ಅಜ್ಜಿಕಾನು ಶ್ರೀರಾಜರಾಜೇಶ್ವರಿ ದೇವಸ್ಥಾನ
ನಮ್ಮೂರು ಕಮಲಶಿಲೆಯ ಸನಿಹವೇ ಮತ್ತೊಂದು ಶಕ್ತಿದೇವತೆಯ ಸನ್ನಿಧಿ ಇದೆ. ಪ್ರಕೃತಿಯ ಮಡಿಲಲ್ಲೇ ಎದ್ದು ನಿಂತಿರುವ ಶಿಲಾಮಯ ಗುಡಿಯೊಳಗೆ ದೇವಿ ರಾಜರಾಜೇಶ್ವರಿ ಯ ರೂಪದಲ್ಲಿ ನೆಲೆಸಿದ್ದಾಳೆ. ಈ ದೇವಿಗೆ ವೃದ್ಧಿಕಾಪರಮೇಶ್ವರಿ ಎಂದೂ ಇಲ್ಲಿನ ಜನರು ಕರೆಯುತ್ತಾರೆ. ಚಂದದ ಹಸಿರು ಹೊದ್ದ ಪ್ರಶಾಂತ ಊರಿನಲ್ಲಿ ಸುತ್ತುಪೌಳಿ, ಯಾಗಶಾಲೆ, ಹೆಬ್ಬಾಗಿಲು ಮತ್ತು ವಿಭಿನ್ನವಾದ ಹೆಂಚಿನ ಮಾಡು ಈ ದೇಗುಲದ ಜೀರ್ಣೋದ್ಧಾರದ ನಂತರ ಹೊಸದಾಗಿ ಸೇರ್ಪಡೆಯಾಗಿವೆ.
ಶುಕ್ರವಾರ, ಶ್ರಾವಣ ಮಾಸ, ಸೋಣೆ ತಿಂಗಳು, ಸಂಕ್ರಾಂತಿಯ ದಿನಗಳಂದು ವಿಶೇಷ ಪೂಜೆ ಇರುತ್ತದೆ. ನವರಾತ್ರಿಯ ಒಂಬತ್ತು ದಿನಗಳ ಕಾಲ ಚಂಡಿಕಾಹೋಮ, ಅನ್ನಸಂತರ್ಪಣೆ ಊರ ಪರೂರ ಭಕ್ತರ ಸಹಕಾರದಿಂದ ನೆರವೇರುತ್ತಾ ಬಂದಿದೆ.
ನನಗೆ ದೊಡ್ಡ ದೊಡ್ಡ ಪ್ರಸಿದ್ಧಿ ಪಡೆದ ದೇವಸ್ಥಾನಗಳಿಗೆ ಹೋಗುವುದೆಂದರೆ ಖುಷಿ. ಆದರೆ ಈ ಹೆಸರುವಾಸಿ ದೇಗುಲಗಳಲ್ಲಿ ಸೇವೆ ,ಹರಕೆ ಸಲ್ಲಿಸಲು ಮನಸ್ಸೇ ಆಗುವುದಿಲ್ಲ. ಹೀಗೆ ಪ್ರಕೃತಿಯ ನಡುವೆ ತಣ್ಣಗೆ ನೆಲೆನಿಂತು ಭಕ್ತರನ್ನು ಪೊರೆವ ಪುಟ್ಟ ಪುಟ್ಟ ದೇಗುಲಗಳಿಗಲ್ಲಿ ಹರಕೆ ಸಲ್ಲಿಸುವುದು ತುಂಬಾ ಇಷ್ಟ. ಪ್ರತಿವರ್ಷ ನವರಾತ್ರಿಯಲ್ಲಿ ಒಂದು ದಿನ ಈ ಅಜ್ಜಿಕಾನು ದೇಗುಲಕ್ಕೆ ಹೋಗಿ ಹರಕೆ ಸಲ್ಲಿಸಿ ಬಂದರೆ ಮನಸಿಗೆ ಸಮಾಧಾನ.
ಪರವೂರಿನಿಂದ ಕಮಲಶಿಲೆಗೆ ಬರುವ ಭಕ್ತರು ಅಲ್ಲಿಂದ ನಾಲ್ಕಾರು ಕಿಲೋಮೀಟರ್ ದೂರದಲ್ಲಿ ಕಾಡಿನ ನಡುವೆ ಶಾಂತ ಚಿತ್ತಳಾಗಿ ರಾರಾಜಿಸಿರುವ ರಾಜರಾಜೇಶ್ವರಿ ದೇಗುಲಕ್ಕೆ ಖಂಡಿತ ಹೋಗಿ ಬನ್ನಿ. ರಾಜರಾಜೇಶ್ವರಿಯ ಕೃಪೆಗೆ ಪಾತ್ರರಾಗಲು ಮರೆಯಬೇಡಿ. ದೇಗುಲದವರೆಗೂ ರಸ್ತೆ ಸಂಪರ್ಕವಿದೆ. ಅರ್ಚಕರು ಇರುತ್ತಾರೆ. ನೀರವ ಮೌನದಲ್ಲಿಯೇ ಶಕ್ತಿ ಹೆಚ್ಚು ಎಂಬುದು ನಿಮಗಲ್ಲಿ ಹೋದಾಗ ಅರಿವಾಗುತ್ತದೆ. ಭಕ್ತಿರಸದಲ್ಲಿ ಮಿಂದೆದ್ದಭಾವ ಖಂಡಿತ ನಿಮ್ಮ ಅರಿವಿಗೆ ಬರುತ್ತದೆ.
ಮತ್ತೇಕೆ ತಡ ಹೆಸರಾಂತ ದೇಗುಲಗಳ ಜೊತೆಗೆ ಈ ಹಳ್ಳಿಗಾಡಿನ ದೇಗುಲಕ್ಕೂ ಸದ್ಭಕ್ತರಾದ ನಾವೆಲ್ಲ ಹೋಗಿಬಂದು ಕೈಲಾದ ಕಾಣಿಕೆ, ಹರಕೆ ಸಲ್ಲಿಸಿ ಬಂದರಷ್ಟೇ ಈ ದೇಗುಲಗಳೆಲ್ಲ ಜೀವಂತವಾಗಿದ್ದು ಊರು ಸುಭಿಕ್ಷವಾಗಿರಲು ಸಾಧ್ಯ ಹೌದಲ್ಲವೇ?
— ಅಭಿ