ಒಂದು ಬಾಟಲಿ ಔಷಧ
ರಾಜಸ್ಥಾನದ ಒಂದು ಊರಿನಲ್ಲಿ ಕರುಣಾಮಯಿ ಶ್ರೀಕೃಷ್ಣನನ್ನು ಅತ್ಯಂತ ಭಕ್ತಿಯಿಂದ ಪೂಜಿಸುವ ರಮೇಶ್ ಚಂದ್ರ ಎನ್ನುವ ಸಾತ್ವಿಕ ಭಕ್ತನೊಬ್ಬ ಔಷಧಿ ಅಂಗಡಿ ನಡೆಸುತ್ತಿದ್ದ.
ಅವನ ಅಂಗಡಿಯ ಒಂದು ಮೂಲೆಯಲ್ಲಿ ಮುಗ್ಧನಾಗಿ ನಗುತ್ತಿರುವ ಶ್ರೀಕೃಷ್ಣನ ಪುಟ್ಟ ಫೋಟೋ ಇತ್ತು.
ಪ್ರತಿನಿತ್ಯ ಅಂಗಡಿಯನ್ನು ತೆರೆದಾಗ ಅಂಗಡಿಯಲ್ಲಿನ ದಿನನಿತ್ಯದ ಶುಚಿತ್ವದ ನಂತರ ಅವನು ತನ್ನ ಕೈಗಳನ್ನು ಶುಚಿಗೊಳಿಸಿಕೊಂಡು ಆ ದೇವರ ಚಿತ್ರದ ಫೋಟೋವನ್ನು ಶುಚಿಗೊಳಿಸಿ ಅದಕ್ಕೆ ಹೂವು ಏರಿಸಿ ಧೂಪ ದೀಪ ಬೆಳಗಿ ಭಕ್ತಿಯಿಂದ ಪೂಜಿಸಿ ಪ್ರಾರ್ಥಿಸುತ್ತಿದ್ದ.
ಈತನಿಗೆ ರಾಕೇಶ್ ಎಂಬ ಮಗನೂ ಇದ್ದು
ಅವನು ತನ್ನ ವಿಜ್ಞಾನದ ಓದನ್ನು ಮುಗಿಸಿ ಈಗ ಅವನೊಂದಿಗೆ ಅಂಗಡಿಯಲ್ಲಿ ತಂದೆಗೆ ಸಹಾಯಕನಾಗಿ ಸಹಕರಿಸುತ್ತಿದ್ದ.
ಅಪ್ಪ ದೇವರಿಗೆ ಪೂಜೆ ಪುನಸ್ಕಾರವನ್ನೆಲ್ಲ ಮಾಡುವುದನ್ನಲ್ಲ ನೋಡಿ ಹೊಸ ಕಾಲದ ವಿದ್ಯಾವಂತ ಯುವಕನಾಗಿದ್ದರಿಂದ ಅವನಿಗೆ ‘ದೇವರಿಗೆ ಸರಿಸಾಟಿ ಇಲ್ಲ ಎನ್ನುವುದೆಲ್ಲ ಮನಸ್ಸಿನ ಭ್ರಮೆ’ ಎಂದನಿಸಿ ಅದನ್ನು ತನ್ನ ತಂದೆಗೆ ತಿಳಿಸುವ ಪ್ರಯತ್ನ ಮಾಡುತ್ತಿದ್ದ.
