ದೀಪಾವಳಿ ‘ಬಲಿಪಾಡ್ಯಮಿ’ ಆಚರಣೆ :-
ಈ ಹಬ್ಬದ ಕುರಿತು ಪೌರಾಣಿಕ ಕಥೆ:- ಪ್ರಹ್ಲಾದನ ಮೊಮ್ಮಗ ಅಸುರ ಕುಲದ ‘ಬಲಿ ಚಕ್ರವರ್ತಿ’ ಮಹಾದಾನಿ, ಒಳ್ಳೆಯ ಆಡಳಿತಗಾರ, ವಿಷ್ಣುವಿನ ಪರಮ ಭಕ್ತ, ಇಷ್ಟೆಲ್ಲ ಇದ್ದು, ಅಧಿಕಾರದ ಪ್ರಾಬಲ್ಯದಿಂದ ಅಹಂಕಾರ ಹೆಚ್ಚಿ,
ದೇವಲೋಕವನ್ನು ತನ್ನವಶ ಮಾಡಿಕೊಳ್ಳಲು ಹೊರಟಿದ್ದ. ದೇವತೆಗಳಿಗೆ ಭಯ ಶುರುವಾಯಿತು. ದೇವತೆಗಳ ಪ್ರಾರ್ಥನೆ ಮೇರೆಗೆ ಕೃಷ್ಣ,ವಾಮನ ರೂಪದಿಂದ ಬಲಿಯನ್ನು ಪಾತಾಳಕ್ಕೆ ತಳ್ಳುವ ಮೊದಲು ಬಲಿಗೆ ಒಂದು ವರವನ್ನು ಕೊಡುತ್ತಾನೆ. ಆ ಪ್ರಕಾರ ಬಲಿ ಪಾಡ್ಯಮಿ ದಿನ ಬಲಿ ಚಕ್ರವರ್ತಿ ಭೂಲೋಕಕ್ಕೆ ಬಂದು ತನ್ನ ಪ್ರಜೆಗಳು ಹೇಗಿದ್ದಾರೆ ಎಂದು ನೋಡಿಕೊಂಡು ಹೋಗಲು ಬರುತ್ತಾನೆ .ಹಾಗೂ ದೇವತೆಗಳ ತಾಯಿ ಅಧಿತಿ ತನ್ನ ಮಕ್ಕಳನ್ನು ಕಾಪಾಡುವಂತೆ ಕಶ್ಯಪರಿಗೆ (ಪತಿಗೆ), ಸ್ವಾಮಿ ನನ್ನ ಮಕ್ಕಳಾದ ದೇವತೆಗಳು ರಾಕ್ಷಸ ರಿಂದಾಗಿ ಕಷ್ಟಕ್ಕೆ ಸಿಲುಕಿದ್ದಾರೆ. ಅಸುರರನ್ನು ಎದುರಿಸು ವಂಥ ಶಕ್ತಿಶಾಲಿಯಾದ ಪುತ್ರ ಸಂತಾನವನ್ನು ಕರುಣಿಸಿ ಎಂದು ಪ್ರಾರ್ಥಿಸಿ ದಳು. ಮಹರ್ಷಿ ಕಶ್ಯಪರು, “ಪಯೋವ್ರತ” ಮಾಡಿ ಭಗವಂತನನ್ನು ಧ್ಯಾನಿಸು ಎಂದು ಅದಿತಿಗೆ ತಿಳಿಸಿದರು. ಅದಿತಿ ವ್ರತ ಮಾಡಿ ಭಗವಂತನನ್ನು ಧ್ಯಾನಿಸಿದಾಗ ಆಕೆಯ ಭಕ್ತಿಗೆ ಮೆಚ್ಚಿ ಭಗವಂತ ಪ್ರತ್ಯಕ್ಷನಾಗಿ, ಕೆಲವು ಕಾಲದಲ್ಲಿಯೇ ನಾನೇ ನಿನ್ನ ಮಗನಾಗಿ ಬರುವೆ. ಈ ವಿಷಯ ಗೌಪ್ಯವಾಗಿರಲಿ ಎಂದು ದೃಶ್ಯನಾದನು.
