ಹಿಂದೆ ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಒಂದು ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿ, ತಕ್ಷಶಿಲೆಯಲ್ಲಿ ಶಿಕ್ಷಣ ಪಡೆದು ಋಷ ಪ್ರವ್ರಜ್ಯ ಪಡೆದು ಹಿಮಾಲಯದಲ್ಲಿ ಐದುನೂರು ಋಷಿಗಳಿಗೆ ನಾಯಕನಾಗಿದ್ದ. ಒಂದು ಬಾರಿ ಅವರೆಲ್ಲರೊಡನೆ ವಾರಾಣಸಿಗೆ ಬಂದು ರಾಜನ ಉದ್ಯಾನದಲ್ಲಿ ಉಳಿದಿದ್ದ. ಈ ಋಷಿಗಳ ಸದಾಚಾರದಿಂದ ಇಂದ್ರಭವನ ಅಲುಗಾಡಿತಂತೆ. ಇವರ ನೆಲೆ ತಪ್ಪಿಸಲು ಶಕ್ರ ವಾರಾಣಸಿಗೆ ಬಂದು ಮಧ್ಯರಾತ್ರಿ ಅರಮನೆಯನ್ನು ಪ್ರವೇಶಿಸಿ ಮಲಗಿದ್ದ ರಾಣಿಗೆ ಉಪದೇಶ ಮಾಡಿದ, ‘ಅರಮನೆಯ ಉದ್ಯಾನದಲ್ಲಿಯ ಮಧ್ಯಂತರ ಮಾವಿನಹಣ್ಣನ್ನು ತಿಂದರೆ ನಿನಗೆ ಚಕ್ರವರ್ತಿಯಾಗುವ ಮಗನಾಗುತ್ತಾನೆ. ನಾಳೆಯೇ ಆ ಹಣ್ಣನ್ನು ತರಿಸಿ ತಿನ್ನು’. ತನ್ನ ಮಾಯೆಯಿಂದ ಉದ್ಯಾನದಲ್ಲಿಯ ಎಲ್ಲ ಮಾವಿನಹಣ್ಣುಗಳು ಮಾಯವಾಗುವಂತೆ ಮಾಡಿದ. ಮರುದಿನ ರಾಣಿ ಮಧ್ಯಂತರ ಮಾವಿನಹಣ್ಣಿಗೆ ಹಟ ಹಿಡಿದಳು. ರಾಜನ ದೂತರು ಉದ್ಯಾನದಲ್ಲೆಲ್ಲ ಸುತ್ತಾಡಿ ಒಂದು ಹಣ್ಣು ಇಲ್ಲವೆಂದು ವರದಿ ಮಾಡಿದರು. ಹಣ್ಣುಗಳನ್ನು ಯಾರು ತಿನ್ನುತ್ತಾರೆ ಎಂದು ಕೇಳಿದಾಗ ಋಷಿಗಳು ಎಂಬ ಉತ್ತರ ಬಂದಿತು. ತಕ್ಷಣ ರಾಜ ಎಲ್ಲ ಋಷಿಗಳನ್ನು ಉದ್ಯಾನದಿಂದ ಓಡಿಸಿಬಿಟ್ಟ. ಇಂದ್ರನ ಇಚ್ಛೆ ಫಲಿಸಿತು.
ರಾಣಿಯ ಬಯಕೆ ತೀವ್ರವಾಯಿತು. ರಾಜ ಅಮಾತ್ಯರ ಸಲಹೆ ಕೇಳಿದ. ಅವರು, ’ಮಧ್ಯಂತರ ಹಣ್ಣು ಎಂದರೆ ಮರದಲ್ಲಿ ಅಪರೂಪಕ್ಕೆ ಮೂರು ಮಾವಿನ ಹಣ್ಣಿನ ಗೊಂಚಲುಗಳಾಗುತ್ತವೆ. ಅವುಗಳಲ್ಲಿ ಮಧ್ಯವಿರುವುದು ಈ ಹಣ್ಣು. ಅದೆಲ್ಲೂ ಸಿಗುವುದಲ್ಲ, ಪರಂಪರೆಯಿಂದ ಅದು ಹಿಮಾಲಯದ ಎತ್ತರದಲ್ಲಿರುವ ಬಂಗಾರದ ಗುಹೆಯಲ್ಲಿ ಸಿಗುತ್ತದೆಂದು ಕೇಳಿದ್ದೇವೆ. ಅಲ್ಲಿ ಮನುಷ್ಯರು ಹೋಗುವುದು ಸಾಧ್ಯವಿಲ್ಲ, ಪಕ್ಷಿಗಳು ಮಾತ್ರ ಹೋಗಬಹುದು’.