ಸೂರ್ಯನು ತನ್ನ ರಥದಲ್ಲಿ ಬ್ರಹ್ಮಾಂಡವನ್ನು ಸುತ್ತುತ್ತಾನೆ ಎಂದು ಶಾಸ್ತ್ರಗಳು ಹೇಳುತ್ತವೆ ಆದರೆ ಭೂಮಿಯೇ ಸೂರ್ಯನ ಸುತ್ತ ಸುತ್ತುತ್ತಿದೆ ಎಂದು ವಿಜ್ಞಾನವು ಸಾಬೀತುಪಡಿಸಿದೆ ಹೀಗೆ ಪ್ರತಿದಿನ ವಿಜ್ಞಾನದ ಹೊಸ ಹೊಸ ಉದಾಹರಣೆಗಳನ್ನು ತಂದೆಗೆ ನೀಡುತ್ತಾ ಅವನು “ದೇವರಿಲ್ಲ” ಎಂದು ಸಾಬೀತುಪಡಿಸಲು ಬಹಳ ಪ್ರಯತ್ನ ನಡೆಸಿದ್ದ.
ಇಷ್ಟಾದರೂ ತಂದೆಯು ಅವನನ್ನು ಪ್ರೀತಿಯಿಂದ ನೋಡಿ ನಗುತ್ತಿದ್ದ.
ಅವನು ಈ ವಿಷಯದ ಬಗ್ಗೆ ಮಗನಲ್ಲಿ ವಾದ ಮಾಡಲು ಅಥವಾ ಚರ್ಚಿಸಲು ಬಯಸಲಿಲ್ಲ.
ಕಾಲಚಕ್ರ ಹೀಗೆಯೇ ಉರುಳುತ್ತ ಆ ತಂದೆಗೆ(ರಮೇಶ್ ಚಂದ್ರನಿಗೆ) ವಯಸ್ಸಾಯಿತು.
ತನ್ನ ಅಂತ್ಯವು ಹತ್ತಿರವಾಗಿದೆ ಎಂದು ಅವನು ಬಹುಶಃ ಭಾವಿಸಿದ್ದಿರಬಹುದು.
ಹೀಗಿರುವಾಗ ಒಂದು ದಿನ ತಂದೆಯು ತನ್ನ ಮಗನಿಗೆ ಹೇಳಿದ…
“ಮಗನೇ ನೀನು ದೇವರನ್ನು ನಂಬುತ್ತೀಯೋ ಅಥವಾ ಇಲ್ಲವೋ ಅದು ನಿನ್ನ ಆಂತರಿಕ ವಿಷಯ ಜ್ಞಾನ.
ನಿನ್ನ ನಂಬಿಕೆ ಮತ್ತು ಅಪನಂಬಿಕೆಯಲ್ಲಿ ನಾನು ಮೂಗು ತೂರಿಸಲಾರೆ…ಏಕೆಂದರೆ ನೀನು ಓದಿ ತಿಳಿದವ ಆದರೆ ನೀನು ಈ ಸಮಾಜದಲ್ಲಿ ಕಠಿಣ ಪರಿಶ್ರಮಿ ಹಾಗು ದಯೆ ಮತ್ತು ಪ್ರಾಮಾಣಿಕತೆ ಹೊಂದಿರುವ ವ್ಯಕ್ತಿಯಾಗಿದ್ದರೆ ಅದೇ ನನಗೆ ತರುವ ದೊಡ್ಡ ನೆಮ್ಮದಿ…..
ಆದರೂ…. ನೀನು ಈ ನನ್ನ ಒಂದು ಮಾತನ್ನು ಕೇಳಿ ಅದನ್ನು ತಪ್ಪದೆ ಪಾಲಿಸುವೆಯಾ…?”
ಆಗ ಮಗ ಹೇಳಿದ “ಖಂಡಿತ ಅಪ್ಪಾ….ನಾನು ಅದನ್ನು ಖಂಡಿತವಾಗಿ ಮಾಡುತ್ತೇನೆ.”
ತಂದೆ ಹೇಳಿದ “ಮಗನೇ ನನ್ನ ಮರಣದ ನಂತರ ಅಂಗಡಿಯಲ್ಲಿನ ಶ್ರೀಕೃಷ್ಣನ ಚಿತ್ರವನ್ನು ತೆಗೆಯಬೇಡ.
