ಒಂದು ದಿನ ಮಧ್ಯರಾತ್ರಿಯ ಸಮಯ. ಮಹಾರಾಣಿ ಮತ್ತು ಚಕ್ರವರ್ತಿ ಇಬ್ಬರೂ ಅಂತ:ಪುರದಲ್ಲಿ ಮಲಗಿಕೊಂಡೇ ರಾಜಕುಮಾರಿಯ ವಿವಾಹದ ಬಗ್ಗೆ ಮಾತಾಡುತ್ತಿದ್ದರು.
ಅದೇ ಸಮಯದಲ್ಲಿ ಒಬ್ಬ ಕಳ್ಳನು ಕಳ್ಳತನ ಮಾಡಲು ಅರಮನೆಯನ್ನು ಪ್ರವೇಶಿಸಿದನು.
ಮಹಾರಾಣಿ – ‘ಮಹಾರಾಜ!! ನಮ್ಮ ಮಗಳು ಮದುವೆಯ ವಯಸ್ಸಿಗೆ ಬಂದಿದ್ದಾಳೆಂಬುದು ನಿಮಗೆ ಮರೆತು ಹೋಗಿದೆಯೇ’ ?
ರಾಜ – ‘ಪ್ರಿಯೆ! ನೆನಪಿದೆ. ಎಲ್ಲವೂ ಕಾಲ ಕೂಡಿ ಬಂದಾಗ ಆಗುತ್ತದೆ. ಈಗೇಕೆ ಆ ಯೋಚನೆ ?’
ಮಹಾರಾಣಿ – ‘ಎಲ್ಲವೂ ಕಾಲ ಕೂಡಿ ಬಂದಾಗ ಆಗುತ್ತದೆ ಎಂದು ಸುಮ್ಮನಿರಲಾದೀತೇ ? ಬೇಗನೇ ಯೋಗ್ಯ ವರನನ್ನು ಹುಡುಕಬೇಕಲ್ಲವೇ ?’
ರಾಜ – ‘ನಮ್ಮ ಮಗಳು ಸುಂದರವಾಗಿದ್ದಾಳೆ. ಅವಳಿಗೆ ವರನನ್ನು ಹುಡುಕುವುದು ಕಷ್ಟವೇನಲ್ಲ!!’
ರಾಣಿ – ‘ಏನು,ಅಷ್ಟೊಂದು ಸುಲಭವೇ ? ಅವಳಿಗೆ ಯೋಗ್ಯನಾದ ವರನನ್ನು ಎಲ್ಲಿ ಹುಡುಕುವಿರಿ ?’
ರಾಜ- ‘ಪಟ್ಟಣದ ಹತ್ತಿರ ಒಂದು ಆಶ್ರಮವಿದೆಯಲ್ಲವೇ ? ಅಲ್ಲಿ ಅನೇಕ ಋಷಿಕುಮಾರರು ಅಧ್ಯಯನ ಮಾಡುತ್ತಿದ್ದಾರೆ. ಅವರೆಲ್ಲರೂ ವಿದ್ಯಾವಂತರೂ, ಬುದ್ಧಿವಂತರೂ, ಸಭ್ಯರೂ ಮತ್ತು ವೀರರೂ ಆಗಿದ್ದಾರೆ. ಅವರಲ್ಲೇ ಒಬ್ಬನನ್ನು ಆರಿಸಿ ಮಗಳಿಗೆ ವಿವಾಹ ಮಾಡೋಣ.’
ರಾಣಿ – ‘ಅಷ್ಟೊಂದು ಉತ್ತಮ ವರರಿದ್ದರೆ, ನಾನೂ ಸಹ ಅವರನ್ನು ನೋಡಬೇಕು. ಯಾವಾಗ ಹೋಗೋಣ ?’
ರಾಜ – ‘ಈಗ ಸದ್ಯ ನನಗೆ ಬಹು ಮುಖ್ಯವಾದ ರಾಜಕಾರ್ಯಗಳಿವೆ. ಸ್ವಲ್ಪ ತಿಂಗಳ ನಂತರ ಹೋಗೋಣ.
