ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಶ್ರೀ ದುರ್ಗಾ ಪರಮೇಶ್ವರಿ ಮಲ್ಲ ಕ್ಷೇತ್ರದ ಪುರಾಣ ಕಥೆ ಮಹಾತ್ಮೆ

ಶ್ರೀ ದುರ್ಗಾ ಪರಮೇಶ್ವರಿ ಮಲ್ಲ

ಶ್ರೀಮಲ್ಲ ಪೀಠ ನಿಲಯೇ
ಲಲಿತೇ ಸಿಂಹ ವಾಹಿನಿ |
ಉತ್ತಿಷ್ಠ ವರದೇ ಮಾತಃ
ಜಗತಾಮ್ ಮಂಗಲಂ ಕುರು ||

ಜಗತ್ತಿನಲ್ಲಿ ಹಿಂದೂ ಸಾಮ್ರಾಟನೆಂದು ಖ್ಯಾತನಾದ ಛತ್ರಪತಿ ಶಿವಾಜಿಯ ಕಾಲಾ ನಂತರ, ಪರಕೀಯರ ಮೃಗೀಯ ದಬ್ಬಾಳಿಕೆ ಅಸಹನೀಯವಾದಾಗ, ಪ್ರಜೆಗಳು ಸುರಕ್ಷಿತವಾದ ನೆಲೆಗಾಗಿ ದಕ್ಷಿಣದೆಡೆಗೆ ಸಂಚರಿಸುತ್ತಾ ಬಂದರು. ಹೀಗೆ ಬಂದವರಲ್ಲಿ ಕರಾಡದಿಂದ ಬಂದ ಬ್ರಾಹ್ಮಣ ವರ್ಗವೊಂದು, ತಮ್ಮ ಜೊತೆಗೆ ತಮ್ಮ ಕುಲದೇವರನ್ನೂ ತಂದರು. ಕರಾಡ ಬ್ರಾಹ್ಮಣರೆಂದೇ ಇಂದಿಗೂ ಕರೆಸಿಕೊಳ್ಳುವ ಇವರು ಅದ್ವೈತಿಗಳು, ಋಗ್ವೇದಿ ಅಶ್ವಲಾಯನ ಸೂತ್ರದವರಾಗಿದ್ದು, ಶೃಂಗೇರಿ ಶಾರದಾ ಪೀಠದ ಜಗದ್ಗುರುಗಳ ಶಿಷ್ಯ ವರ್ಗಕ್ಕೆ ಸೇರಿದವರು. ಶಕ್ತಿಯ ಆರಾಧಕರು, ಜಗನ್ಮಾತೆ ದುರ್ಗಾಪರಮೇಶ್ವರಿ ದೇವಿ ಇವರ ದೇವರು.