ಜೊತೆಗೆ ಫೋಟೋ ಮತ್ತು ಅದರ ಸುತ್ತಮುತ್ತಲಿನ ಜಾಗವನ್ನು ಸ್ವಚ್ಛಗೊಳಿಸುತ್ತಿರು.
ಎರಡನೆಯದಾಗಿ ನೀನು ಯಾವುದೇ ತೊಂದರೆಯಲ್ಲಿ ಸಿಲುಕಿಕೊಂಡರೆ ನಿನ್ನೆರಡೂ ಕೈಗಳನ್ನು ಸೆರಿಸಿ ನಮಸ್ಕರಿಸಿ ಶ್ರೀ ಕೃಷ್ಣನಿಗೆ ನಿನ್ನ ಸಮಸ್ಯೆಯನ್ನು ಹೇಳಿಕೊ ಅದನ್ನು ಪರಿಹರಿಸಲು ಪ್ರಾರ್ಥಿಸು… ನಾನು ಹೇಳಿದಂತೆ ನೀನು ಇಷ್ಟು ಮಾಡಿದರೆ ಸಾಕು.” ತಂದೆಯ ಮಾತಿಗೆ ಮಗ ಒಪ್ಪಿದ.
ಕೆಲವು ದಿನಗಳ ನಂತರ ತಂದೆ ತೀರಿಕೊಂಡ ಮತ್ತು ಸಮಯವು ಎಂದಿನಂತೆ ಸರಿದು ಹೋಗುತ್ತಿತ್ತು.
ಒಂದು ದಿನ ಜೋರಾಗಿ ಮಳೆ ಸುರಿಯುತ್ತಿತ್ತು.
ರಾಕೇಶ್ ಇಡೀ ದಿನ ತನ್ನ ಅಂಗಡಿಯಲ್ಲಿಯೇ ಕುಳಿತಿದ್ದ. ಗ್ರಾಹಕರು ಕೂಡ ಅಂದು ತೀರಾ ಕಡಿಮೆ ಇದ್ದರು.
ಅಷ್ಟಕ್ಕೂ ಮಿಗಿಲಾಗಿ ಕರೆಂಟು ಕೂಡ ಆಗಾಗ ತೊಂದರೆ ಕೊಡುತ್ತಿತ್ತು.
ಆ ಕತ್ತಲೆಯಲ್ಲಿ ಇದ್ದಕ್ಕಿದ್ದಂತೆ ಮಳೆಯಿಂದ ಒದ್ದೆಯಾಗಿದ್ದ ಇಬ್ಬ ಹುಡುಗ ಓಡೋಡಿ ಬಂದು “ಅಣ್ಣ…. ನನಗೆ ಈ ಚೀಟಿಯಲ್ಲಿರುವ ಔಷಧಿ ಕೂಡಲೇ ಬೇಕು.
ನನ್ನ ತಾಯಿ ತುಂಬಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ ವೈದ್ಯರು ಹೇಳಿದ್ದಾರೆ ನಾಲ್ಕು ಚಮಚ ಈ ಔಷಧಿಯನ್ನು ಕೂಡಲೇ ಕೊಟ್ಟರೆ ನಾನು ನನ್ನ ತಾಯಿಯನ್ನು ಉಳಿಸಬಹುದು….
ನಿಮ್ಮ ಬಳಿ ಈ ಔಷಧಿ ಇದೆಯೇ?”
ರಾಕೇಶ್ ಪ್ರಿಸ್ಕ್ರಿಪ್ಷನ್ ನೋಡಿದ ತಕ್ಷಣ
“ಹೌದು…. ಹುಡುಗ ಗಾಭರಿಯಾಗಬೇಡ ಅದು ನನ್ನ ಬಳಿ ಇದೆ.” ಎನ್ನುತ್ತ ಹುಡುಗನಿಗೆ ಔಷಧಿಯನ್ನು ಕೊಟ್ಟ.
ಹುಡುಗ ತುಂಬಾ ಸಂತೋಷಪಟ್ಟು ಮತ್ತು ಔಷಧಿಯೊಂದಿಗೆ ಕೂಡಲೇ ಹೊರಟುಹೋದ.
ಆದರೆ ಅದು ಒಂದು ಅನಾಹುತವಾಗಿತ್ತು…!!
ಹುಡುಗ ಹೋದ ಸ್ವಲ್ಪ ಹೊತ್ತಿನಲ್ಲೇ ಕೆಟ್ಟುಹೋಗಿದ್ದ ವಿದ್ಯುತ್ ಬಂದು ಅಂಗಡಿ ಬೆಳಗಿತ್ತು.
ರಾಕೇಶ್ ಕೌಂಟರ್ ಕಡೆ ನೋಡುತ್ತಿದ್ದಂತೆ ಅವನ ಮೈಯಲ್ಲಿ ಬೆವರು ಸುರಿಸತೊಡಗಿತ್ತು.
ಸ್ವಲ್ಪ ಹೊತ್ತಿನ ಹಿಂದೆ ತಾನು ಖರೀದಿಸಿದ್ದ ಇಲಿಯ ವಿಷದ ಬಾಟಲಿಯನ್ನು ಕೌಂಟರ್ ಮೇಲಿಟ್ಟಿದ್ದ ರಾಕೇಶ್ ಲೈಟ್ ಆರಿದ್ದ ಕಾರಣ ಲೈಟ್ ಮತ್ತೆ ಬಂದಾಗ ಸರಿಯಾದ ಜಾಗದಲ್ಲಿ ಇಡುತ್ತೇನೆ ಎಂದುಕೊಂಡು ಬಾಟಲಿಯನ್ನು ಕೌಂಟರ್ ಮೇಲೆಯೇ ಇಟ್ಟಿದ್ದ.
ಆದರೆ ಔಷಧಿ ತೆಗೆದುಕೊಳ್ಳುಲು ಬಂದಿದ್ದ ಆ ಬಾಲಕನಿಗೆ ಅವನು ಔಷಧಿ ಬಾಟಲಿಯ ಬದಲು ಇಲಿಯ ವಿಷದ ಬಾಟಲಿಯನ್ನು ರಾಕೇಶ್ ನೀಡಿಬಿಟ್ಟಿದ್ದ…
ಪಾಪ ಆಬಾಲಕನಿಗೆ ಅಕ್ಷರ ಜ್ಞಾನವೂ ಇರಲಿಲ್ಲವಾದ್ದರಿಂದ ಔಷಧಿ ಅಂಗಡಿಯವ ಕೊಟ್ಟಿದ್ದ ಬಾಟಲಿಯನ್ನು ತಾಯಿಗಾಗಿ ಒಯ್ದಿದ್ದ.
“ಓ ದೇವರೇ….!! ಇದೇನು ಅನಾಹುತ…!!” ಎಂಬ ಮಾತುಗಳು ರಾಕೇಶನ ಬಾಯಿಂದ ಅಯಾಚಿತವಾಗಿ ಹೊರಬಂದವು.
ಬಹಳ ಗಾಭರಿಗೊಳಗಾದ ಅವನಿಗೆ ಆಗ ತನ್ನ ತಂದೆಯ ಮಾತುಗಳು ನೆನಪಾದವು.
ತಕ್ಷಣ ಕೈ ಜೋಡಿಸಿ ಭಾರವಾದ ಹೃದಯದಿಂದ ಶ್ರೀಕೃಷ್ಣನ ಚಿತ್ರದ ಮುಂದೆ ಪ್ರಾರ್ಥಿಸಲು ಪ್ರಾರಂಭಿಸಿದ “ಓ ದೇವರೇ….! ತಂದೆಯು ಯಾವಾಗಲೂ ನೀನು ಇದ್ದೀಯ ಎಂದು ಹೇಳುತ್ತಿದ್ದರು.