ಅದಿತಿ ಗರ್ಭ ಧರಿಸಿದಳು. ಶಂಖ – ಚಕ್ರ- ಗದಾಧಾರಿಯಾದ ಭಗವಂತ ಅದಿತಿ -ಕಶ್ಯಪರಿಗೆ ಕಾಣಿಸಿ, ನಂತರ ಮಗುವಾಗಿ ನೋಡು ನೋಡುತ್ತಿದ್ದಂತೆ ಗಿಡ್ಡ -ಬುಡ್ಡ -ಪುಟ್ಟ ಮುದ್ದಾದ ಥಳ ಥಳ ಹೊಳೆಯುವಂತ ಬಾಲಕನಾದ. ಪುಟ್ಟ
ಬಾಲಕನಿಗೆ ಉಪನಯನ ಸಂಸ್ಕಾರ ಕೊಡಲು ದೇವತೆಗಳು ಅಣಿಯಾದರು. ಆತನಿಗೆ ಕಮಂಡಲ, ಕೋಲು, ಛತ್ರಿ, ಕೊಟ್ಟರು ಅರಿಶಿನ ಕಚ್ಚೆ ಪಂಚೆ ಉಡಿಸಿ, ಉತ್ತರೀಯ ಹಾಕಿದರು. ‘ಗಾಯತ್ರಿ ಉಪದೇಶ’ ಆಗಿ ವಾಮನ ವಟುವಾದ. ನೇರವಾಗಿ ಬಲಿಚಕ್ರವರ್ತಿ ನಡೆಸುತ್ತಿದ್ದ ಅಶ್ವಮೇಧ ಯಾಗದ ವಾಟಿಕೆಗೆ ಆಹ್ವಾನವಿಲ್ಲದೆ ಬಂದನು.
ಅಗ್ನಿ ಸೂರ್ಯರಂಥ ತೇಜಸ್ವಿ ಬಾಲಕನನ್ನು ಕಂಡು ಎಲ್ಲರೂ ಬೆರಗಾದರು. ‘ಬಲಿ’ ತಾನೇ ಎದ್ದು ಬಂದು ಬಾಲಕನಿಗೆ ಆದರಾಥಿತ್ಯ ಮಾಡಿ ಸತ್ಕರಿಸಿ ಕೇಳಿದನು ವಟುವಾಗಿ ಬಂದ ನಿಮಗೆ ಏನು ಬೇಕು ಎಂದು ಕೇಳಿದಾಗ, ನನಗೆ ಹೆಜ್ಜೆನು ಬೇಡ ಮೂರು ಹೆಜ್ಜೆ ಜಾಗ ಕೊಟ್ಟರೆ ಸಾಕು ಎಂದನು. ಬಲಿ ಹೇಳಿದ. ಮೂರು ಹೆಜ್ಜೆ ಇಷ್ಟೆ ಸಾಕೆ? ಏನು ಕೇಳಿದರು ನಾನು ಕೊಡುವೆ. ನಾನು ಕೊಡುವ ದಾನ ತೆಗೆದುಕೊಂಡವರು ಮತ್ತೆಂದೂ ಯಾರನ್ನು ಕೇಳುವುದಿಲ್ಲ. ಅಂಥ ದಾನ ಕೊಡುವೆ ಬೇಕಾದ್ದು ಕೇಳು ಎಂದ. ವಾಮನ ಮೂರ್ತಿ ಹೇಳಿದ. ನಿಮ್ಮ ವಂಶದವರೆಲ್ಲ ಕೊಡುಗೈ ದಾನಿಗಳು. ಎಷ್ಟು ಕೇಳಿದರು ಕೊಡುತ್ತಾರೆ ಎಂದ ಮಾತ್ರಕ್ಕೆ ಯದ್ವಾ ತದ್ವಾ ತೆಗೆದುಕೊಳ್ಳಬಾರದು ಹಾಗೆ ತೆಗೆದುಕೊಂಡರೆ ಅದು ವಿಷವಾಗುತ್ತದೆ ಎಂದನು.