ಸುಮಾರು 400 ವರ್ಷಗಳ ಹಿಂದೆ ಇಬ್ಬರು ಬ್ರಾಹ್ಮಣರು, ತಮ್ಮ ಕುಲದೇವತೆಯಾದ ದುರ್ಗಾಪರಮೇಶ್ವರಿ ದೇವಿಯೊಂದಿಗೆ ಸಂಚಾರ ಹೊರಟವರು ಕಾಸರಗೋಡಿನಿಂದ ಪೂರ್ವ ದಿಕ್ಕಿಗೆ ಬಂದು ಮಧುವಾಹಿನಿ ನದಿಯನ್ನು ದಾಟಿ ಪೂರ್ವ ದಂಡೆಯ ಮೇಲೆ ದೇವರನ್ನಿಟ್ಟು ನದಿಯಲ್ಲಿ ಸ್ನಾನ, ಆಹ್ನೀಕಗಳನ್ನು ಮುಗಿಸಿಕೊಂಡರು. ನದಿಯ ಪಾತ್ರವನ್ನು ಅವಲೋಕಿಸಿದಾಗ, ಶಾಂತವಾಗಿ ಪೂರ್ವದಿಂದ ಹರಿದು ಬಂದು, ಉತ್ತರಕ್ಕೆ ತಿರುಗುವ ಕೌತುಕಪೂರ್ಣವಾದ ವಿದ್ಯಮಾನ ನಡೆಯುವ ಈ ಸ್ಥಳ ಅತ್ಯಂತ ರಮಣೀಯವು, ಪವಿತ್ರವು, ದೈವಿಕವೂ ಆಗಿರುವುದನ್ನು ಕಂಡುಕೊಂಡರು. ಇದು ದೇವಾಲಯ ನಿರ್ಮಿಸುವುದಕ್ಕೆ ಯೋಗ್ಯವಾದ ಸ್ಥಳ ಎಂದು ನಿರ್ಣಯಿಸಿ ಅಲ್ಲಿಯೇ ದೇವರ ಪ್ರತಿಷ್ಠಾಪನೆ ಮಾಡುವ ನಿರ್ಧಾರ ಕೈಗೊಂಡರು.
ಆಗ ಆ ಪ್ರದೇಶದಲ್ಲಿ ಮುಷ್ಟಿಕರು ಅಥವಾ ಮಲ್ಲರು ಎಂದು ಕರೆಯಲಾಗುವ ಜನ ಇದ್ದರಂತೆ. ಸಜ್ಜನರು, ದೈವ ಭಕ್ತರು ಆಗಿದ್ದ ಅವರು ದೇವರ ಸನ್ನಿಧಿ, ಅಲ್ಲಿ ಅಸ್ತಿತ್ವಕ್ಕೆ ಬರುವುದಕ್ಕೆ ಎಲ್ಲ ರೀತಿಯ ಅನುಕೂಲತೆಗಳನ್ನು ಒದಗಿಸಿಕೊಟ್ಟರು.
ಈ ರೀತಿಯಾಗಿ ಈ ಪುಣ್ಯ ಸ್ಥಳದಲ್ಲಿ
ಶ್ರೀ ಕ್ಷೇತ್ರ ಸಹಿತವಾದ ದರ್ಪಣಬಿಂಬದ ಪ್ರತಿಷ್ಠೆ ನಡೆಯಿತು. ಇತ್ತ ಮಲ್ಲದಲ್ಲಿ ದೇವರು ಮೊದಲಿಗೆ ಭೂಸ್ಪರ್ಶ ಮಾಡಿದ ಸ್ನಾನಘಟ್ಟದ ಸಮೀಪದಲ್ಲಿ, ಅಶ್ವತ್ಥಮರ ಸಹಿತವಾದ ನಾಗನಕಟ್ಟೆಗೆ ಇಂದಿಗೂ ಪೂಜೆ ಸಲ್ಲಿಸಲಾಗುತ್ತದೆ.

  ಕುಂದ ಚತುರ್ಥೀ ಹಿನ್ನಲೆ ಕಥೆ ಮತ್ತು ಪೂಜಾ ವಿಧಾನ

ಹೀಗೆ ಮುಷ್ಟಿಕರು ಮತ್ತು ಕರಾಡ ಬ್ರಾಹ್ಮಣರು ಈ ಎರಡು ವಿಭಿನ್ನ ವರ್ಗಗಳ ಸಂಯೋಜನೆಯಿಂದ ಮಲ್ಲ ಎನ್ನುವ ಪುಣ್ಯಸ್ಥಳದಲ್ಲಿ ದೇವಿ ದುರ್ಗಾಪರಮೇಶ್ವರಿಯ ದೇವಾಲಯದ ಸ್ಥಾಪನೆ ನಡೆಯಿತು. ಕಾಲಾನುಕ್ರಮದಲ್ಲಿ ಇಬ್ಬರು ಬ್ರಾಹ್ಮಣರಲ್ಲಿ ಒಬ್ಬರು ಮಾತ್ರ ಉಳಿದುಕೊಂಡರಂತೆ. ಅವರ ಪೀಳಿಗೆಯೇ ಆನೆ ಮಜಲು ಮನೆತನ. ಅಂದಿನಿಂದ ಇವರು ಇದನ್ನೊಂದು ಜೀವನಧರ್ಮದಂತೆ, ಕರ್ತವ್ಯದಂತೆ ಇಂದಿಗೂ ನಡೆಸಿಕೊಂಡು ಬರುತ್ತಿದ್ದಾರೆ.
ದೇವಿಗೆ ಇಲ್ಲಿ ರಾಜೋಪಚಾರಯುಕ್ತ ಸಪರಿವಾರ ತ್ರಿಕಾಲ ಪೂಜೆ ನಡೆಯುತ್ತದೆ. ಪ್ರಾತಃಕಾಲ ಶಾಂತಿದುರ್ಗ, ಮಧ್ಯಾಹ್ನ ಸ್ವಯಂವರ ಪಾರ್ವತಿ, ರಾತ್ರಿ ವನದುರ್ಗ ಈ ವಿಧವಾಗಿ ದುರ್ಗೆಯನ್ನು ಪೂಜಿಸಲಾಗುತ್ತಿದೆ. ಇಲ್ಲಿ ನಿತ್ಯ ಎರಡು ಹೊತ್ತು ಅನ್ನಸಂಪರ್ಪಣೆ ನಡೆಯುತ್ತಿದೆ. ಈ ವಿಧವಾಗಿ ದುರ್ಗಾಪರಮೇಶ್ವರಿ ದೇವಿ ಅನ್ನಪೂರ್ಣೇಶ್ವರಿ ಆಗಿಯೂ ಅನುಗ್ರಹಿಸುತ್ತಿದ್ದಾಳೆ. ವಿಶೇಷವೆಂದರೆ ಎಂತಹ ಕ್ಷಾಮಕಾಲದಲ್ಲೂ ಯಾವುದೇ ವಿಘ್ನವಿಲ್ಲದೆ ನಡೆದುಕೊಂಡು ಬಂದ ಮಹಾ ಅನ್ನಯಜ್ಞವಿದು.

