“ಭೋಕ್ತಾ”…ಎಂದರೆ, ಭಕ್ತಿಯಿಂದ ಅರ್ಪಿಸಿದ್ದನ್ನು ಅಮೃತದಂತೆ ಭಗವಂತನು ಸ್ವೀಕರಿಸುತ್ತಾನೆ ಎಂದರ್ಥ.
ಭುಜಿಸುವವನು, ತಿನ್ನುವವನು, ಅನುಭವಿಸುವವನು ಎನ್ನುವುದು ಇದರ ಸಾಮಾನ್ಯ ಅರ್ಥ. ಭಗವಂತನು ಹೇಗೆ ಭೋಕ್ತಾ ಆಗುತ್ತಾನೆ ಎಂದೆನಿಸಬಹುದು. ಸ್ಥೂಲವಾದ ಆಹಾರವೇ ಮೊದಲಾದುವು ಶರೀರ ಪೋಷಣೆಗಾದರೆ ಅದರ ಸೂಕ್ಷ್ಮ ರೂಪವು ಮನಸ್ಸಿನ ಮೇಲಾಗುತ್ತದೆ, ಎನ್ನುವುದನ್ನು ಭೋಜನ ಎನ್ನುವ ಪದದಲ್ಲಿ ಹಿಂದೆ ನೋಡಿದ್ದೇವೆ. ನಾವು ಬಳಸುವ ಆಹಾರವನ್ನೇ ದೇವರಿಗೂ ನೈವೇದ್ಯ ಮಾಡುತ್ತೇವೆ. ಇಲ್ಲಿ ಮನಸ್ಸಿನಿಂದ ನಿವೇದಿಸಿದ ವಸ್ತುವೇ ನೈವೇದ್ಯ ಎನ್ನುವುದು ಮುಖ್ಯ. ಅದಕ್ಕೇ "ಭೋಕ್ತಾ ಅರ್ಪಿತಸ್ಯ, ಭಕ್ತೈರರ್ಪಿತಂ ಅಮೃತಮಿವ ಭುಂಕ್ತೇ" ಎಂದರೆ, ಭಕ್ತಿಯಿಂದ ಅರ್ಪಿಸಿದ್ದನ್ನು ಅಮೃತದಂತೆ ಭಗವಂತನು ಸ್ವೀಕರಿಸುತ್ತಾನೆ ಎಂದರ್ಥ. ನಾವು ನಿವೇದನೆ ಮಾಡಿಕೊಂಡದ್ದು ನೈವೇದ್ಯ; ಅದರ ಮೇಲೆ ಬೀಳುವ ಭಗವಂತನ ದೃಷ್ಟಿಯಿಂದ ಅದು ಪ್ರಸಾದವಾಗುತ್ತದೆ. ಇಲ್ಲಿನ ಎರಡು ಕ್ರಿಯೆಗಳೂ ಮನಸ್ಸಿಗೆ ಸಂಬಂಧ ಪಟ್ಟಿರುವುದಾಗಿದೆ. "ಪತ್ರೆ, ಪುಷ್ಪ, ಫಲ, ಅಥವಾ ಒಂದು ಉದ್ಧರಣೆ ನೀರನ್ನು ಭಕ್ತಿಯಿಂದ ಅರ್ಪಿಸಿದರೂ ನಾನು ಸ್ವೀಕರಿಸುತ್ತೇನೆ" ಎಂದು ಗೀತೆಯಲ್ಲಿ ಭಗವಂತನು ಹೇಳಿದ್ದಾನೆ. ಹೀಗೆ ಮಾನಸಿಕವಾದ ಭಕ್ತಿಯಿಂದ ಅರ್ಪಿಸಿದ್ದನ್ನು ಅವನು ಮಾನಸಿಕವಾಗಿಯೇ ಸ್ವೀಕರಿಸುವುದರಿಂದ ಅವನು "ಭೋಕ್ತಾ" ಎನಿಸಿಕೊಂಡಿದ್ದಾನೆ. ಪರಮಾತ್ಮನ ಅಂಶವಾದ ಈ ಆತ್ಮವೂ ಹಾಗೆಯೇ ಶುದ್ಧ ಭಾವದಿಂದ ಸ್ವೀಕರಿಸಿದಾಗ ಜ್ಞಾನ ಪ್ರಾಪ್ತಿಗೆ ಮಾರ್ಗವಾಗುತ್ತದೆ. ಈ ಭಾವದಿಂದ ಊಟ ಮಾಡುವುದು ಹೇಗೆಂದು ಈಗ ನೋಡೋಣ!