ಆ ಮೂರು ಹೆಜ್ಜೆ ತಾನ ಕೊಡಲು ಸಂಕಲ್ಪ ಮಾಡಿ ಅರ್ಘ್ಯ ನೀರನ್ನು ಕೆಳಗೆ ಹಾಕಲು ಹೊರಟಾಗ ಅಸುರ ಗುರುಗಳಾದ ಶುಕ್ಲಾಚಾರ್ಯರು, ಬಲಿ ಇವನಿಗೆ ದಾನ ಕೊಡಬೇಡ ಇವನು ಸಾಮಾನ್ಯ ವಟು ವಲ್ಲ ನಿನಗೆ ಮೋಸ ಮಾಡಲು ಭಗವಂತನೇ ಬಂದಿದ್ದಾನೆ. ಎಂದು ಎಷ್ಟೇ ಹೇಳಿದರೂ, ‘ಬಲಿ’ ನಾನು ಮಾತು ಕೊಟ್ಟಾಗಿದೆ ಕೊಟ್ಟ ಮಾತನ್ನು ಹಿಂಪಡೆಯುವುದಿಲ್ಲ ಕೇಳಿದ್ದನ್ನು ಕೊಡುವೆ ಎಂದು ಹೇಳಿದಾಗ, ಕೋಪಗೊಂಡ ಶುಕ್ಲಾ ಚಾರ್ಯರು ನನ್ನ ಮಾತು ಧಿಕ್ಕರಿಸಿ ನೀನು ದಾನ ಕೊಡುವೆಯಾ? ಕೇಳು ನೀನು ಸರ್ವಸ್ವವನ್ನು ಕಳೆದುಕೊಂಡು
“ಅದ: ಪತನ” ವಾಗು ಎಂದು ಶಾಪ ಕೊಟ್ಟರು. ಆದರೆ ಈ ಮಾತನ್ನು ಕೇಳಿ ಬಲಿ ಹೆದರದೆ ಭಗವಂತ ನನ್ನನ್ನು ನಾಶ ಮಾಡುವುದಾದರೆ ಅದೂ ಆಗಲಿ
ಎಂದು ದಾನ ಕೊಡಲು ಸಿದ್ದನಾದ.
ವಾಮನ ಅವತಾರಿ ಭಗವಂತ, ಹೆಜ್ಜೆಯನ್ನು ಹಿಗ್ಗಿಸಿ ಬೆಳೆಯುತ್ತಾ ಬೆಳೆಯುತ್ತಾ ಭೂಮ್ಯಾಕಾಶವನ್ನು ಒಂದಾಗುವಂತೆ ವಿರಾಟ್ ರೂಪ ತಾಳಿ ಬೆಳೆದು ಎರಡು ಹೆಜ್ಜೆ ಅಳೆದ. ಮೂರನೇ ಹೆಜ್ಜೆ ಎಲ್ಲಿಡಲಿ ಎಂದು ಬಲಿಯನ್ನು ಕೇಳಿದಾಗ, ನನ್ನ ತಲೆಯ ಮೇಲೆ ಎಂದನು. ಭಗವಂತ ಹೇಳಿದ ನಿನ್ನ ಭಕ್ತಿಗೆ ಮೆಚ್ಚಿರುವೆ. ಈಗ ನಾನು ದೇವತೆಗಳಿಗೆ ಕೊಟ್ಟ ಮಾತಿನಂತೆ ಹಾಗೂ ಗುರುಗಳು ನಿನಗೆ ಕೊಟ್ಟ ಶಾಪ ಫಲಿಸುವಂತೆ ಅದಕ್ ಪತನವಾಗಿ ಪಾತಾಳ ಲೋಕಕ್ಕೆ ಹೋಗು. ಸೂತಣ್ಣ ಲೋಕದ ಅಧಿಪತಿಯಾಗಿರು. ಮುಂದಿನ ಮನ್ಮಂತರದಲ್ಲಿ ನೀನು ಇಂದ್ರನಾಗುವೆ ಎಂದು ವರವನ್ನು ಕೊಟ್ಟನು. ಮತ್ತು ಈ ದಿನ ನೀನು ಕೊಟ್ಟ ದಾನದಿಂದ ಪ್ರಸಿದ್ಧಿಯಾಗಿ ಭೂಲೋಕದಲ್ಲಿ ಈ ದಿನವನ್ನು ಗೋವುಗಳ ಆರಾಧನೆ ಜೊತೆ “ಬಲಿಪಾಡ್ಯಮಿ” ಎಂದು ನಿನ್ನ ಹೆಸರಿನಿಂದ ಹಬ್ಬ ಆಚರಿಸುತ್ತಾರೆ.
ಹಾಗೆ ಅವನ ಭಕ್ತಿಗೆ ಮೆಚ್ಚಿ ಭಗವಂತನು ಸುತಳ ದಲ್ಲಿ ಬಲಿಯ ಮನೆಯ ದ್ವಾರಪಾಲಕನಾಗಿ ಕಾಯುತ್ತಿದ್ದನು.
“ಬಲಿ” ಯೇಂದ್ರನ ಪೂಜೆ:- ದೀಪಾವಳಿ ಹಬ್ಬದಲ್ಲಿ ದೇವ ದಾನವರ ಪೂಜೆ
ಮಾಡುತ್ತಾರೆ. ದಾನವರ ಶ್ರೇಷ್ಠ ರಾಜ ‘ಬಲಿ’ ಈತ ಪರಮ ವಿಷ್ಣು ಭಕ್ತ ಮಹಾದಾನಿ ಬಲಿಷ್ಠ ಇಂಥ ಒಳ್ಳೆ ಗುಣದೊಂದಿಗೆ ಬಹಳ ಅಹಂಕಾರಿಯಾಗಿ
ದೇವಲೋಕವನ್ನು ತನ್ನ ಅಧಿಪತ್ಯದಲ್ಲಿ ಇಟ್ಟುಕೊಳ್ಳಲು ಯುದ್ಧಕ್ಕೆ ಹೋಗಲಿದ್ದ ಬಲಿಷ್ಠಕೊಟ್ಟಿಗೆ ಒಂದು ಬದಿಯಲ್ಲಿ ಸಗಣಿ ಒಟ್ಟು ಮಾಡಿ ಗುಡ್ಡೆ ಹಾಕಿದ “ಗೋಪುರವೇ” ‘ಬಲಿ’ ಯೇಂದ್ರ ಅಥವಾ ಗೋವರ್ಧನ ಬೆಟ್ಟ
