ಒಂದು ದೊಡ್ಡ ಇಲಿ ಮರದ ಪೊಟರೆಯಲ್ಲಿ ವಾಸವಾಗಿತ್ತು. ಅದರ ಹಲ್ಲುಗಳಿಗೆ ತುಂಬಾ ಶಕ್ತಿ, ಹೊಟ್ಟೆ ಹಸಿದಾಗಲೆಲ್ಲ ಮರದ ಕಾಂಡವನ್ನು ಕೊರೆದು ಹೊಟ್ಟೆತುಂಬಾ ತಿನ್ನುತ್ತಿತ್ತು. ಒಂದಲ್ಲ ಒಂದು ದಿವಸ ಈ ಮರವನ್ನೇ ಕಡಿದುರುಳಿಸುವ ಶಕ್ತಿ ತನ್ನದೆಂಬ ಆತ್ಮವಿಶ್ವಾಸದಿಂದ ಬದುಕುತ್ತಿತ್ತು. ಒಮ್ಮೆ ಒಂ hnದು ಬೆಕ್ಕು ಇಲಿಯನ್ನು ನೋಡಿ ಅಟ್ಟಿಸಿಕೊಂಡು ಬಂತು. ಇಲಿ ಜೀವಭಯದಿಂದ ಓಡಿತು. ಬೆಕ್ಕಿಗೆ ಹೆದರಿ ಓಡುವ ಬದಲು ನಾನೇ ಬೆಕ್ಕಾಗಬಾರದಿತ್ತೇ ಎಂದುಕೊಂಡಿತು. ಮರುಕ್ಷಣವೇ ಇಲಿ ಬೆಕ್ಕಾಗಿತ್ತು. ಬೆಕ್ಕು ಠೀವಿಯಿಂದ ಇಲಿಗಳನ್ನು ಹುಡುಕಿಕೊಂಡು ಹೋಗುತ್ತಿರುವಾಗ ಅಲ್ಲಿಗೆ ನಾಯಿಯೊಂದು ಬಂದಿತು.
ನಾಯಿಯನ್ನು ಕಂಡ ಬೆಕ್ಕು ತನ್ನ ಠೀವಿಯನ್ನೆಲ್ಲ ಬಿಟ್ಟು ಜೀವಭಯದಿಂದ ಓಡಿತು. ಆಗ ದೇವರನ್ನು ಕುರಿತು ನಾಯಿಗೆ ಹೆದರಿ ಓಡುವ ಬದಲು ನಾನೇ ನಾಯಿಯಾಗಬಾರದೇ ಎಂದು ಪ್ರಾರ್ಥಿಸಿದ ತಕ್ಷಣ ಭಯಂಕರವಾಗಿ ಬೊಗಳುವ ನಾಯಿಯಾಗಿ ಮಾರ್ಪಾಡಾಗಿತ್ತು. ಈಗ ನಾಯಿಗೆ ಶ್ವಾನ ಗಾಂಭೀರ್ಯ. ಅಷ್ಟರಲ್ಲಿ ಕಾಡಿನೊಳಗಿಂದ ಒಂದು ಕ್ರೂರ ಹುಲಿ ಇದನ್ನಟ್ಟಿಸಿಕೊಂಡು ಬಂತು. ಆಗ ನಾಯಿ ನಾನು ಹುಲಿಯಾಗಿದ್ದಿದ್ದರೆ ಕಾಡಿನ ರಾಜನಂತೆ ಸುತ್ತಬಹುದಿತ್ತು ಎಂದುಕೊಳ್ಳುವಷ್ಟರಲ್ಲೇ ಕ್ರೂರ ಹುಲಿಯಾಗಿ ಮಾರ್ಪಟ್ಟಿತ್ತು. ಈ ಕಾಡಿಗೆ ನಾನೇ ರಾಜ ಎಂದು ಹೆಮ್ಮೆಯಿಂದ ಹುಲಿ ಬೇಟೆಯನ್ನು ಅರಸುತ್ತಾ ಬರುತ್ತಿರುವಾಗ ದೂರದಲ್ಲಿ ಬೇಟೆಗಾರನೊಬ್ಬ ಕಾಣಿಸಿಕೊಂಡ.
ಬೇಟೆಗಾರನಿಗಿಂತ ಇದು ಬಲಶಾಲಿಯಾದರೂ ಅವನ ಬುದ್ಧಿವಂತಿಕೆಗೆ, ಅವನ ಕೈಯಲ್ಲಿನ ಕೋವಿಗೆ ಹುಲಿ ಹೆದರುತ್ತಿತ್ತು. ಆಗ ಹುಲಿ ತನ್ನನ್ನು ಬೇಟೆಗಾರನನ್ನಾಗಿಸುವಂತೆ ಪ್ರಾರ್ಥಿಸಿತು. ತಕ್ಷಣ ಅದು ಬೇಟೆಗಾರನಾಗಿ ಮಾರ್ಪಾಡು ಹೊಂದಿತು. ಆತ ಕಾಡಿನಲ್ಲಿ ಎಷ್ಟು ಸುತ್ತಿದರೂ ಒಂದೂ ಸರಿಯಾದ ಬೇಟೆ ಸಿಗಲಿಲ್ಲ, ಹೊಟ್ಟೆ ಹಸಿವು, ತುಂಬಾ ಬಳಲಿಕೆ. ಅಲ್ಲಿಯೇ ಇದ್ದ ದೊಡ್ಡ ಮರವೊಂದರ ಕೆಳಗೆ ಸ್ವಲ್ಪ ವಿಶ್ರಾಂತಿ ಪಡೆಯೋಣವೆಂದು ಒರಗಿಕೊಂಡ. ಬೇರುಗಳಿಂದ ನೀರನ್ನು ಹೀರಿಕೊಂಡು, ಎಲೆಗಳಿಂದ ಆಹಾರ ತಯಾರು ಮಾಡಿಕೊಂಡು, ವಿಶಾಲವಾದ ಸ್ಥಳವನ್ನು ಆಕ್ರಮಿಸಿಕೊಂಡು ಮರ ನಿರಾತಂಕವಾಗಿದೆ. ನಾನು ಮರವಾಗಿದ್ದರೆ ಚೆನ್ನಾಗಿತ್ತೆಂದು ಅವನಿಗನಿಸಿತು. ತಕ್ಷಣ ಆತ ವಿಶಾಲವಾದ ಮರವಾಗಿ ಪರಿವರ್ತನೆಗೊಂಡಿದ್ದ.
ಇನ್ನು ನನ್ನ ಜನ್ಮ ಸಾರ್ಥಕವಾಯಿತು. ನನಗಿನ್ನಾವ ತೊಂದರೆ ತಾಪತ್ರಯಗಳು ಇಲ್ಲ. ಆರಾಮವಾಗಿರಬಹುದು ಎಂದು ಭಾವಿಸಿ ಸ್ವಲ್ಪ ವಿಶ್ರಾಂತಿ ಪಡೆಯುವಷ್ಟರಲ್ಲಿ ಏನೋ ಕಟಕಟ ಶಬ್ದ ಕೇಳಿಸಿತು. ಬಗ್ಗಿ ನೋಡಿದರೆ ತನ್ನದೇ ಪೊಟರೆಯಲ್ಲಿ ವಾಸವಾಗಿರುವ ಇಲಿ ತನ್ನ ಬೇರುಗಳನ್ನು ಕಡಿಯುತ್ತಿತ್ತು. ಹೀಗೆಯೇ ಕಡಿಸಿಕೊಳ್ಳುತ್ತಾ ಹೋದರೆ ಒಂದು ದಿನ ತಾನು ಧರೆಗೆ ಉರುಳಬೇಕಾದೀತು. ಇಲಿಯದ್ದೇ ಸಾರ್ಥಕ ಜನ್ಮ ಎಂದು ಮರ ಕೊರಗುತ್ತಿತ್ತು. ಅಷ್ಟರಲ್ಲಿ ಕನಸು ಕಾಣುತ್ತಿದ್ದ ಇಲಿಗೆ ಎಚ್ಚರವಾಯಿತು. ತನ್ನ ಜನ್ಮ ಕಡಿಮೆಯದ್ದೇನಲ್ಲ ಎಂಬ ಅರಿವು ಅದಕ್ಕಾಯಿತು.
ನಮಗೆಲ್ಲರಿಗೂ ಬದುಕಿನಲ್ಲಿ ಒಂದಲ್ಲ ಒಂದು ಸಾರಿ ಮತ್ತೊಬ್ಬರ ಬದುಕು, ಮತ್ತೊಬ್ಬರ ವೃತ್ತಿ ನಿರಾತಂಕವಾದದ್ದೆಂದು ಅನಿಸುತ್ತದೆ. ನಮ್ಮ ಬದುಕನ್ನು, ನಮ್ಮ ವೃತ್ತಿಯನ್ನು ನಾವೇ ಹೀಗಳೆದುಕೊಳ್ಳುತ್ತೇವೆ. ಆದರೆ ಪ್ರತಿಯೊಂದು ಬದುಕಿಗೂ, ಪ್ರತಿಯೊಂದು ವೃತ್ತಿಗೂ, ಅದರದೇ ಆದ ವೃತ್ತಿಸಂಬಂಧಿತ ಅಪಾಯಗಳು, ತೊಂದರೆ ತಾಪತ್ರಯಗಳು ಇದ್ದೇ ಇರುತ್ತವೆ. ಇದನ್ನು ಅರ್ಥಮಾಡಿಕೊಂಡು ನಾವು ಮಾಡುವ ಕೆಲಸವನ್ನು ಶ್ರದ್ಧೆಯಿಂದ, ಹೆಮ್ಮೆಯಿಂದ, ಮಾಡುವುದಾದರೆ ನಮ್ಮದು ಇಲಿ ವೃತ್ತಿ ಆದರೇನಂತೆ, ಬೃಹದಾಕಾರದ ಮರವನ್ನು ಧರೆಗುರುಳಿಸುವ ಶಕ್ತಿ ನಮ್ಮಲ್ಲಡಗಿದೆ! ಅಲ್ಲವೇ?