ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಗರುಡ ಪುರಾಣ ಮತ್ತು ವಾಮನ ಪುರಾಣ ಏನು ಹೇಳುತ್ತದೆ?

18 ಪುರಾಣಗಳು : ಗರುಡ ಪುರಾಣ ಮತ್ತು ವಾಮನ ಪುರಾಣ ಏನು ಹೇಳುತ್ತದೆ?

ಗರುಡ ಪುರಾಣ
ಗರುಡ ಮಹಾಪುರಾಣವೊಂದು ಸಂಪೂರ್ಣ ವೈಷ್ಣವಪುರಾಣ. ಗರುಡನಿಗಿದನ್ನು ಮೊದಲು ವಿಷ್ಣು ಹೇಳಿದನೆಂದೂ ಆ ಬಳಿಕ ಗರುಡ ಇದನ್ನು ಕಶ್ಯಪಮುನಿಗೆ ಹೇಳಿದನೆಂದೂ ಆದುದರಿಂದ ಇದಕ್ಕೀ ನಾಮಧೇಯ ಬಂದಿತೆಂದೂ ಉಲ್ಲೇಖಿಸಲಾಗಿದೆ. ಸೃಷ್ಟಿಕ್ರಮ, ಯುಗಚಕ್ರ, ವಂಶಾವಳಿ ಮುಂತಾದ ಪೌರಾಣಿಕ ವಿಷಯಗಳೊಟ್ಟಿಗೇ ವಿಷ್ಣುಪೂಜೆ, ವೈಷ್ಣವ ಧರ್ಮಕರ್ಮ, ಪವಿತ್ರಸ್ಥಳ, ಪಂಚಬ್ರಹ್ಮದೇವತಾರ್ಚನೆ ಮುಂತಾದ ವಿಷಯಗಳೂ ಇದರಲ್ಲಿವೆ. ಕೆಲಮಟ್ಟಿಗಿದು ಅಗ್ನಿಪುರಾಣದಂತೆಯೇ ವಿಶ್ವಕೋಶ ಲಕ್ಷಣವುಳ್ಳದ್ದು.
ಇದರಲ್ಲಿ ರಾಮಾಯಣ, ಮಹಾಭಾರತ, ಹರಿವಂಶಗಳ ಕತೆಗಳಲ್ಲದೆ, ಸೃಷ್ಟಿವಿವರಣೆ, ಖಗೋಲವಿಚಾರ, ಜ್ಯೋತಿಶಾಸ್ತ್ರದ ಅಂಶ, ಶಕುನಶಾಸ್ತ್ರ, ಸಾಮುದ್ರಿಕ ಶಾಸ್ತ್ರ, ರತ್ನಪರೀಕ್ಷೆ, ರಾಜನೀತಿ, ಯಾಜ್ಞವಲ್ಕ್ಯ ಸ್ಮೃತಿಗನುಗುಣವಾದ ಧರ್ಮವಿವೇಕ ಮೊದಲಾದ ನಾನಾ ಜ್ಞಾನಾಂಗಗಳು ತುಂಬಿಕೊಂಡಿದೆ. ಈ ಪುರಾಣದ ಉತ್ತರಖಂಡವನ್ನು ಎರಡನೆಯ ಭಾಗ ಅಥವಾ ಪ್ರೇತಕಲ್ಪ ಎನ್ನುತ್ತಾರೆ.
ಪ್ರೇತಕಲ್ಪದಲ್ಲಿ ಸತ್ತಮೇಲೆ ಜೀವಾತ್ಮನಿಗೊದಗುವ ಗತಿ, ಕರ್ಮ,ಪುನರ್ಜನ್ಮ, ಮೋಕ್ಷ, ಸಂಸಾರಬೀಜವಾಗಿರುವ ಆಸೆ, ಮರಣಶಕುನ ಯಮಲೋಕಮಾರ್ಗ, ಪ್ರೇತಗಳ ಗತಿ, ನರಕಹಿಂಸೆ, ಸ್ವಪ್ನ, ಅಪಶಕುನಗಳನ್ನುಂಟು ಮಾಡುವ ಪ್ರೇತಗಳು, ಮರಣಪೂರ್ವದ ಕರ್ಮ, ಸಾಯುತ್ತಿರುವ ಮತ್ತು ಸತ್ತವರ ಬಗ್ಗೆ ಮಾಡತಕ್ಕ ಕರ್ಮ, ಉತ್ತರಕ್ರಿಯೆ, ಪಿತೃಪೂಜೆ, ಸತೀವಿಧಿ, ಗಯಾಮಾಹಾತ್ಮ್ಯ ಇತ್ಯಾದಿ ವಿವಿಧ ವಿಷಯಗಳ ವಿವರಗಳಿವೆ.
ಈ ಪುರಾಣದ ಪ್ರಾಚೀನ ಮೂಲದ ಕಾಲ ಪ್ರ.ಶ. 3-4ನೆಯ ಶತಮಾನವಾಗಿರಬಹುದಾದರೂ ಸದ್ಯದ ರೂಪದ ಅವಧಿ ಕ್ರಿ.ಶ. 10ನೆಯ ಶತಮಾನಕ್ಕಿಂತ ಹಿಂದಿನದಲ್ಲವೆಂದು ತರ್ಕಿಸಲಾಗಿದೆ. ಬ್ರಹ್ಮನ ಬಾಯಿಗಳಿಂದ ಹೊರಬಿದ್ದ ವೇದಗಳಲ್ಲಿ ಹೇಳಿದ ಕರ್ಮಗಳನ್ನು ಮಾಡಲಾರದವ ಸ್ಮೃತಿ ಹೇಳಿದ ಕರ್ಮಗಳನ್ನಾದರೂ ಮಾಡಬೇಕು. ಅದೂ ಆಗದವ ನಡೆದುಬಂದ ಸದಾಚಾರವನ್ನು ಹಿಡಿಯಬೇಕು. ರಾಜನಿಲ್ಲದ ರಾಜ್ಯದಲ್ಲಿ ಇರಬಾರದು. ರಾಜ ವಿಷ್ಣುವಿನ ಮಾನಸಪುತ್ರ. ಆತ ಪ್ರಜೆಗಳನ್ನು ಮಕ್ಕಳಂತೆ ಪಾಲಿಸಬೇಕು.
ಅವನ ಆಳಿಕೆ ಸತ್ಯ, ನ್ಯಾಯಬದ್ಧವಾಗಿರಬೇಕು. ಇಂಥ ಶೀಲವುಳ್ಳ ದೊರೆ ಜಗತ್ತಿಗೆ ಭೂಷಣಪ್ರಾಯ, ದುರ್ಬಲನಿಗಿರುವ ಮಹಾಬಲ-ಎಂದು ಮುಂತಾಗಿ ಗರುಡಮಹಾಪುರಾಣ ಬೋಧಿಸುತ್ತದೆ. ಗರುಡ ಪುರಾಣದ ಸಾರವನ್ನು ಮಿಕ್ಕ ಪುರಾಣಗಳ ಅಂಶದೊಂದಿಗೆ ಸಾರೋದ್ಧಾರ ಎಂಬ ಹೆಸರಿನಲ್ಲಿ ನೌನಿಧಿರಾಮನೆಂಬಾತ ಸಂಗ್ರಹಿಸಿರುವುದಿಲ್ಲಿ ಸ್ಮರಣೀಯ.