ಭೋಜನ ಮಾಡಲು, ನೀಡುವವರು ಮತ್ತು ಭುಜಿಸುವವರು, ಹೀಗೆ ಇಬ್ಬರಿರಲೇ ಬೇಕು. ನೀಡುವವನು ಭಗವಂತನಾದರೆ ಸಕಲ ಜೀವರಾಶಿಗಳೂ ಭುಜಿಸುತ್ತವೆ. ಇಬ್ಬರ ಮನಸ್ತತ್ವವೂ ಒಂದಾದರೆ ಮಾತ್ರ ಭೋಜನ ಸಾರ್ಥಕ. ಹಾಗೆಯೇ ಜೀವಿ ಜೀವಿಗಳ ಮಧ್ಯದಲ್ಲೂ ಈ ತತ್ವವಿರಲೇಬೇಕು. ಹೆಂಡತಿಯು ಗಂಡನಿಗೆ ಬಡಿಸುವಾಗ ಅದು ಕೇವಲ ಶರೀರ ಪೋಷಣೆಗೆ ಮಾತ್ರವಲ್ಲದೆ, ‘ಈ ಆಹಾರವು ಆತನ ಆತ್ಮಕ್ಕೆ ನೈವೇದ್ಯವಾಗಲಿ’ ಎಂಬ ಭಾವದಿಂದ ಬಡಿಸಬೇಕು. ಆಗ ಮಾತ್ರ ಅದು ಜ್ಞಾನದಾಯಕ ಅನ್ನವಾಗುತ್ತದೆ. ಗಂಡನು ದುಡಿದು ಸಂಪಾದನೆಯನ್ನು ತಂದು ‘ಇದು ಭಗವಂತನು ಕೊಟ್ಟ ಶಕ್ತಿಯಿಂದ, ಧರ್ಮಬದ್ಧ ಕರ್ತವ್ಯಕ್ಕಾಗಿ ದುಡಿದ ಸಂಪಾದನೆ’ ಎಂಬ ಭಾವದಿಂದ ಹೆಂಡತಿಯ ಕೈಗಿಡಬೇಕು. ಆಗ ಇಬ್ಬರಲ್ಲೂ ಮೂಡುವ ಒಮ್ಮನದಿಂದ ಸ್ಥೂಲ ಹಾಗೂ ಸೂಕ್ಷ್ಮ ಬದುಕು ನಮ್ಮನ್ನು ಪರದ ಕಡೆಗೂ ಮುಖ ಮಾಡಿಸುತ್ತದೆ. ಆಹಾರವು ಆತ್ಮಕ್ಕೆ ನೈವೇದ್ಯವೆಂದು ಬಿಡಿಸಿದಾಗ ಅದು ಆತ್ಮನ ಮೂಲವಾದ ಪರಮಾತ್ಮನಿಗೆ ಅರ್ಪಿತವಾಗುತ್ತದೆ. ಆಗ ‘ಭಕ್ತೈರರ್ಪಿತಂ ಅಮೃತಮಿವ ಭುಂಕ್ತೇ’ ಎನ್ನುವ ಮಾತು ಸಮಂಜಸವಾಗುವುದಲ್ಲದೆ, ಅವನ ಕೃಪೆಯಿಂದ ಅದು ನಮ್ಮ ಪಾಲಿನ ಅಮೃತವಾಗುತ್ತದೆ. ಇದೇ ಭೋಜನ ಮತ್ತು ಭೋಕ್ತೃಗಳ ಮಧ್ಯದ ಸಂಬಂಧ. ಜೀವ ಮತ್ತು ಈಶ್ವರ ಬೇಧದಲ್ಲಿರುವ ತಾರತಮ್ಯ ಸಂಬಂಧ.