ಅರಮನೆಗೆ ಕದಿಯಲು ಬಂದ ಕಳ್ಳನು ಈ ಎಲ್ಲಾ ಸಂಭಾಷಣೆಯನ್ನು ಕೇಳಿಸಿಕೊಂಡನು. ಅವನು ಹೀಗೆ ಯೋಚಿಸಿದನು – ನಾನು ಈಗ ಕಳ್ಳತನ ಮಾಡಿದರೆ ಸ್ವಲ್ಪ ಮಾತ್ರ ಲಾಭ ಸಿಗುವುದು! ಋಷಿಯ ಆಶ್ರಮಕ್ಕೆ ಸೇರಿಕೊಂಡು ಋಷಿಕುಮಾರನಂತೆ ನಡೆದುಕೊಂಡರೆ, ರಾಜನು ನನ್ನನ್ನು ನೋಡಿ ತನ್ನ ಮಗಳಿಗೆ ಇವನೇ ವರನಾಗಲಿ ಎಂದು ಒಪ್ಪಿಕೊಳ್ಳುವನು!! ಆಗ ನನಗೆ ಈ ರಾಜ್ಯವೇ ಸಿಗುವುದು!!!:
ಹೀಗೆ ಯೋಚಿಸಿದ ಆ ಕಳ್ಳನು ಮರುದಿನವೇ ಆಶ್ರಮಕ್ಕೆ ಸೇರಿಕೊಂಡು ಋುಷಿಕುಮಾರರ ಜೊತೆ ಕೂಡಿಕೊಂಡನು. ಅವರಂತೆಯೇ ವೇಷಧರಿಸಿ, ಆಶ್ರಮದ ಆಚಾರ-ವಿಚಾರಗಳೆಲ್ಲವನ್ನೂ ಕಲಿತುಕೊಂಡನು.
ಪ್ರತಿದಿನ ಆಶ್ರಮದ ಪಾಠ-ಪ್ರವಚನಗಳಲ್ಲಿ ಉತ್ಸಾಹ, ಪ್ರೀತಿ, ಶ್ರದ್ಧೆಯಿಂದ ಭಾಗವಹಿಸುತ್ತಿದ್ದನು.
ಎಲ್ಲಾ ಋಷಿಕುಮಾರರಂತೆ ಪ್ರಾತ:ಕಾಲದಲ್ಲಿಯೇ ಎದ್ದು, ನದಿಯಲ್ಲಿ ಸ್ನಾನಮಾಡಿ ಪೂಜೆ, ವೇದಾಧ್ಯಯನಗಳಲ್ಲಿ ನಿರತನಾದನು.
ಹೀಗೆ ಕೆಲವು ದಿನಗಳು ಕಳೆಯುತ್ತಿರಲು, ಆ ಕಳ್ಳನ ಮನಸ್ಸಿಗೆ ಆಶ್ರಮದ ಜೀವನವೇ ಹಿತವೆನಿಸತೊಡಗಿತು.
ಒಂದು ದಿನ ಮಹಾರಾಜನು ತನ್ನ ಪತ್ನಿಯೊಡನೆ ಆಶ್ರಮಕ್ಕೆ ಬಂದನು. ಅಲ್ಲಿರುವ ಋಷಿಕುಮಾರರನ್ನೆಲ್ಲಾ ನೋಡಿದನು. ಈ ಕಳ್ಳನನ್ನೇ ತನ್ನ ಮಗಳಿಗೆ ಯೋಗ್ಯ ವರನೆಂದು ನಿಶ್ಚಯಿಸಿ, ಕಳ್ಳನ ಹತ್ತಿರ ಬಂದು ಪ್ರಾರ್ಥಿಸಿದನು.
ಪೂಜ್ಯರೇ!! ನನ್ನ ಮಗಳ ಕೈ ಹಿಡಿದು ತಮ್ಮ ಪತ್ನಿಯಾಗಿ ಸ್ವೀಕರಿಸಿ!! ಎಂದು.
