೇಡು ತೀರಿಸಿಕೊಳ್ಳಲು ಯೋಚನೆ ಮಾಡಿದಳು. ಅವಳು ಪ್ರತಿಕಾರಕ್ಕಾಗಿ ಕಾಯುತ್ತಿದ್ದಳು. ಅದಿತಿಗೆ ಗೊತ್ತಿತ್ತು ತನ್ನ ತಂದೆ ದಕ್ಷ ಪ್ರಜಾಪತಿಗೆ ಈಶ್ವರನನ್ನು ಕಂಡರೆ ಆಗುವುದಿಲ್ಲ ಎಂದು, ಅವಳು ಒಂದು ಉಪಾಯ ಮಾಡಿದಳು ಮತ್ತು ತಂದೆಗೆ ಹೇಳಿದಳು. ನಿಮ್ಮ ತಂದೆ ಬ್ರಹ್ಮದೇವರ ಒಂದು ಶಿರಸ್ಸನ್ನು ಪರಮೇಶ್ವರ ಕಡಿದಾಗ ನೀವು ಏನು ಮಾಡ ಲಿಲ್ಲ. ಈಗ ಆದಿಶಕ್ತಿ ದೇವಿಯನ್ನು ನನಗೆ ಮೊದಲು ಮಕ್ಕಳಾಗಲಿ ಎಂದು ನಾನು ಮೊದಲು ಕೇಳಿದರೆ, ನನಗೆ ರಾಕ್ಷಸ ಮಕ್ಕಳನ್ನು ಕೊಟ್ಟುದಲ್ಲದೆ,ಹಾಗೇ ನನ್ನ ಮಕ್ಕಳಿಗೆ ಪಾತಾಳ ಲೋಕ ಕೊಟ್ಟಿದ್ದಾಳೆ. ಆದರೆ ‘ಅದಿತಿ’ಗೆ ದೈವಶಕ್ತಿಯ ಮಕ್ಕಳನ್ನು ಕೊಟ್ಟು ಅವರಿಗೆಲ್ಲ ಸುಖ ಸಮೃದ್ಧವಾದ ಸ್ವರ್ಗವನ್ನು ಕರುಣಿಸಿದ್ದಾಳೆ. ಇದನ್ನೆಲ್ಲ ಬಿಡಿಸಿ ಬಿಡಿಸಿ ಹೇಳಿ, ನಿಮಗಿಂತ ಪರಮೇಶ್ವರನಿಗೆ ಅಪಾರವಾದ ಶಕ್ತಿ ಇದೆ ಎಂದು ಹೇಳಿ, ದಕ್ಷ ಪ್ರಜಾಪತಿಗೆ ರೋಷವನ್ನು ಉಕ್ಕಿಸಿದಳು.
ಮತ್ತೆ ‘ದಿತಿ’ ತಂದೆಗೆ ಹೇಳಿದಳು. ಶಿವನಿಗೆ ಇಷ್ಟೊಂದು ಅಘಾಧವಾದ ಶಕ್ತಿ ಇರುವುದು ಅವರ ಪತ್ನಿ ಆದಿಪರಾಶಕ್ತಿಯ ದೇವತೆಯ ಶಕ್ತಿಯು ಸೇರಿ ಅಷ್ಟು ಪ್ರಬಲವಾಗಿದೆ. ಶಿವನ ಶಕ್ತಿ ಕಡಿಮೆಯಾಗಬೇಕು ಎಂದರೆ, ಪರಮೇಶ್ವರನಿಂದ ಆದಿಪರಾ ಶಕ್ತಿಯನ್ನು ನೀವು ದೂರ ಮಾಡಬೇಕು. ಆಗ ಶಿವನ ಅರ್ಧ ಶಕ್ತಿ ಕಡಿಮೆಯಾಗುತ್ತದೆ ಎಂದಳು. ಮಗಳ ಮಾತು ಕೇಳಿದ ದಕ್ಷ ಪ್ರಜಾಪತಿಗೆ ಸಂತೋಷವೇ ಆಯಿತು. ಸರಿ ತಪ್ಪುಗಳ ವಿಮರ್ಶೆ ಯನ್ನು ಮಾಡದೆ ನೇರವಾಗಿ ಆದಿಪರಾಶಕ್ತಿ ಕುರಿತು ಪ್ರಾರ್ಥನೆ ಮಾಡಿ ನೀನು ನನ್ನ ಅರಮನೆಯಲ್ಲಿ ನನ್ನ ಮಗಳಾಗಿ ಹುಟ್ಟಬೇಕು ಎಂದು ಭಿಕ್ಷೆಯಾಗಿ ಕೇಳಿದನು. ಹಾಗೇ ಇದರ ಜೊತೆಗೆ, ನಾನು ಇಂಥ ವರವನ್ನು ಕೇಳಿದೆ ಎಂಬ ವಿಚಾರ ಸೃಷ್ಟಿಯಲ್ಲಿರುವ ಯಾರಿಗೂ ತಿಳಿಯಬಾರದು, ಮುಖ್ಯವಾಗಿ ಶಿವನಿಗೂ ಗೊತ್ತಾಗ ಬಾರದೆಂದು ಎಂದು ಹೇಳಿದನು. ಆದಿಪರಾಶಕ್ತಿಯು ದಕ್ಷನ ಬೇಡಿಕೆಯನ್ನು ಮನ್ನಿಸಿ ಅಸ್ತು ಎಂದು ವರ ಕೊಟ್ಟಳು. ದಕ್ಷನಿಗೆ ಹೇಗೆ ಹೇಳಿದಳು, ನನ್ನ ಅಂಶವು ನಿನ್ನ ಅರಮನೆಯಲ್ಲಿ ಮಗಳಾಗಿ ಹುಟ್ಟುತ್ತಾಳೆ. ಆದರೆ ಒಂದು ಷರತ್ತಿದೆ ಮಗಳಾಗಿ ಹುಟ್ಟಿದ ಮೇಲೆ ಅವಳಿಗೆ ಯಾವುದೇ ಕಾರಣಕ್ಕೂ ಅವಮಾನ ಮಾಡಬಾರದು, ಅವಮಾನ, ನಿಂದನೆ ಮಾಡಿದ ಕ್ಷಣದಲ್ಲೇ ಅವಳು ತನ್ನ ದೇಹವನ್ನು ತ್ಯಾಗ ಮಾಡು ತ್ತಾಳೆ ಇದರಿಂದ ಮುಂದೆ ನೀನು ತೊಂದರೆಗೊಳಗಾಗುವೆ ಎಂದಳು. ಈ ಷರತ್ತನ್ನು ದಕ್ಷ ಪ್ರಜಾಪತಿ ಒಪ್ಪಿಕೊಳ್ಳುತ್ತಾನೆ. ಆ ಪ್ರಕಾರ ದಕ್ಷ ಪ್ರಜಾಪತಿಯ ಮಗಳಾಗಿ ಆದಿ ಪರಾಶಕ್ತಿಯ ಅಂಶ ‘ಸತಿ’ ಎನ್ನುವ ಹೆಸರಿನಲ್ಲಿ ಜನಿಸುತ್ತಾಳೆ. ‘ದಿತಿ’ಗೆ ಆದಿಶಕ್ತಿ ಮೇಲೆ ಬಂದ ಕೋಪ, ದಕ್ಷನಿಗೆ ಶಿವನ ಮೇಲಿರುವ ದ್ವೇಷದ ಕಾರಣಗಳು ಸೇರಿ ಆಧಿಪರಾಶಕ್ತಿ ‘ಸತಿ’ ಹೆಸರಿನಲ್ಲಿ ದಕ್ಷನ ಮಗಳಾಗಿ ಜನಿಸಲು ಕಾರಣವಾಗುತ್ತದೆ.
ಏಕ ಶ್ಲೋಕ ದುರ್ಗಾ:-
ಓಂ ದುರ್ಗಾಯೈ ನಮಃ
ಯಾ ಅಂಬಾ ಮಧುಕೈಟಭ ಪ್ರಮಥೀನಿ
ಯಾ ಮಾಹಿತಷೋನ್ಮೊಲನೀ
ರಕ್ತ ಬೀಜಾಶಿನೀ
ಶಕ್ತಿ ಶುಂಭ ನಿಶುಂಭ ದೈತ್ಯದಲಿನೀ
ಯಾ ಸಿದ್ಧಲಕ್ಷ್ಮೀ: ಪರಾ
ಸಾ ದುರ್ಗಾ ನವಕೋಟಿ ವಿಶ್ವಸಹಿತಾ
ಮಾಂ ಪಾತು ವಿಶ್ವೇಶ್ವರೀ !!
ವಂದನೆಗಳೊಂದಿಗೆ,
ಬರಹ:- ಆಶಾ ನಾಗಭೂಷಣ.