ಎನ್ನುತ್ತಾರೆ. (ಈಗೆಲ್ಲ ಸಗಣಿ ಬದಲಿಗೆ ರಂಗೋಲಿಯಿಂದ ಬಲಿ ಮತ್ತು ಅವನ ಪತ್ನಿ ವಿಂದ್ಯಾವಳಿಯ ಚಿತ್ರ ಬರೆದು ಬಣ್ಣಗಳನ್ನು ತುಂಬುತ್ತಾರೆ) ಇದಕ್ಕೆ ಗಂಧ, ಅಕ್ಷತೆ, ಅರಿಶಿನ- ಕುಂಕುಮ, ಹೂವು, ಸಿಂಗಾರ ಚೆಂಡು ಹೂವುಗಳನ್ನು ಏರಿಸಿ, ಧೂಪ, ದೀಪ ಗಳಿಂದ, ಶಾಸ್ತ್ರೋಕ್ತ ಪೂಜೆ ಮಾಡಿ, ಮಂಗಳಾರತಿ ನೈವೇದ್ಯ ಮಾಡುತ್ತಾರೆ. ಮನೆಯವರೆಲ್ಲಾ ಸೇರುತ್ತಾರೆ. ಕೃಷ್ಣನಿಗೆ ಸಮರ್ಪಿತ ವಾದ ಗೋ ಪೂಜೆ, ಮಾಡಿ ಅಕ್ಕಿ ಬೆಲ್ಲ, ಬಾಳೆಹಣ್ಣು ಗೋವುಗಳಿಗೆ ತಿನ್ನಲು ಕೊಡುತ್ತಾರೆ. ಅವುಗಳ ಕೊರಳಿಗೆ, ಪತ್ರ ಪುಷ್ಪ ಮಾಲೆ, ಹಣ್ಣಡಿಕೆ ಸರ, ಉಗ್ಗಣ್ಣೆ ಕಾಯಿಸರ, ಚೆಂಡ್ಹೂವಿನ ಹಾರ ಹಾಕಿ ಅಲಂಕರಿಸುತ್ತಾರೆ (ಈ ದಿನ ಚೆಂಡು ಹೂವು ವಿಶೇಷ) ಕರುಗಳಿಗೆ ಉಗ್ಗಣ್ಣೆ ಕಾಯಿ ಪೋಣಿಸಿದ ಗೆಜ್ಜೆ ಕಾಲಿಗೆ ಕಟ್ಟಿದಾಗ ಹಾರಿ ಹಾರಿ ಕುಣಿಯುತ್ತವೆ.
ಗೋವುಗಳ ಪೂಜೆ ಮಾಡಿ ಮೇವು ಕೊಟ್ಟು ಹಸುಗಳನ್ನು ಕೊಟ್ಟಿಗೆಯಿಂದ ಹೊರಗೆ ಬಿಡುವಾಗ ಜಾಗಂಟೆ ಹೊಡೆದು ಮನೆ ಬಾಗಿಲಿಂದ ಒಂದಷ್ಟು ದೂರ ಓಡಿಸುತ್ತಾರೆ. ಅದೇ ಸಮಯಕ್ಕೆ ಎಲ್ಲರ ಮನೆಯ ಪೂಜೆ ಮುಗಿದು ಹಸುಗಳ ನ್ನು ಹೊರಗೆ ಬಿಡುತ್ತಾರೆ. ಓಡುವ ಹಸುಗಳ ಹಿಂದೆ ಓಡಿ ಅವುಗಳ ಕುತ್ತಿಗೆಯ ಪುಷ್ಪ ಅಥವಾ ಪತ್ರ ಮಾಲೆ ತಂದರೆ, (ಬೇರೆ ಮನೆ ಹಸುಗಳದ್ದು), ಪ್ರಸಾದ.