  ಹನುಮಂತನ ನಿಸ್ವಾರ್ಥ ಭಕ್ತಿ

ಆಡಳಿತದಾರ ಆನೆ ಮಜಲು ಅಚ್ಯುತ ಭಟ್ಟರು 1968ರಲ್ಲಿ ಉತ್ತರಪಥದ ಯಾತ್ರೆ ಕೈಗೊಂಡಿದ್ದು ಈ ಸಂದರ್ಭದಲ್ಲಿ ಚಂದ್ರಕಾಂತ ಶಿಲೆಯ ಸತ್ಯನಾರಾಯಣ ವಿಗ್ರಹವನ್ನು ತಂದರು. ಆ ಬಳಿಕ ದೇವಾಲಯದ ಪಕ್ಕದಲ್ಲಿ ನೂತನವಾದ ಗುಡಿಯನ್ನು ನಿರ್ಮಿಸಿ 1976 ಮಾರ್ಚ್ 17ರಂದು ಶೃಂಗೇರಿ ಜಗದ್ಗುರುಗಳಾದ
ಶ್ರೀ ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳವರ ಸಮ್ಮುಖದಲ್ಲಿ ಸತ್ಯನಾರಾಯಣ ದೇವರ ಪ್ರತಿಷ್ಠೆ ನೆರವೇರಿತು. ಈ ದಿನವನ್ನು ಇಂದಿಗೂ ಸ್ವಾಮಿಯ ಪ್ರತಿಷ್ಠಾ ದಿನವೆಂದು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ವಿಶೇಷವೆಂದರೆ ಸತ್ಯನಾರಾಯಣ ದೇವರ ಪ್ರತಿಷ್ಠೆ ಇರುವ ದೇವಾಲಯಗಳು ಇಲ್ಲವೇ ಇಲ್ಲ ಎನ್ನುವಷ್ಟು ವಿರಳವಾಗಿವೆ. ಸತ್ಯನಾರಾಯಣ ಪೂಜೆ ಮಲ್ಲ ಕ್ಷೇತ್ರದಲ್ಲಿ ಬಹಳ ಹಿಂದಿನಿಂದಲೂ ನಡೆದುಕೊಂಡು ಬರುತ್ತಿರುವ ಒಂದು ವಿಶಿಷ್ಟ ಪೂಜಾ ಸೇವೆ. ವಿಗ್ರಹ ಪ್ರತಿಷ್ಠೆಯ ಬಳಿಕ ದೇವರಿಗೆ ಶಾಸ್ತ್ರ ಬದ್ಧವಾಗಿ ಪೂಜೆ ನಡೆಸುವ ಕ್ರಮ ಆರಂಭವಾಗಿದೆ. ಭಕ್ತರು ತಮ್ಮ ಅಭೀಷ್ಟದಂತೆ ಸ್ವಾಮಿಯ ಪೂಜೆ ನಡೆಸುವ ಹರಕೆ ಹೊತ್ತು, ವ್ರತಧಾರಿಯಾಗಿ ಅದನ್ನು ನಡೆಸಿಕೊಡುವ ಸಂಪ್ರದಾಯ ನಡೆದುಕೊಂಡು ಬರುತ್ತಿದೆ. ಪ್ರತಿದಿನ ಸಾಯಂಕಾಲ ಐವತ್ತಕ್ಕೂ ಮೀರಿ ಪೂಜೆಗಳು ನಡೆಯುತ್ತಿರುವುದು ಆಶ್ಚರ್ಯವೇ ಸರಿ.