  ಸಂತಾನದ ರೂಪದಲ್ಲಿ ಯಾರು ಮರುಜನ್ಮಿಸುತ್ತಾರೆ?

ವಾಮನ ಪುರಾಣ
ವಿಷ್ಣುವಿನ ವಾಮನಾವತಾರ ಇದರ ಆರಂಭ ವಸ್ತು. ಪುರಾಣ ಪಂಚಲಕ್ಷಣಸಂಪನ್ನವಾಗಿಲ್ಲ. ಹಲವಾರು ಅಧ್ಯಾಯಗಳು ವಿಷ್ಣುವಿನ ಅವತಾರಗಳನ್ನು ವಿವರಿಸುತ್ತವೆ. ಒಂದೆಡೆ ಲಿಂಗಪೂಜೆಯೂ ಮತ್ತೊಂದೆಡೆ ಉಮಾಶಿವರ ವಿವಾಹ, ಗಣೇಶ, ಸ್ಕಂದರ ಉತ್ಪತ್ತಿ ಮುಂತಾದ ಸಂಗತಿಗಳೂ ಬಿತ್ತರಿಸಲ್ಪಟ್ಟಿವೆ. ಶ್ಲೋಕಸಂಖ್ಯೆ ಸುಮಾರು 7,000; ಇದರಲ್ಲಿ 10,000 ಶ್ಲೋಕಗಳಿದ್ದುವೆಂದು ಹಳೆಯ ಪ್ರಸಿದ್ಧಿ, ಕಾಲ ಸುಮಾರು 16ನೆಯ ಶತಮಾನ. ಪಂಚಲಕ್ಷಣಗಳಿಂದ ಕೂಡಿದ್ದಾಗಿರಬಹುದಾದ ಇದರ ಪ್ರಾಚೀನ ಮೂಲ ಎಲ್ಲಿಯೂ ಸಿಕ್ಕಿಲ್ಲ. ಉಪಲಬ್ಧ ಪ್ರತಿ ವಿಷ್ಣು ಶಿವರಿಗೆ ಸಮಾನಪ್ರಾಧಾನ್ಯವನ್ನೀಯುತ್ತದೆ.

Leave a Reply

Your email address will not be published. Required fields are marked *

Translate »