ಮೇಯ್ದ ಹಸುಗಳ ಸಂಜೆ ಬರುವಾಗ ಒಂದಾದರು ಹಸು ಕುತ್ತಿಗೆಯಲ್ಲಿ ಹಾರ (ಒಣಗಿದ್ದರೂ ಸರಿ) ಉಳಿಸಿಕೊಂಡು ಬಂದರೆ, ಲಕ್ಷ್ಮಿ ಮನೆಗೆ ಬಂದಂತೆ ಎಂದು ಆ ಹಸುವಿನ ಕಾಲು ತೊಳೆದು ಕದಲಾರತಿ ಮಾಡಿ, ಹಣ್ಣು ಕೊಟ್ಟು ಕೊಟ್ಟಿಗೆಗೆ ಕಟ್ಟುತ್ತಾರೆ. ನಂತರ ಎಲ್ಲಾ ಹಸುಗಳಿಗೂ ಕುಡಿ ಬಾಳಿ ಎಲೆ ತುಂಬ ಹುಗ್ಗಿ, ಪಾಯಸ ಹೋಳಿಗೆ, ಹಣ್ಣು ಕಡಬು ತಿನ್ನಲು ಕೊಡುತ್ತಾರೆ. ದೀಪ ಹಚ್ಚುವ ಸಮಯಕ್ಕೆ ಹಣತೆ ದೀಪಗಳನ್ನು ದೇವರ ಹೊಸಿಲಿನಿಂದ ಹಿಡಿದು, ಮುಂದಿನ ಜಗಲಿಯ ಎರಡು ಕಡೆ, ಬೇಲಿ ಗೂಟಗಳು ಮತ್ತು ಕಾಂಪೌಂಡ್ ಗಳ ಮೇಲೆ ಹಣತೆ ದೀಪ ಸಾಲು ಸಾಲು ಇದ್ದು . ಹಿತ್ತಲ ತನಕ ಹಣತೆ ದೀಪಗಳು.
ರಾತ್ರಿ ಮಲಗುವ ಮುನ್ನ, ದೊಡ್ಡವರು ಕೊಟ್ಟಿಗೆಗೆ ಹೋಗಿ ಹಸು ಗಳಿಗೆ ದೃಷ್ಟಿ ತೆಗೆದು, ಸೌತೆಕಾಯಿ ನಿವಾಳಿಸಿ, ಅವುಗಳ ಮೈ ಕೈ ಸವರಿ ಮುದ್ದಿಸಿ ,ಮಾತನಾಡಿಸಿ, ಮೇವು ಹಾಕುತ್ತಾರೆ. ಗೋಮಾತೆ ತಾಯಿ ನೀನು ಚೆನ್ನಾಗಿದ್ದು , ನಮ್ಮನ್ನು ಕಾಪಾಡು ತಾಯಿ ಎಂದು ಹೃದಯ ತುಂಬಿ ಬಂದಂತೆ ಹೇಳುತ್ತಾರೆ. ಅಲ್ಲೇ ಇದ್ದವರಿಗೂ ಕಣ್ಣಲ್ಲಿ ನೀರು ಬರುತ್ತದೆ.
ದೀವಟಿಕೆ ಕೋಲು:- ಬಿದಿರು ಸೀಳಿದ ದಬ್ಬೆಗಳಿಗೆ ಎಣ್ಣೆಯಲ್ಲಿ ಅದ್ದಿದ ಬಟ್ಟೆ ಸುತ್ತಿ, (ಇದನ್ನು ಗಂಡಸರು ಮಾಡುತ್ತಾರೆ) ಎಣ್ಣೆ ಬತ್ತಿ ಕೋಲನ್ನು ದೇವರ ದೀಪದಿಂದ ಹಚ್ಚಿ ದೇವರಿಗೆ ತೋರಿಸಿ, ‘ದೀಪ್ ದೀಪ್ಹೋಳ್ಗೆ, ಹಬ್ಬಕ್ಕೊಂದ್ಹೋ ಳ್ಗೆ’ ಎಂದಾಗ ಮಕ್ಕಳೂ ಧ್ವನಿ ಯೇರಿಸಿ ಹೇಳುತ್ತಾ, ಮನೆಯ ರಸ್ತೆ ಬದಿಗೆ ದೀಪದ ಎರಡೆರಡು ಕೋಲು, ಗೊಬ್ಬರ ಗುಂಡಿ, ಅಶ್ವತ್ ಕಟ್ಟೆ, ಹಿತ್ತಲ ಕೊನೆಗೆ ದೀಪದ ಕೋಲು ನೆಡುತ್ತಾರೆ. ಇಲ್ಲಿಗೆ ದೀಪಾವಳಿ ಹಬ್ಬ ಸಂಪನ್ನವಾದಂತೆ.