ಇನ್ನು ದೇವಿಗೆ ವಿಶೇಷ ದಿನಗಳೆಂದರೆ ತಿಂಗಳ ಮಂಗಳವಾರ, ಶ್ರಾವಣ ಶನಿವಾರ, ವೃಷಭ ಮಾಸದ ಮೃಗಶಿರ ನಕ್ಷತ್ರದಂದು ದೇವಿಗೆ ಕಳಭ ಸೇವೆ, ಕಾರ್ತಿಕ ಪೂರ್ಣಿಮಾ, ವರ್ಷಾವಧಿ ಉತ್ಸವ, ವೈಶಾಖ ಪೂರ್ಣಿಮೆಯಂದು ವಸಂತೋತ್ಸವವು ನಡೆಯುವುದು. ಇದು ಶಕ್ತಿಪೀಠವಾದ ಕಾರಣ ನವರಾತ್ರಿ ಹಬ್ಬಕ್ಕೆ ಪ್ರತ್ಯೇಕವಾದ ಪರಿಗಣನೆ ಇದೆ.
ದೇವಸ್ಥಾನದಲ್ಲಿ ನಡೆದು ಬರುವ ಇನ್ನೂ ಕೆಲವು ವಿಶಿಷ್ಟ ಕಾರ್ಯಕ್ರಮಗಳೆಂದರೆ ನಾಗಾರಾಧನೆ, ದೈವಾರಾಧನೆ, ಪ್ರೇತೋಚ್ಚಾಟನೆ, ಪವಿತ್ರ ತೀರ್ಥ ಜಲಸ್ನಾನ, ತುಲಾಭಾರ ಸೇವೆ ಇತ್ಯಾದಿ.
ಮಲ್ಲ ದೇವಾಲಯವು ಕೇವಲ ಧಾರ್ಮಿಕ ಕೇಂದ್ರವಾಗಿ ಉಳಿಯದೆ ದೇವಿಯ ಸನ್ನಿಧಿಯಲ್ಲಿ ಕಲಾರಾಧನೆಗೆ ವಿಶಿಷ್ಟವಾದ ಸ್ಥಾನವನ್ನು ಕಲ್ಪಿಸಿದೆ. ಆದ್ದರಿಂದ ತಾಯಿಯ ದರುಶನ ಭಾಗ್ಯವನ್ನು ಪಡೆಯಲು ದೇಶದ ಮೂಲೆ ಮೂಲೆಗಳಿಂದಲೂ ಭಕ್ತ ಜನಸಾಗರವೇ ಹರಿದು ಬರುತ್ತದೆ. ಶಕ್ತಿಗಿಂತಲೂ ಭಕ್ತಿಗೆ ಬಾಗುವ ತಾಯಿ ಮಲ್ಲಾಂಬಿಕೆಯು ಸರ್ವರ ಸಕಲ ಇಷ್ಟಾರ್ಥಗಳನ್ನು ಈಡೇರಿಸಲೆಂದು ಪ್ರಾರ್ಥಿಸುತ್ತಾ ಈ ಶುಭ ಮುಂಜಾನೆಯಲ್ಲರಳಿದ ಪದ ಪುಷ್ಪಗಳು ಅಮ್ಮನವರ ಪಾದಾರವಿಂದಗಳಿಗೆ ಸಮರ್ಪಣೆ.

  ಕನ್ನಡ ಗಾದೆ - ಮಾಡಿದುಣ್ಣೋ ಮಹರಾಯ

ಸತ್ಯಜ್ಞಾನ ಸುಖಾತ್ಮಿಕಾಂ ಗಿರಿಸುತಾಂ
ಮಾಯಾಂಧಕಾರಾಪಹಾಂ |
ಚಿದ್ರೂಪಾಂ ದರಚಕ್ರಭೂಷಣಧರಾಂ
ಶ್ರೀಚಕ್ರ ಸಂಚಾರಿಣೀಂ ||
ಶರ್ವಾಣೀಂ ಶಶಿಮಧ್ಯಭಾಗ ನಿಲಯಾಂ
ರತ್ನಪ್ರಭಾ ಭಾಸುರಾಂ |
ಶ್ರೀಮನ್ಮಲ್ಲನಿವಾಸಿನೀಂ ಭಗವತೀಂ
ವಂದೇ ಜಗನ್ಮಂಗಲಾಂ ||

             

Leave a Reply

Your email address will not be published. Required fields are marked *

Translate »