ನೀನು ನಿಜವಾಗಿಯೂ ಇದ್ದಿದ್ದಾದರೆ ಇಂದು ಈ ಅಹಿತಕರ ಘಟನೆ ನಡೆಯಲು ಬಿಡಬೇಡ…… ದಯಮಾಡಿ ತಾಯಿ ತನ್ನ ಮಗನ ಕೈಯಿಂದ ವಿಷವನ್ನು ಕುಡಿಯಲು ಅನುವಾಗಲು ಬಿಡಬೇಡ.”
ಎಂದು ಆರ್ತನಾಗಿ ಬೇಡಿದ.
ಅಷ್ಟರಲ್ಲಿ ಹಿಂದಿನಿಂದ “ಅಣ್ಣಾ….!” ಎಂಬ ಧ್ವನಿ ಕೇಳಿಸಿತು…
“ಅಣ್ಣಾ…. ನಾನು ಕೆಸರಿದ್ದಲ್ಲಿ ಜಾರಿ ಬಿದ್ದುಬಿಟ್ಟೆ….ನೆಲದಲ್ಲಿ ಮೇಲೆ ಎದ್ದಿದ್ದ ಕಲ್ಲಿಗೆ ಔಷಧಿ ಬಾಟಲಿ ಬಡಿದು ಒಡೆದುಹೋಯಿತು…! ದಯಮಾಡಿ ನನಗೆ ಇನ್ನೊಂದು ಔಷಧಿ ಬಾಟಲಿಯನ್ನು ಕೊಡುವೆಯಾ…… ನನ್ನಲ್ಲಿ ಈಗ ಹಣವಿಲ್ಲ….ಆದರೆ ಅಮ್ಮನಿಗಾಗಿ ಔಷಧಿಯ ಜರೂರಿದೆ”
ಅವನ ಮಾತಲ್ಲಿ ದೀನತೆ ಇತ್ತು.
ಅಪ್ಪನ ಆರಾಧ್ಯದೈವ ಶ್ರೀಕೃಷ್ಣನ ಮುಗುಳ್ನಗೆಯ ಚಿತ್ರವನ್ನು ನೋಡುತ್ತಾ ರಾಕೇಶನ ಮುಖದಲ್ಲಿ ಕಣ್ಣೀರು ಸುರಿಯತೊಡಗಿತು….!!!
ತಕ್ಷಣ ಹುಡುಗನಿಗೆ ಔಷಧ ಕೊಟ್ಟು ಕಳಿಸಿದ.
ಆ ದಿನ ಅವನೊಳಗೆ ಒಂದು ನಂಬಿಕೆ ಜಾಗೃತವಾಯಿತು… ಈ ಬ್ರಹ್ಮಾಂಡವನ್ನು ನಡೆಸುತ್ತಿರುವವನು ಯಾರೋ ಇದ್ದಾನೆ ಎಂದು.
ಕೆಲವರು ಅವನನ್ನು ದೇವರು ಎಂದು ಕರೆಯುತ್ತಾರೆ.. ಕೆಲವರು ಅವನನ್ನು ಸರ್ವೋಚ್ಚ.. ಕೆಲವರು ಸರ್ವವ್ಯಾಪಿ ಮತ್ತು ಕೆಲವರು ದೈವಿಕ ಶಕ್ತಿ ಎಂದು ಕರೆಯುತ್ತಾರೆ…!
ದೇವರ ಮೇಲ್ಲಿನ ಅವನ ನಂಬಿಕೆ ಜಾಗೃತವಾಗಿತ್ತು.
“ಪ್ರೀತಿ ಮತ್ತು ಭಕ್ತಿಯಿಂದ ತುಂಬಿದ ಹೃದಯದಿಂದ ಮಾಡಿದ ಪ್ರಾರ್ಥನೆಯು ಎಂದಿಗೂ ವ್ಯರ್ಥವಾಗುವುದಿಲ್ಲ.”
ಇದೊಂದು ಹೃತ್ಪೂರ್ವಕ ಧ್ಯಾನ