ರಾಜನ ಬಳಿ ಒಂದು ಬಲಶಾಲಿಯಾದ ಗಿಳಿ ಇತ್ತು. ಅದು ಅತ್ಯಂತ ಪ್ರಾಮಾಣಿಕ ಹಾಗೂ ಉಪಾಯಕುಶಲಿ. ಅದು ಹಣ್ಣು ತರುತ್ತೇನೆಂದು ಪ್ರಮಾಣ ಮಾಡಿ ಹಾರಿ ಹಿಮಾಲಯದ ಮೊದಲ ಶ್ರೇಣಿಗೆ ಹೋಗಿ ಅಲ್ಲಿಯ ಗಿಳಿಗಳನ್ನು ಕೇಳಿದಾಗ ಅವು ತಮಗೆ ತಿಳಿದಿಲ್ಲವೆಂದವು. ನಂತರ ಎರಡನೆಯ, ಮೂರನೆಯ, ನಾಲ್ಕನೆಯ, ಐದನೆಯ, ಆರನೆಯ ಶ್ರೇಣಿಗಳಲ್ಲೂ ಕಾಣದಿದ್ದಾಗ ಏಳನೇ ಶ್ರೇಣಿಗೆ ಬಂದಿತು. ಅಲ್ಲಿ ಪಕ್ಷಿಗಳು ಈ ಹಣ್ಣಿನ ಗಿಡ ಕುಬೇರನದು. ಅದನ್ನು ಸಾವಿರ ರಾಕ್ಷಸರು ಕಾಯುತ್ತಾರೆ, ಇಡೀ ಮರಕ್ಕೆ ಕಬ್ಬಿಣದ ಜಾಲ ಕಟ್ಟಿದ್ದಾರೆ ಎಂದು ಹೇಳಿದವು. ಆದರೂ ಗಿಳಿ ಅಲ್ಲಿಗೆ ಹೋಗಿ ಕಾವಲಿದ್ದ ರಾಕ್ಷಸರನ್ನು ಒಂದು ಹಣ್ಣಿಗಾಗಿ ಬೇಡಿಕೊಂಡಿತು. ತಂದೆತಾಯಿಯರಿಗಾಗಿ, ಯಜಮಾನನಿಗಾಗಿ ಪ್ರಾಣ ಬಿಡುವುದು ಶ್ರೇಷ್ಠ. ಅವರು ದೇವಲೋಕವನ್ನೇ ಸೇರುತ್ತಾರೆ. ಅದಕ್ಕಾಗಿಯೇ ತಾನು ಜೀವತ್ಯಾಗಕ್ಕೆ ಬಂದಿದ್ದೇನೆ ಎಂದಿತು. ಗಿಳಿಯ ಮಾತಿನಿಂದ ಪ್ರಭಾವಿತರಾದ ರಾಕ್ಷಸರು, ’ನಾವು ಒಂದು ಹಣ್ಣನ್ನೂ ಕೊಡುವುದಕ್ಕೆ ಶಕ್ತರಾಗಿಲ್ಲ. ಕುಬೇರ ನಮ್ಮನ್ನು ಸುಟ್ಟುಬಿಡುತ್ತಾರೆ. ಆದರೆ ನಿತ್ಯವೂ ನಾಲ್ಕು ಹಣ್ಣುಗಳನ್ನು ಮೇಲಿನ ಕಂಚನ ಪರ್ವತದ ಶಿಖರದಲ್ಲಿ ಯಜ್ಞ ಮಾಡುತ್ತಿರುವ ಜ್ಯೋತಿರಸನೆಂಬ ತಪಸ್ವಿಗೆ ಕಳುಹಿಸುತ್ತಾನೆ. ಅವನ ಬಳಿ ಬೇಡಿದರೆ ನಿನಗೆ ಹಣ್ಣು ಸಿಕ್ಕೀತು’ ಎಂದರು.
ಗಿಳಿ ಅಲ್ಲಿಗೆ ಹೋಗಿ ತಪಸ್ವಿಯ ಪಾದದ ಮೇಲೆ ಬಿದ್ದು ತನ್ನ ಯಜಮಾನಿಯ ಬೇಡಿಕೆಯನ್ನು ತಿಳಿಸಿ ಹಣ್ಣನ್ನು ಕೊಡಬೇಕೆಂದು ಕೇಳಿಕೊಂಡಿತು. ಗಿಳಿಯ ಯಜಮಾನನ ನಿಷ್ಠೆಯನ್ನು ಕಂಡ ತಪಸ್ವಿ, ತನಗೆ ಬಂದ ನಾಲ್ಕು ಹಣ್ಣುಗಳಲ್ಲಿ ಒಂದನ್ನು ಗಿಳಿಗೆ ಕೊಟ್ಟ. ಅದನ್ನು ತಂದು ಗಿಳಿ ತನ್ನ ಯಜಮಾನಿಗೆ ಕೊಟ್ಟಿತು. ರಾಣಿಗೆ ತುಂಬ ತೃಪ್ತಿಯಾಯಿತು. ರಾಜ ಗಿಳಿಯ ಪ್ರಯತ್ನಶೀಲತೆಯನ್ನು, ಪ್ರಭುನಿಷ್ಠೆಯನ್ನು ಬಹುವಾಗಿ ಮೆಚ್ಚಿಕೊಂಡು ಆದರಿಸಿದ.
ಇಂದು ಅಪರೂಪವಾಗುತ್ತಿರುವ ಈ ಪ್ರಭುನಿಷ್ಠೆ ಅತ್ಯಂತ ಶ್ರೇಷ್ಠ ಗುಣ. ಪ್ರಪಂಚದ ಇತಿಹಾಸದಲ್ಲಿ ಇಂತಹ ಪ್ರಭುನಿಷ್ಠೆಯನ್ನು ಮೆರೆದ ಅನೇಕ ಚೇತನಗಳ ದರ್ಶನ ದೊರೆಯುತ್ತದೆ.
ಬೆರಗಿನ ಬೆಳಕು
ಡಾ.ಗುರುರಾಜ ಕರ್ಜಗಿ
ಸಂಗ್ರಹ : ಪ್ರಜಾವಾಣಿ ಪತ್ರಿಕೆ
Mandya