ಐದಾರು ದಿನಗಳ ಹಬ್ಬದಲ್ಲಿ, ಸಿಹಿ ಊಟ, ಹಾಸ್ಯ- ಹರಟೆ ಇದ್ದು ರಾತ್ರಿ ಪಗಡೆ ಆಟ, (ಇದನ್ನು ಈಶ್ವರ ಪಾರ್ವತಿ ದೀಪಾವಳಿ ದಿನ ಆಡಿದ್ದರಂತೆ) ಆಡುತ್ತಾರೆ. ಹಿಂದೆಲ್ಲ ರಾಜ ಮತ್ತು ಪ್ರಜೆ ಗಳು ಹಗ್ಗ ಜಗ್ಗಾಟ ಆಟ ಆಡುತ್ತಿದ್ದರು. ಪ್ರಜೆಗಳು ಗೆದ್ದರೆ ರಾಜನಿಗೆ ಕ್ಷೇಮ ಎಂದು, ಏಕೆಂದರೆ ರಾಜ ಕ್ಷೇಮವಾಗಿದ್ದರೆ ಪ್ರಜೆಗಳಿಗೆ ಒಳ್ಳೆಯದು ಎಂಬ ಅಭಿಪ್ರಾಯವಿದೆ.
ತಿರುಪತಿಯಲ್ಲೂ ಇಂಥ ವಿಶೇಷವಿದೆ. ಯೋಗ, ಭೋಗ, ಶ್ರೀನಿವಾಸರಂತೆ, ‘ದರ್ಬಾರ್’ ಶ್ರೀನಿವಾಸನಿದ್ದಾನೆ. ಪ್ರತಿದಿನ ರಾತ್ರಿ ದರ್ಬಾರ್ ನಲ್ಲಿ ಬಂಗಾರದ ಜೈನಿನ ಉಯ್ಯಾಲೆ ಮೇಲೆ ಶ್ರೀನಿವಾಸನನ್ನು ದಿವಾನರಂತೆ ( ಕಾಲ ಮೇಲೆ ಕಾಲು ಹಾಕಿ) ಕೂರಿಸಿ ದರ್ಬಾರ್ ಶ್ರೀನಿವಾಸ ಎಂದೇ ಕರೆಯುತ್ತಾರೆ. ಕೋಶಾಧಿಕಾರಿ ಬಂದು ದೇವಾಲಯದ ಹಿಂದಿನ ದಿನ ಬಂದ ಆದಾಯದ ಲೆಕ್ಕದ ವರದಿ ಒಪ್ಪಿಸಬೇಕು. ಅಂದರೆ ಪ್ರಸಾದದಿಂದ ಬಂದ ಲಾಭ, ಹುಂಡಿ- ಹರಕೆ ಕಾಣಿಕೆ, ಎಲ್ಲ ಆದಾಯವನ್ನು ಶ್ರೀನಿವಾಸನ ಮುಂದೆ ಓದಿ ವರದಿ ಒಪ್ಪಿಸುತ್ತಾರೆ. ಒಪ್ಪಿಸಿದ ಮೇಲೆ ಶ್ರೀನಿವಾಸ 16 ಮುಡಿ ಅಕ್ಕಿ ಯನ್ನು ಬ್ರಾಹ್ಮಣನಿಗೆ ಕೊಡುತ್ತಾನೆ. ಅದನ್ನು ತೆಗೆದು ಕೊಂಡ ಬ್ರಾಹ್ಮಣ ‘ಶ್ರೀನಿವಾಸ ನಿಗೆ ‘ನಿತ್ಯೈಶ್ವರ್ಯೊಭವ’ ಅಂತ ಆಶೀರ್ವಾದ ಮಾಡುತ್ತಾರೆ. ಆ ಅಕ್ಕಿಗೆ ಬೆಲ್ಲ ಹಾಕಿ ಸಿಹಿ ತಿನಿಸನ್ನು ಮಾಡಿ ಶ್ರೀನಿವಾಸನಿಗೆ ಕೊಡುತ್ತಾರೆ. ಇದು ಹಿಂದಿನಿಂದ ಬಂದ ಪದ್ಧತಿಯಾಗಿದೆ. ಶ್ರೀನಿವಾಸಗೆ “ಸಕಲೈಶ್ವರ್ಯ” ಬಂದರೆ ಜಗತ್ತಿನ ಸಂರಕ್ಷಣೆಯನ್ನು ಚೆನ್ನಾಗಿ ನಡೆಸುತ್ತಾನೆ ಎಂಬ ಅರ್ಥ.
