ನಿನಗೆ ನೀ ಬೆಳಕಾಗು.
ಒಂದು ಸಲ ಗೌತಮ ಬುಧ್ಧರು ,ಒಂದು ಊರಿನ ಮೂಲಕ ಹಾದು ಹೋಗುತ್ತಿದ್ದರು. ರಸ್ತೆಯ ಬದಿಯಲ್ಲಿ ಒಂದು ಹಳೆಯ ಪೆಟ್ಟಿಗೆಯ ಮೇಲೆ ಒಬ್ಬ ಭಿಕ್ಷುಕ ಕುಳಿತು ಭಿಕ್ಷೆ ಬೇಡುತ್ತಿದ್ದ. ಆತ ಬುದ್ಧರ ಮುಂದೆ ಭಿಕ್ಷೆಗಾಗಿ ಕೈ ಚಾಚಿದೆ. ಅವನಿಗೆ ಭಿಕ್ಷೆ ನೀಡಲು ಬುದ್ಧರ ಬಳಿ ಏನೂ ಇರಲಿಲ್ಲ. ಆದರೆ ಅವರಿಗೆ ಭಿಕ್ಷುಕ ಕುಳಿತಿದ್ದ ಪೆಟ್ಟಿಗೆಯ ಮೇಲೆ ಕುತೂಹಲ ಉಂಟಾಯಿತು. ಈ ಪೆಟ್ಟಿಗೆಯಲ್ಲಿ ಏನಿದೆ ? ಎಂದು ಭಿಕ್ಷುಕನನ್ನು ಪ್ರಶ್ನಿಸಿದರು.
ಆತ, ಇದು ಬಹಳ ಹಳೇ ಕಾಲದ ಪೆಟ್ಟಿಗೆ, ಇದರಲ್ಲಿ ಏನಿರಲು ಸಾಧ್ಯ? ಕೂರಲು ಆರಾಮದಾಯಕವಾಗಿದೆ ಎಂದು ಅದನ್ನು ಇಂದಿನವರೆಗೂ ಇಟ್ಟುಕೊಂಡಿದ್ದೇನೆ, ಎಂದು ಉದಾಸೀನದಿಂದ ಉತ್ತರಿಸಿದ.
ನೀನು ಎಷ್ಟು ಕಾಲದಿಂದ ಈ ಪೆಟ್ಟಿಗೆ ಮೇಲೆ, ಕುಳಿತು ಭಿಕ್ಷೆ ಬೇಡುತ್ತಿರುವೆ? ಎಂದು ಬುದ್ಧ ಪ್ರಶ್ನಿಸಿದರು.
ಸುಮಾರು ಮೂವತ್ತು ವರ್ಷಗಳಿಂದ ನಾನು ಇದರ ಮೇಲೇ ಕುಳಿತು ಭಿಕ್ಷೆ ಬೇಡುತ್ತಿದ್ದೇನೆ, ಎಂದ ಭಿಕ್ಷುಕ.
ಒಮ್ಮೆ ಅದರೊಳಗೆ ಏನಿದೆ ಎಂದು ಬೀಗ ಒಡೆದು ನೋಡು, ಎಂದರು ಬುದ್ಧ.
ಅಯ್ಯೋ ಬಿಡಿ, ಸ್ವಾಮಿ, ಅದರಲ್ಲೇನಿದ್ದೀತು ? ಎಂದು ನಿರ್ಲಕ್ಷದಿಂದ ಉತ್ತರ ಕೊಟ್ಟ ಆತ.
ಹೇಗಾದರೂ ಆಗಲಿ ,ಒಮ್ಮೆ ಅದನ್ನು ಒಡೆದು ನೋಡು, ಎಂದು ಬುದ್ಧ ಒತ್ತಾಯಿಸಿದರು.
ಅವರ ಒತ್ತಾಯದ ಮೇರೆಗೆ ಭಿಕ್ಷುಕ ಒಂದು ಕಲ್ಲಿನಿಂದ ಕುಟ್ಟಿ ತುಕ್ಕು ಹಿಡಿದಿದ್ದ ಪೆಟ್ಟಿಗೆಯ ಬೀಗವನ್ನು ಒಡೆದ.
ನೋಡಿದರೆ, ಪೆಟ್ಟಿಗೆಯ ತುಂಬಾ ಚಿನ್ನದ ನಾಣ್ಯಗಳು! ಅವನಿಗೆ ಆಶ್ಚರ್ಯವಾಯಿತು.ಆತ ಇಂಥಹಾ ಅಪಾರ ಸಂಪತ್ತಿನ ಮೇಲೇ ಕುಳಿತು, ಮೂವತ್ತು ವರ್ಷಗಳಿಂದ, ದಟ್ಟ ದರಿದ್ರನಂತೆ, ಎಲ್ಲರ ಬಳಿ ಭಿಕ್ಷೆ ಬೇಡುತ್ತಿದ್ದಾನೆ!
ನಮ್ಮ ಬದುಕು ಕೂಡಾ ಹೀಗೆ ಅಲ್ಲವೇ? ಎಲ್ಲವೂ ನಮ್ಮಲ್ಲೇ ಇದ್ದರೂ, ನಮ್ಮ ಒಳಗಿರುವ ಅಂತರಂಗದ ಐಶ್ವರ್ಯವನ್ನು ನಾವು ಕಣ್ಣು ತೆರೆದು ನೋಡುವುದೇ ಇಲ್ಲ, ಅದು ನಮ್ಮೊಳಗೇ ಇದ್ದರೂ ಅದನ್ನು ಗುರುತಿಸಿ ಪಡೆದುಕೊಳ್ಳಲು , ಪ್ರಯತ್ನಿಸದೇ , ಬಾಹ್ಯ ಸಂಪತ್ತನ್ನೇ ನಂಬಿ,ಅದಕ್ಕಾಗಿ, ಬಾಯಿ ಬಿಟ್ಟುಕೊಂಡು, ಎಲ್ಲರೂ ಭಿಕ್ಷುಕರಂತೆ, ಕೈ ಚಾಚುತ್ತೇವೆ.
ನಾವು ನಮ್ಮೊಳಗಿರುವ , ಅಂತರಾಳದ ಅರಿವಿನ ಬೆಳಕನ್ನು ಹುಡುಕುವ ಪ್ರಯತ್ನವನ್ನೇ ಮಾಡುವುದಿಲ್ಲ. ನಮ್ಮನ್ನು ನಾವು ಕಂಡುಕೊಳ್ಳುವುದಿಲ್ಲ.
ಬುದ್ಧರ, ಕೊನೆಯ ಸಂದೇಶವೂ ಇದೇ ಆಗಿತ್ತು. ಅವರು ನಿರ್ವಾಣ ಸ್ಥಿತಿಯಲ್ಲಿದ್ದಾಗ, ಅವರ ಶಿಷ್ಯ ಆನಂದ, ಈ ಜಗತ್ತಿಗೆ ನಿನ್ನ ಕೊನೆಯ ಸಂದೇಶವೇನು? ಎಂದು ಕೇಳಿದಾಗ, ಬುದ್ಧರು, ಹೇಳಿದ್ದು "ನಿನಗೆ ನೀನು ಬೆಳಕಾಗು" ಎಂಬುದಾಗಿತ್ತು.
ಕೃಪೆ:ಸುವರ್ಣಾ ಮೂರ್ತಿ.
ಸಂಗ್ರಹ:ವೀರೇಶ್ ಅರಸೀಕೆರೆ.