ಆಗ ಕಳ್ಳನು – “ರಾಜಕುಮಾರಿಯನ್ನು ಮದುವೆಯಾಗಲೆಂದೇ ನಾನು ಇಷ್ಟೆಲ್ಲಾ ಪ್ರಯತ್ನವನ್ನು ಮಾಡಿದೆ. ಇಷ್ಟು ದಿನ ಈ ಆಶ್ರಮದಲ್ಲಿದ್ದುಕೊಂಡು ಋಷಿಗಳಂತೆ ಸಾತ್ವಿಕ ಜೀವನ ಮಾಡಿದೆ. ಋಷಿಕುಮಾರರ ಸಹವಾಸದಿಂದ ನಾನು ವಿವೇಕವನ್ನು ಪಡೆದುಕೊಂಡೆ. ನನಗೆ ಈಗ ಈ ಜೀವನವೇ ಇಷ್ಟವಾಗಿದೆ. ಅರಮನೆಯ ಭೋಗ ಜೀವನದಲ್ಲಿ, ಸುಖ-ಸಂಪತ್ತಿನಲ್ಲಿ ನನಗೆ ಯಾವುದೇ ಆಸೆ-ಅಪೇಕ್ಷೆಗಳಿಲ್ಲ” ಎಂದು ಹೇಳಿದನು.
ಹೀಗೆ ಋಷಿಕುಮಾರರ ಸಹವಾಸದಿಂದ ಕಳ್ಳನೂ ಸಹ ವಿವೇಕಿಯೂ, ಜ್ಞಾನಿಯೂ ಆದನು.
ಸಹವಾಸದಿಂದಲೇ ಮನುಷ್ಯನಿಗೆ ಅಧಮ, ಮಧ್ಯಮ ಮತ್ತು ಉತ್ತಮ ಗುಣಗಳು ಪ್ರಾಪ್ತವಾಗುತ್ತವೆ.
ಭರ್ತೃಹರಿ ಎಂಬ ಕವಿಯು ರಚಿಸಿದ ನೀತಿಶತಕದ ಸುಭಾಷಿತ –
ಸಂತಪ್ತಾಯಸಿ ಸಂಸ್ಥಿತಸ್ಯ ಪಯಸೋ ನಾಮಾಪಿ ನ ಜ್ಞಾಯತೇ
ಮುಕ್ತಾಕಾರತಯಾ ತದೇವ ನಳಿನೀಪತ್ರಸ್ಥಿತಂ ರಾಜತೇ l
ಸ್ವಾತ್ಯಾಂ ಸಾಗರಶುಕ್ತಿಸಂಪುಟಗತಂ ತನ್ಮೌಕ್ತಿಕಂ ಜಾಯತೇ
ಪ್ರಾಯೇಣಾಧಮಮಧ್ಯಮೋತ್ತಮಗುಣಃ ಸಂಸರ್ಗತೋ ಜಾಯತೇ ll
ಅರ್ಥ –
ಚೆನ್ನಾಗಿ ಕಾದ ಕಬ್ಬಿಣದ ಮೇಲಿರುವ ನೀರಿನ ಹನಿಯ ಹೆಸರೂ ತಿಳಿಯದಂತೆ ನಾಶವಾಗುತ್ತದೆ.
ಅದೇ ನೀರಿನ ಹನಿಯು ತಾವರೆ ಎಲೆಯ ಮೇಲೆ ಇದ್ದಾಗ ಮುತ್ತಿನಂತೆ ಹೊಳೆಯುತ್ತದೆ. ಅದೇ ನೀರಿನ ಹನಿಯು ಸ್ವಾತೀ ಮಳೆಯಲ್ಲಿ ಸಮುದ್ರದಲ್ಲಿರುವ ಕಪ್ಪೆ ಚಿಪ್ಪಿನೊಳಗೆ ಬಿದ್ದದ್ದೇ ಆದರೆ ಮುತ್ತೇ ಆಗುತ್ತದೆ. ಆದುದರಿಂದ ಪ್ರಾಯಶಃ ಅಧಮ, ಮಧ್ಯಮ, ಉತ್ತಮಗುಣವು ಸಹವಾಸದಿಂದ ಉಂಟಾಗುತ್ತದೆ..ಸಂಗವಾಗಲಿ ಸಾಧು ಸಂಗವಾಗಲಿ. ಸಂಗದಿಂದ ಲಿಂಗ ದೇಹ ಭಂಗವಾಗಲಿ.