ಉತ್ತರ ಭಾರತದ ಕಡೆ “ಯಮ ದೀಪ” ಎಂದು ಹಚ್ಚುತ್ತಾರೆ. (ಯಮ ಮತ್ತು ಯಮುನಾ ಅಣ್ಣ ತಂಗಿ) ಅಕ್ಕ ತಮ್ಮ ಅಣ್ಣ ತಂಗಿಯರ ಹಬ್ಬ ಅಣ್ಣ ತಂಗಿ ಮನೆಗೆ ಉಡುಗರೆಯೊಂದಿಗೆ ಬರುತ್ತಾನೆ. ತಂಗಿ ಸಿಹಿ ಊಟ ಹಾಕಿ ಸಂತೋಷದಿಂದ ಕಳಿಸುತ್ತಾಳೆ. ಈಗ ನಮ್ಮ ದಕ್ಷಿಣ ಭಾರತದಲ್ಲೂ “ಯಮ ದೀಪ” ಮತ್ತು “ಧನ ತ್ರಯೋಧಶಿ” ಹಬ್ಬ ಚಾಲ್ತಿಗೆ ಬಂದಿದೆ. ದೇಶದ ಎಲ್ಲಾ ಭಾಗದಲ್ಲೂ ದೀಪಾವಳಿ ಹಬ್ಬವನ್ನು ಅವರವರ ಮನೆಗಳಲ್ಲಿ ನಡೆದು ಬಂದ
ಪದ್ಧತಿಯಂತೆ, ಸಂಭ್ರಮದಿಂದ ಆಚರಿಸುತ್ತಾರೆ.
ಎಲ್ಲರೂ “ಬೆಳಕಿನ ದೀಪಾವಳಿ” ಸಂಭ್ರಮದಿಂದ ಆಚರಿಸಿ, ಸಿಹಿಯಾದ ಹೋಳಿಗೆ- ಪಾಯಸ ಊಟ ಮಾಡಿ ಸಂತೋಷದಿಂದಿರಿ.
” ದೀಪ ದೀಪೋಳ್ಗೆ ಹಬ್ಬಕ್ಕೊಂದು ಹೋಳ್ಗೆ “
ಶ್ರೀ ವೆಂಕಟೇಶಮತಿಸುಂದರ ಮೋಹನಾಂಗಂ
ಶ್ರೀ ಭೂಮಿಕಾಂತಮರವಿಂದದಲಾಯತಾಕ್ಷಮ್ !
ಪ್ರಾಣಪ್ರಿಯಂ ಪರಮಕಾರುಣಿಕಾಂಬುರಾಶಿಂ
ಬ್ರಹ್ಮೇಶ ವಂದ್ಯಮಮೃತಂ ವರದಂ ನಮಾಮಿ !!
ಪೀತಾಂಬರಧರೋ ದೇವೋ
ಗರುಡಾರೂಢಶೋಭಿತ:
ವಿಶ್ವಾತ್ಮ ವಿಶ್ವಲೋಕೇಶ ವಿಜಯೋ ವೆಂಕಟೇಶ್ವರ!!
ವಂದನೆಗಳೊಂದಿಗೆ,
ಬರಹ:- ಆಶಾ ನಾಗಭೂಷಣ




